`ಕ್ವೀನ್' ಬಾಲಿವುಡ್‌ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದಂಥ ಮಹಿಳಾ ಪ್ರಧಾನ ಚಿತ್ರ. ಕಂಗನಾ ರಾಣಿಯಾಗಿ ಇಂದಿಗೂ ಮೆರೆಯುತ್ತಿದ್ದಾಳೆ. ಈ ಚಿತ್ರ ಕನ್ನಡಕ್ಕೂ ರೀಮೇಕಾಗಲಿದ್ದು, ಚಿತ್ರೀಕರಣ ವಿದೇಶಗಳಲ್ಲಿ ಹೆಚ್ಚಾಗಿ ನಡೆಯುತ್ತಿರುವುದು ವಿಶೇಷ. ಏಕಕಾಲದಲ್ಲಿ ಕನ್ನಡ, ತೆಲುಗು, ತಮಿಳು ಮಲೆಯಾಳಂ ಭಾಷೆಗಳಲ್ಲಿ ತಯಾರಾಗುತ್ತಿದೆ.
ಕನ್ನಡದಲ್ಲಿ `ಬಟರ್‌ಫ್ಲೈ' ಎಂದು ಟೈಟಲ್ ಇಡಲಾಗಿದೆ. ಚಿಟ್ಟೆಯಂತೆ ಸ್ವಚ್ಛಂದವಾಗಿ ಸ್ವತಂತ್ರ ಕಂಡುಕೊಳ್ಳುವ ಹುಡುಗಿಯ ಪಾತ್ರದಲ್ಲಿ ಪಾರೂಲ್ ಯಾದವ್ ನಟಿಸುತ್ತಿದ್ದಾಳೆ. ರಮೇಶ್ ಅರವಿಂದ್ ಡೈರೆಕ್ಟ್ ಮಾಡುತ್ತಿದ್ದಾರೆ.
ವಿಶೇಷವೆಂದರೆ ಪಾರೂಲ್ ನಟಿ ಮಾತ್ರವಲ್ಲದೆ, ಈ ಚಿತ್ರಕ್ಕೆ ನಿರ್ಮಾಪಕಿಯಾಗಿಯೂ ಪಾಲುದಾರಿಕೆಯಲ್ಲಿದ್ದಾಳೆ. ಪಾರೂಲ್ ಜೊತೆ ನಡೆಸಿದ ಸಂದರ್ಶನದಲ್ಲಿ ಫ್ರಾಂಕಾಗಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿರುವುದು ವಿಶೇಷ.
ವೈ... ಕ್ವೀನ್....?
`ಕ್ವೀನ್' ನನ್ನ ಮೆಚ್ಚಿನ ಚಿತ್ರ. ಆ ಪಾತ್ರ ನನ್ನನ್ನು ತುಂಬಾ ಕಾಡುತ್ತಿತ್ತು. ಅಭಿನಯಕ್ಕೆ ಹೇಳಿ ಮಾಡಿಸಿದಂತಿತ್ತು. ಒಬ್ಬ ನಟಿಗೆ ಇಷ್ಟವಾಗುವಂಥ ಎಲ್ಲ ಗುಣಗಳೂ ಆ ಪಾತ್ರದಲ್ಲಿತ್ತು. ಎಲ್ಲಾ ಭಾಷೆಯವರಿಗೂ ತಲುಪಬೇಕು. ಎಲ್ಲ ಹುಡುಗಿಯರಲ್ಲೂ ಕನಸುಗಳಿರುತ್ತವೆ, ಆಸೆಗಳಿರುತ್ತವೆ. ಹಾಗಾಗಿ ನಾನು ಈ ಚಿತ್ರವನ್ನು ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲೂ ನಿರ್ಮಿಸಬೇಕೆಂದು ಆಸೆಪಟ್ಟೆ, ಅದಕ್ಕೆ ಸರಿಯಾಗಿ ನಮ್ಮದೇ ಆದ ಒಂದು ತಂಡ ಸಿದ್ಧವಾಯಿತು. ಕನ್ನಡದಲ್ಲಿ `ಕ್ವೀನ್' ಪಾತ್ರದಲ್ಲಿ ಪಾರ್ವತಿಯಾಗಿ ನಾನು ನಟಿಸುತ್ತಿದ್ದೇನೆ.
ಕನ್ನಡ ಕಲಿಯುವ ಆಸೆ ತುಂಬಾ ಇದೆ ಅಂತ ಕೇಳಲ್ಪಟ್ಟಿದ್ದೇನೆ. ಎಲ್ಲಿಯವರೆಗೂ ಬಂದಿದೆ?
