ಸಿದ್ಧಾರ್ಥಂಗೆ ಕಿಯಾರಾ ಇಷ್ಟವಂತೆ!

`ಜಬರಿಯಾ ಜೋಡಿ’ ಚಿತ್ರದಲ್ಲಿ ಪ್ರೇಮಿಗಳಿಗೆ ಫಟಾಫಟ್‌ ಮದುವೆ ಮಾಡಿಸುವ ಪಾತ್ರದಲ್ಲಿ ಮಿಂಚಿದ ಸಿದ್ಧಾರ್ಥ್‌ನಿಗೆ ಕಿಯಾರಾ ಬಹಳ ಇಷ್ಟವಾಗಿದ್ದಾಳಂತೆ! ಇತ್ತೀಚೆಗೆ ಪತ್ರಕರ್ತರೆದುರು ಸುಮ್ಮನಿರಲಾರದೆ ಈತ ಕಿಯಾರಾ ನಂಗೆ ತುಂಬಾ ಇಷ್ಟ. ಅವಳ ಜೊತೆ ಆಗಾಗ ಹುಕಪ್‌ ಆಗುತ್ತಿರುತ್ತೇನೆ ಎಂದಿದ್ದಾನೆ. ಅವಳನ್ನು ಸಂಪರ್ಕಿಸಿದಾಗ, ಇದೆಲ್ಲ ಗಾಳಿ ಸುದ್ದಿ ಎಂದು ಸಾರಾಸಗಟಾಗಿ ಅದನ್ನು ತಳ್ಳಿಹಾಕಿದಳು. ಹುಷಾರಪ್ಪ ಸಿದ್ಧಾರ್ಥ್‌….. ಅವಳು ಸ್ಟೇಟಸ್‌ ಸಿಂಬಲ್‌ನಲ್ಲಿ ಇನ್ನೂ ತಾನು ಸಿಂಗಲ್ ಎಂದೇ ತೋರಿಸುತ್ತಿರುವಾಗ ನೀನು ಈ ಹುಕಪ್‌ ಬುರುಡೆ ಬಿಡಬೇಡ! ಎನ್ನುತ್ತಾರೆ ಹಿತೈಷಿಗಳು.

ಸದಾ ಅಳುತ್ತಿದ್ದಳಂತೆ ಪರಿಣೀತಿ

ಪರಿಣೀತಿ ಚೋಪ್ರಾಳ ಫಿಲ್ಮಿ ಕೆರಿಯರ್‌ ಏಕ್‌ದಂ ಫ್ಲಾಪ್‌ ಆಗುತ್ತಿದೆ. ಸಿದ್ಧಾರ್ಥ್‌ ಜೊತೆಗಿನ ಆಕೆಯ ಇತ್ತೀಚಿನ ಚಿತ್ರ `ಜಬರಿಯಾ ಜೋಡಿ’ ಹೇಳಿಕೊಳ್ಳುವಂಥ ಹೆಸರು ಮಾಡಲಿಲ್ಲ. ಇಂಥ ಕಷ್ಟಕರ ದಿನಗಳನ್ನು ಎದುರಿಸುವುದನ್ನು ಪರಿಣೀತಿ ಕಲಿತಿದ್ದಾಳೆ. ಆದರೆ ಆಕೆಗೆ ಇದೇನೂ ಹೊಸದಲ್ಲ. ಹಿಂದೆಯೂ ಈ ರೀತಿ ಆಗಿದ್ದಾಗ, ಬಹಳ ದುಃಖಗೊಂಡು ಒಬ್ಬಳೇ ಒಂದು ಮೂಲೆಯಲ್ಲಿ ಬಿಕ್ಕಿ ಬಿಕ್ಕಿ  ಅಳುತ್ತಿದ್ದಳಂತೆ…. ಅರೆ ಬೇಬಿ, ಕೇವಲ ಅಳುವುದರಿಂದ ಸಮಸ್ಯೆ ಬಗೆಹರಿಯುತ್ತದೆಯೇ? ಇನ್ನೂ ಹೆಚ್ಚು ಹೆಚ್ಚು ಕಷ್ಟಪಡಬೇಕು. ಇಲ್ಲದಿದ್ದರೆ ನಾನಾ ಗ್ಲಾಮರಸ್‌ ಅವತಾರಗಳಲ್ಲಿ ಎಂಟ್ರಿ ಪಡೆಯುತ್ತಿರುವ ಹೊಸಬರ ಎದುರು ನೀನು ಕೊಚ್ಚಿಹೋದೀಯ!

