- ರಾಘವೇಂದ್ರ ಅಡಿಗ ಎಚ್ಚೆನ್.
ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಮುಂಬೈನಲ್ಲಿ ಪ್ರತಿಷ್ಠಿತ ಜಾಗತಿಕ ಶ್ರವಣ ದೃಶ್ಯ ಮನರಂಜನೆ ಶೃಂಗಸಭೆ (WAVES Summit 2025) ಆಯೋಜಿಸಿದೆ. ಗುರುವಾರ ಕಾರ್ಯಕ್ರಮ ಉದ್ಘಾಟನೆಗೊಂಡಿದ್ದು, ಕನ್ನಡ ಚಿತ್ರರಂಗದ ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ನ ಸಹ ಸಂಸ್ಥಾಪಕ ಚಲುವೇಗೌಡ ಅವರು ಉಪಸ್ಥಿತರಿದ್ದು, ಗಮನ ಸೆಳೆದಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಈ ಮಹತ್ವದ ಕಾರ್ಯಕ್ರಮ ಭಾರತದ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಬೆಳವಣಿಗೆ, ನಾವೀನ್ಯತೆ ಮತ್ತು ಜಾಗತಿಕ ಸಾಮರ್ಥ್ಯವನ್ನು ಅನಾವರಣಗೊಳಿಸುವ ಗುರಿ ಹೊಂದಿದೆ.
ಸೂಪರ್ ಹಿಟ್ 'ಆರ್ಆರ್ಆರ್' ಚಿತ್ರದ ಸಂಕಲನಕಾರ ಎ.ಶ್ರೀಕರ್ ಪ್ರಸಾದ್ ಹಾಗೂ ಆಸ್ಕರ್ ಸಮಿತಿಯ ಸದಸ್ಯ ಮತ್ತು ಭಾರತೀಯ ಚಲನಚಿತ್ರ ಒಕ್ಕೂಟದ ತಾಂತ್ರಿಕ ಸಲಹೆಗಾರ ಉಜ್ವಲ್ ನಿರ್ಗುಡ್ಕರ್ ಅವರನ್ನೊಳಗೊಂಡ ಆಸಕ್ತಿದಾಯಕ ಚರ್ಚೆಯಲ್ಲಿ ಪಾಲ್ಗೊಂಡ ಚಲುವೇಗೌಡ ಅವರು, ಹೊಂಬಾಳೆ ಫಿಲ್ಮ್ಸ್‌ನ ಅಂತಾರಾಷ್ಟ್ರೀಯ ಯೋಜನೆಗಳ ಕುರಿತು ಬೆಳಕು ಚೆಲ್ಲಿದರು. ಅದರಲ್ಲೂ ವಿಶೇಷವಾಗಿ 'ಕಾಂತಾರ ಚಾಪ್ಟರ್ 1' ಚಿತ್ರವನ್ನು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಾಗಿ ಕಾರ್ಯತಂತ್ರ ರೂಪಿಸಿ ಸಿದ್ಧಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದು, ಕನ್ನಡ ಚಿತ್ರರಂಗಕ್ಕೆ ಜಾಗತಿಕ ಮಟ್ಟದಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.
ಆಸ್ಕರ್ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸುವ ಮತ್ತು ಪ್ರಚಾರ ಮಾಡುವ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ಅರಿವು ಮತ್ತು ಶಿಕ್ಷಣದ ಅವಶ್ಯಕತೆಯಿದೆ ಎಂದು ಇದೇ ವೇಳೆ ಪ್ರತಿಪಾದಿಸಿದರು. "ಆಸ್ಕರ್ ಅರ್ಜಿ ಮತ್ತು ಪ್ರಚಾರ ಪ್ರಕ್ರಿಯೆಯ ಕುರಿತು ಸ್ಪಷ್ಟ ತಿಳುವಳಿಕೆಯ ಕೊರತೆ ಇದೆ. ಇಂತಹ ವಿಷಯಗಳ ಕುರಿತು ಕಾರ್ಯಾಗಾರಗಳನ್ನು ಆಯೋಜಿಸಿದರೆ, ಹೆಚ್ಚಿನ ಭಾರತೀಯ ಸಿನಿಮಾ ಸೃಷ್ಟಿಕರ್ತರಿಗೆ ಜಾಗತಿಕವಾಗಿ ತಮ್ಮ ಛಾಪು ಮೂಡಿಸಲು ಸಾಧ್ಯವಾಗುತ್ತದೆ" ಎಂದು ಅವರು ಅಭಿಪ್ರಾಯಪಟ್ಟರು.
ಕೆಜಿಎಫ್, ಕಾಂತಾರ ಮತ್ತು ಸಲಾರ್ನಂತಹ ಯಶಸ್ವಿ ಚಿತ್ರಗಳನ್ನು ನೀಡಿದ ಹೊಂಬಾಳೆ ಫಿಲ್ಮ್ಸ್, ಶೃಂಗಸಭೆಯಲ್ಲಿ ಜಾಗತಿಕ ಖರೀದಿದಾರರು ಮತ್ತು ಮಾರಾಟಗಾರರನ್ನು ಒಂದುಗೂಡಿಸುವ "WAVES Bazaar"ನ ಸಹಯೋಗ ಪಾಲುದಾರರಾಗಿಯೂ ಕಾರ್ಯ ನಿರ್ವಹಿಸಿತು. ಈ ಮಾರುಕಟ್ಟೆ ವೇದಿಕೆಯು ಈಗಾಗಲೇ ಶೃಂಗಸಭೆಯ ಅತ್ಯಂತ ಯಶಸ್ವಿ ಉಪಕ್ರಮಗಳಲ್ಲಿ ಒಂದಾಗಿ ಹೊರಹೊಮ್ಮಿದ್ದು, ಗಡಿಗಳನ್ನು ಮೀರಿದ ಸಹಯೋಗಗಳಿಗೆ ಪ್ರೋತ್ಸಾಹ ನೀಡುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮೇ 1, ಗುರುವಾರದಂದು ಶೃಂಗಸಭೆಗೆ ಚಾಲನೆ ನೀಡಿದ್ದಾರೆ. ಒಟ್ಟು 4 ದಿನಗಳ ಜಾಗತಿಕ ಶೃಂಗಸಭೆ ಇದಾಗಿದ್ದು, ಭಾರತೀಯ ಚಿತ್ರರಂಗದ ಗಣ್ಯರು ಭಾಗಿಯಾಗುತ್ತಿದ್ದಾರೆ.
ನಾನು