`ಜಿಂಕೆ ಮರೀನಾ... ನೀ ಜಿಂಕೆ ಮರಿನಾ' ಎನ್ನುತ್ತಾ `ನಂದ ಲವ್ಸ್ ನಂದಿತಾ' ಚಿತ್ರದಿಂದ ಲೂಸ್ ಮಾದ ಯೋಗೀಶ್ ಜೊತೆ ನಾಯಕಿಯಾಗಿ ಸ್ಯಾಂಡಲ್ ವುಡ್‌ಗೆ ಎಂಟ್ರಿ ಪಡೆದ ನಂದಿತಾ, ಅದೇ ಪಾತ್ರದಿಂದ ಹೆಸರು ಗಳಿಸಿ ಇಲ್ಲಿ ಯಶಸ್ವಿ ಎನಿಸಿ, ನೆರೆಯ ತಮಿಳು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಮಿಂಚತೊಡಗಿದಳು. ಆಕೆಯ ಮೊದಲ ತಮಿಳು ಚಿತ್ರ `ಅಟ್ಟೈ ಕತ್ತಿ'. ಮುಂದೆ ಸೆಂದಿಲ್‌ಕುಮಾರ್ ನಿರ್ದೇಶನದ `ಎದಿರ್ ನೀಚ್ಚಲ್' ಚಿತ್ರದಲ್ಲಿ ಅಥ್ಲಿಟ್ ಪಾತ್ರವಹಿಸಿ ಸ್ಟಾರ್ ಆದ ನಂದಿತಾ, `ಬಾಲಕುಮಾರ' ಚಿತ್ರದಲ್ಲಿ ರೊಮ್ಯಾಂಟಿಕ್ ಪಾತ್ರ ವಹಿಸಿದಳು. ಅಂಜಲಾ, ಉಪ್ಪು ಕರ್ವಾಡ್ ಮಾತ್ರವಲ್ಲದೆ ತಮಿಳು ಸೂಪರ್ ಸ್ಟಾರ್ ವಿಜಯ್‌ರ `ಪುಲಿ' ಚಿತ್ರದಲ್ಲಿ ನಾಯಕಿಯಾಗಿದ್ದಾಳೆ. ಆಲ್ ದಿ ಬೆಸ್ಟ್ ನಂದಿತಾ!
ದೇವಯಾನಿ ಸಂಜನಾ
ಇದೇನಿದು ಸಂಜನಾ ಹೆಸರು ಬದಲಿಸಿಕೊಂಡಳೇ ಅಂತ ಆಶ್ಚರ್ಯಪಡಬೇಡಿ. ಸಂಜನಾ ಅಂದಕೂಡಲೇ ಎಲ್ಲರಿಗೂ ನೆನಪಾಗೋದು `ಗಂಡ ಹೆಂಡ್ತಿ' ಸಂಜನಾ... ಅದರಲ್ಲಿ ಮುತ್ತಿನ ಮಳೆಯನ್ನೇ ಸುರಿಸಿ ಮಲ್ಲಿಕಾ ಶೆರಾವತ್‌ಗಿಂತ ತಾನೇನು ಕಡಿಮೆ ಇಲ್ಲ ಎನ್ನುವಷ್ಟು ಬೋಲ್ಡಾಗಿ ನಟಿಸಿದ್ದ ಸಂಜನಾ, ಆ ಇಮೇಜ್‌ನಿಂದ ಹೊರಬಂದು ಬೇರೆ ರೀತಿಯ ಪಾತ್ರಗಳಲ್ಲೂ ಕಾಣಿಸಿಕೊಂಡಳು. ತೆಲುಗು ಚಿತ್ರರಂಗದಲ್ಲೂ ಮಿಂಚಿದಳು. `ಮೈಲಾರಿ' ಚಿತ್ರದಲ್ಲಿ ಶಿವಣ್ಣನ ಜೊತೆ ಹಾಡಿ ಕುಣಿದು ಎಲ್ಲರ ಗಮನ ಸೆಳೆದಿದ್ದಳು. ಈಗ `ಸಿನಿಮಾ ಮೈ ಡಾರ್ಲಿಂಗ್' ಚಿತ್ರದಲ್ಲಿ ದೇವಯಾನಿ ಎನ್ನುವ ಐಟಂ ಡ್ಯಾನ್ಸರ್ ಪಾತ್ರ ನೀಡುತ್ತಿರುವ ಸಂಜನಾ, ತನ್ನ ಪಾತ್ರದ ಬಗ್ಗೆ ಬಹಳ ಹೋಪ್ಸ್ ಇಟ್ಟುಕೊಂಡಿದ್ದಾಳೆ. ಸಿನಿಮಾದೊಳಗಿನ ಸತ್ಯ ಘಟನೆಗಳನ್ನು ತೆರೆ ಮೇಲೆ ತರುತ್ತಿರುವುದರಿಂದ ಸಂಜನಾ ಯಾವ ಡ್ಯಾನ್ಸರ್ ಪಾತ್ರ ಮಾಡುತ್ತಿರಬಹುದೆಂಬ ಕುತೂಹಲ ಎಲ್ಲರಿಗೂ ಇದೆ. `ಬಿಗ್ ಬಾಸ್' ಮನೆಯೊಳಗೆ ಹೋಗಿ ಬಂದ ನಂತರ, ಮನೆಯಲ್ಲಿರುವ ಪ್ರೇಕ್ಷಕರಿಗೂ ಮೋಡಿ ಮಾಡಿರುವ ಸಂಜನಾಳ ದೇವಯಾನಿ ಪಾತ್ರ ಹೇಗಿರುತ್ತದೋ ಎಂದು ನೋಡೋಣ.