ಕಿಶೋರ್‌ರನ್ನು ಹೀಗೆ ನೆನೆಯುತ್ತಾ…..

ಕಿಶೋರ್‌ ಕುಮಾರ್‌ರನ್ನು ಕೇವಲ ಗಾಯನಕ್ಕಾಗಿ ಮಾತ್ರವಲ್ಲದೆ, ಅವರ ಹಾಸ್ಯ ಮನೋಭಾವಕ್ಕೂ ಆಗಾಗ ಸ್ಮರಿಸಲಾಗುತ್ತದೆ. 1962ರಲ್ಲಿ ತಯಾರಾದ  `ಹಾಫ್‌ ಟಿಕೆಟ್‌’ ಚಿತ್ರದಲ್ಲಿ ನಡೆದ ಪ್ರಸಂಗ. ಈ ಚಿತ್ರದಲ್ಲಿ ತಾನೇ ಗಾಯಕಿಯ ಕಂಠದಲ್ಲೂ ಹಾಡಿ, ಎರಡೂ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ನಿರ್ದೇಶಕ ಸಲೀಂ‌ ಚೌಧರಿಯವರನ್ನು ಒಪ್ಪಿಸಿದ್ದರು. ಆಗ ಕಿಶೋರ್‌ `ಓಕೆ.. ಸೀಧೀ ಲಗೀ….’ ಹಾಡನ್ನು ಸ್ತ್ರೀ ಕಂಠದಲ್ಲಿಯೂ ರೆಕಾರ್ಡ್‌ ಮಾಡಿದರು. ಒಂದೇ ಶಾಟ್‌ಗೆ ಹಾಡು ಓಕೆ ಆಯಿತು. ಆಗ ಕಿಶೋರ್‌ ನಿರ್ದೇಶಕರನ್ನು, ಲತಾಜಿಯವರಿಗೆ ಕೊಡುವುದಕ್ಕಿಂತ 1 ರೂ. ಕಡಿಮೆ ಸಂಭಾವನೆ ಕೊಡಿ ಎಂದು ತಮಾಷೆ ಮಾಡಿದರಂತೆ. ಆ ಗಂಭೀರ ವಾತಾವರಣದಲ್ಲಿ ಈ ಮಾತು ಹಾಸ್ಯದ ಹೊಳೆ ಹರಿಸಿತ್ತು. ಮುಂದೆ ಈ ಹಾಡು ಎವರ್‌ಗ್ರೀನ್‌ ಹಿಟ್‌ ಆಯಿತು.

ಕರಣ್‌ನ ಸೈಲೆಂಟ್‌ ಎಂಟ್ರಿ

ಹಿಂದೆ ಧರ್ಮೇಂದ್ರ ತನ್ನ ಮಗ ಸನ್ನಿ ಡಿಯೋಲ್‌ನನ್ನು ಬಾಲಿವುಡ್‌ಗೆ ಪರಿಚಯಿಸಿದಾಗ, ಹಿಂದಿ ಚಿತ್ರೋದ್ಯಮದಲ್ಲಿ ದೊಡ್ಡ ಬಿರುಗಾಳಿ ಬೀಸಿದಂತಾಗಿತ್ತು. ಆದರೆ ಈಗ ಸನ್ನಿ ತನ್ನ ಮಗ ಕರಣ್‌ ಡಿಯೋಲ್‌ನನ್ನು ಬಾಲಿವುಡ್‌ನಲ್ಲಿ ಲಾಂಚ್‌ ಮಾಡಿದಾಗ, ವಾತಾವರಣ ಪೂರ್ತಿ ಥಂಡಿಯಾಗಿತ್ತು. ಯಾವ ಜೋಶ್‌, ಚಿಲ್‌ ಪಾರ್ಟಿ, ಸಡಗರ, ಸಂಭ್ರಮ ಏನೂ ಇರಲಿಲ್ಲ. `ಪಲ್ ಪಲ್ ದಿಲ್ ಕೇ ಪಾಸ್‌’ ಈತನ ಡೆಬ್ಯು ಚಿತ್ರವಾಗಿದ್ದು, ಇದರ ಟೀಸರ್‌ ಕೂಡ ಆಹಾ ಓಹೋ ಎನ್ನುವ ಹಾಗೇನೂ ಇರಲಿಲ್ಲ. ಧರ್ಮೇಂದ್ರರ ಮೊಮ್ಮಗನ ಎಂಟ್ರಿ ಇಷ್ಟು ಸಪ್ಪೆ ಆಗಬೇಕೇ?

