ಮೈಸೂರು, ರಂಗಾಯಣ, ರಂಗಭೂಮಿ ಎಂಥವರನ್ನಾದರೂ ಆಕರ್ಷಿಸಬಲ್ಲದು. ಕೆಲವರಿಗಂತೂ ಸಿನಿಮಾಗಿಂತ ನಾಟಕಗಳೇ ಹೆಚ್ಚು ಪ್ರಿಯ. ಇಂಥವೊಂದು ವಾತಾವರಣದಲ್ಲಿ ಬೆಳೆದು ಬಂದಂಥ ನಟಿಯೇ `ರಾಜಲಕ್ಷ್ಮಿ.’ ರಂಗಭೂಮಿಯಲ್ಲಿ ಚಿರಪರಿಚಿತ ಹೆಸರು. ಆದರೆ ಸಿನಿಮಾ ಲೋಕಕ್ಕೆ ಹೊಸಬಳು. ರಾಜಲಕ್ಷ್ಮಿ ಈಗ ಸಿನಿಮಾವೊಂದರ ನಾಯಕಿ. `ಆರ್ಕೆಸ್ಟ್ರಾ….’ ಚಿತ್ರದ  ಹೆಸರು. ಎಲ್ಲರೂ ಹೊಸಬರೇ, ಸುನೀಲ್‌ರ ಮೊದಲ ನಿರ್ದೇಶನದ ಚಿತ್ರವಿದು. ಚಿತ್ರೀಕರಣ ಭರದಿಂದ ಸಾಗಿದೆ. ರಾಜಲಕ್ಷ್ಮಿ ಅಂದು ಬಿಡುವಾಗಿದ್ದರಿಂದ ಮಾತು ಶುರುವಾಯಿತು.

ನಿಮ್ಮ ಪರಿಚಯ ಮಾಡಿಕೊಡಿ.

ನಾನು ಎಂಟು ವರ್ಷದಿಂದ ರಂಗಭೂಮಿಯಲ್ಲಿದ್ದೆ. ಡಿಗ್ರಿ ಮಾಡಬೇಕಾದ್ರೆ ಒಂದಷ್ಟು ರಂಗಾಯಣದ ಯುವ ಘಟಿಕೋತ್ಸವದಲ್ಲಿ ನಾಟಕಗಳನ್ನು ಮಾಡಿದ್ದೆ. ಮಾಸ್ಟರ್‌ ಡಿಗ್ರಿ ಮಾಡಬೇಕಾಗಿ ಬಂದಾಗ ಒಂದೂವರೆ ವರ್ಷ ಅಷ್ಟು ಆ್ಯಕ್ಟಿವ್‌ ಆಗಿರಲಿಲ್ಲ. ಅದು ಬಿಟ್ಟರೆ ನಾನು ನಿರಂತರವಾಗಿ ಡ್ರಾಮಾಗಳನ್ನು ಮಾಡುತ್ತಿದ್ದೆ. ಪ್ರಸನ್ನ ಹೆಗ್ಗೋಡುರವರ ಜೊತೆ ಚಾರ್ಲಿಚಾಪ್ಲಿನ್‌, ಸ್ವರಾಜ್ಯದಾಟ ಮಾಡಿದ್ದೆ. ಆ ನಾಟಕವನ್ನು ನೋಡಲು ನಿರ್ದೇಶಕರಾದ ಸುನೀಲ್ ಬಂದಿದ್ದರು. ಸಿನಿಮಾದಲ್ಲಿ ನಟಿಸಲು ಆಫರ್‌ ಬಂತು ಒಪ್ಪಿಕೊಂಡೆ.

ಸಿನಿಮಾದಲ್ಲಿ ನಟಿಸಬೇಕೆಂಬ ಆಸಕ್ತಿ ಇತ್ತಾ…..?

