ಸ್ಯಾಂಡಲ್‌ವುಡ್‌ನಲ್ಲಿ ಎಲ್ಲ ದಾಖಲೆಗಳನ್ನು ಮೀರಿಸಿ ಯಶಸ್ವಿಯಾದ ಅಪ್ಪಟ ಕನ್ನಡಿಗರ ಚಿತ್ರ `ರಂಗಿತರಂಗ’. ಈ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಪಾತ್ರ ಇಂದು ಸುವರ್ಣ ಎಲ್ಲರ ಗಮನ ಸೆಳೆದಿತ್ತು. ಹಾರರ್ ಸಿನಿಮಾದಿಂದಲೇ ಶುರು ಮಾಡಿದ್ದ ರಾಧಿಕಾ ಚೇತನ್ ಈ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಬಹಳ ಬೇಗನೇ ಇಂಡಸ್ಟ್ರೀಗೆ ಪರಿಚಿತಳಾಗಿಬಿಟ್ಟಳು.
ಅದರ ಹಿಂದೆಯೇ ಬಂದಂಥ `ಯೂಟರ್ನ್’ ಥ್ರಿಲ್ಲರ್ ಹಾರರ್ ಸಿನಿಮಾದಲ್ಲೂ ರಾಧಿಕಾ ಪುಟ್ಟ ಪಾತ್ರವಾಗಿದ್ದರೂ ಮಿಂಚಿದ್ದಳು. ಅಭಿನಯ ರಾಧಿಕಾಳಿಗೇನು ಹೊಸದಿರಲಿಲ್ಲ. ಥಿಯೇಟರ್ ಅದರಲ್ಲೂ ಆಂಗ್ಲ ನಾಟಕಗಳಲ್ಲಿ ತನ್ನನ್ನು ತಾನು ಹೆಚ್ಚು ತೊಡಗಿಸಿಕೊಂಡಿದ್ದಳು. ನೃತ್ಯ ಪಟುವಾಗಿದ್ದರಿಂದ ಅಭಿನಯಕ್ಕೆ ಪ್ಲಸ್ ಪಾಯಿಂಟ್ ಆಗಿತ್ತು.
ರಾಧಿಕಾ ಮೈಸೂರಿನಲ್ಲಿ ಹುಟ್ಟಿ ಬೆಳೆದು, ವಿದ್ಯಾ ವಿಕಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿಯರಿಂಗ್ ಅಂಡ್ ಟೆಕ್ನಾಲಜಿ ಮೈಸೂರು, ಎಂಜಿನಿಯರಿಂಗ್ ಗ್ರ್ಯಾಜುಯೇಟ್ ಆದಂಥ ಹುಡುಗಿ. ಕಥಕ್ ನೃತ್ಯದಲ್ಲಿ ಪರಿಣಿತಿ ಹೊಂದಿದ್ದಳು. ನಾಟಕಗಳಲ್ಲಿ ಆಸಕ್ತಿ ಇದ್ದುದರಿಂದ ವೀ ಮೂವ್ ಥಿಯೇಟರ್ ತಂಡದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಳು. ಹಾಗೆಯೇ ಕಿರು ಚಿತ್ರಗಳಲ್ಲೂ ನಟಿಸಿದ ಅನುಭವ.
ಹೌದು, ನನಗೆ ಚಿಕ್ಕಂದಿನಲ್ಲೇ ಅಭಿನಯದ ಹುಚ್ಚು. ಕೋಣೆಯಲ್ಲಿ ಒಬ್ಬಳೇ ಕನ್ನಡಿ ಮುಂದೆ ನಿಂತು ಮಾಧುರಿ ದೀಕ್ಷಿತ್‌ಳಂತೆ ನಟಿಸುತ್ತಿದ್ದೆ. ಡ್ಯಾನ್ಸ್ ಮಾಡುತ್ತಿದ್ದೆ. ಆದರೆ ಮನೆಯಲ್ಲಿ ಯಾರಿಗೂ ನನ್ನ ಈ ಆಸಕ್ತಿ ಬಗ್ಗೆ ಹೇಳಿಕೊಂಡಿರಲಿಲ್ಲ. ಎಂಜಿನಿಯರಿಂಗ್‌ನಂತರ ಒಳ್ಳೆ ಜಾಬ್ ಕೂಡಾ ಸಿಕ್ಕಿತ್ತು. ನನಗೆ ಒಂದೇ ಕಡೆ ಕೂತು ಕೆಲಸ ಮಾಡುವುದರಲ್ಲಿ ಅಂಥಾದ್ದೇನೂ ಆಸಕ್ತಿ ಇರಲಿಲ್ಲ. ಕ್ರಿಯೇಟಿವ್ ಆಗಿ ಏನಾದರೂ ಮಾಡಬೇಕು ಅಂತ ರಂಗಭೂಮಿ ಮತ್ತು ನೃತ್ಯಾಭ್ಯಾಸ ಮಾಡತೊಡಗಿದೆ. `ರಂಗಿತರಂಗ’ ಚಿತ್ರಕ್ಕೆ ಆಯ್ಕೆ ಆದಾಗ ತುಂಬಾನೆ ಖುಷಿ ಆಗಿತ್ತು. ನನ್ನ ಪಾತ್ರ ಕುತೂಹಲ ಕೆರಳಿಸುವಂತಿತ್ತು. ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಮಗೆಲ್ಲರಿಗೂ ಈ ಚಿತ್ರ ಒಂದು ತಿಂಗಳು ಅಥವಾ ಒಂದಷ್ಟು ವಾರಗಳು ಓಡಿದರೆ ಸಾಕು, ಒಟ್ಟಿನಲ್ಲಿ ಜನ ನೋಡಬೇಕು ಎಂದಷ್ಟೇ ಅಂದುಕೊಂಡಿದ್ದೆವು. ನನ್ನ ಮೊದಲ ಚಿತ್ರಾದ್ದರಿಂದ ನಾನು ನನ್ನ ಪಾತ್ರದಲ್ಲಿ ಹೆಚ್ಚು ಇನ್‌ವಾಲ್ವ್ ಆಗಿರುತ್ತಿದ್ದೆ. `ರಂಗಿತರಂಗ’ ಅತ್ಯಂತ ಯಶಸ್ವೀ ಚಿತ್ರವಾದಾಗ ಎಲ್ಲರಿಗೂ ತಮ್ಮ ಶ್ರಮ ಸಾರ್ಥಕ ಅನಿಸಿತ್ತು. ನಾನು ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಜೊತೆಯಲ್ಲೇ ರಂಗಭೂಮಿಯಲ್ಲಿ ನಿರತಳಾಗಿ ಆ್ಯಕ್ಟ್ ಮಾಡುತ್ತಿದ್ದೆ. ನನ್ನ ಗ್ರೂಪ್‌ಒಂದು ಶಾರ್ಟ್ ಫಿಲಂ ಮಾಡಿತ್ತು. ನಾನು ಕೂಡಾ ನಟಿಸಿದ್ದೆ. ಅನೂಪ್ ಭಂಡಾರಿ ಆ ಫಿಲಂನ್ನು ನೋಡಿಯೇ ನನಗೆ ರಂಗಿತರಂಗದಲ್ಲಿ ಅವಕಾಶ ಕೊಟ್ಟಿದ್ದು.
ರಂಗಿತರಂಗ ಚಿತ್ರ ನೋಡಿದ್ದ ಪವನ್ ಕುಮಾರ್`ಯೂಟರ್ನ್’ ಚಿತ್ರಕ್ಕೆ ಆಫರ್ ಮಾಡಿದರು. ನನಗೆ ಮೊದಲಿನಿಂದಲೂ ಫನ್‌ಸಿನಿಮಾದಲ್ಲಿ ನಟಿಸೋ ಆಸೆ ಇತ್ತು. ನನಗೆ ಸಿಕ್ಕ ಎರಡೂ ಚಿತ್ರಗಳಲ್ಲಿ ನನಗೆ ಪವರ್‌ಫುಲ್ ಪಾತ್ರಗಳೇ ಸಿಕ್ಕಿದವು.
