- ರಾಘವೇಂದ್ರ ಅಡಿಗ ಎಚ್ಚೆನ್.
ಆಗಸ್ಟ್ 1ರಂದು ‘ಕೊತ್ತಲವಾಡಿ’ ಸಿನಿಮಾ ಬಿಡುಗಡೆಯಾಗಲಿದೆ. ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಕೊತ್ತಲವಾಡಿಯ ಕಥೆಯನ್ನು ನಿರ್ಮಾಣ ಮಾಡಿ ತೆರೆಗೆ ತರುತ್ತಿದ್ದಾರೆ. ರಗಡ್ ಅವತಾರದಲ್ಲಿ ಪೃಥ್ವಿ ಅಂಬರ್ ಕಾಣಿಸಿಕೊಳ್ಳುತ್ತಿದ್ದರೆ ಅವರಿಗೆ ನಾಯಕಿಯಾಗಿ ಕಾವ್ಯಾ ಶೈವ ನಟಿಸಿದ್ದಾರೆ. ಗೋಪಾಲ ದೇಶಪಾಂಡೆ, ರಾಜೇಶ್ ನಟರಂಗ, ಬಲ ರಾಜ್ವಾಡಿ, ಮಾನಸಿ ಸುಧೀರ್ ಇದೇ ಮೊದಲ ಬಾರಿಗೆ ಯಾರೂ ಊಹಿಸಿರದ ಪಾತ್ರಗಳನ್ನು ಈ ಚಿತ್ರದಲ್ಲಿ ಮಾಡಿದ್ದಾರೆ. ರಾಜಕೀಯ, ಹಸಿವು, ಬಂಡಾಯ, ಬೆಂಕಿ, ರಕ್ತಸಿಕ್ತ ಕಥೆ 'ಕೊತ್ತಲವಾಡಿ' ಚಿತ್ರದಲ್ಲಿದೆ. ಬಿಡುಗಡೆ ಪೂರ್ವದಲ್ಲಿ ಪತ್ರಿಕಾ ಮಾದ್ಯಮದವರೊಂದಿಗೆ ಮಾತನಾಡಿದ ಪುಷ್ಪಾ ಅವರು "ಕೊತ್ತಲವಾಡಿ ಎಂದರೆ ಒಂದು ಹಳ್ಳಿಯ ಹೆಸರು, ಹಳ್ಳಿಯಲ್ಲಿ ನಡೆಯುವ ರಾಜಕೀಯದ ಕಥೆ ಹೇಳಲು ನಮಗೆ ಒಂದು ಗ್ರಾಮದ ಹೆಸರು ಬೇಕಾಗಿದ್ದ ಕಾರಣ ಕೊತ್ತಲವಾಡಿ ಎಂದು ಆಯ್ಕೆ ಮಾಡಿಕೊಂಡೆವು. ಇದಕ್ಕೆ ಕೊರತಾಗಿ ಕೊತ್ತಲವಾಡಿ ಎನ್ನುವ ಹೆಸರನ್ನೇ ಆಯ್ಕೆ ಮಾಡಿಕೊಳ್ಲಲು ಬೇರಾವ ವಿಶೇಷ ಕಾರಣಗಳಿಲ್ಲ." ಎಂದಿದ್ದಾರೆ.
" ಜನ ನಮ್ಮ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ. ಇದರಲ್ಲಿ ಯಾವ ದೊಡ್ಡಸ್ತಿಕೆ ಇಲ್ಲ ಆದರೆ ಸೆಲೆಬ್ರಿಟಿ ಮನೆಯವರಾಗಿ ಈ ಚಿತ್ರ ಮಾಡಿದ್ದ ಕಾರಣ ಕೊತ್ತಲವಾಡಿಗೆ ಜನರು ಹೆಚ್ಚಿನ ಪ್ರಮಾಣದಲ್ಲಿ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಆದರೆ ಅವರ ಈ ನಿರೀಕ್ಷೆ ಖಂಡಿತಾ ಹುಸಿಯಾಗುವುದಿಲ್ಲ ಎನ್ನುವ ನಂಬಿಕೆ ನನಗಿದೆ. " ಎಂದು ಪುಷ್ಪಾ ಅವರು ಹೇಳಿದ್ದಾರೆ.
