– ರಾಘವೇಂದ್ರ ಅಡಿಗ ಎಚ್ಚೆನ್.
ಕಾಂತಾರ’ ಎನ್ನುವ ಬ್ಲಾಕ್ಬಸ್ಟರ್ ಚಿತ್ರದ ಮೂಲಕ ಭಾರತದಾದ್ಯಂತ ಡಿವೈನ್ ಸ್ಟಾರ್ ಎಂದೇ ಖ್ಯಾತರಾದ ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ ಅವರು ಕುಟುಂಬ ಸಮೇತ ಮಂತ್ರಾಲಯಕ್ಕೆ ಭೇಟಿ ನೀಡಿದರು.

ಕಲಿಯುಗದ ಕಾಮಧೇನು, ಭಕ್ತರ ಕಲ್ಪವೃಕ್ಷವೆಂದು ಪ್ರತೀತಿ ಪಡೆದಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ರಿಷಬ್ ಕುಟುಂಬಸ್ಥರು ಭೇಟಿ ಕೊಟ್ಟು ರಾಯರ ದರ್ಶನ ಪಡೆದರು.

ಕುಟುಂಬಸ್ಥರು ಮೊದಲು ಗ್ರಾಮದ ಆದಿದೇವತೆ ಶ್ರೀಮಾಂಚಲಮ್ಮ ದೇವಾಲಯಕ್ಕೆ ತೆರಳಿ, ದೇವಿ ದರ್ಶನ ಪಡೆದುಕೊಂಡರು. ಬಳಿಕ, ಶ್ರೀರಾಘವೇಂದ್ರ ಸ್ವಾಮಿಯ ಮೂಲ ಬೃಂದಾವನದ ದರ್ಶನ ಮಾಡಿ, ವಿಶೇಷ ಪೂಜೆ ನೆರವೇರಿಸಿದರು. ನಂತರ, ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರನ್ನು ಭೇಟಿಯಾಗಿ, ಉಭಯ ಕುಶಲೋಪರಿ ವಿಚಾರಿಸಿದರು.

ಈ ವೇಳೆ ಶ್ರೀಮಠದಿಂದ ಶ್ರೀಗಳು ದಂಪತಿಗೆ ಸನ್ಮಾನಿಸಿ, ರಾಘವೇಂದ್ರ ಸ್ವಾಮಿಗಳ ಸ್ಮರಣಿಕೆಯನ್ನು ನೀಡಿ ಆಶೀರ್ವದಿಸಿದರು. ಶ್ರೀಮಠದ ವ್ಯವಸ್ಥಾಪಕರಾದ ಎಸ್.ಕೆ.ಶ್ರೀನಿವಾಸ್ ರಾವ್, ಪಿಆರ್‌ಒ ಐ.ಪಿ.ನರಸಿಂಹಾಚಾರ್ಯ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.





