ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಅವರ ಮಾಜಿ ಅಳಿಯ, ನಟ ಧನುಷ್‌ ಅವರನ್ನು ಗುರಿಯಾಗಿರಿಸಿಕೊಂಡು ಬಾಂಬ್ ಬೆದರಿಕೆ ಕರೆ ಬಂದಿದೆ. ತಮಿಳುನಾಡು ಪೊಲೀಸ್ ಇಲಾಖೆಯ ಮಹಾನಿರ್ದೇಶಕರ ಅಧಿಕೃತ ಇಮೇಲ್ ಐಡಿಗೆ ಕಳುಹಿಸಲಾದ ಈ ಬೆದರಿಕೆ ಸಂದೇಶ ರಜನಿಕಾಂತ್ ಮತ್ತು ಧನುಷ್ ಅವರ ಚೆನ್ನೈನ ನಿವಾಸಗಳಲ್ಲಿ ಸ್ಫೋಟಕಗಳನ್ನು ಇಡಲಾಗಿದೆ ಎಂದು ತಿಳಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ತನಿಖೆ ನಡೆಸಿದಾಗ, ಈ ಬೆದರಿಕೆ ನಕಲಿ ಎಂದು ಸ್ಪಷ್ಟವಾಯಿತು.

ತಲೈವ ರಜನಿಕಾಂತ್ ಭಾರತೀಯ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಗಳಿಸಿದವರು. ಇತ್ತೀಚೆಗಷ್ಟೇ ಅವರ ಕೂಲಿ ಚಿತ್ರ ಬಿಡುಗಡೆಯಾಗಿ, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಪಡೆದಿತ್ತು. ತಮಿಳುನಾಡು ಪೊಲೀಸ್ ಇಲಾಖೆಗೆ ಬಂದ ಈ ಇಮೇಲ್ ಸಂದೇಶವು ರಜನಿಕಾಂತ್ ಅವರ ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿರುವ ನಿವಾಸ ಮತ್ತು ಧನುಷ್ ಅವರ ಆಲ್ವಾರ್‌ಪೇಟ್‌ನಲ್ಲಿರುವ ಮನೆಯಲ್ಲಿ ಬಾಂಬ್ ಇಡಲಾಗಿದೆ ಎಂದು ತಿಳಿಸಿತ್ತು.ಈ ಸಂದೇಶ ಕಂಡ ತಕ್ಷಣ, ಚೆನ್ನೈ ಪೊಲೀಸರು ತೇನಾಂಪೇಟೆ ಠಾಣೆಯಿಂದ ತಂಡವನ್ನು ರವಾನಿಸಿ, ಬಾಂಬ್ ಸ್ಕಾಡ್ ಜೊತೆಗೆ ತನಿಖೆ ಆರಂಭಿಸಿದರು. ರಜನಿಕಾಂತ್ ಅವರ ನಿವಾಸದಲ್ಲಿ ವಿಶೇಷ ಶೋಧ ಕಾರ್ಯ ನಡೆಸಲಾಯಿತು. ಆದರೆ, ಯಾವುದೇ ಸ್ಫೋಟಕ ವಸ್ತುಗಳು ಅಥವಾ ಅನುಮಾನಾಸ್ಪದ ಕುರುಹುಗಳು ಕಂಡುಬಂದಿಲ್ಲ. ಧನುಷ್ ಅವರ ಮನೆಯಲ್ಲಿಯೂ ಯಾವುದೇ ಅಪಾಯಕಾರಿ ವಸ್ತುಗಳಿಲ್ಲ ಎಂದು ಖಚಿತವಾಯಿತು.

ಪೊಲೀಸರು ತನಿಖೆಯ ಸಂದರ್ಭದಲ್ಲಿ, ಯಾವುದೇ ಅಪರಿಚಿತ ವ್ಯಕ್ತಿಗಳು ಈ ನಿವಾಸಗಳಿಗೆ ಭೇಟಿ ನೀಡಿಲ್ಲ ಎಂಬುದನ್ನು ಕೂಡ ಸ್ಪಷ್ಟಪಡಿಸಿದರು. ಈ ಇಮೇಲ್ ಬೆದರಿಕೆಯನ್ನು ಕಿಡಿಗೇಡಿಗಳ ಕೃತ್ಯವೆಂದು ಪೊಲೀಸರು ಶಂಕಿಸಿದ್ದಾರೆ. ಈ ಘಟನೆಯ ಬಗ್ಗೆ ತನಿಖೆ ಮುಂದುವರೆಸಲಾಗಿದ್ದು, ಇಮೇಲ್‌ನ ಮೂಲವನ್ನು ಪತ್ತೆಹಚ್ಚಲು ಸೈಬರ್ ಕ್ರೈಂ ತಂಡ ಕಾರ್ಯನಿರ್ವಹಿಸುತ್ತಿದೆ. ಈ ರೀತಿಯ ಬೆದರಿಕೆ ಸಂದೇಶಗಳು ಜನರಲ್ಲಿ ಆತಂಕ ಸೃಷ್ಟಿಸುವ ಉದ್ದೇಶದಿಂದ ಕಳುಹಿಸಲಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