ಎತ್ತರ ನಿಲುವಿನ ಈ ಬೆಡಗಿ ಫ್ಯಾಷನ್‌ ಲೋಕದಲ್ಲಿ ಮಿನುಗುವ ನಕ್ಷತ್ರವಾಗಿ ಎಂಟ್ರಿ ಕೊಟ್ಟಾಗ ಆ ಒಂದು ಕ್ಷಣ ನೋಡಿದವರೆಲ್ಲ ಇದು ಯಾರಪ್ಪ ಶಿಲ್ಪಾಶೆಟ್ಟಿಯ ಹಾಗಿದ್ದಾಳಲ್ಲ ಅಂತ ಕಾಂಪ್ಲಿಮೆಂಟ್‌ ಕೊಟ್ಟಿದ್ದುಂಟು. ಈ ಗ್ಲಾಮರ್‌ ಪ್ರಪಂಚವೇ ಹಾಗೆ.... ಮಾಡೆಲಿಂಗ್‌, ರಾಂಪ್ ವಾಕ್‌, ಫ್ಯಾಷನ್‌ ಪೆರೇಡ್‌ ಇವೆಲ್ಲ ಕೇಳುವುದಕ್ಕೆ ಎಷ್ಟು ಚಂದವೋ ಅಷ್ಟೇ ಕಷ್ಟ ಕೂಡ. ತೆಳ್ಳಗೆ ಬೆಳ್ಳಗೆ ಎತ್ತರವಾಗಿದ್ದರಷ್ಟೇ ಸಾಲದು, ಅದರ ಜೊತೆಗೆ ಗುರಿ ಕೂಡಾ ಹೊಂದಿರಬೇಕು. ಅದೊಂದು ಕಲೆ ಎಂಬ ಅರಿವಿರಬೇಕು.

ಒಬ್ಬ ಮಾಡೆಲ್ ಎಷ್ಟೆಲ್ಲಾ ಶ್ರಮ ವಹಿಸಿ ತನ್ನ ಫಿಗರ್‌ನ್ನು ಮೆಂಟೇನ್‌ ಮಾಡುತ್ತಾಳೆಂದು ಅವರಿಗೇ ಗೊತ್ತು. ಇಂಥವೊಂದು ಸುಂದರ ಜಗತ್ತಿಗೆ ಕಾಲಿಟ್ಟಂಥ ಬೆಡಗಿ ಯುಕ್ತಾ ಈಡಿಗಾರ್‌ ಚಿಕ್ಕ ವಯಸ್ಸಿನಿಂದಲೇ ಫ್ಯಾಷನ್‌, ಸಿನಿಮಾ ಅಂತ ಗೀಳು ಅಂಟಿಸಿಕೊಂಡೇ ಬೆಳೆದವಳು. ಅಪ್ಪ ಬಿಸ್‌ನೆಸ್‌ ಮ್ಯಾನ್‌, ಅಮ್ಮ ಅಡ್ವರ್‌ಟೈಸಿಂಗ್‌ ಕಂಪನಿಯಲ್ಲಿ ಉದ್ಯೋಗಿ. ಮಗಳ ಅಭಿರುಚಿಗೆ ಯಾವತ್ತೂ ಅಡ್ಡಿ ಬರಲಿಲ್ಲ. ಕಾಲೇಜು ಮೆಟ್ಟಿಲು ಹತ್ತಿದಾಗಲೂ ಸಹ ತನ್ನ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂಥ ಸಬ್ಜೆಕ್ಟನ್ನು ಆರಿಸಿಕೊಂಡಳು. ಸೈಕಾಲಜಿ ಆಯ್ಕೆ ಮಾಡಿಕೊಂಡಳು. ಡಿಪ್ರೆಶನ್‌ಗೆ ಒಳಗಾಗಿರುವವರನ್ನು ಗುಣಪಡಿಸಬೇಕೆಂಬ ಉದ್ದೇಶ ಅವಳದಾಗಿತ್ತು. ಜೊತೆಗೆ ಮಾಡೆಲಿಂಗ್‌, ನಾಟಕ ಇವುಗಳನ್ನು ಬಿಡಲಿಲ್ಲ. ನಾಗತೀಹಳ್ಳಿ ಚಂದ್ರಶೇಖರ್‌ ಅವರ ನಾಟಕ ಶಾಲೆಗೆ ಸೇರಿಕೊಂಡಳು.