ತಾರೆಯಾದ ಮೇಲೆ….ಬರೀ ಒಬ್ಬ ತಾರೆ ಅಂತ ಅನಿಸಿಕೊಳ್ಳುವುದರ ಸಲುವಾಗಿ ನಾನು ಸಿನಿಮಾ ರಂಗಕ್ಕೆ ಬರಲಿಲ್ಲ. ನಾನು ಮಾಡುವ ಪಾತ್ರಗಳು ಮೀನಿಂಗ್‌ಫುಲ್ ಆಗಿರಬೇಕು, ಪ್ರೇಕ್ಷಕರ ಮನ ತಟ್ಟುವಂತಿರಬೇಕು. ಏಕೆಂದರೆ ಪ್ರೇಕ್ಷಕರು ತುಂಬಾನೆ ಬುದ್ಧಿವಂತರು. ಅವರನ್ನು ಮೆಚ್ಚಿಸೋದು ಅಷ್ಟು ಸುಲಭವಲ್ಲ. ರಂಗಿತರಂಗ, ಯೂಟರ್ನ್ ನಂತರ ಅದೇ ತರಹದ ಪಾತ್ರಗಳು ಬರಲು ಶುರುವಾದವು. ನನಗೆ ವಿಭಿನ್ನತೆ ಇರುವಂಥ ಪಾತ್ರ ಮಾಡುವಾಸೆ. ಈ ಎರಡೂ ಚಿತ್ರಗಳಲ್ಲಿ ಗರ್ಭಿಣಿ ಪಾತ್ರವಿದ್ದುದರಿಂದ ಅನೇಕ ನಿರ್ದೇಶಕರು ಅಂಥದ್ದೇ ಪಾತ್ರವನ್ನು ನನ್ನ ಬಳಿ ತರುತ್ತಿದ್ದರು. ಒಂದೇ ರೀತಿಯ ಪಾತ್ರಕ್ಕೆ ಬ್ರಾಂಡ್ ಆಗಲು ನನಗಿಷ್ಟವಿರಲಿಲ್ಲ. `ಕಾಫಿತೋಟ’ ಚಿತ್ರದಲ್ಲಿ ವಿಭಿನ್ನ ರೀತಿಯ ಪಾತ್ರವಿತ್ತು. ನಾನು ತುಂಬಾನೆ ಇಷ್ಟಪಟ್ಟಿದ್ದೆ.
ಹೊಸ ಚಿತ್ರಗಳು ಪಾತ್ರಗಳು…..
ಹರಿ ಆನಂದ್ ನಿರ್ದೇಶನ ಮಾಡುತ್ತಿರುವ `ಚೇಸ್’ ಚಿತ್ರದಲ್ಲಿ ಕೂಡಾ ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಅಸತೋಮ ಸದ್ಗಮಯ, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ… ಈ ಚಿತ್ರಗಳು ತುಂಬಾನೆ ಇಂಟ್ರೆಸ್ಟಿಂಗ್ ಆಗಿ ಮೂಡಿಬರುತ್ತಿವೆ.
ಕಾಮಿಡಿ ಪಾತ್ರ ಮಾಡುವಾಸೆ…..
ನನ್ನನ್ನು ನೋಡಿದ ಕೂಡಲೇ ಗಂಭೀರವಾದ ಪಾತ್ರ ನೀಡಬೇಕು ಅನ್ನೋದು ಸಹಜ. ಆದರೆ ಬಹಳ ಜನರಿಗೆ ಗೊತ್ತಿಲ್ಲ, ನನಗೆ ಕಾಮಿಡಿ ಪಾತ್ರ ಮಾಡುವಾಸೆ ಇದೆ. ಕಾಮಿಡಿ ಮಾಡೋದು ಬಹಳ ಕಷ್ಟ. ಜನರನ್ನು ನಗಿಸುವ ಕೆಲಸ ಸುಲಭವಲ್ಲ. ನನ್ನ ಪ್ರತಿಭೆ ಬಯಲಾಗೋದು ಕಾಮಿಡಿ ಪಾತ್ರ ಮಾಡಿದಾಗಲೇ…. ಅಂಥವೊಂದು ಪಾತ್ರ ಮಾಡುವಾಸೆ ತುಂಬಾ ಇದೆ. ನವರಸಗಳನ್ನು ಪ್ರದರ್ಶಿಸಬೇಕಾಗಿರೋದು ಕಲಾವಿದರ ಧರ್ಮ. ಹಾಸ್ಯರಸ ನನಗೆ ತುಂಬಾ ಇಷ್ಟ. ನನಗೇನಾದ್ರೂ ಅಂಥ ಪಾತ್ರ ಸಿಕ್ಕರೆ ಖಂಡಿತ ಸ್ಕೋರ್ ಮಾಡ್ತೀನಿ ಗೊತ್ತಾ….?
