ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ನಟಿ ರನ್ಯಾರಾವ್ ಗೆ 102.55 ಕೋಟಿ ರೂ ದಂಡ ಪಾವತಿಸುವಂತೆ ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡಿದ್ದ ಹಿನ್ನೆಲೆಯಲ್ಲಿ ಸ್ಯಾಂಡಲ್ವುಡ್ ನಟಿ ರನ್ಯಾರಾವ್ ರನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಡಿಆರ್‌ಐ ಅಧಿಕಾರಿಗಳು ರನ್ಯಾರಾವ್ ಬಳಿ 14.8 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದರು. DRI ತನಿಖೆಯಲ್ಲಿ, ರನ್ಯಾ ರಾವ್ ಸುಮಾರು 15 ದಿನಗಳಲ್ಲಿ 4 ಬಾರಿ ದುಬೈಗೆ ಹೋಗಿ ಚಿನ್ನ ಕಳ್ಳಸಾಗಣೆ ಮಾಡಿದ್ದರು ಎಂದು ಬಹಿರಂಗಗೊಂಡಿತ್ತು.ಇದೀಗ ಡಿಆರ್‌ಐ ಅಧಿಕಾರಿಗಳು ಖುದ್ದು ಜೈಲಿಗೆ ತೆರಳಿ 102.55 ಕೋಟಿ ರೂ. ದಂಡ ಪಾವತಿಸುವಂತೆ ರನ್ಯಾರಾವ್ಗೆ ನೋಟಿಸ್ ಜಾರಿ ಮಾಡಿದ್ದಾರೆ. ಜತೆಗೆ, ಪ್ರಕರಣದ ಇತರೆ ಮೂವರು ಆರೋಪಿಗಳಿಗೂ ದಂಡ ವಿಧಿಸಿ, ನೋಟಿಸ್ ನೀಡಿದ್ದಾರೆ. ಆರೋಪಿಗಳು ದಂಡ ಪಾವತಿಸದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಹ ಅವಕಾಶವಿದೆ. ಡಿಆರ್‌ಐ ಅಧಿಕಾರಿಗಳು ನಿಯಮಾನುಸಾರ ಕಳ್ಳ ಸಾಗಣೆ ವಸ್ತುಗಳನ್ನು 6 ತಿಂಗಳಲ್ಲಿ ವಸೂಲಿ ಮಾಡಬೇಕಿದೆ.
ನಟಿ ರನ್ಯಾ ರಾವ್ ಅವರಿಗೆ ಕಾಫಿಫೋಸಾ ಅಡಿಯಲ್ಲಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಜಾಮೀನು ಪಡೆಯುವ ಅವಕಾಶವೇ ಇಲ್ಲದಂತಾಗಿದೆ. ಇನ್ನು ರನ್ಯಾ ವಿರುದ್ಧ ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆಯನ್ನು (COFEPOSA) ಜಾರಿ ಮಾಡಲಾಗಿದೆ.
ಪ್ರಕರಣದ ಎರಡನೇ ಆರೋಪಿ ತರುಣ್ ಕೊಂಡುರು ರಾಜು, 67.6 ಕೆ.ಜಿ ಚಿನ್ನ ಕಳ್ಳಸಾಗಣೆ ಮಾಡಿರುವುದು ಸಾಬೀತಾಗಿದ್ದು, ಆತನಿಗೆ 62 ಕೋಟಿ ರೂ. ದಂಡ ವಿಧಿಸಲಾಗಿದೆ. ಇತರೆ ಆರೋಪಿಗಳಾದ ಸಾಹಿಲ್ ಜೈನ್ ಮತ್ತು ಭರತ್ ಜೈನ್ ತಲಾ 63.61 ಕೆ.ಜಿ. ಚಿನ್ನ ಕಳ್ಳ ಸಾಗಣೆ ಮಾಡಿರುವುದು ದೃಢಪಟ್ಟಿದ್ದು ಅವರಿಬ್ಬರಿಗೆ ತಲಾ 53 ಕೋಟಿ ರೂ. ದಂಡ ವಿಧಿಸಲಾಗಿದೆ.