ಹೌದು, ತುಂಬಾ ಆಸಕ್ತಿ ಇತ್ತು. ಆದರೆ ಒಳ್ಳೆ ಪಾತ್ರವಿದ್ದರೆ ಮಾತ್ರ, ಸಿಕ್ಕಿದ್ದನ್ನೆಲ್ಲ ಮಾಡುವುದು ಇಷ್ಟವಿರಲಿಲ್ಲ.  ರಂಗಭೂಮಿ ನಟಿಯಾದ್ದರಿಂದ ಸ್ವಲ್ಪ ಚ್ಯೂಸಿಯಾಗಿದ್ದೆ. ನಿರ್ದೇಶಕ ಸುನೀಲ್‌ರವರ ಬಗ್ಗೆ ಗೊತ್ತಿತ್ತು. ಸುನೀಲ್‌ ಅಪ್ರೋಚ್‌ ಮಾಡಿದ ರೀತಿ ನನಗೆ ತುಂಬಾ ಹಿಡಿಸಿತು. ಅವರು ಯಾವುದೇ ರೀತಿ ಆಡಿಶನ್‌ ಆಗಲಿ, ಫೋಟೋ ಶೂಟ್‌ ಆಗಲಿ ಮಾಡದೆ ನಾಟಕ ನೋಡಿ ನನ್ನನ್ನು ಆಯ್ಕೆ ಮಾಡಿದ್ದು ನನಗೆ ತುಂಬಾ ಇಷ್ಟವಾಯ್ತು. ನಾನು ಸುಮಾರು ನಿರ್ದೇಶಕರನ್ನು ಭೇಟಿ ಮಾಡಿದ್ದಾಗ ಕಾಸ್ಟ್ಯೂಮ್ ಟೆಸ್ಟ್, ಮೇಕಪ್‌ ಟೆಸ್ಟ್ ಅಂತೆಲ್ಲಾ ಹೇಳಿದ್ದರು. ಆಗ ನಾನು ಯಾವುದಕ್ಕೂ ಒಪ್ಕೊಂಡಿರಲಿಲ್ಲ. ಸುನೀಲ್‌ ಅಪ್ರೋಚ್‌ ಮಾಡಿದ ರೀತಿ, ಅವರು ಕಥೆ ಹೇಳಿದ್ದು, ನಿಮ್ಮ ನಾಟಕ ನೋಡಲು ಬರ್ತೀನಿ ಅಂದದ್ದು ಇಷ್ಟವಾಗಿತ್ತು. ಅಷ್ಟೇ ಅಲ್ಲ ಅವರು ಮಾಡಿದ್ದಂಥ ಬಾರಿಸು ಕನ್ನಡ ಡಿಂಡಿಮ ವಿಡಿಯೋ ಸಾಂಗ್‌ ನನಗೆ ತುಂಬಾ ಇಷ್ಟವಾಗಿತ್ತು. `ಆರ್ಕೆಸ್ಟ್ರಾ’ ಚಿತ್ರದಲ್ಲಿನ ನನ್ನ ಪಾತ್ರ ಕೂಡಾ ಹಿಡಿಸಿತು.

ಪಾತ್ರದ ಬಗ್ಗೆ ಹೇಳಿ.

ಚಾಮರಾಜನಗರ ಮಿಡಲ್ ಕ್ಲಾಸ್‌ ಹುಡುಗಿ ಪಾತ್ರ. ಬ್ಯೂಟಿಪಾರ್ಲರ್‌ನಲ್ಲಿ ಕೆಲಸ ಮಾಡುವಂಥ ಹುಡುಗಿ. ಮೈಸೂರಿನವಳೇ ಆಗಿದ್ದರಿಂದ ಪಾತ್ರ ನಿರ್ಹಿಸುವಾಗ ಸುಲಭವಾಯ್ತು.

ಫ್ಯಾಮಿಲಿ ಸಪೋರ್ಟ್‌ ಇದ್ಯಾ….?