ಫೇಸ್ ಬುಕ್ ಮತ್ತು ಬಾಬು
ನಾಲ್ಕೈದು ತಿಂಗಳ ಹಿಂದೆ ಪತ್ರಿಕೆಯಲ್ಲಿ ಬಂದಂಥ ಸುದ್ದಿಯೊಂದು ಸಿನಿಮಾ ಮಾಡಲು ಪ್ರೇರೇಪಿಸಿದ್ದು ದಿನೇಶ್ ಬಾಬು ಅವರಿಗೆ. ನೈಜ ಕಥೆಯಾಧರಿಸಿ ಸಿನಿಮಾ ಮಾಡುವುದರ ಮಜವೇ ಬೇರೆ ಎನ್ನುವ ದಿನೇಶ್ ಬಾಬು `ಅಮೃತವರ್ಷಿಣಿ' ನಂತರ ಮಾಡಿದಂಥ ಚಿತ್ರಗಳು ಅಂಥಾದ್ದೇನೂ ಸುದ್ದಿ ಮಾಡಲಿಲ್ಲ. ಇಂದಿಗೂ `ಅಮೃತವರ್ಷಿಣಿ' ಚಿತ್ರವನ್ನು ಜನ ನೆನಪಿಸಿಕೊಳ್ಳುತ್ತಾರೆ. ಇನ್ನು ಮುಂದೆ `ಪ್ರಿಯಾಂಕಾ' ಬಗ್ಗೆ ಮಾತನಾಡುತ್ತಾರೆ ಎನ್ನುತ್ತಾರೆ ಬಾಬು. ಇವರ ಈ ಕನಸನ್ನು ನನಸಾಗಿಸಿದ್ದು ನಿರ್ಮಾಪಕ ಮೋಹನ್. ಯಾವುದೇ ರೀತಿ ಕಾಂಪ್ರಮೈಸ್ ಮಾಡಿಕೊಳ್ಳದೇ ಚಿತ್ರಕ್ಕೆ ಏನು ಬೇಕೋ ಎಲ್ಲವನ್ನೂ ನೀಡಿದ ಮೋಹನ್ ಬಗ್ಗೆ ಬಾಬು ಕೂಡಾ ಸಿಕ್ಕಿದರೆ ಇಂಥ ನಿರ್ಮಾಪಕ ಸಿಗಬೇಕು ಎನ್ನುವಂತಾಗಿದೆ. ಸಿನಿಮಾದಲ್ಲಿನ ಹಾಡುಗಳು ಈಗಾಗಲೇ ಜನಪ್ರಿಯವಾಗಿದ್ದು, ಕೃಪಾಕರ್ ಸಂಗೀತ ಸಂಯೋಜಿಸಿದ್ದಾರೆ. ಕೇಶವಚಂದ್ರ ಎನ್ನುವವರಿಂದ ಬಾಬು ಹಾಡನ್ನು ಬರೆಸಿದ್ದಾರೆ. ಸಿನಿಮಾದ ಎಲ್ಲ ವಿಭಾಗಳಲ್ಲೂ ಇನ್ವಾಲ್ವ್ ಆಗುವ ಬಾಬು ಅವರ ಕಂಪ್ಲೀಟ್ ಪ್ಯಾಕೇಜ್ `ಪ್ರಿಯಾಂಕಾ' ಎನ್ನಬಹುದಾಗಿದೆ. ಈ ಚಿತ್ರದ ನಂತರ ಬಾಬು ತುಸು ರಿಲ್ಯಾಕ್ಸ್ ಆಗಬಹುದೇ? ಕಾದುನೋಡೋಣ.