ಎಷ್ಟೇ ಜನಪ್ರಿಯ ತಾರೆಯರಿರಲಿ, ವಿವಾಹವಾಗಿ ಮನೆ ಸಂಸಾರ, ಮಕ್ಕಳು ಎಂದಾಕ್ಷಣ ತಮ್ಮ ವೃತ್ತಿಗೆ ಬೈ ಬೈ ಹೇಳಿ ಮನೆಯಲ್ಲಿ ಸೆಟಲ್ ಆಗಿಬಿಡುತ್ತಾರೆ. ಈಗ ಕಾಲ ಬದಲಾಗಿದೆ. ನಾಲ್ಕು ಗೋಡೆಯಾಚೆಗೂ ಒಂದು ಪ್ರಪಂಚವಿದೆ ಎಂಬ ಸತ್ಯ ಅರಿವಾಗಿದೆ. ಆದರೆ ಇವರೆಲ್ಲರಿಗಿಂತಲೂ ವಿಭಿನ್ನವಾಗಿ ತನ್ನನ್ನು ತಾನು ರೂಪಿಸಿಕೊಂಡಿರುವ ತಾರೆ ಪ್ರಿಯಾಂಕಾ ಉಪೇಂದ್ರ ಕನ್ನಡ ಚಿತ್ರರಂಗದಲ್ಲಿ ವಿಶೇಷ ರೀತಿಯಲ್ಲಿ ತಮ್ಮನ್ನು ಪ್ರೆಸೆಂಟ್‌ ಮಾಡಿಕೊಳ್ಳುತ್ತಿರುವುದು ಮೆಚ್ಚುವಂಥ ಸಂಗತಿ.

ಖ್ಯಾತ ನಟ ಉಪೇಂದ್ರರನ್ನು ಮದುವೆಯಾಗಿ ಎರಡು ಮಕ್ಕಳ ತಾಯಿಯಾಗಿದ್ದರೂ ಯಾವುದೇ ತಾರೆಗೆ ಕಡಿಮೆ ಇಲ್ಲದಂತೆ ತಮ್ಮ ಸೌಂದರ್ಯವನ್ನು ಅಚ್ಚುಕಟ್ಟಾಗಿ ಕಾಪಾಡಿಕೊಂಡಿದ್ದಾರೆ. ತಮ್ಮ ಯಶಸ್ಸಿನ ದಿನಗಳಲ್ಲೇ ಮದುವೆಯಾಗಿದ್ದರಿಂದ ವೃತ್ತಿಗೆ ಒಂದಿಷ್ಟು ವಿರಾಮ ಕೊಟ್ಟು ಮನೆ, ಸಂಸಾರದ ಜವಾಬ್ದಾರಿ ಹೊತ್ತುಕೊಂಡಿದ್ದ ಪ್ರಿಯಾಂಕಾ, ಮಕ್ಕಳು ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ಸಿನಿಮಾ ನಿರ್ಮಾಣದ ಜೊತೆಗೆ ಚಿತ್ರಗಳಲ್ಲಿ ತಮಗೆ ಹಿಡಿಸುವಂಥ ಪಾತ್ರ ಬಂದಾಗ ಮಾತ್ರ ಮಾಡುತ್ತಾ ಬಂದರು. ಇದೀಗ ಅವರು ನಟಿಸಿರುವ `ಪ್ರಿಯಾಂಕಾ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.

ದಿನೇಶ್‌ ಬಾಬು ನಿರ್ದೇಶನದ ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇರಿಸಲಾಗಿದೆ. `ಬುದ್ಧಿವಂತ’ ಚಿತ್ರ ನಿರ್ಮಿಸಿದ್ದ ಮೋಹನ್‌ ಅವರೇ `ಪ್ರಿಯಾಂಕಾ’ ಚಿತ್ರವನ್ನು ನಿರ್ಮಿಸಿದ್ದಾರೆ. `ಪ್ರಿಯಾಂಕಾ’ ಚಿತ್ರದ ಫೋಟೋ ಕಾರ್ಡ್‌ಗಳು ಈಗಾಗಲೇ ಎಲ್ಲರನ್ನೂ ಆಕರ್ಷಿಸುತ್ತಿವೆ.

ಈ ಚಿತ್ರದ ಬಗ್ಗೆ ಸ್ವತಃ ಪ್ರಿಯಾಂಕಾ ಇಲ್ಲಿ ಮಾತನಾಡಿದ್ದಾರೆ.

ದಿನೇಶ್‌ ಬಾಬು ಅವರ `ಅಮೃತವರ್ಷಿಣಿ’ ಚಿತ್ರ ನೋಡಿದ್ದೆ. ನನಗೆ ತುಂಬಾನೇ ಇಷ್ಟವಾದ ಚಿತ್ರವದು. `ಪ್ರಿಯಾಂಕಾ’ ಚಿತ್ರದ ಕಥೆ ಕೇಳಿದಾಗ, ಕಥೆ ಮತ್ತು ಅದರಲ್ಲಿದ್ದ ಪಾತ್ರಗಳು ಅದರೊಂದಿಗೆ ನನ್ನ ಪಾತ್ರ ಬಹಳ ಹಿಡಿಸಿತು. ನಾನು ಇಲ್ಲಿಯವರೆಗೆ ಅಂಥ ಪಾತ್ರ ಮಾಡಿರಲಿಲ್ಲ. ಹಾಗಾಗಿ ತುಂಬಾನೆ ಇಷ್ಟವಾಯಿತು. ಯಾವ ತಾರೆಗೆ ಆಗಲಿ ಪಾತ್ರ ಅಟ್ರ್ಯಾಕ್ಟ್ ಆಗಬೇಕು. ಬಾಬು ಕಥೆ ಹೇಳಿದ ಕೂಡಲೇ ನಾನು ಆ ಪಾತ್ರವನ್ನು ಇಮ್ಯಾಜಿನ್‌ ಮಾಡ್ತಾ ಹೋದೆ. ಅಭಿನಯಕ್ಕೆ ಇಲ್ಲಿ ತುಂಬಾ ಸ್ಕೋಪ್‌ ಇದೆ ಅಂತ ಅನಿಸಿತು. ಒಳ್ಳೆ ಪ್ರಾಜೆಕ್ಟ್. ಎಲ್ಲರೂ ಪರಿಚಿತರೇ ಆಗಿದ್ದರಿಂದ ನಾನು ಕೂಡಲೇ ಒಪ್ಪಿಕೊಂಡೆ. ಪಾತ್ರದ ಬಗ್ಗೆ, ಕಥೆ ಏನೆಂದು ಹೇಳಿಬಿಟ್ಟರೆ ಎಲ್ಲವನ್ನೂ ಹೇಳಬೇಕಾಗುತ್ತೆ. ನಮ್ಮ ಇಡೀ ತಂಡ ಆ ಸಸ್ಪೆನ್ಸ್ ನ್ನು ಆರಂಭದಿಂದಲೂ ಹಿಡಿದಿಟ್ಟುಕೊಂಡು ಬಂದಿದೆ. ಒಟ್ಟಿನಲ್ಲಿ ಮಾಡರ್ನ್‌ ಆಗಿದೆ. ಈ ಜನರೇಷನ್‌ಗೆ ಹೊಂದುವಂಥ ಕಥೆ. ಎಲ್ಲದರಲ್ಲೂ ಹೊಸತನ ಕಾಣಬಹುದು. ಹೊಸರುಚಿ ಅಂತಾನೇ ಹೇಳಬಹುದು. ನಾವು ಯಾವುದಾದರೂ ಹೊಸ ಅಡುಗೆ ಮಾಡಿದಾಗ ಅದರ ರುಚಿ ಹೇಗಿರುತ್ತೆ ಎನ್ನುವ ಕುತೂಹಲ ಇದ್ದೇ ಇರುತ್ತಲ್ಲ…… ಅದೇ ರೀತಿ ಈ ಸಿನಿಮಾ ಕೂಡ. ಪ್ರೆಸೆಂಟೇಷನ್‌ ತುಂಬಾ ನೀಟಾಗಿದೆ. ಪಾತ್ರಕ್ಕೆ ಮಾಡಿಕೊಂಡ ತಯಾರಿ ಚಿತ್ರೀಕರಣಕ್ಕೆ ಮೊದಲೇ ಬಾಬು ಬೌಂಡ್‌ ಸ್ಕ್ರಿಪ್ಟ್ ಕೊಟ್ಟಿದ್ದರು. ಅದರಲ್ಲಿ ಡೈಲಾಗ್‌ಗಳು ಇಂಗ್ಲಿಷ್‌ನಲ್ಲಿದ್ದವು. ನನಗೆ ಕನ್ನಡ ಓದುವುದಕ್ಕೆ ಬರುವುದಿಲ್ಲವಲ್ಲ, ಹಾಗಾಗಿ ನಾನು ಇಂಗ್ಲಿಷ್‌ನಲ್ಲೇ ಓದಿಕೊಂಡು ಪಾತ್ರವನ್ನು ಅರ್ಥ ಮಾಡಿಕೊಳ್ತಿದ್ದೆ. ಮೊದಲ ದಿನದ ಚಿತ್ರೀಕರಣದ ಹೊತ್ತಿಗೆ ನನಗೆ ಇಡೀ ಸಿನಿಮಾದ ಕಥೆ ಹಾಗೂ ಪಾತ್ರಗಳು ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿತ್ತು. ದಿನೇಶ್‌ ಬಾಬುರ ವರ್ಕಿಂಗ್‌ ಸ್ಟೈಲ್ ಹಾಗಿರುತ್ತೆ. ನಾನು ಕ್ಯಾಮೆರಾ ಎದುರಿಸುವ ಮೊದಲೇ ಪಾತ್ರದೊಳಗಿಳಿದು ಹೋಗುತ್ತಿದ್ದರಿಂದ ಬಾಬು ಏನೇ ಹೇಳಲಿ, ಅದಕ್ಕೆ ನಾನು ರೆಡಿಯಾಗಿರುತ್ತಿದ್ದೆ. ಕೆಲವು ಸಲ ನಾನೇ ಏನಾದ್ರೂ ಸಜೆಷನ್‌ ಕೊಟ್ಟರೂ ಅವರು ತೆಗೆದುಕೊಳ್ಳುತ್ತಿದ್ದರು.

ಕ್ಯಾಮೆರಾ ಮುಂದೆ ಹೋಗುವುದಕ್ಕೆ ಮೊದಲು ಅವರಿಗೆ ಎಲ್ಲ ಪರ್ಫೆಕ್ಟ್ ಆಗಿರಬೇಕು. ಕಾಸ್ಟ್ಯೂಮ್, ಮೇಕಪ್‌, ಲೊಕೇಶನ್‌ಎಲ್ಲದರ ಬಗ್ಗೆ ಗಮನಕೊಡುತ್ತಾರೆ. ಮೇಕಪ್‌ ಜಾಸ್ತಿಯಾಯ್ತು ಅಂತ ಹೇಳಿದಾಗ ನಾನು ಮೇಕಪ್‌ ಇಲ್ಲದೇ ನಟಿಸಿದ್ದಿದೆ. ಹಾಗಾಗಿ ಶಾಟ್‌ಗಳು ರಿಯಲ್ ಆಗಿ ಮೂಡಿಬರುತ್ತಿತ್ತು.

ಪ್ರಿಯಾಂಕಾ V/S ಪ್ರಿಯಾಂಕಾ

ಈ ಪಾತ್ರ ಮಾಡುವಾಗ ನಾನು ವಿವಾಹಿತ ಮಹಿಳೆಯಾಗಿದ್ದರಿಂದ ಮೆಚ್ಯೂರಿಟಿ ಸಹಜವಾಗಿ ಎದ್ದು ಕಾಣುತ್ತಿತ್ತು. ಪಾತ್ರಕ್ಕೆ ಅದು ಬೇಕಾಗಿತ್ತು. ಗಂಡನ ಜೊತೆ ಮಾತನಾಡುವ ದೃಶ್ಯವಿರಲಿ, ಒಬ್ಬ ಮೆಚ್ಯೂರಿಟಿ ಇರುವ ಮಹಿಳೆ ಯಾವ ರೀತಿ ಮಾತನಾಡುತ್ತಾಳೆ? ಹೇಗೆ ನಡೆದುಕೊಳ್ಳುತ್ತಾಳೆ? ನಾನು ವಿವಾಹಿತಳಾಗಿದ್ದರಿಂದ ಇವೆಲ್ಲ ನನ್ನೊಳಗೆ ಅದು ಮಾರ್ಪಾಟಾಗಿತ್ತು. ಹಾಗಾಗಿ ಪಾತ್ರ ಮಾಡುವುದು ಬಹಳ ಸುಲಭವಾಯ್ತು.

ಮನೆ, ಮಕ್ಕಳು ಮತ್ತು ಕನ್ನಡನಾನು ಬರೀ ತಾರೆಯಷ್ಟೇ ಅಲ್ಲ, ಉಪೇಂದ್ರ ಅವರ `ಉಪ್ಪಿ-2′ ಚಿತ್ರದ ನಿರ್ಮಾಪಕಿಯೂ ಆಗಿದ್ದರಿಂದ ಜವಾಬ್ದಾರಿ ಜಾಸ್ತಿ ಇತ್ತು. `ಪ್ರಿಯಾಂಕಾ’ ಚಿತ್ರದ ಚಿತ್ರೀಕರಣವನ್ನು ಚೆನ್ನಾಗಿ ಫಿಕ್ಸ್ ಮಾಡಿದ್ದರು. ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸುವಂಥ ಪ್ಲಾನ್‌ನ್ನು ಬಾಬು ಮಾಡಿದ್ದರು. ಹಾಗಾಗಿ ನನಗೇನೂ ತೊಂದರೆಯಾಗಲಿಲ್ಲ.

ನನ್ನ ಪಾತ್ರಕ್ಕೆ ನಾನೇ ಡಬ್‌ ಮಾಡಬೇಕೆಂದರೆ ಇನ್ನೂ ಸ್ಪಷ್ಟವಾಗಿ ಕನ್ನಡ ಮಾತನಾಡಬೇಕಿದೆ. ಅದನ್ನು ಪ್ರತಿ ಕ್ಷಣ ಕಲಿಯುತ್ತಲೇ ಇರ್ತೀನಿ. ಎಲ್ಲರ ಜೊತೆ ಕನ್ನಡದಲ್ಲೇ ಮಾತನಾಡೋದು. ಎಲ್ಲ ಪರ್ಫೆಕ್ಟ್ ಆದಾಗ ಖಂಡಿತ ನಾನೇ ಡಬ್‌ಮಾಡ್ತೀನಿ.