ಎಲ್ಲಾ ಕಡೆ ತೋಪಾದ ಸಿದ್ಧು

ಅಂದ ಕಾಲತ್ತಿಲೆ ಕ್ರಿಕೆಟ್‌ ಆಡುತ್ತಿದ್ದಾಗ ಸಿಕ್ಸರ್‌ ಸಿದ್ಧು ಎಂದೇ ಖ್ಯಾತರಾಗಿ ಮೆರೆದ ಇವರು, ನ್ಯೂಸ್‌ ಚಾನೆಲ್‌, ಕಪಿಲ್ ಶರ್ಮ ಶೋಗಳಲ್ಲಿ ಭಾರಿ ಮಿಂಚಿದ್ದರು. ಅಂಥ ಈ `ಗುರು’ ಈಗ ಫುಲ್ ಥಂಡಾ ಥಂಡಾ ಆಗಿದ್ದಾರೆ. ಯಾಕಂತೀರಾ? ಏನೋ ಎಡವಟ್ಟು ಮಾತುಗಳಿಂದ ಕಪಿಲ್ ಶೋನಲ್ಲಿ (ಮಜಾ ಟಾಕೀಸ್‌ನಲ್ಲಿ ಸೃಜನ್‌ ಲೋಕೇಶ್‌ ಎದುರು ಇಂದ್ರಜಿತ್‌ ಲಂಕೇಶ್‌ ಕೂರುವಂತೆ) ಕೂರುತ್ತಿದ್ದ ಸಿದ್ಧು ಅಲ್ಲಿಂದ ಅರ್ಧ ಚಂದ್ರ ಪ್ರಯೋಗಕ್ಕೆ ಒಳಗಾದ ನಂತರ, ಈಗ ಅರ್ಚನಾ ಇವರ ಸ್ಥಾನ ಅಲಂಕರಿಸಿದ್ದಾರೆ. ಅಷ್ಟು ಮಾತ್ರವಲ್ಲ, ಪಂಜಾಬ್‌ನಲ್ಲಿ ತಮ್ಮ ಮಂತ್ರಿ ಪದವಿಯನ್ನೂ ಇಂಥದೇ ಕಾರಣಕ್ಕೆ ಕಳೆದುಕೊಂಡಿದ್ದಾರೆ. ಎರಡೂ ಕಡೆ ಬ್ಯಾಕ್‌ ಬೆಂಚರ್‌ ಆಗಿರುವ ಸಿದ್ಧು ಮುಂದೇನು ಮಾಡುತ್ತಾರೆ…..? ಅಯ್ಯೋ ಪಾಪ, ಹೀಗಾಗಬಾರದಿತ್ತು!