ನಾಯಕ ನಟ ಪೃಥ್ವಿ ಅಂಬರ್ ಮಾತನಾಡಿ "ನನಗೆ ಅಮ್ಮನ ನಿರ್ಮಾಣದಲ್ಲಿ ನಟಿಸುವುದು ದೊಡ್ಡ ಅದೃಷ್ಟ, ಇದಲ್ಲದೆ ಈ ಚಿತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಸಹ ಇದ್ದು ಅವರ ಪಾತ್ರ ಚಿತ್ರದ ಮಹತ್ವದ ಹೈಲೈಟ್ ಆಗಿರಲಿದೆ. ನಾನು ಸಹ ಅವರ ಅಭಿಮಾನಿಯಾಗಿದ್ದು ಅವರಂತಹಾ ನಟರನ್ನು ನಾವು ಇನ್ನಷ್ಟು ಸೆಲೆಬ್ರೇಟ್ ಮಾಡಬೇಕಿದೆ." ಎಂದರು.
ಚಿತ್ರ ನಿರ್ದೇಶಕ ಶ್ರೀರಾಜ್ ನಿರ್ಮಾಪಕಿ ಪುಷ್ಪ ಅವರೊಂದಿಗೆ ಕಥೆ ಹೇಳಿದಾಗಿನಿಂದ ಚಿತ್ರ ಸಂಪೂರ್ಣವಾಗುವವರೆಗಿನ ತಮ್ಮ ಅನುಭವ ಹಂಚಿಕೊಂಡರು ಹಾಗೂ ಈ ಚಿತ್ರಕ್ಕಾಗಿನ ನಿರ್ಮಾಪಕಿ ಪುಶ್ಪಾ ಅವರ ಸಹಕಾರವನ್ನು ಸಹ ಗುರುತಿಸಿ ಪುಷ್ಪ ಅಮ್ಮನಂತಹಾ ನಿರ್ಮಾಪಕರು ಕನ್ನಡ ಚಿತ್ರರಂಗಕ್ಕೆ ಬೇಕು ಎಂದು ಹೇಳಿದ್ದಾರೆ.
ಪುಷ್ಪಾ ಅರುಣ್ ಕುಮಾರ್ ತಮ್ಮದೇ 'ಪಿಎ ಪ್ರೊಡಕ್ಷನ್'ನಡಿ ಕೊತ್ತಲವಾಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದ ಹಾಡುಗಳಿಗೆ ವಿಕಾಸ್ ವಸಿಷ್ಠ ಸಂಗೀತ ನೀಡಿದ್ದರೆ . ಹೀರೋ ಇಂಟ್ರೊಡಕ್ಷನ್ ಹಾಗೂ ಹಿನ್ನೆಲೆ ಸಂಗೀತವನ್ನು ಅಭಿನಂದನ್ ಕಶ್ಯಪ್ ಸಂಯೋಜಿಸಿದ್ದಾರೆ. ಕಾರ್ತಿಕ್ ಎಸ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ರಾಮಿಸೆಟ್ಟಿ ಪವನ್ ಸಂಕಲನ ನೋಡಿಕೊಂಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್, ಪ್ರಮೋದ್ ಮರವಂತೆ, ಗೌಸ್ ಪಿರ್ ಸಾಹಿತ್ಯ ಬರೆದಿದ್ದಾರೆ. ಅಭಿನಂದನ್ ಕಶ್ಯಪ್ ಹಿನ್ನೆಲೆ ಸಂಗೀತ ನೀಡಿದ್ದಾರೆ.