ವರ್ಟಿಕಲ್ ಫಿಲ್ಮ್ ಮೇಕಿಂಗ್ ಗೋಷ್ಠಿಯಲ್ಲಿ ಭವಿಷ್ಯದ ಮಾಧ್ಯಮದ ಕುರಿತು ಸಂವಾದ

ಬೆಂಗಳೂರು ಚಿತ್ರೋತ್ಸವ ವೇದಿಕೆ: ‘ಚಿತ್ರಮಂದಿರಗಳ, ಟಿವಿಗಳ ಹಾರಿಜಾಂಟಲ್ ಪರದೆಯಲ್ಲಿ ಚಿತ್ರ ನೋಡುವ ಕಾಲ ಬದಲಾಗಿದ್ದು, ಈಗ ಮೊಬೈಲ್ ನಲ್ಲಿ ನೋಡುವ ವರ್ಟಿಕಲ್ ಕಂಟೆಂಟ್ ಗೆ ಬೇಡಿಕೆ ಹೆಚ್ಚಾಗಿದೆ. ಈ ವಿಭಾಗದಲ್ಲಿ ಚೀನಾ ಮುಂಚೂಣಿಯಲ್ಲಿದ್ದು, ಅನಂತರದ ಸ್ಥಾನದಲ್ಲಿ ಅಮೆರಿಕಾ ಇದೆ. ಭಾರತದಲ್ಲಿ ಈಗಾಗಲೇ ಮೈಕ್ರೋ ಡ್ರಾಮಾ ಸೀರೀಸ್ ಗಳು ಜನರನ್ನು ಆಕರ್ಷಿಸುತ್ತಿದ್ದು, ಈ ವಿಭಾಗವು ಭವಿಷ್ಯದ ಮಾಧ್ಯಮವಾಗಲಿದೆʼ ಎಂಬ ಅಭಿಪ್ರಾಯವು ‘ವರ್ಟಿಕಲ್ ಫಿಲ್ಮ್ ಮೇಕಿಂಗ್ʼ ಗೋಷ್ಠಿಯಲ್ಲಿ ವ್ಯಕ್ತವಾಗಿದೆ.

micro

ಈ ಕುರಿತಾಗಿ ಮಾತನಾಡಿದ ಜೀ ಟಿವಿ ಸಮೂಹದಲ್ಲಿ ಮೈಕ್ರೋ ಸೀರೀಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ವರ್ಷ ಅವರು, ‘ವರ್ಟಿಕಲ್ ಫಿಲ್ಮ್ ಮೇಕಿಂಗ್ ವಿಭಾಗದಲ್ಲಿ ಚೀನಾ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಈಗಾಗಲೇ ಚೀನಾದಲ್ಲಿ 40 ಸಾವಿರಕ್ಕೂ ಹೆಚ್ಚು ಮೈಕ್ರೋ ಡ್ರಾಮಾಗಳು ಬಿಡುಗಡೆಯಾಗಿದ್ದು, ಮೈಕ್ರೋ ಡ್ರಾಮಾಗಳ ಆದಾಯವು ಚಿತ್ರಮಂದಿರಗಳ ಗಳಿಕೆಯನ್ನು ಮೀರಿಸುತ್ತಿದೆ. ಅಮೆರಿಕಾದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಈ ಟ್ರೆಂಡ್ ಬೆಳೆಯುತ್ತಿದ್ದರೆ, ಭಾರತ ಈಗ ಪ್ರಬಲವಾಗಿ ಬೆಳೆಯುತ್ತಿದೆ. ಜೀ ಮತ್ತು ಕುಕು ನಂತಹ ಸಂಸ್ಥೆಗಳು ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, 2026-27ರ ವೇಳೆಗೆ ದೊಡ್ಡ ಸಂಸ್ಥೆಗಳು ಈ ವಿಭಾಗಕ್ಕೆ ಲಗ್ಗೆ ಇಡಲಿವೆ. ಮೈಕ್ರೋ ಡ್ರಾಮಾದಲ್ಲಿ ಮೌನವಿಲ್ಲ, ನಿರಾಳತೆ ಇಲ್ಲ, ನಿಧಾನವಿಲ್ಲ. ಇಲ್ಲಿ ಸದ್ದುಗದ್ದಲವಿದೆ, ವೇಗವಿದೆʼಎಂದರು.