ಖಂಡಿತಾ. ಏಕೆಂದರೆ ನಮ್ಮ ತಂದೆ ಕಾಲೇಜಿನಲ್ಲಿದ್ದಾಗ ನಾಟಕ ಮಾಡ್ತಿದ್ರಂತೆ, ಬಹುಶಃ ಅವರಿಂದಲೇ ನನಗೂ ಆಸಕ್ತಿ ಬೆಳೆದು ಬಂದಿರಬಹುದು.

ಸಿನಿಮಾದಲ್ಲಿ ನಟಿಸಿದ ಅನುಭವ ಹೇಗಿತ್ತು?

ನಾಟಕಗಳಲ್ಲಿ ಅಂದ್ರೆ ರಿಹರ್ಸಲ್, ಡೈಲಾಗ್ಸ್ ತಾಲೀಮು ಎಲ್ಲ ಇರುತ್ತದೆ. ಆದರೆ ಸಿನಿಮಾದಲ್ಲಿ ಹಾಗಲ್ಲ. ಎಲ್ಲವನ್ನೂ ಅಲ್ಲಿಯೇ ಮಾಡಬೇಕು. ಸುನೀಲ್‌ ಸ್ಕ್ರಿಪ್ಟ್ ಮೊದಲೇ ಕೊಡ್ತಿದ್ದರು. ಅವರಿಗೆ ತುಂಬಾನೆ ತಾಳ್ಮೆ, ಅಷ್ಟೇ ಚೆನ್ನಾಗಿ ನಮ್ಮಿಂದ ಕೆಲಸ ತೆಗೆಯುತ್ತಿದ್ದರು. ಈ ಚಿತ್ರದಲ್ಲಿ ಎಲ್ಲ ಪಾತ್ರಗಳಿಗೂ ಅದರದೇ ಆದ ಪ್ರಾಮುಖ್ಯತೆ ಇದೆ. ಡೆಫ್ನೆಟ್ಲಿ ಇದೊಂದು ಒಳ್ಳೆ ಸಿನಿಮಾ ಆಗುತ್ತೆ. ರಘು ದೀಕ್ಷಿತ್‌ ಮ್ಯೂಸಿಕ್‌ ಮಾಡಿದ್ದಾರೆ. ಅಶ್ವಿನ್‌ ಅವರದು ನಿರ್ಮಾಣ, ಹಾಡುಗಳು ಕೂಡಾ ಚೆನ್ನಾಗಿ ಮೂಡಿಬಂದಿದೆ.  ಪೂರ್ಣಚಂದ್ರ ನಾಯಕರಾಗಿ ನಟಿಸುತ್ತಿದ್ದಾರೆ. ಅವರಿಗೆ ಈಗಾಗಲೇ ಲೂಸಿಯಾ, ಟಗರು, ದಯವಿಟ್ಟು ಗಮನಿಸಿ ಚಿತ್ರಗಳಲ್ಲಿ ನಟಿಸಿದ ಅನುಭವವಿದೆ.

ಎಂಥಾ ಪಾತ್ರ ಇಷ್ಟ?

ಇಂಥದ್ದೇ ಅಂತಿಲ್ಲ. ಒಂದೇ ರೀತಿಯ ಪಾತ್ರಗಳು ನನಗಿಷ್ಟವಿಲ್ಲ. ವೆರೈಟಿ ಇರಬೇಕು. ಪಾತ್ರಕ್ಕೆ ತೂಕವಿರಬೇಕು. ಅದು ಸಣ್ಣ ಪಾತ್ರವಾದರೂ ಪರವಾಗಿಲ್ಲ. ರೋಲ್ ಮಾಡೆಲ್‌ ಅಂತ ಯಾರನ್ನೂ ಮನಸ್ಸಿನಲ್ಲಿ ಇಟ್ಟುಕೊಂಡಿಲ್ಲ. ಈ ಚಿತ್ರದ  ನಂತರ ಯಾವುದೇ ಆಫರ್‌ ಬಂದರೂ ಪಾತ್ರ ಬಹಳ ಮುಖ್ಯವಾಗುತ್ತೆ. ರಂಗಭೂಮಿಯಿಂದ ನಾನು ತುಂಬಾನೇ ಕಲಿತಿರೋದ್ರಿಂದ ನಾನು ಮಾಡುವ ಪಾತ್ರಗಳನ್ನು ಬಹಳ ಸೀರಿಯಸ್ಸಾಗಿ ತಗೊಂಡು ಮಾಡಬೇಕಾಗುತ್ತದೆ.

