ಅಭಿನಯ ಎನ್ನುವುದು ರಕ್ತದಲ್ಲೇ ಹರಿದು ಬಂದಿದೆ. ಅಪ್ಪ ರವಿ ಭಟ್ ಕಿರುತೆರೆ ಹಾಗೂ ಹಿರಿತೆರೆ ಕಲಾವಿದರು. ಚಿಕ್ಕಮ್ಮ ವಿನಯಾ ಪ್ರಸಾದ್, ಪ್ರಥಮಾ ಪ್ರಸಾದ್ ಕಸಿನ್ ಸಿಸ್ಟರ್ಸ್. ಇದೆಲ್ಲದರ ಜೊತೆಗೆ ತಾತಾ ಕೃಷ ಭಟ್ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಇಷ್ಟೆಲ್ಲಾ ಬ್ಯಾಕ್‌ರೌಂಡ್ ಇರುವ ಹುಡುಗಿ ಭಾವನಾ ಭಟ್. ಕನ್ನಡ ಚಿತ್ರರಂಗದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವಂಥ ಹೊಸ ನಟಿ.
`ಸವರ್ಣದೀರ್ಘ ಸಂಧಿ' ಎನ್ನುವ ಕುತೂಹಲ ಮೂಡಿಸುವಂಥ ಟೈಟಲ್ ಇರುವ ಚಿತ್ರದ ನಾಯಕಿ. ಮಾಧ್ಯಮಗಳಲ್ಲಿ ಮಿಂಚುತ್ತಿರುವ ಭಾವನಾ ಭಟ್ ಹೆಸರು ಬದಲಾಗಿದೆ.
ಕೃಷ್ಣಾ ಎಂದು ಮರುನಾಮಕರಣ ಮಾಡಿಕೊಂಡಿದ್ದಾಳೆ. ಇದೆಲ್ಲದರ ಬಗ್ಗೆ ತಿಳಿದುಕೊಳ್ಳಲೆಂದೇ ಭಾವನಾಳನ್ನು ಮಾತನಾಡಿಸಿದೆ.
ನಮ್ಮದು ಕಲಾವಿದರ ಕುಟುಂಬ. ರವಿಭಟ್, ವಿನಯಾ ಪ್ರಸಾದ್, ಪ್ರಥಮಾ ಪ್ರಸಾದ್ ಉತ್ತಮ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಆರಂಭದಲ್ಲಿ ನನಗೆ ಆ್ಯಕ್ಟ್ ಮಾಡಬೇಕು, ಸಿನಿಮಾ ರಂಗಕ್ಕೆ ಬರಬೇಕೆಂಬ ಯಾವುದೇ ಯೋಚನೆ ಇರಲಿಲ್ಲ. ನಾನು ಕ್ರೈಸ್ಟ್ ಕಾಲೇಜ್‌ನಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡುತ್ತಿದ್ದೆ. ಮೊದಲು ಒಂದೊಳ್ಳೆ ರೆಸ್ಟೋರೆಂಟ್ ಮಾಡಬೇಕೆಂಬ ಕನಸಿತ್ತು.
ಪಾಕೆಟ್ ಮನಿ ಸಲುವಾಗಿ ನಾನು ನನ್ನ ಫ್ರೆಂಡ್ ಆಗಾಗ್ಗೆ ಮಾಡೆಲಿಂಗ್ ಮಾಡುವುದಕ್ಕೆ ಶುರು ಮಾಡಿದೆವು. ಒಳ್ಳೆ ಪ್ರತಿಕ್ರಿಯೆ, ಪ್ರತಿಫಲ ಎರಡೂ ಸಿಕ್ಕಿತ್ತು. ಮಾಡೆಲಿಂಗ್‌ನಿಂದ ನನಗೆ ಸೀರಿಯಲ್ ಮತ್ತು ಸಿನಿಮಾಗಳಿಂದಲೂ ಅವಕಾಶಗಳು ಬರತೊಡಗಿತು. ಕಾಲೇಜ್ ಮುಗಿಯುತ್ತಿದ್ದಂತೆ ಅಪ್ಪ ಮತ್ತು ನನ್ನ ಚಿಕ್ಕಮ್ಮ ವಿನಯಾ ಪ್ರಸಾದ್ ಅವರ ಸಲಹೆ ಪಡೆದೆ. ನಿನ್ನಲ್ಲಿ ಅಭಿನೇತ್ರಿ ಅಡಗಿದ್ದಾಳೆ. ಅದನ್ನೇ ಮುಂದುವರಿಸು, ಒಳ್ಳೆ ನಟಿಯಾಗುವ ಎಲ್ಲ ಲಕ್ಷಣಗಳಿವೆ ಎಂದು ಸಲಹೆ ಕೊಟ್ಟರು. ಅಭಿನಯಕ್ಕೆ ಸಂಬಂಧಿಸಿದಂತೆ ನಾನು ಆ್ಯಕ್ಟಿಂಗ್ ಸ್ಕೂಲ್ ಸೇರಬೇಕಿತ್ತು. ನನ್ನ ಕುಟುಂಬಕ್ಕೆ ಹತ್ತಿರವಾಗಿರುವ ರಂಗಕಲಾವಿದೆ ಉಷಾ ಭಂಡಾರಿಯವರ ಕಲಾ ಶಾಲೆಯಲ್ಲಿ ನಟನೆ ತರಬೇತಿ ಪಡೆದುಕೊಂಡೆ. ಅವರಿಂದ ಸಾಕಷ್ಟು ಕಲಿತೆ. ಅವರು ಎಲ್ಲವನ್ನೂ ಹೇಳಿಕೊಟ್ಟರು.
