ಇತ್ತೀಚೆಗೆ ʻರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆʼ ಎನ್ನುವ ರಮ್ಯಾ ಅವರ ಪೋಸ್ಟ್ ಕಂಡ ದರ್ಶನ್ ಅಭಿಮಾನಿಗಳು ಅವರಿಗೆ ಕೆಟ್ಟದಾಗಿ ಮೆಸೇಜ್‌ಗಳನ್ನು ಕಳುಹಿಸಿದ್ದರು. ಇಂತಹ ಮೆಸೇಜ್‌ಗಳನ್ನು ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಎಕ್ಸ್‌ಪೋಸ್ ಮಾಡಿದ್ದರು. ಈ ವೇಳೆ ʻರಮ್ಯಾ, ನಿಮ್ಮ ಪರವಾಗಿ ನಾವಿದ್ದೇವೆʼ ಎಂದು ಚಿತ್ರರಂಗದಿಂದ ಹಾಗೂ ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ರಮ್ಯಾ ಧನ್ಯವಾದ ಹೇಳಿದ್ದಾರೆ.ದರ್ಶನ್ ಅಭಿಮಾನಿಗಳು ಹಾಗೂ ನಟಿ ರಮ್ಯಾ ನಡುವಿನ ಸೋಶಿಯಲ್ ಮೀಡಿಯಾ ವಿವಾದ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು. ಅಶ್ಲೀಲ ಸಂದೇಶ ಕಳುಹಿಸಿದವರ ವಿರುದ್ಧ ರಮ್ಯಾ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ರಮ್ಯಾ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಮತ್ತು ಚಿತ್ರರಂಗದಲ್ಲಿ ಬೆಂಬಲ ವ್ಯಕ್ತವಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, “ದ್ವೇಷ ಮತ್ತು ಹತಾಶೆಯಿಂದ ತುಂಬಿರುವ ಜಗತ್ತಿನಲ್ಲಿ, ಪ್ರೀತಿ ಮತ್ತು ಕರುಣೆಯೇ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುತ್ತದೆ. ಆದ್ದರಿಂದ ನನಗೆ ಸ್ವಲ್ಪ ಪ್ರೀತಿಯನ್ನು ತೋರಿಸಲು ಸಮಯ ತೆಗೆದುಕೊಂಡಿದ್ದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಧನ್ಯವಾದಗಳು” ಎಂದು ನಟಿ ರಮ್ಯಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮೆಸೇಜ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.
“ರಮ್ಯಾ ಅವರು ಹೇಳುವುದರಲ್ಲಿ ತಪ್ಪಿಲ್ಲ. ಯಾರೇ ಆಗಲಿ ಹೆಣ್ಣು ಮಕ್ಕಳಿಗೆ ಬೈಬಾರ್ದು. ನಿಜವಾದ ಅಭಿಮಾನಿಗಳು ಹೀಗೆಲ್ಲಾ ಮಾಡಲ್ಲ” ಎಂದು ʻಬಿಗ್ ಬಾಸ್ʼ ವಿನಯ್ ಗೌಡ ಮಾಧ್ಯಮಗಳಿಗೆ ಹೇಳಿದ್ದರು.
ಶಿವಣ್ಣ ದಂಪತಿ ಟ್ವೀಟ್: “ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯ. ಯಾವುದೇ ಮಹಿಳೆಯ ವಿರುದ್ಧವೂ ಆ ರೀತಿ ಮಾತನಾಡುವುದು ಸರಿಯಲ್ಲ. ರಮ್ಯಾ, ನಿಮ್ಮ ನಿಲುವು ಸರಿಯಿದೆ. ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆ” ಎಂದು ನಟ ಶಿವರಾಜ್‌ಕುಮಾರ್ ಹಾಗೂ ಅವರ ಪತ್ನಿ ಗೀತಾ ಟ್ವೀಟ್ ಮಾಡಿ ರಮ್ಯಾಗೆ ಬೆಂಬಲ ಸೂಚಿಸಿದ್ದಾರೆ.
ಪ್ರಥಮ್ ಟ್ವೀಟ್ : “ಎಲ್ಲರೂ ನಟಿ ರಮ್ಯಾ ಪರ ನಿಲ್ಲೋಣʼ ಎಂದು ʻಬಿಗ್ ಬಾಸ್ʼ ಸ್ಪರ್ಧಿ ಹಾಗೂ ನಟ ಪ್ರಥಮ್ ಟ್ವೀಟ್ ಮಾಡಿದ್ದರು. ಹೀಗೆ ಅನೇಕರು ʻನಿಮ್ಮ ಮಾತಿನಲ್ಲಿ ತಪ್ಪಿಲ್ಲ. ನಿಮ್ಮ ಪರ ನಾವಿದ್ದೇವೆ” ಎಂದು ರಮ್ಯಾ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಸಂದೇಶಗಳನ್ನು ಕಳುಹಿಸಿದ್ದಾರೆ. ಸಮಾಜದಲ್ಲಿ ಮಹಿಳೆಯ ವಿರುದ್ಧದ ದೌರ್ಜನ್ಯವನ್ನು ಖಂಡಿಸುವುದರ ಜೊತೆಗೆ, ತಮಗೆ ಬೆಂಬಲ ವ್ಯಕ್ತಪಡಿಸಿದವರಿಗೆ ರಮ್ಯಾ ಅವರು ಕೃತಜ್ಞತೆ ಸೂಚಿಸಿದ್ದಾರೆ.