ಬಟರ್ ಫ್ಲೈನಲ್ಲಿ ನಾನು ಗೋಕರ್ಣದ ಒಬ್ಬ ಸರಳ ಹುಡುಗಿಯಾಗಿ ಕಾಣಿಸಿಕೊಳ್ತೀನಿ. ಕನ್ನಡ ಭಾಷೆ ಸ್ಪಷ್ಟನೆ ಇದ್ದರೆ, ಅಭಿನಯಿಸುವುದಕ್ಕೂ ಚೆನ್ನಾಗಿರುತ್ತದೆ ಅಂತ ಟೀಚರ್‌ವೊಬ್ಬರನ್ನು ನೇಮಕ ಮಾಡಿಕೊಂಡು ಕನ್ನಡ ಕಲಿಯುತ್ತಿದ್ದೇನೆ. ಕನ್ನಡಿಗರ ಮೇಲಿರುವ ಅಭಿಮಾನದಿಂದ ನಾನಿದೆಲ್ಲವನ್ನು ಮಾಡ್ತಿರೋದು. ಆ್ಯಕ್ಟ್ ಮಾಡುವಾಗ ಡೈಲಾಗ್‌ನ್ನು ಸ್ಪಷ್ಟವಾಗಿ ಹೇಳಿಕೊಂಡೇ ನಟಿಸುತ್ತಿದ್ದೇನೆ. ನನಗಂತೂ ಕನ್ನಡದಲ್ಲಿ ಮಾತನಾಡೋದೂ ಅಂದರೆ ಖುಷಿ!
ಕನ್ನಡ ಚಿತ್ರರಂಗದಲ್ಲಿ ನಿಮ್ಮದೇ ಆದ ಒಂದು ಸ್ಥಾನ ಭದ್ರಪಡಿಸಿಕೊಂಡಿದ್ದೀರಿ. ನಂಬರ್‌ಗಳಲ್ಲಿ ನಂಬಿಕೆ ಇದೆಯಾ?
ಖಂಡಿತಾ ಇದೆ! ನಂಬರ್ ಒನ್ ತಾರೆ ಅಂತ ಈಗಾಗಲೇ ಮಾಲಾಶ್ರೀ, ರಮ್ಯಾ ಕರೆಸಿಕೊಂಡು ಮೆರೆದಿದ್ದಾರೆ. ಆ ಸ್ಥಾನ ಪಡೆಯುವುದಕ್ಕೆ ಯಾರಿಗೆ ತಾನೇ ಆಸೆ ಇರೋದಿಲ್ಲ? ಅವರಿಬ್ಬರ ನಂತರ ರಾಧಿಕಾ ಪಂಡಿತ್ ನಂಬರ್ ಒನ್ ಅಂತ ಕರೆಸಿಕೊಂಡಂಥ ತಾರೆ. ನನ್ನ ಬಗ್ಗೆ ಹೇಳಬೇಕೆಂದರೆ ನಾನು ನಟಿಸಿರುವ ಚಿತ್ರಗಳ ಸಂಖ್ಯೆ ಕಡಿಮೆ. ಕಳೆದೆರಡು ವರ್ಷಗಳಿಂದ ಹೆಚ್ಚಾಗಿ ತೆರೆ ಮೇಲೂ ಕಾಣಿಸಿಕೊಂಡಿಲ್ಲ. ಸೋ, ಈ ನಂಬರ್ ಸ್ಪರ್ಧೆಯಲ್ಲಿ ನಾನಿರಲು ಸಾಧ್ಯವಿಲ್ಲ.
`ಜೆಸ್ಸಿ' ಚಿತ್ರದ ನಂತರ ಪಾತ್ರಗಳ ಆಯ್ಕೆ ಬಗ್ಗೆ ತುಂಬಾ ಚ್ಯೂಸಿ ಆದ್ರಿ ಅನ್ಸುತ್ತೆ?
ಮೊದಲಿನಿಂದಲೂ ನಾನು ನನ್ನ ತಾರಾ ವೃತ್ತಿಯಲ್ಲಿ ತುಂಬಾ ಎಚ್ಚರಿಕೆ ವಹಿಸಿಕೊಂಡೇ ಚಿತ್ರಗಳನ್ನು ಆಯ್ಕೆ ಮಾಡಿದ್ದೇನೆ. ನಟಿಸುವುದು ನನ್ನ ಕೆಲಸವಾಗಲಿ ಅಥವಾ ಪ್ಯಾಷನ್ ಅಂತ ಯಾವತ್ತೂ ತಿಳಿದಿಲ್ಲ. ಪ್ರತಿಯೊಂದು ಪಾತ್ರ ಮಾಡುವಾಗ ನನ್ನನ್ನು ನಾನು ಸಂಪೂರ್ಣವಾಗಿ ಆತ್ಮ ಸಮೇತ ಇನ್ವಾಲ್ಸ್ ಆಗ್ತೀನಿ.
`ಬಟರ್ ಫ್ಲೈ' ಚಿತ್ರದ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದೀರಾ....