ನಮ್ಮ ದೇಶ ಮತ್ತು ಚಿತ್ರರಂಗ ಎರಡೂ ಸಹಾ ಒಂದು ರೀತಿಯ ಪುರುಷ ಪ್ರಧಾನವಾಗಿದೆ ಎಂದರೂ ತಪ್ಪಾಗದು. ಸಮಾಜದಲ್ಲಿ ಮಹಿಳೆಯರನ್ನು ಅಬಲೆ ಎಂದು ಸದಾಕಾಲವೂ ಪುರುಷನ ಆಸರೆಯಲ್ಲೇ ಜೀವನ ನಡೆಸಬೇಕೆಂದು ಬಯಸಿದರೆ, ಇನ್ನು ಚಿತ್ರರಂಗದಲ್ಲಿಯೂ ಸಹಾ ಬಹುತೇಕ ಸಿನಿಮಾಗಳು ನಾಯಕನ ಸುತ್ತಲೇ ಗಿರಿಕಿ ಹೊಡೆಯುತ್ತಿದ್ದು, ನಾಮಕಾವಾಸ್ಥೆಗೆ ನಾಯಕನೊಂದಿಗೆ ಮರ ಸುತ್ತುತ್ತಾ ಯುಗಳ ಗೀತೆ ಹಾಡಲೆಂದೇ ಬಳಸಿಕೊಳ್ಳುತ್ತಾರೆ. ಅದೇ ರೀತಿ ನಾಯಕನಿಗೆ ಎಷ್ಟೇ ವಯಸ್ಸಾದರೂ ಆತ ನಾಯಕನ ಪಾತ್ರದಲ್ಲೇ ನಟಿಸುತ್ತಿದ್ದರೆ, ನಟಿಯರಿಗೆ ಸ್ವಲ್ಪ ವಯಸ್ಸಾಗಿಯೋ ಇಲ್ಲವೇ ಮದುವೆ ಆದ ತಕ್ಷಣ, ನಾಯಕಿ ಪಟ್ಟದಿಂದ ಅಕ್ಕ, ಅತ್ತಿಗೆ ಪಾತ್ರಕ್ಕೆ ಬದಲಾಯಿಸಿ, ಒಂದು ಸ್ವಲ್ಪ ವಯಸ್ಸಾಯಿತೆಂದರೆ ಯಾರ ಜೊತೆಯಲ್ಲಿ ನಾಯಕನಾಗಿ ನಟಿಸಿದ್ದರೋ ಅದೇ ನಾಯಕನ ತಾಯಿಯಾಗಿಯೇ ಅಭಿನಯಿಸಬೇಕಾಗುತ್ತದೆ. ಒಂದು ಕಾಲದಲ್ಲಿ ದಕ್ಷಿಣ ಭಾರತದ ಎಲ್ಲಾ ಭಾಷೆಯ ಪ್ರಸಿದ್ಧ ನಾಯಕರುಗಳ ಜೊತೆಯಲ್ಲಿ ನಾಯಕಿಯಾಗಿ ನಟಿಸಿ ಖ್ಯಾತಿ ಪಡೆದು ನಂತರ ಅದೇ ನಾಯಕರಿಗೇ ಅಮ್ಮನಾಗಿ ನಟಿಸಿದ ಕೀರ್ತಿಯನ್ನೂ ಹೊಂದಿರುವ ಸುಮಾರು ಆರು ದಶಕಗಳ ಕಾಲ ಚಿತ್ರರಂಗದಲ್ಲಿದ್ದು, ಅಂತಿಮವಾಗಿ ಕನ್ನಡದ ಅಮ್ಮ ಎಂದೇ ಪ್ರಖ್ಯಾತರಾಗಿದ್ದ ಪಂಚಭಾಷಾ ತಾರೆ ಶ್ರೀಮತಿ ಪಂಡರೀಬಾಯಿಯವರು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾನಾಯಕಿ ಆಗಿದ್ದಾರೆ.
1950, 60 ಮತ್ತು 1970ರ ದಶಕಗಳಲ್ಲಿ ಕನ್ನಡ ಚಿತ್ರರಂಗವಲ್ಲದೇ ದಕ್ಷಿಣ ಭಾರತದ ಚಿತ್ರರಂಗದ ಖ್ಯಾತ ನಟರುಗಳಾದ ರಾಜಕುಮಾರ್, ಎಂಜಿ ರಾಮಚಂದ್ರನ್, ಶಿವಾಜಿ ಗಣೇಶನ್ ರೊಂದಿಗೆ ನಟಿಸಿದ್ದ, ಕನ್ನಡ ಚಿತ್ರರಂಗದ ಮೊದಲ ಯಶಸ್ವಿ ನಾಯಕಿ ಎಂದು ಪರಿಗಣಿಸಲಾಗಿದ್ದ ಪಂಡರೀಬಾಯಿ ಅವರು ಉತ್ತರ ಕನ್ನಡದ ಕರಾವಳಿ ನಗರವಾದ ಭಟ್ಕಳದ ಸಂಪ್ರದಾಯಸ್ಥ ಕುಟುಂಬದ ಶ್ರೀ ರಂಗರಾವ್ ಮತ್ತು ಶ್ರೀಮತಿ ಕಾವೇರಿ ಬಾಯಿ ಅವರ ಹಿರಿಯ ಮಗಳಾಗಿ 18 ಸೆಪ್ಟೆಂಬರ್ 1928 ರಂದು ಜನಿಸುತ್ತಾರೆ. ಹುಟ್ಟಿದಾಗ ಆ ಪುಟ್ಟ ಮಗುವಿಗೆ ಗೀತ ಎಂಬ ಹೆಸರಿರುತ್ತದೆ. ಆಕೆಗೆ ಮೈನಾವತಿ ಎಂಬ ಸಹೋದರಿ (ಆಕೆಯೂ ಪ್ರಸಿದ್ಧ ನಟಿ) ಮತ್ತು ಸಹೋದರ ಇದ್ದರು.

ಬಾಲಕಿ ಗೀತ ಅವರ ಕುಟುಂಬ ಬಾಲಕಿ ಗೀತ ಅವರ ಕುಟುಂಬದವರು ಮೂಲತಃ ಮಹಾರಾಷ್ಟ್ರದ ಮೂಲದವರಾಗಿದ್ದು, ಮನೆಯ ಮಾತೃಭಾಷೆ ಮರಾಠಿಯಾಗಿರುತ್ತದೆ. ಅವರ ಇಡೀ ಕುಟುಂಬ ಪಂಡರಾಪುರದ ಪಾಂಡುರಂಗನ ಪರಮ ಭಕ್ತರಾಗಿದ್ದ ಕಾರಣ, ಪಂಡರಾಪುರದ ಪಾಂಡುರಂಗನ ಪರಮ ಭಕ್ತರಾಗಿದ್ದ ಕಾರಣ, ಆಕೆಗೆ ಚಿಕ್ಕ ವಯಸ್ಸಿನಲ್ಲೇ ಪಂಡರಿಬಾಯಿ ಎಂದೇ ಕರೆಯಲಾರಂಭಿಸಿ ಅದೇ ಹೆಸರಿನಲ್ಲೇ ಪ್ರಖ್ಯಾತರಾಗುತ್ತಾರೆ. ಪಂಡರೀಭಾಯಿಯವರ ತಂದೆ ಚಿತ್ರಕಲಾ (ಡ್ರಾಯಿಂಗ್) ಶಿಕ್ಷಕರಾಗಿದ್ದಲ್ಲದೇ ಅತ್ಯಂತ ಸುಶ್ರಾವ್ಯವಾಗಿ ಹಾಡುತ್ತಿದ್ದದ್ದಲ್ಲದೇ, ಸ್ಥಳೀಯವಾ

ಅದೊಮ್ಮೆ ಮೈಸೂರಿನಲ್ಲಿ ನಡೆಯುತ್ತಿದ್ದ ತಮ್ಮ ತಂದೆಯವರ ಹರಿಕಥಾ ಕಾರ್ಯಕ್ರಮದಲ್ಲಿ ಕಡೆಯ ಗಳಿಗೆಯಲ್ಲಿ ಸ್ವಲ್ಪ ಸಮಸ್ಯೆಯಾಗಿ ಆ ಪುಟ್ಟ ಹುಡುಗಿ ಪಂಡರೀಬಾಯಿಯೇ ಹರಿಕಥೆಯನ್ನು ಮಾಡುವಂತಾದಾಗ, ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕ ಸಂಗೀತ ಕಲಾನಿಧಿ ಪಿಟೀಲು ಚೌಡಯ್ಯನವರು ಆಕೆಯ ಸಾಮರ್ಥ್ಯವನ್ನು ಕಂಡು 1943ರಲ್ಲಿ ಕೆ.