ಹವ್ಯಾಸಗಳು…
ದಿನಕ್ಕೆ ಐದಾರು ಬಾರಿ ಚಹಾ ಕುಡಿಯುವ ಅಭ್ಯಾಸವಿದೆ. ಒಳ್ಳೆ ನಾಟಕ, ಸಿನಿಮಾ ಇದ್ದರೆ ಸಿಕ್ಕಾಪಟ್ಟೆ ಆಸಕ್ತಿ. ಯೋಗಾ ಟೀಚರ್‌ಕೂಡಾ ಆಗಿದ್ದೆ. ಸಿನಿಮಾ ನಟಿಯಾಗುವುದಕ್ಕೆ ಮೊದಲು ನಾನು ಮನೆ ಮನೆಗೆ ಹೋಗಿ ಯೋಗ ಹೇಳಿಕೊಡುತ್ತಿದ್ದೆ. ಈಗ ಅದೆಲ್ಲ ಸಾಧ್ಯವಾಗುತ್ತಿಲ್ಲ. ಸಂಗೀತ ಅಂದ್ರೆ ನನಗೆ ಬಹಳ ಪ್ರಿಯ.
ಮೆಚ್ಚಿನ ತಾರೆಯರು…
ಲಕ್ಷ್ಮಿ ಮೇಡಂ ನನ್ನ ಮೆಚ್ಚಿನ ಕಲಾವಿದರು. ಅವರ ಸಿನಿಮಾಗಳನ್ನು ತುಂಬಾ ಇಷ್ಟಪಡ್ತೀನಿ. ಮಾಧುರಿ ದೀಕ್ಷಿತ್ ನನ್ನ ಫೇವರಿಟ್ ತಾರೆ. ಅನಂತ್ ನಾಗ್ ನಾನು ತುಂಬಾನೆ ಇಷ್ಟಪಡುವ ನಟರು. ಅವರ ಜೊತೆ `ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಅವರ ಜೊತೆ ಮಾತನಾಡುತ್ತಾ ಕುಳಿತರೆ ಸಾಕು ಸಾಕಷ್ಟು ಕಲಿಯಬಹುದು. ಎಲ್ಲ ಹೀರೋಗಳ ಜೊತೆ ನಟಿಸುವಾಸೆ. ಶಿವಣ್ಣ, ಸುದೀಪ್, ದರ್ಶನ್, ಯಶ್ ಹಾಗೆಯೇ ಈಗ ಬಂದಿರುವ ಹೊಸ ನಟರ ಜೊತೆಯಲ್ಲೂ ನಟಿಸುವ ಆಸೆ ಇದೆ.
ಹೀಗೆ ಹೇಳುವ ರಾಧಿಕಾ ಚೇತನ್, ಒಳ್ಳೆ ಅವಕಾಶ ಸಿಕ್ಕರೆ ಪರಭಾಷೆಯಲ್ಲೂ ನಟಿಸುವ ಆಸೆ ವ್ಯಕ್ತಪಡಿಸುತ್ತಾಳೆ. ಈ ಕನ್ನಡದ ಹುಡುಗಿ ಇನ್ನಷ್ಟು ಹೆಸರು ಮಾಡಲಿ ಎಂದು ಹಾರೈಸೋಣ.
– ಜಾಗೀರ್‌ದಾರ್