- ರಾಘವೇಂದ್ರ ಅಡಿಗ ಎಚ್ಚೆನ್.
ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿರುವ "ಅಂದೊಂದಿತ್ತು ಕಾಲ" ಚಿತ್ರದ ' ಮಹಾರಾಜ ಹಾಗೆಂದು.. ಮನಸಾರೆ ಹಾರೈಸಿದೆ ನೀನಮ್ಮ'... ಎಂಬ ತಾಯಿ ಮಗನ ಬಾಂಧವ್ಯದ ಮನಮುಟ್ಟುವ ಹಾಡು ಇಂದು ಅಧಿಕೃತವಾಗಿ ಬಿಡುಗಡೆಗೊಂಡಿದೆ. ಕೆಜಿಎಫ್ ಖ್ಯಾತಿಯ ಕಿನ್ನಾಲ್ ರಾಜ್ ಸಾಹಿತ್ಯ ಬರೆದಿರುವ ಈ ಹಾಡನ್ನು ಸುನಿಲ್ ಕಶ್ಯಪ್ ಹಾಡಿದ್ದಾರೆ. ತಾಯಿ-ಮಗನ ಪ್ಯಾತೋ ಸಾಂಗ್ ಇದಾಗಿದ್ದು , ಮದರ್ ಆ್ಯಂತಮ್ ಎಂದೇ ಹೇಳಬಹುದು. ಈ ಚಿತ್ರದ ಪ್ರತಿಯೊಂದು ಹಾಡು ವಿಭಿನ್ನವಾಗಿ ಮೂಡಿ ಬಂದಿದ್ದು , ಈಗಾಗಲೇ ಎರಡು ಹಾಡು ಭರ್ಜರಿ ಹಿಟ್ ಆಗಿದ್ದು , ಮೂರನೇ ಹಾಡು ಕೂಡ ಎಲ್ಲರ ಮನಸ್ಸನ್ನು ಗೆಲ್ಲಲು ಸಿದ್ಧವಾಗಿದೆ. ಇಡೀ ಚಿತ್ರತಂಡ ಪ್ರಚಾರದಲ್ಲಿ ಭಾಗಿಯಾಗಿದ್ದು , ಇಂದು ಹೊರ ಬಂದಿರುವ ಹಾಡು ಹಾಗೂ ಚಿತ್ರ ಬಿಡುಗಡೆಯ ಬಗ್ಗೆ ಮಾತನಾಡಲು ಪತ್ರಿಕಾಗೋಷ್ಠಿಯನ್ನು ಚಿತ್ರತಂಡ ಆಯೋಜನೆ ಮಾಡಿತ್ತು.
ನಟ ವಿನಯ್ ರಾಜಕುಮಾರ್ ಮೊದಲು ಮಾತನಾಡುತ್ತಾ ನನ್ನ ಎಲ್ಲಾ ಸಿನಿಮಾಗಳಿಗಿಂತ ಈ ಚಿತ್ರ ಬಹಳ ವಿಶೇಷ. ಈ ಚಿತ್ರದ ಒಂದೊಂದು ಹಾಡು ಬಹಳ ವಿಭಿನ್ನವಾಗಿದ್ದು , ಈ ಅಮ್ಮ ಮಗನ ಸೆಂಟಿಮೆಂಟ್ ಸಾಂಗ್ ಬಹಳ ಮನಸನ್ನ ಸೆಳೆಯುತ್ತದೆ. ಇದೊಂದು ನಿರ್ದೇಶಕನ ಲೈಫ್ ಜರ್ನಿ, ಕೀರ್ತಿ ಅವರ ಲೈಫ್ ನಲ್ಲಿ ನಡೆದ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಅದರಲ್ಲೂ ಅವರ ಸಿನಿಮಾ ಬದುಕಿನ ಸುತ್ತಮುತ್ತ ನಡೆದದ್ದನ್ನು ಕತೆಯಾಗಿಸಿಕೊಂಡು ಬಹಳ ನ್ಯಾಚುರಲ್ ಆಗಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ನನ್ನದು ಮೂರು ಶೇಡ್ ಗಳಲ್ಲಿ ಒಳಗೊಂಡಿರುವಂತಹ ಪಾತ್ರ ಬರುತ್ತದೆ. ಇದು ಮೂರು ವರ್ಷದ ಜರ್ನಿ ಶ್ರಮದ ಫಲ. ನನ್ನ ಅಮ್ಮನಾಗಿ ಅರುಣಾ ಬಾಲರಾಜ್ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ನನ್ನ ಮೂರನೇ ಚಿತ್ರ ಇದಾಗಿದೆ. ಇದೊಂದು ಫಿಲ್ ಗುಡ್ ಚಿತ್ರವಾಗಿದ್ದು , ಎಲ್ಲಾ ವರ್ಗದವರಿಗೂ ಇಷ್ಟವಾಗುವಂತ ಕಥೆ ಒಳಗೊಂಡಿದೆ, ನಿಮ್ಮೆಲ್ಲರ ಬೆಂಬಲ ನಮ್ಮ ಚಿತ್ರಕ್ಕೆ ಬೇಕು ಎಂದರು.
ನಟಿ ಅದಿತಿ ಪ್ರಭುದೇವ್ ಮಾತನಾಡುತ್ತಾ ಇಂದು ಬಿಡುಗಡೆಯಾಗಿರುವ ಅಮ್ಮ ಮಗನ ಈ ಹಾಡು ನನಗೆ ತುಂಬಾ ಇಷ್ಟ. ಬಹಳ ಅರ್ಥಗರ್ಭಿತವಾದ ಸಾಲುಗಳು ಈ ಹಾಡಿನಲ್ಲಿದೆ. ಪ್ರತಿ ತಾಯಿಯು ತನ್ನ ಮಗು ರಾಜನಂತೆ ಬದುಕಬೇಕೆಂದು ಆಸೆ ಪಡುವುದು ಸಹಜವೇ , ಅದರಂತೆ ಈ ಹಾಡು ಬಹಳ ಸೊಗಸಾಗಿ ಮೂಡಿ ಬಂದಿದೆ.
ನಮ್ಮ ಎರಡು ಹಾಡಿಗೆ ಕೊಟ್ಟಂತ ಪ್ರೋತ್ಸಾಹ , ಬೆಂಬಲ ಹಾಗೂ ಪ್ರೀತಿ ಈ ಹಾಡಿಗೂ ನೀಡಿ. ನೈಜ ಜೀವನಕ್ಕೆ ಹತ್ತಿರವಾದ ಪಾತ್ರಗಳು ಇದರಲ್ಲಿ ಇವೆ. ಪ್ರತಿಯೊಬ್ಬ ಪ್ರೇಕ್ಷಕರಿಗೂ ಈ ಚಿತ್ರ ಕನೆಕ್ಟ್ ಆಗುತ್ತೆ , ಇದೆ 29ರಂದು ಗೌರಿ ಗಣೇಶ ಹಬ್ಬದ ಸಂಭ್ರಮದ ಸಮಯದಲ್ಲಿ ನಮ್ಮ ಚಿತ್ರ ಬರುತ್ತಿದೆ. ಎಲ್ಲರೂ ನಮ್ಮ ಚಿತ್ತವನ್ನು ನೋಡಿ ಹರಸಿ ಎಂದರು.