ನಡೆಯದ ಸೋನಾಕ್ಷಿಯ ಚಮಕ್

ಸೋನಾಕ್ಷಿಯ ಇತ್ತೀಚಿನ `ಶಫಾಖಾನಾ’ ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮಖಾಡೆ ಮಲಗಿತು. ಚಿತ್ರದ ಯಾವ ಪಾತ್ರದಲ್ಲೂ ನಟನೆಯ ದಮ್ ಇರಲೇ ಇಲ್ಲ. ಕಥೆಯೂ ಇಲ್ಲದ ಕಾರಣ, ಚಿತ್ರಮಂದಿರಕ್ಕೆ ಹೋದವರು ಯಾವಾಗ ಎದ್ದು  ಹೋದೇವೋ ಎಂದು ಕಾಯುವಂತಿದೆ ನಿರ್ದೇಶಕರ ಕೈಚಳಕ. ಹೀಗಾಗಿ ಸೋನಾಕ್ಷಿ ಬೇಬಿಗೆ ದುಃಖಿಸದೆ ಬೇರೆ ದಾರಿ ಇಲ್ಲ. ಆ ದಬಂಗ್‌ ಖಾನ್‌ ಮಹಾಶಯನೇ ಮತ್ತೊಮ್ಮೆ ಈಕೆಯ ಕೈಹಿಡಿದು ಕಾಯಬೇಕಿದೆ. ಎಂಟ್ರಿ ಪಡೆದು ವರ್ಷಗಳೇ ಕಳೆದರೂ ಸೋನಾಕ್ಷಿಗೆ ಇಂಥ ಗಾಡ್‌ಫಾದರ್‌ಗಳ ರಕ್ಷಣೆ ಇಲ್ಲದೆ ಮುಂದುವರಿಯಲಾಗದೆ….. ಎನಿಸುತ್ತದೆ. ಮೊದಲೇ ಚಿತ್ರ ತೋಪಾಗಿ ದುಃಖಿಸುತ್ತಿರುವಾಗ, ಯಾವುದೋ ಟಿವಿ ಶೋನಲ್ಲಿ ಒಂದು ಜಾತಿ  ಬಗ್ಗೆ ಏನೋ ವ್ಯಂಗ್ಯವಾಡಿ ಸಿಕ್ಕಿಬಿದ್ದು, ಎಲ್ಲರೆದುರು ಕ್ಷಮಾಪಣೆ ಕೇಳುವಂತಾಯಿತು. ಹುಷಾರಮ್ಮ, ಎಡವಟ್ಟಾದೀತು!

ಬಂದಿದೆ ಹೊಸ ಆಫೀಸಾಯಣ!

9-5ರವರೆಗೆ ನಡೆಯುವ ಆಫೀಸಿನ ಕಾರ್ಯಕಲಾಪಗಳ ಕುರಿತು ವ್ಯಂಗ್ಯವಾಗಿ ಶೋ ಪ್ರಸ್ತುತಪಡಿಸಲಿದೆ, ವೆಬ್‌ ಸೀರೀಸ್‌ನಲ್ಲಿ `ದಿ ಆಫೀಸ್‌’ ಹಾಟ್‌ಸ್ಟಾರ್‌ ಸ್ಟ್ರೀಮ್ ನಲ್ಲಿ. ಕಾರ್ಪೊರೇಟ್‌ ಲೈಫ್‌ನ್ನು ಇಲ್ಲಿ ಭಾರತೀಯ ಹಾಸ್ಯ ಚಟಾಕಿಗಳೊಂದಿಗೆ ಉಣಬಡಿಸಲಾಗಿದೆ. ಅತ್ತೆ ಸೊಸೆ, ತ್ರಿಕೋನ ಪ್ರೇಮ ಕಥೆಗಳಿಂದ ಬೇಸತ್ತವರಿಗೆ ಈ ಆಫೀಸಾಯಣದ ಹಾಸ್ಯ ಇಷ್ಟವಾಗಬಹುದು. ಹಿಂದೆ ಡಿಡಿಯಲ್ಲಿ ಜಸ್ಪಾಲ್ ಭಟ್ಟಿ ಪ್ರಸ್ತುತಪಡಿಸುತ್ತಿದ್ದ `ಫ್ಲಾಪ್‌ ಶೋ’ ನೆನಪಾಯ್ತೆ….? ಇದು ಆ ಮಟ್ಟಕ್ಕೆ ಬರುತ್ತದೋ…. ಕಾದು ನೋಡೋಣ.

ಮತ್ತೆ ಬರಲಿದ್ದಾಳೆ ತಾರಾ

`ಸ್ಟೂಡೆಂಟ್‌ ಆಫ್‌ ದಿ ಇಯರ್‌-2′ ಚಿತ್ರದಿಂದ ನಟಿ ತಾರಾ ಸುತಾರಿಯಾ ಏನೇನೂ ಶೈನ್‌ ಆಗಲಿಲ್ಲ. ದೊಡ್ಡ ಬ್ಯಾನರ್‌, ಭಾರೀ ತಾರಾಗಣದ ಮಧ್ಯೆ ತಾರಾ ಎಲ್ಲೋ ಕಳೆದುಹೋದಳು. ಆದದ್ದಾಯ್ತು, ಈಗ ಈ ಚಿತ್ರದ ತೆಲುಗು ರೀಮೇಕ್‌ನಲ್ಲಿ ತಾರಾ ಮತ್ತೆ ಕಾಣಿಸಲಿದ್ದಾಳೆ. ಇದೇ ಚಿತ್ರ `-100′ ಎಂಬ ಹೆಸರಿನಲ್ಲಿ ತೆಲುಗಿನಲ್ಲಿ ಮೂಡಿಬರಲಿದೆ. ಸುನೀಲ್ ಶೆಟ್ಟಿ ಮಗ ಅಹಾನ್‌ ಶೆಟ್ಟಿ ಇಲ್ಲಿ ನಾಯಕ. ಹೇಗೋ ಏನೋಮ್ಮ…. ದಕ್ಷಿಣದಲ್ಲಾದರೂ ನಿನ್ನ ಕೀರ್ತಿ ಬೆಳಗುವಂತಾಗಲಿ!

