ಪೂಜಾ ಬ್ಯಾನರ್ಜಿ ಬಾಲಿವುಡ್ ನಲ್ಲಿ ಮಾತ್ರವಲ್ಲದೆ, ಟಿವಿಯ ಶೈನಿಂಗ್ ಸ್ಟಾರ್ ಕೂಡ. ರಾಷ್ಟ್ರೀಯ ಮಟ್ಟದ ಈಜು ಪಟು ಎನಿಸಿರುವ ಈಕೆಯದು ಬಹುಮುಖ ಪ್ರತಿಭೆ. ಎಂ ಟಿವಿಯ `ರೋಡೀಸ್ ಸೀಸನ್' (ಬಿಗ್ ಬಾಸ್ ತರಹ ಗ್ಲಾಮರಸ್) ನಲ್ಲಿ ಈಕೆ ಫೈನಲಿಸ್ಟ್ ಆಗಿದ್ದಳು. `ಸ್ವಿಮ್ ಟೀಮ್, ನಾಗುರ್ಜುನ ಏಕ್ ಯೋದ್ಧಾ, ಚಂದ್ರನಂದಿನಿ, ಚಂದ್ರಕಾಂತಾ, ದಿಲ್ ಹೀ ತೋ ಹೈ' ಮುಂತಾದ ಧಾರಾವಾಹಿಗಳಲ್ಲಿ ಮಿಂಚಿದ್ದಾಳೆ.
`ಕಸೌಟಿ ಝಿಂದಗಿ ಕೀ' ಧಾರಾವಾಹಿಯಲ್ಲಿ ವಿಶಿಷ್ಟ ಗ್ಲಾಮರಸ್ ಪಾತ್ರ ಇವಳದು.ಆಡಲ್ಟ್ ಬಾಲಾಜಿ ವೆಬ್ ಸೀರೀಸ್‌ನ `ಕಹನೆ ಕೋ ಹಂ ಸಫರ್ ಹೈ ಸೀಸನ್-2'ನಲ್ಲಿ ನಟಿಸುತ್ತಿದ್ದಾಳೆ. ಇತ್ತೀಚೆಗೆ ಶೂಟಿಂಗ್ ಮಧ್ಯೆ ಬಿಡುವು ಮಾಡಿಕೊಂಡು ಅವಳು ಗೃಹಶೋಭಾ ಜೊತೆ ಹರಟಿದ್ದು ಹೀಗೆ.
ಬನ್ನಿ, ಅವಳು ತನ್ನ ಫಿಟ್ ನೆಸ್ ಕುರಿತು ಏನು ಹೇಳಿದ್ದಾಳೆ ಮತ್ತು ಅಭಿಮಾನಿಗಳಿಗೆ ಏನು ತಿಳಿಸಬಯಸುತ್ತಾಳೆ ಎಂದು ವಿವರವಾಗಿ ನೋಡೋಣ :
ನಿಮ್ಮನ್ನು ಮೊದಲು ಗಮನಿಸಿ
ಹೆಂಗಸರಾದ ನಮಗೆ ಮನೆ, ಪರಿವಾರದ ಮಧ್ಯೆ ನಮ್ಮನ್ನು ನಾವು ಗಮನಿಸಿಕೊಳ್ಳಲು ಸಮಯವೇ ಇರುವುದಿಲ್ಲ. ಹೀಗಾಗಿ ನಮ್ಮನ್ನು ನಾವು ಬಹಳ ನಿರ್ಲಕ್ಷಿಸುತ್ತೇವೆ, ಇದು ತಪ್ಪು. ಹೀಗೆ ಮಾಡುವ ಬದಲು 24 ಗಂಟೆಗಳಲ್ಲಿ ನಮಗಾಗಿ 1 ಗಂಟೆ ಕಾಲ ಮೀಸಲಿಟ್ಟು ಫಿಟ್ನೆಸ್ ಕಡೆ ಗಮನಹರಿಸಲೇಬೇಕು. ಇದು ನಮ್ಮ ದೈಹಿಕ ಹಾಗೂ ಮಾನಸಿಕ ಶಾಂತಿಗೆ ಅತ್ಯವಶ್ಯಕ. ನಾನು ನನ್ನನ್ನು ಪ್ರೀತಿಸುವುದರಿಂದ ಕನಿಷ್ಠ 1 ಗಂಟೆ ನನಗಾಗಿ ಮೀಸಲಿಡುತ್ತೇನೆ, ದಿನವಿಡೀ ಎಷ್ಟೇ ಬಿಝಿ ಇದ್ದರೂ ಇದನ್ನು ತಪ್ಪಿಸುವುದಿಲ್ಲ.
ನಮಗಾಗಿ ನಾವು ಫಿಟ್ನೆಸ್ ಕಾಯ್ದುಕೊಂಡು ಹೋಗಲೇಬೇಕು. ಆಗ ಮಾತ್ರ ಕುಟುಂಬದ ಇನ್ನಿತರ ಸದಸ್ಯರ ಆರೋಗ್ಯದ ಬಗ್ಗೆ ಚಿಂತಿಸಲು ಸಾಧ್ಯ. ಅವರಿಗೆ ಸಹಾಯ ಮಾಡಲು ಸಾಧ್ಯ. ನಾವು ಸದಾ ಫಿಟ್ ಆಗಿರಬೇಕೆಂಬ ಜಾಗೃತಿ ನಮ್ಮಲ್ಲಿರಬೇಕು.
