ಟಾಲಿವುಡ್ ನಟ ರಾಮ್ ಚರಣ್ ಚಿತ್ರೀಕರಣದ ಸಮಯದಲ್ಲಿ ಆಗಿರುವ ಗಾಯದಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ‘ಪೆದ್ದಿ’ ಸಿನಿಮಾದ ಬಿಡುಗಡೆ ಇನ್ನಷ್ಟು ತಡವಾಗುವ ಸಂಭವವಿದೆ.
ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ನಟಿಸಿ, ಬುಚ್ಚಿ ಬಾಬು ಸನಾ ನಿರ್ದೇಶನ ಮಾಡುತ್ತಿರುವ ‘ಪೆದ್ದಿ’ ಸಿನಿಮಾದ ಬಿಡುಗಡೆ ಈಗಾಗಲೇ ಎರಡು ಬಾರಿ ಮುಂದೂಡಲ್ಪಟ್ಟಿದೆ.
‘ಪೆದ್ದಿ’ ಸಿನಿಮಾ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿತ್ತು. ಬಳಿಕ ಮಾರ್ಚ್ನಲ್ಲಿ ದಿನಾಂಕ ನಿಗದಿಯಾಯ್ತು. ಆದರೆ ಮಾರ್ಚ್ನಲ್ಲಿ ಪವನ್ ಅವರ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ ಜಾಗ ಮಾಡಿಕೊಡಲೆಂದು ‘ಪೆದ್ದಿ’ ಸಿನಿಮಾವನ್ನು ಏಪ್ರಿಲ್ 30ಕ್ಕೆ ಮುಂದೂಡಲಾಯ್ತು. ಸಿನಿಮಾದ ಚಿತ್ರೀಕರಣ, ಡಬ್ಬಿಂಗ್ ಸಹ ಮುಗಿದಿತ್ತು. ಆದರೆ ಪ್ಯಾಚಪ್ ವರ್ಕ್ ಚಿತ್ರೀಕರಣ ಮಾಡುವ ಸಮಯದಲ್ಲಿ ರಾಮ್ ಚರಣ್ ಅವರ ಕಣ್ಣಿಗೆ ಪೆಟ್ಟಾಯಿತು. ಇದರಿಂದ ಶೀಘ್ರವೇ ರಾಮ್ ಚರಣ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಇದು ಸಿನಿಮಾ ತಂಡಕ್ಕೆ ಆತಂಕ ತಂದಿದೆ. ಇನ್ನು ಕೆಲವೇ ದೃಶ್ಯಗಳ ಚಿತ್ರೀಕರಣ ಬಾಕಿ ಇದೆಯಾದರೂ ರಾಮ್ ಚರಣ್ ಅವರು ಸದ್ಯಕ್ಕೆ ಚಿತ್ರೀಕರಣ ಮುಂದುವರೆಸುವ ಪರಿಸ್ಥಿತಿಯಲ್ಲಿ ಇಲ್ಲ ಎನ್ನಲಾಗುತ್ತಿದೆ.
ಹೈದರಾಬಾದ್‌ನ ಗಚಿಬೌಲಿ ಸ್ಟೇಡಿಯಂನಲ್ಲಿ ‘ಪೆದ್ದಿ’ ಚಿತ್ರದ ಹೈ-ವೋಲ್ಟೇಜ್ ಆಕ್ಷನ್ ದೃಶ್ಯವೊಂದರ ಚಿತ್ರೀಕರಣ ನಡೆಯುತ್ತಿದ್ದಾಗ ರಾಮ್ ಚರಣ್ ಅವರಿಗೆ ಸಣ್ಣ ಪ್ರಮಾಣದ ಗಾಯವಾಗಿತ್ತು. ಆರಂಭದಲ್ಲಿ ಇದು ಸಾಮಾನ್ಯ ಗಾಯ ಎಂದು ಭಾವಿಸಲಾಗಿತ್ತಾದರೂ, ಅವರ ಎಡಗಣ್ಣಿನ ರೆಪ್ಪೆಯ ಭಾಗಕ್ಕೆ ಪೆಟ್ಟಾಗಿದ್ದರಿಂದ ತಕ್ಷಣವೇ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು.
ರಾಮ್ ಚರಣ್ ಅವರ ತಂದೆ ಚಿರಂಜೀವಿ ಅವರು ಸಹ ಮಗನ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ಧನ್ಯವಾದ ಅರ್ಪಿಸಿ ಟ್ವೀಟ್ ಮಾಡಿದ್ದು, ‘ಡಾ ಸುಧಾಕರ್ ಪ್ರಸಾದ್ ಅವರೇ, ಚರಣ್ ಅವರ ಕಣ್ಣಿಗೆ ನೀವು ಸಮಯಕ್ಕೆ ಸರಿಯಾಗಿ ಮತ್ತು ಅತ್ಯಂತ ನೈಪುಣ್ಯತೆಯಿಂದ ಮಾಡಿದ ಶಸ್ತ್ರಚಿಕಿತ್ಸೆ ನಮಗೆ ದೊಡ್ಡ ಆಶೀರ್ವಾದದಂತಿದೆ. ನಮ್ಮಲ್ಲಿದ್ದ ಆತಂಕವನ್ನು ನಿಮ್ಮ ನಿಖರವಾದ ಚಿಕಿತ್ಸೆ ಮತ್ತು ಕಾಳಜಿ ದೂರ ಮಾಡಿದೆ. ನಿಮ್ಮ ಕಲಾತ್ಮಕ ವೃತ್ತಿಪರತೆಗೆ ನಾವು ಆಭಾರಿಯಾಗಿದ್ದೇವೆ. ಧನ್ಯವಾದಗಳು’ ಎಂದಿದ್ದಾರೆ. ರಾಮ್ ಚರಣ್ ಪತ್ನಿ ಸಹ ವೈದ್ಯರಿಗೆ ಧನ್ಯವಾದ ಹೇಳಿದ್ದಾರೆ.
ಚಿತ್ರದ ಚಿತ್ರೀಕರಣ ಇನ್ನೂ ಬಾಕಿ ಇರುವುದು ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಹೆಚ್ಚಿನ ಸಮಯ ಬೇಕಾಗಿರುವುದು ಈ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ. ಒಂದು ವೇಳೆ ಏಪ್ರಿಲ್‌ನಲ್ಲಿ ಬಿಡುಗಡೆಯಾಗದಿದ್ದರೆ, ಚಿತ್ರವು ಜೂನ್ ಅಥವಾ ಆಗಸ್ಟ್ ನಲ್ಲಿ ತೆರೆಗೆ ಬರಬಹುದು ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಚರಣ್ ಅಭಿಮಾನಿಗಳಲ್ಲಿ ಸ್ವಲ್ಪ ಮಟ್ಟಿನ ನಿರಾಸೆ ಮೂಡಿದೆ.