ಮೈಕ್ರೋ ಡ್ರಾಮಾ ವಿಭಾಗದಲ್ಲಿ ಕಂಟೆಂಟ್ ರಚಿಸುತ್ತಿರುವ ರಾಜಶ್ರೀ ಪೊನ್ನಪ್ಪ ಅವರು ಮಾತನಾಡಿ, ‘ಇಲ್ಲಿ 13 ಸೆಕೆಂಡಿಗೆ ಒಂದು ಹೊಸ ತಿರುವು ಇರಬೇಕು. ಏನಾದರೊಂದು ಆಗುತ್ತಿರಬೇಕು. ಈ ಕ್ಷಣದಲ್ಲಿ ಎಲ್ಲವೂ ನಡೆಯಬೇಕು. ವರ್ಟಿಕಲ್ ಸಿನಿಮಾ ಅಥವಾ ಮೈಕ್ರೋ ಸೀರೀಸ್ ಅಂದುಕೊಂಡಷ್ಟು ಸುಲಭವಲ್ಲ. ಇಲ್ಲಿ ಪ್ರೇಕ್ಷಕರ ತಾಳ್ಮೆ ಕಡಿಮೆ ಇರುತ್ತದೆ. ಮೊದಲ 10 ಸೆಕೆಂಡ್‌ನಲ್ಲಿ ಭಾವನಾತ್ಮಕ ಸೆಳೆತ ಇಲ್ಲದಿದ್ದರೆ ಪ್ರೇಕ್ಷಕ ಸ್ಕ್ರೋಲ್ ಮಾಡಿ ಮುಂದೆ ಹೋಗುತ್ತಾನೆʼಎಂದು ಹೇಳಿದರು.

ಸಿನಿಮಾ ಛಾಯಾಗ್ರಾಹಕ ಮನೋಹರ ಜೋಶಿ ಮಾತನಾಡಿ, ‘ಇದು ಅಡ್ಡ ಪರದೆ ಸಿನಿಮಾಗಿಂತ ಸಂಪೂರ್ಣ ಭಿನ್ನ. ಇಲ್ಲಿ ಅದ್ದೂರಿತನಕ್ಕಿಂತ ನಟರ ಕಣ್ಣು ಮತ್ತು ಭಾವನೆಗಳು ಮುಖ್ಯ. ಹೆಚ್ಚಾಗಿ ಕ್ಲೋಸ್-ಅಪ್ ಶಾಟ್ ಗಳ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಎರಡಕ್ಕಿಂತ ಹೆಚ್ಚು ಪಾತ್ರಗಳನ್ನು ಒಂದೇ ಫ್ರೇಮ್‌ನಲ್ಲಿ ತೋರಿಸುವುದು ದೊಡ್ಡ ಸವಾಲು. ಆದರೆ ಈ ವಿಭಾಗವು ಉದ್ಯೋಗ ಸೃಷ್ಟಿಸುತ್ತಿದೆ. ಬೆಳವಣಿಗೆ ಹೊಂದುವ ಅವಕಾಶ ಸಾಕಷ್ಟಿದೆʼಎಂದು ಹೇಳಿದರು.

micro 1

ಮತ್ತೊಬ್ಬ ಕಂಟೆಂಟ್ ಕ್ರಿಯೇಟರ್ ಲವ್ನಿತ್ ಎಸ್ ರಾಂಪುರೆ ಮಾತನಾಡಿ, ‘ಕಳೆದ ಆರು ತಿಂಗಳಲ್ಲಿ ಹಿಂದಿಯಲ್ಲಿ 800 ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ 120ಕ್ಕೂ ಹೆಚ್ಚು ಶೋಗಳು ತಯಾರಾಗಿವೆ. ಭಾವನೆಗಳನ್ನು ಆಧರಿಸಿದ ಸಿನಿಮಾಗಳು ಇಲ್ಲಿ ಹೆಚ್ಚು ಗಮನ ಸೆಳೆಯುತ್ತಿವೆ. ಈ ಕಂಟೆಂಟ್ ಗಳನ್ನು ಆಟೋ ಚಾಲಕರು ಕೂಡ ಇಷ್ಟಪಡುತ್ತಿರುವುದು ಇದರ ವ್ಯಾಪ್ತಿಯನ್ನು ಹೆಚ್ಚಿಸಿದೆʼ ಎಂದು ಹೇಳಿದರು.

ಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲರೂ, ʼಒಂದು ನಿಮಿಷದಿಂದ ಆರಂಭವಾಗಿ ಎರಡೂವರೆ ನಿಮಿಷಗಳ ಎಪಿಸೋಡ್ ಇರುವ ಮೈಕ್ರೋ ಸೀರೀಸ್ ಗಳು ಕತೆ ಹೇಳುವ ರೀತಿಯನ್ನೇ ಬದಲಿಸುತ್ತಿವೆ. ಇದು ಭವಿಷ್ಯದ ಮಾಧ್ಯಮವಾಗಿ ಹೊರಹೊಮ್ಮುತ್ತಿದ್ದು, ಬರಹಗಾರರು, ಕಲಾವಿದರು, ತಂತ್ರಜ್ಞರು ಈ ಮಾಧ್ಯಮಕ್ಕೆ ಒಗ್ಗಿಕೊಳ್ಳುವ ಅವಶ್ಯಕತೆ ಇದೆ. ಭಾಷೆಗಳನ್ನು ಮೀರಿ ಈ ಮಾಧ್ಯಮ ಬೆಳೆದಿದೆ’ ಎಂದು ಹೇಳಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