ನಮಗಾಗಿ ನಾವು 1 ಗಂಟೆ ಇರಿಸಿಕೊಂಡ ಮೇಲೆ ಅದು ಫಲಪ್ರದ ಆಗುವಂತೆ ವರ್ಕ್ ಔಟ್ ಮಾಡಬೇಕು, ಫಿಟ್ನೆಸ್ ಕಾಯ್ದುಕೊಳ್ಳಬೇಕು. ನಮಗೆ ವಿಶೇಷ ಹಾಬಿ ಇದ್ದರೆ, ಅದನ್ನು ಈ ಟೈಮಿನಲ್ಲಿ ಪೂರೈಸಿಕೊಳ್ಳಬಹುದು. ಸ್ವಿಮ್ಮಿಂಗ್, ಡ್ಯಾನ್ಸಿಂಗ್, ಪೇಂಟಿಂಗ್, ಸಿಂಗಿಂಗ್...... ಯಾರಿಗೆ ಯಾವುದು ಇಷ್ಟವೋ ಅದೇ! ಇದೇನು ಬೇಡವೆನಿಸಿದರೆ ಧಾರಾಳ ವ್ಯಾಯಾಮ, ಜಾಗಿಂಗ್ ಮಾಡಿ. ಒಟ್ಟಾರೆ ದೇಹದಿಂದ ಚೆನ್ನಾಗಿ ಬೆವರು ಹರಿಸಿ, ರಕ್ತ ಸಂಚಾರ ತೀವ್ರಗೊಳ್ಳುವಂತೆ ಮಾಡಿ ದೇಹವನ್ನು ಚುರುಕಾಗಿಸಿ. ಪ್ರತಿಯೊಬ್ಬ ಹೆಂಗಸರೂ ಇದನ್ನು ಮಾಡಲೇಬೇಕು. ಏಕೆಂದರೆ ತಮ್ಮ ಫಿಟ್ನೆಸ್ ಕುರಿತಾಗಿ ಹೆಂಗಸರು ತುಂಬಾ ನಿರ್ಲಕ್ಷ್ಯ ವಹಿಸುತ್ತಾರೆ. ನಗರಗಳಲ್ಲಿ ಈಗೀಗ ಎಲ್ಲೆಲ್ಲೂ ಜಾಗೃತಿ ಮೂಡುತ್ತಿದೆ.
ಆದರೆ ಸಣ್ಣ ತಾಲ್ಲೂಕು, ಹಳ್ಳಿಗಳಲ್ಲಿ ಈಗಲೂ ಹೆಂಗಸರು ಈ ವಿಷಯವನ್ನು ಸೂಕ್ಷ್ಮವಾಗಿ ತೆಗೆದುಕೊಳ್ಳುವುದೇ ಇಲ್ಲ. ಅವರು ವ್ಯಾಯಾಮ ಮಾಡುವುದು ಎಷ್ಟು ಮುಖ್ಯ ಎಂದು ಗಮನಹರಿಸುವುದೇ ಇಲ್ಲ. ನಾನಂತೂ ಪ್ರತಿದಿನ ವ್ಯಾಯಾಮದಿಂದಲೇ ದಿನ ಆರಂಭಿಸುತ್ತೇನೆ.
ಡಯೆಟ್ ಕಡೆ ಗಮನವಿರಲಿ
ಇಂದು ನಗರಗಳಲ್ಲಿ ಬಹುತೇಕ ಎಲ್ಲಾ ಹೆಗಸರೂ ಉದ್ಯೋಗಸ್ಥೆಯರೇ ಆಗಿರುತ್ತಾರೆ. ಹೀಗಾಗಿ ಅವರಿಗೆ ಹೊರಗಿನ ಊಟ ತಿಂಡಿಗೆ ಹೆಚ್ಚಿನ ಅವಕಾಶವಿದೆ. ಆದರೆ ಸಾಧ್ಯವಾದಷ್ಟೂ ಹೊರಗಿನ ಆಹಾರ ಸೇವಿಸುವುದನ್ನು ಕಡಿಮೆ ಮಾಡಿ. ಆದ್ದರಿಂದ ಪ್ರತಿ ದಿನ ಮನೆಯಿಂದಲೇ ಟಿಫನ್ ಬಾಕ್ಸ್ ತುಂಬಿಸಿಕೊಂಡು ಹೋಗಿ. ನಾನು ಹೊರಗಡೆ ಇರುವಾಗಲೂ ಸದಾ ಮನೆಯ ಆಹಾರವನ್ನೇ ಸೇವಿಸುತ್ತೇನೆ. ಪ್ರತಿ ದಿನ ನಾನೇ ಅಡುಗೆ ತಯಾರಿಸಿ ಎಲ್ಲರಿಗೂ ಟಿಫನ್ ಬಾಕ್ಸ್ ರೆಡಿ ಮಾಡುತ್ತೇನೆ.