ಹಿರಣ್ಯಯ್ಯ ಹಾಗೂ ಎಂಎನ್ ಗೋಪಾಲ್ ಅವರ ಜಂಟಿ ನಿರ್ದೇಶನದಲ್ಲಿ ತಾವು ನಿರ್ಮಿಸುತ್ತಿದ್ದ ವಾಣಿ ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡುವ ಮೂಲಕ, ಅನಿರೀಕ್ಷಿತವಾಗಿ ಪಂಡರೀಬಾಯಿಯವರು ತಮ್ಮ 13ನೇ ವಯಸ್ಸಿನಲ್ಲಿ ನಟಿಯಾಗಿ ಚಲನಚಿತ್ರರಂಗವನ್ನು ಪ್ರವೇಶಿಸುತ್ತಾರೆ. ಮುಂದೆ ಹೊನ್ನಪ್ಪ ಭಾಗವತರ್ ಅವರ ಗುಣಸಾಗರಿ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕಿಯಾಗಿ ಭಡ್ತಿ ಹೊಂದುತ್ತಾರೆ. ಮೊದಲ ಎರಡೂ ಚಿತ್ರಗಳೂ ಹೇಳುವಂತಹ ಹೆಸರನ್ನು ತಂದು ಕೊಡದೇ ಹೋದರೂ, 1944ರಲ್ಲಿ ಸುಂದರ್ ರಾವ್ ಅವರು ನಿರ್ದೇಶಿಸಿದ್ದ ತಮಿಳು ಚಿತ್ರ ಹರಿದಾಸದಲ್ಲಿ ಎಂಕೆ ತ್ಯಾಗರಾಜಾ ಭಾಗವತರ್, ಟಿಆರ್ ರಾಜಕುಮಾರಿ ಮತ್ತು ಎನ್ ಸಿ ವಸಂತಕೋಕಿಲಂ ಜೊತೆ ಪಂಡರಿಬಾಯಿಗೆ ನಟಿಸಿದ್ದ ಚಿತ್ರ ತಮಿಳುನಾಡಿನ ಒಂದೇ ಸಿಮಿಮಾ ಮಂದಿರದಲ್ಲಿ ಬರೋಬ್ಬರಿ 110 ವಾರಗಳ ಕಾಲ ಪ್ರದರ್ಶನವಾಗಿ ಸೂಪರ್ ಡ್ಯೂಪರ್ ಹಿಟ್ ಆಗಿದ್ದಲ್ಲದೇ, ಗಲ್ಲಾಪೆಟ್ಟಿಗೆಯಲ್ಲಿಯೂ ಭರ್ಜರಿ ಗೆಲುವು ಕಂಡ ನಂತರ ಚಿತ್ರರಂಗದಲ್ಲಿ ಭದ್ರವಾಗಿ ನೆಲೆ ಊರತೊಡಗಿ ವರ್ಷಕ್ಕೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆಯುತ್ತಾ ಬಂದರು. 1954ರಲ್ಲಿ ಎಚ್. ಎಲ್. ಎನ್ ಸಿಂಹ ಅವರ ನಿರ್ದೇಶನದ, ಕನ್ನಡದ ವರನಟ ಮುತ್ತುರಾಜ್, ಎಲ್ಲರ ಪ್ರೀತಿಯ ರಾಜಕುಮಾರ್ ಅವರ ಚೊಚ್ಚಲ ಚಿತ್ರ ಬೇಡರ ಕಣ್ಣಪ್ಪದಲ್ಲಿ ನಾಯಕಿಯಾಗಿ ಅಭಿನಯಿಸಿ ಚಿತ್ರ ಯಶಸ್ವಿಯಾದ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.