ಈ ಮಧ್ಯೆ ಒಂದೆರಡು ಸಿನಿಮಾಗಳ ಅವಕಾಶ ಬಂದರೂ ಪೂರ್ಣ ತರಬೇತಿ ಪಡೆಯುವವರೆಗೂ ಯಾವುದನ್ನೂ ಒಪ್ಪಿಕೊಳ್ಳಲಿಲ್ಲವಂತೆ, ಟಿ.ವಿ ಸೀರಿಯಲ್‌ನಲ್ಲಿ ಅವಕಾಶ ಬಂದಿದ್ದರೂ ಒಪ್ಪಿಕೊಳ್ಳಲಿಲ್ಲ. ಆದರೆ ನಾಟಕಗಳಲ್ಲಿ ನಟಿಸುತ್ತಲೇ ಬಂದಳು. ಇದುವರೆಗೂ ಮೂರು ನಾಲ್ಕು ನಾಟಕಗಳಲ್ಲಿ ನಟಿಸಿದ್ದಾಳಂತೆ. ಸಿನಿಮಾ ನಾಯಕಿಯಾಗಿ ಬೆಳೆಯಬೇಕು. ನಟಿಯಾಗಿ ತನ್ನದೇ ಆದ ಛಾಪು ಮೂಡಿಸಬೇಕೆಂದು ಯುಕ್ತಾ ಕನಸು ಕಟ್ಟುತ್ತಿದ್ದಾಳೆ. ಜೊತೆಗೆ ಪ್ರಯತ್ನ ಇದೆ.

ಕನ್ನಡ ಚಿತ್ರಗಳನ್ನು ಅದರಲ್ಲೂ ಹಳೆಯ ಚಿತ್ರಗಳನ್ನು ನೋಡುವ ಯುಕ್ತಾಗೆ ರಾಜ್‌ಕುಮಾರ್‌, ಕಲ್ಪನಾ ತುಂಬಾ ಇಷ್ಟವಂತೆ. ಕಲ್ಪನಾ ನನ್ನ ರೋಲ್ ಮಾಡೆಲ್‌ ಎನ್ನುತ್ತಾಳೆ.

ನಟನೆಗೆ ಬೇಕಾದಂಥ ಟ್ರೇನಿಂಗ್‌ ಪಡೆದಿರುವ ಯುಕ್ತಾ ಹಾರ್ಸ್‌ ರೈಡಿಂಗ್‌, ಸ್ವಿಮಿಂಗ್‌, ಡ್ರೈವಿಂಗ್‌ ಎಲ್ಲವನ್ನೂ ಕಲಿಯುತ್ತಿದ್ದಾಳೆ.

ಎಂಥ ಪಾತ್ರಗಳು ಇಷ್ಟ.......?

ಗ್ಲಾಮರಸ್‌ ಪಾತ್ರವಿದ್ದರೂ ಅಭಿನಯಕ್ಕೆ ಅಲ್ಲಿ ನನಗೆ ಅವಕಾಶವಿರಬೇಕು. ಏಕೆಂದರೆ ನಾನು ಥಿಯೇಟರ್‌ ಆರ್ಟಿಸ್ಟ್ ಆಗಿರುವುದರಿಂದ ನಾನು ವಹಿಸುವ ಪಾತ್ರ ತುಂಬಾ ಮುಖ್ಯವಾಗುತ್ತದೆ.

ಯಾವ ನಾಯಕರ ಜೊತೆ ನಟಿಸಲು ಇಷ್ಟ?

ಕನ್ನಡದಲ್ಲಿ ಎಲ್ಲರೂ ಇಷ್ಟವೇ. ಆದರೆ ಯಶ್‌, ಸುದೀಪ್‌ ನನ್ನ ಫೇವರಿಟ್‌. ಅವರೊಂದಿಗೆ ನಟಿಸುವ ಅವಕಾಶ ಸಿಕ್ಕರೆ ನನ್ನಂಥ ಅದೃಷ್ಟವಂತೆ ಬೇರೆ ಯಾರೂ ಇಲ್ಲ ಅನಿಸುತ್ತೆ.

ಸದ್ಯಕ್ಕೆ ಬಂದಿರುವ ಆಫರ್‌...?

ಒಂದೆರಡು ಅವಕಾಶಗಳು ಬಂದಿವೆ. ಇನ್ನು ಮಾತುಕತೆಯಾಗಿಲ್ಲ. ಅಲ್ಲಿಯವರೆಗೂ ನಾನು ಸಮಯ ವ್ಯರ್ಥ ಮಾಡದೇ ನಾಟಕಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ. ಜೊತೆಗೆ ಫ್ಯಾಷನ್‌ ಶೋ ಮಾಡೆಲಿಂಗ್‌.

ಅಮ್ಮ ಅಪ್ಪನಿಗೆ ಒಬ್ಬಳೇ ಮಗಳಾಗಿರುವ ಯುಕ್ತಾಗೆ ಮನೆಯಲ್ಲಿ  ಫುಲ್ ಪ್ರೋತ್ಸಾಹ ಇದೆಯಂತೆ. ನಾನೊಬ್ಬ ಉತ್ತಮ ನಟಿಯಾಗಿ ತೆರೆ ಮೇಲೆ ಮಿನುಗಬೇಕೆಂಬುದೇ ಅವರ ಆಸೆ. ಈ ವರ್ಷ ಖಂಡಿತ ಒಂದು ಸಿನಿಮಾ ಮಾಡಿಯಾದರೂ ನಾನು ಪ್ರೂವ್‌ ಮಾಡಿ ತೋರಿಸ್ತೀನಿ, ಎನ್ನುತ್ತಾಳೆ ಯುಕ್ತಾ ಈಡಿಗಾರ್‌.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