ಪ್ರಸನ್ನ ಹೆಗ್ಗೋಡುರವರ ಬಗ್ಗೆ ಏನು ಹೇಳಲು ಇಷ್ಟಪಡ್ತೀರಾ?

`ಸ್ವರಾಜ್ಯದಾಟ’ ನಾಟಕದಲ್ಲಿ ನನ್ನಿಂದ ಚಾರ್ಲಿಚಾಪ್ಲಿನ್‌ ಪಾತ್ರ ಮಾಡಿಸಿದ್ದರು. ಒಬ್ಬ ಹುಡುಗಿ ಚಾರ್ಲಿಚಾಪ್ಲಿನ್‌ ಪಾತ್ರ ಮಾಡಿದ್ದು ಇದೇ ಮೊದಲನೇ ಸಲ ಅನ್ಸುತ್ತೆ. ಮೂರು ತಿಂಗಳು ತಾಲೀಮು ಕೊಟ್ಟರು ಪ್ರಸನ್ನ. ಆ ಜರ್ನಿಯಲ್ಲಿ ವರ್ಕ್‌ಶಾಪ್‌ನಲ್ಲಿ ಕಲಿತದ್ದು ನನಗೆ ಸಿನಿಮಾದಲ್ಲಿ ಮಾಡುವಾಗ ತುಂಬಾನೆ ಹೆಲ್ಪ್ ಆಯ್ತು. ಆರ್ಕೆಸ್ಟ್ರಾದಲ್ಲಿ ನಟಿಸುವಾಗ ಸುನೀಲ್‌ರವರು ಕೂಡಾ ತುಂಬಾನೆ ತಿದ್ದಿ ಹೇಳಿಕೊಟ್ಟಿದ್ದಾರೆ. ತಮಾಷೆ ಎಂದರೆ ಇಡೀ ಸೆಟ್‌ನಲ್ಲಿ ನಾನೊಬ್ಬಳೇ ಹುಡುಗಿ. ಅದೊಂಥರ ಡಿಫರೆಂಟ್‌ ಎಕ್ಸ್ ಪೀರಿಯನ್ಸ್. ರಾಜಲಕ್ಷ್ಮಿ ಸಿನಿಮಾಗಾಗಿ ಹೆಸರು ಚೇಂಜ್‌ ಮಾಡ್ಕೋತೀರಾ?

ಬಹಳ ಇಷ್ಟಪಟ್ಟು ಅಪ್ಪ ಅಮ್ಮ ಇಟ್ಟಂಥ ಹೆಸರು. ಶಾಸ್ತ್ರೋಕ್ತವಾಗಿ ಅರಮನೆ ಪುರೋಹಿತರು ಇಟ್ಟಿದ್ದು. ಹಾಗಾಗಿ ಬದಲಿಸಲು ಇಷ್ಟವಿಲ್ಲ. ಒಂದು ವೇಳೆ ನೇಮ್ ಚೇಂಜ್‌ ಮಾಡಬೇಕು ಅಂದರೂ ನನ್ನದೇನು ಅಭ್ಯಂತರವಿಲ್ಲ.

ಯಾವ ನಾಯಕ ಇಷ್ಟ? ಯಾರ ಜೊತೆ ನಟಿಸಲು ಇಷ್ಟ?