ಉಷಾ ಭಂಡಾರಿಯವರೇ ನನ್ನನ್ನು `ಚಾಲೀ ಪೋಲಿಲ` ತುಳು ಚಿತ್ರವನ್ನು ಡೈರೆಕ್ಟ್ ಮಾಡಿದ್ದ ಸುರೇಂದ್ರ ಶೆಟ್ಟಿಯವರನ್ನು ಭೇಟಿ ಮಾಡಿಸಿದರು. ವೀರೇಂದ್ರ ಶೆಟ್ಟಿಯವರು `ಸವರ್ಣದೀರ್ಘ ಸಂಧಿ' ಚಿತ್ರವನ್ನು ಕನ್ನಡದಲ್ಲಿ ಮಾಡುತ್ತಿದ್ದರು. ಇದು ಅವರ ಎರಡನೇ ಚಿತ್ರ. ಆಡಿಶನ್ ನಂತರ ಈ ಚಿತ್ರಕ್ಕೆ ನಾಯಕಿಯಾಗಿ ಸೆಲೆಕ್ಟ್ ಆದೆ.
ಆಡಿಶನ್ ಕೊಡುವಾಗ ನನಗೆ ಸ್ಕ್ರಿಪ್ಟ್ ಬಗ್ಗೆ ಅಷ್ಟಾಗಿ ಐಡಿಯಾ ಇರಲಿಲ್ಲ. ಹಾಗಾಗಿ ನನ್ನ ಜೊತೆ ತಂದೆಯನ್ನು ಕರೆದುಕೊಂಡು ಹೋಗಿದ್ದೆ. ಸ್ಕ್ರಿಪ್ಟ್ ನೋಡಿದ ಕೂಡಲೇ ನನ್ನ ತಂದೆ ಸಬ್ಜೆಕ್ಟ್, ನಿನ್ನ ಪಾತ್ರ ಎರಡೂ ಚೆನ್ನಾಗಿದೆ. ಈ ಸಿನಿಮಾ ನೀನೇ ಮಾಡಬೇಕು ಎಂದು ಗ್ರೀನ್ ಸಿಗ್ನಲ್ ಕೊಟ್ಟರು.
ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಅಮೃತವರ್ಷಿಣಿ. ನನ್ನ ಪಾತ್ರ ಏನಪ್ಪಾ ಅಂದ್ರೆ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಮಗಳಾಗಿರುತ್ತೇನೆ. ಪಕ್ಕಾ ಬೆಂಗಳೂರು ಹುಡುಗಿ ಥರಾನೇ ಇರುತ್ತೀನಿ. ಜೊತೆಗೆ ಕ್ಲಾಸಿಕ್ ಸಿಂಗರ್. ಇನ್ನೊಂದು ವಿಶೇಷ ಅಂದರೆ ಚಿತ್ರದಲ್ಲೂ ಸಹ ನನ್ನ ತಂದೆ ಪಾತ್ರವನ್ನು ನನ್ನ ತಂದೆ ರವಿಭಟ್ ಮಾಡಿರೋದು! ಮೊದಲ ಚಿತ್ರದಲ್ಲೇ ಇಷ್ಟೆಲ್ಲ ವಿಶೇಷಗಳು ಸಿಕ್ಕಿರೋದು ನನ್ನ ಅದೃಷ್ಟ.