ಕೇವಲ ಸ್ನೇಹ ಅಷ್ಟೆ

`ಧಡಕ್‌` ಚಿತ್ರದ ಹೊಸ ತಾರಾ ಜೋಡಿ ಈಶಾನ್‌ – ಜಾಹ್ನವಿ ಕಪೂರ್‌ (ಶ್ರೀದೇವಿ ಮಗಳು) ಇತ್ತೀಚೆಗೆ ಆಫ್‌ಸ್ಕ್ರೀನ್‌ನಲ್ಲೂ ಜೋಡಿಯಾಗಿ ಊರೆಲ್ಲ ಸುತ್ತಾಡುತ್ತಿದ್ದಾರಂತೆ! ಪ್ರೆಸ್‌ ಫೋಟೋಗ್ರಾಫರ್ಸ್‌ ಇವರನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲಲ್ಲಿ ತಮ್ಮ ಕ್ಯಾಮೆರಾದಿಂದ ಸೆರೆಹಾಕುತ್ತಿರುತ್ತಾರೆ. ಇದೇನ್ರಿ ನಿಮ್ಮ ಮಗಳ ಭಾನಗಡಿ ಎಂದು ಜಾಹ್ನವಿಯ ತಂದೆ ಬೋನಿ ಕಪೂರ್‌ರನ್ನು ವಿಚಾರಿಸಿದಾಗ, ಛೇ…. ಛೇ…. ಹಾಗೇನಿಲ್ರಿ, ಅವರು ಬರೀ ಫ್ರೆಂಡ್ಸ್ ಅಷ್ಟೆ ಎಂದು ತಿಪ್ಪೆ ಸಾರಿಸಿದರು. ನನ್ನ ಮಗಳು, ಅವಳ ಚಾಯ್ಸ್ ಬಗ್ಗೆ ಭರವಸೆ ಇದೆ ಎಂದರು. ಜಾಹ್ನವಿ ಈಶಾನ್‌ರನ್ನು ನಂಬಬಹುದೇನೋ…. ಆದರೆ ಅವರ ವಯಸ್ಸನ್ನು ನಂಬಲಾದೀತೇ…..?

ಸುನೀಲ್ ‌ಶೆಟ್ಟಿಯ ಪೈಲ್ವಾನ್‌ಗಿರಿ

ಚಿತ್ರರಂಗದಿಂದ ತುಸು ದೂರ ಸರಿದಿದ್ದ ಅಣ್ಣ  ಸುನೀಲ್‌ ಶೆಟ್ಟಿ ಇದೀಗ ಪೈಲ್ವಾನ್‌ ಆಗುತ್ತಿದ್ದಾರೆ. ರಿಯಲ್‌ನಲ್ಲಿ ಅಲ್ಲ…. ರೀಲ್‌ನಲ್ಲಿ! ಸುನೀಲ್ ಶೆಟ್ಟಿ ಇದೀಗ ನಮ್ಮ ಕಿಚ್ಚ ಸುದೀಪ್‌ ಜೊತೆ `ಪೈಲ್‌ವಾನ್‌’ ಚಿತ್ರದಲ್ಲಿ ಕಾಣಿಸುತ್ತಾರೆ. ಇದೇ ತರಹ `ತಾನಾಜಿ’ ಚಿತ್ರದಲ್ಲೂ ಸುನೀಲ್ ಆ್ಯಕ್ಷನ್‌ ಪಾತ್ರ ನಿರ್ವಹಿಸುತ್ತಿದ್ದಾರೆ. ಇಷ್ಟು ದಿನ ಬೆಳ್ಳಿ ತೆರೆಯಿಂದ ದೂರವಿದ್ದ ಅಣ್ಣ, ಒಮ್ಮೆಲೇ ಮುನ್ನುಗ್ಗುತ್ತಿದ್ದಾರೆ!