ನನಗೆ ಡಾ. ರಾಜ್‌ಕುಮಾರ್‌ ಬಹಳ ಇಷ್ಟವಾಗ್ತಾರೆ. ಅವರು ಕೂಡಾ ರಂಗಭೂಮಿ ಹಿನ್ನೆಲೆಯಿಂದ ಬಂದವರು. ತುಂಬಾನೆ ಪ್ರಭಾವ ಬೀರುವಂಥ ಕಲಾವಿದರು. ನಾಯಕ, ಗಾಯಕ, ಶುದ್ಧವಾಗಿ ಕನ್ನಡ ಮಾತನಾಡುತ್ತಿದ್ದ ರೀತಿ ಎಲ್ಲ ನನಗಿಷ್ಟ. ಎಲ್ಲ ತರಹದ ಪಾತ್ರ ಮಾಡಿರುವಂಥ ಏಕೈಕ ಕಲಾವಿದರವರು. ಕನ್ನಡ ಭಾಷೆ ಮೇಲೆ ಅವರಿಗಿದ್ದಂಥ ಹಿಡಿತ, ಆ ಉಚ್ಚಾರಣೆ ಎಲ್ಲ ಸ್ಛೂರ್ತಿದಾಯಕ! ನಾನು ಚಿಕ್ಕವಳಾಗಿದ್ದಾಗ ಅವರ ಜೊತೆ ನಟಿಸಬೇಕೆಂದು ಆಸೆಪಡ್ತಿದ್ದೆ. ನಾನು ತುಂಬಾನೆ ಇಷ್ಟಪಟ್ಟ ಈಗಲೂ ಇಷ್ಟಪಡುವ ನಾಯಕ ಅಂದ್ರೆ  ರಾಜ್‌ಕುಮಾರ್‌ ಒಬ್ಬರೆ! ನನಗೆ ಬಹಳವಾಗಿ ಕಾಡುವ ಸಂಗತಿ ಅಂದರೆ ನಾನವರನ್ನು ಒಮ್ಮೆಯಾದರೂ ಮೀಟ್‌ ಮಾಡಲಿಲ್ಲವಲ್ಲ ಅಂತ.

ನಿಮ್ಮ ಹವ್ಯಾಸಗಳೇನು?

ನಾನೀಗ ನಿರುಪಮಾ ರಾಜೇಂದ್ರನ್‌ರವರ ಬಳಿ ಕಥಕ್‌ ಕಲಿಯುತ್ತಿದ್ದೇನೆ. ಮೈಕ್ರೋಬಯಾಲಜಿಯಲ್ಲಿ ಮಾಸ್ಟರ್‌ ಡಿಗ್ರಿ ಪಡೆದಿದ್ದೇನೆ. ಒಬ್ಬ ನಟಿಯಾಗಿರದೇ ಹೋಗಿದಿದ್ದರೆ ಮೈಕ್ರೋಬಯಾಲಜಿಸ್ಟ್ ಆಗಿರುತ್ತಿದ್ದೆ. ಓದುವುದು, ಸಮಾಜಸೇವೆ ಇದೆಲ್ಲ ನನಗಿಷ್ಟ.

ಈಗಿನ ನಟಿಮಣಿಗಳಿಗೆ ಹೋಲಿಸಿದರೆ ತುಂಬಾನೆ ವಿಭಿನ್ನವಾಗಿರುವ ರಾಜಲಕ್ಷ್ಮಿ, ಸೋಷಿಯಲ್ ಮೀಡಿಯಾದಿಂದ ಸ್ವಲ್ಪ ದೂರವೇ ಇದ್ದಾಳೆ, ಎಂದಾಗ ಆಶ್ಚರ್ಯವಾಗುತ್ತೆ.

– ಜಾಗೀರ್‌ದಾರ್‌ 

Tags:
COMMENT