– ರಾಘವೇಂದ್ರ ಅಡಿಗ ಎಚ್ಚೆನ್.

ಭಾರತೀಯ ಸಿನಿರಂಗದ ಬಹುನಿರೀಕ್ಷಿತ ರಾಮಾಯಣಸಿನಿಮಾ ಈಗ ಮತ್ತೊಂದು ಹಂತಕ್ಕೆ ಕಾಲಿಟ್ಟಿದ್ದು, ರಾವಣನ ಪಾತ್ರದಲ್ಲಿ ನಟಿಸುತ್ತಿರುವ ಯಶ್ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಮುಂಬೈನಲ್ಲಿ ಅದ್ದೂರಿಯಾಗಿ ನಿರ್ಮಿಸಲಾಗಿರುವ ಮಿಥಿಲಾ ನಗರಸೆಟ್ನಲ್ಲಿ ಯಶ್ ಭಾಗದ ಮಹತ್ವದ ದೃಶ್ಯಗಳ ಚಿತ್ರೀಕರಣ ಆರಂಭವಾಗಿದೆ.

ಸೀತಾ ಸ್ವಯಂವರದ ದೃಶ್ಯಕ್ಕಾಗಿ ನಿರ್ಮಿಸಿರುವ ಈ ಸೆಟ್ ಸಿನಿಮಾದ ದೊಡ್ಡ ಆಕರ್ಷಣೆಯಾಗಿದ್ದು, ಅರಮನೆಗಳು, ಭವ್ಯ ಬಾಲ್ಕನಿಗಳು, ಹೂವಿನ ಅಲಂಕಾರ ಮತ್ತು ವೈಭವದ ರಂಗೋಲಿ ವಿನ್ಯಾಸಗಳ ಮೂಲಕ ಮಿಥಿಲಾ ಸಾಮ್ರಾಜ್ಯವನ್ನು ಮರುಸೃಷ್ಟಿಸಲಾಗಿದೆ. ನೂರಾರು ಜೂನಿಯರ್ ಆರ್ಟಿಸ್ಟ್‌ಗಳನ್ನು ಬಳಸಿಕೊಂಡು ಈ ಸನ್ನಿವೇಶವನ್ನು ಗ್ರ್ಯಾಂಡ್ ಮಟ್ಟದಲ್ಲಿ ಚಿತ್ರೀಕರಿಸಲಾಗುತ್ತಿದೆ.

ಈ ಶೆಡ್ಯೂಲ್‌ನ ಹೈಲೈಟ್ ಎಂದರೆ ರಾವಣನಾಗಿ ಯಶ್ ಅವರ ಪವರ್‌ಫುಲ್ ಎಂಟ್ರಿ. ಸೀತಾ ಸ್ವಯಂವರಕ್ಕೆ ಆಗಮಿಸುವ ರಾವಣ, ಶಿವಧನುಸ್ಸು ಎತ್ತಲು ಯತ್ನಿಸಿ ವಿಫಲವಾಗುವ ದೃಶ್ಯವನ್ನು ಚಿತ್ರತಂಡ ಈಗ ಚಿತ್ರೀಕರಿಸುತ್ತಿದೆ. ಸಭಾಂಗಣಕ್ಕೆ ರಾವಣ ಕಾಲಿಟ್ಟ ಕ್ಷಣವೇ ವಾತಾವರಣವೇ ಬದಲಾಗುವ ರೀತಿಯಲ್ಲಿ ಈ ಸೀನ್ ವಿನ್ಯಾಸ ಮಾಡಲಾಗಿದೆ ಎನ್ನಲಾಗುತ್ತಿದೆ.

ಸೀತೆಯಾಗಿ ನಟಿಸುತ್ತಿರುವ ಸಾಯಿ ಪಲ್ಲವಿ ಶೀಘ್ರದಲ್ಲೇ ಶೂಟಿಂಗ್‌ಗೆ ಸೇರಲಿದ್ದಾರೆ. ಆದರೆ ಈ ಹಂತದ ಚಿತ್ರೀಕರಣದಲ್ಲಿ ರಾಮನ ಪಾತ್ರಧಾರಿ ರಣಬೀರ್ ಕಪೂರ್ ಭಾಗಿಯಾಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದ್ದು, ಮೊದಲ ಭಾಗ 2026ರ ದೀಪಾವಳಿಗೆ ಬಿಡುಗಡೆಯಾಗಲಿದೆ. ಎರಡನೇ ಭಾಗ 2027ರ ದೀಪಾವಳಿಗೆ ರಿಲೀಸ್ ಆಗಲಿದೆ. ರಾವಣನಾಗಿ ಯಶ್, ರಾಮನಾಗಿ ರಣಬೀರ್ ಕಪೂರ್ ಮತ್ತು ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ಭಾರೀ ನಿರೀಕ್ಷೆ ನಿರ್ಮಾಣವಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