ಬಾಂಡಿಂಗ್‌ ಯಾ ಪಬ್ಲಿಸಿಟಿ

ಬೀ ಟೌನ್‌ನಲ್ಲಿ ಇತ್ತೀಚೆಗೆ ಅರ್ಜುನ್‌ ಮಲೈಕಾ ಜೋಡಿಯ ಚರ್ಚೆ ನಂತರ ಹೆಚ್ಚು ಸುದ್ದಿ ಆಗುತ್ತಿರುವುದು ಸಾರಾ ಅಲೀಖಾನ್‌ ಮತ್ತು ಕಾರ್ತಿಕ್‌ ಆರ್ಯನ್‌ರದು. ಲಖ್ನೌನಲ್ಲಿ  ಒಂದು ಸಿನಿಮಾ ಶೂಟಿಂಗ್‌ಗೆಂದು ಬಂದಿರುವ ಆರ್ಯನ್‌, ಸಾರಾಳನ್ನು ಲಖ್ನೌ ಏರ್‌ಪೋರ್ಟ್‌ನಲ್ಲಿ ಬೀಳ್ಕೊಡಲು ಬಂದಾಗ, ಸಾರಾ ಅವನನ್ನು ಗಟ್ಟಿಯಾಗಿ ಅಪ್ಪಿಕೊಂಡು ಮುತ್ತಿಡುವುದೇ? ಇದೀಗ ಈ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ. ಹೀಗೆ ಅನೇಕ ಫೋಟೋಗಳನ್ನು ಇವರು ಮೀಡಿಯಾಗೆ ಮುಂದೂ ನೀಡುವವರಿದ್ದಾರೆ. ಇದು ಇವರಿಬ್ಬರ ಬಾಂಡಿಂಗ್‌ ಇರಬಹುದೇ ಅಥವಾ ಕಾರ್ತಿಕ್‌ ಚಿತ್ರಕ್ಕಾಗಿ ಪಬ್ಲಿಸಿಟಿ ಸ್ಟಂಟೇ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಆದರೆ ಇವರ ಇಂಥ ಗ್ಲಾಮರಸ್‌ ಅಪ್ಪುಗೆ, ಶಿಷ್ಟಾಚಾರದ ನಗರಿ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿತೇ?

ದಕ್ಷಿಣದತ್ತ ತಿರುಗಿದ ಸಂಜೂ ಬಾಬಾ

ಇತ್ತೀಚೆಗೆ ಸಂಜಯ್‌ ದತ್ತ್ ನ ಹೊಸ `ಪ್ರಸ್ಥಾನಂ’ ಚಿತ್ರದ ಟೀಸರ್‌ ರಿಲೀಸ್‌ ಆಯ್ತು. ಇದರಲ್ಲಿ ಸಂಜೂ ಬಾಬಾ ಎಂದಿನ ತನ್ನ ಧಿಮಾಕಿನ ಸ್ಟೈಲ್‌ನಲ್ಲಿ ಮಿಂಚಿರುವುದು ಅಭಿಮಾನಿಗಳಿಗೆ ರಸದೌತಣವಾಗಿದೆ. ಇದಾದ ಮೇಲೆ ಸಂಜಯ್‌ ಕನ್ನಡದ ಖ್ಯಾತ `ಕೆಜಿಎಫ್‌-2′ ಚಿತ್ರದಲ್ಲಿ ಅಧೀರಾನ ಪಾತ್ರ ವಹಿಸಲಿದ್ದಾನೆ. ಇದಂತೂ ಪಕ್ಕಾ ವಿಲನ್‌ ಪಾತ್ರ. ಅಂದಹಾಗೆ ಈಗ ದಕ್ಷಿಣದ ಚಿತ್ರಗಳಲ್ಲಿ 90ರ ದಶಕದ ನಟರೆಲ್ಲ ದಾಂಗುಡಿ ಇಡುತ್ತಿದ್ದಾರೆ. ಮೊದಲು ಜಾಕಿಶ್ರಾಫ್‌, ಆಮೇಲೆ ಸುನೀಲ್‌ ಶೆಟ್ಟಿ, ಇದೀಗ ಸಂಜಯ್‌ ದತ್.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