ತಾರೆಯಾಗಿಯೇ ಮುಂದುವರಿಯುವೆ ಈಗ ಮಕ್ಕಳು ಕೈಗೆ ಬಂದಿದ್ದಾರೆ. ತಕ್ಕ ಮಟ್ಟಿಗೆ ದೊಡ್ಡವರಾಗಿದ್ದಾರೆ. ಒಳ್ಳೆ ಪಾತ್ರಗಳು ಬಂದರೆ ಮಾತ್ರ ನಾನು ಒಪ್ಪಿಕೊಳ್ಳೋದು. ಕೆಲವು ಚಿತ್ರಗಳು ಬಂದ. ಆದರೆ ನನಗದು ಸೂಟ್‌ ಆಗಲಿಲ್ಲ. ನನ್ನ ಇಮೇಜಿಗೊಪ್ಪುವಂಥ ರೋಲ್ ‌ಬಂದಾಗ ನಾನು ಮೊದಲು ನೋಡೋದು ಕಥೆ. ಅದರಲ್ಲಿ ನನ್ನ ಪಾತ್ರವೇನು ಎಂಬುದು. ನನಗೂ ಒಳ್ಳೊಳ್ಳೆ ನಿರ್ದೇಶಕರ ಜೊತೆ ಕೆಲಸ ಮಾಡುವ ಆಸೆ ಇದೆ. ನಮ್ಮದೇ ಬ್ಯಾನರ್‌ನಲ್ಲಿ ಒಂದೊಳ್ಳೆ ಚಿತ್ರ ಮಾಡಬೇಕೆಂದು ಸ್ಕ್ರಿಪ್ಟ್ ತಯಾರಿ ನಡೆಸಿದ್ದೇನೆ. ನೀವೇ ನಿರ್ದೇಶನ ಮಾಡಿ ಅಂತ ಹೇಳ್ತಾರೆ. ಅದರ ಬಗ್ಗೆ ಇನ್ನೂ ಯೋಚಿಸಿಲ್ಲ. ಲಿಮಿಟೆಡ್‌ ಬಜೆಟ್‌ನಲ್ಲಿ ಒಂದೊಳ್ಳೆ ಮೆಸೇಜ್‌ ಕೊಡುವಂಥ ಮನರಂಜನೆ ಹಾಗೂ ಮಹಿಳಾಪ್ರಧಾನ ಚಿತ್ರ ಮಾಡುವ ಆಸೆ ನನ್ನದು. ಎಲ್ಲರಿಗೂ ಇಷ್ಟವಾಗಬೇಕು, ಅಂತಹ ಒಂದು ಪ್ರಯತ್ನದಲ್ಲಿದ್ದೇನೆ. ನಮ್ಮದೇ ನಿರ್ಮಾಣ ಸಂಸ್ಥೆ ಇರೋದ್ರಿಂದ ನಾನು ಏನೇ ಹೊಸ ಹೆಜ್ಜೆ ಇಟ್ಟರೂ ಉಪೇಂದ್ರರ ಪ್ರೋತ್ಸಾಹವಿದ್ದೇ ಇರುತ್ತದೆ. ಅವರಿಗೇ ನಾನು ಮೊದಲು ಕಥೆ ಹೇಳೋದು, ಈಗಾಗಲೇ ಒಂದು ಸ್ಕ್ರಿಪ್ಟ್ ಅವರಿಗೂ ಹಿಡಿಸಿದೆ. ಎಲ್ಲ ಅಂದುಕೊಂಡಂತೆ ಆದರೆ ಚಿತ್ರ ಶುರು ಮಾಡುತ್ತೇವೆ.

ನಾಯಕಿ ಪಾತ್ರ ಬಂದರೆ…. ಅಮ್ಮನ ಪಾತ್ರ ಮಾಡುವಷ್ಟು ನನಗೆ ವಯಸ್ಸಾಗಿಲ್ಲ. ನಾಯಕಿ ಅಂದಾಕ್ಷಣ ಅದಕ್ಕೊಂದು ತೂಕದ ಪಾತ್ರವಿದ್ದರೆ ಖಂಡಿತ ಮಾಡಲು ಇಷ್ಟಪಡುತ್ತೇನೆ ಎಂದು ಹೇಳುವ ಪ್ರಿಯಾಂಕಾ, ತಮ್ಮ ಎಲ್ಲ ಯೋಜನೆಗಳ ಜೊತೆಗೆ `ಪ್ರಿಯಾಂಕಾ’ ಚಿತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೋ ಎಂಬ ಕುತೂಹಲದಲ್ಲಿದ್ದಾರೆ. ಒಂದು ಒಳ್ಳೆ ಚಿತ್ರವೊಂದು ಈಗಾಗಲೇ ಸುದ್ದಿ ಹಬ್ಬಿರೋದ್ರಿಂದ ನಮಗೂ ಆ ನಿರೀಕ್ಷೆ ಇದ್ದೇ ಇದೆ.

ಸರಸ್ವತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