ಬೆಂಗಳೂರು: ಕನ್ನಡ ಭಾಷೆ, ಸಾಹಿತ್ಯ, ಕಲೆ, ಜಾನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ ಹುಟ್ಟಿದ ‘ಕನ್ನಡ ಸಾಹಿತ್ಯ ಪರಿಷತ್ತು’ ಇಂದು (ಮೇ 5) “111ನೆಯ ಸಂಸ್ಥಾಪನಾ ದಿನ”ವನ್ನು ಆಚರಿಸಿ ಕೊಳ್ಳುತ್ತಿದೆ. ಏಳು ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎನ್ನಿಸಿ ಕೊಂಡಿರುವ ಇದು ಕನ್ನಡಿಗರೆಲ್ಲರ ಮಾತೃ ಸಂಸ್ಥೆ ಕೂಡ ಹೌದು,. ಮಹಾತ್ಮ ಗಾಂಧೀಜಿಯವರಿಂದಲೇ ರಾಜರ್ಷಿ ಎನ್ನಿಸಿ ಕೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪೋಷಣೆ ಮತ್ತು ಸರ್.ಎಂ.ವಿಶ್ವೇಶ್ವರಯ್ಯ ಮತ್ತು ಸರ್.ಮಿರ್ಜಾ ಇಸ್ಮಾಯಿಲ್ ಅವರ ಬೆಂಬಲದಿಂದ ರೂಪುಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರೆಲ್ಲರ ಭವಿಷ್ಯದ ದಿಕ್ಯೂಚಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ‘ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ’ ಏರ್ಪಾಟಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 111ನೆಯ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿದ್ದೇ ಮೊದಲನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ. ಅಲ್ಲಿಂದ ಮುಂದೆ ನಿರಂತರವಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸುತ್ತಾ ಬಂದಿದ್ದು ಅವುಗಳು ಕನ್ನಡ ನಾಡು-ನುಡಿಗಳ ಕುರಿತು ಚಿಂತನೆ ನಡೆಸುವ ಮಹತ್ವದ ಕೊಡುಗೆ ಜೊತೆಗೆ ಕನ್ನಡಿಗರು ಒಂದಾಗಿ ಸೇರುವ ತಾಣಗಳಾಗಿ ಶ್ರೀಮಂತ ಕೊಡುಗೆಗಳನ್ನು ನೀಡಿವೆ. ಕರ್ನಾಟಕ ರಾಜ್ಯದ ಏಕೀಕರಣ ಮತ್ತು ನಾಮಕರಣಕ್ಕೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನೀಡಿದ ಕೊಡುಗೆ ಅಪಾರ. ಹೀಗೆ ಹಲವು ಮಹತ್ವದ ಕೊಡುಗೆಗಳನ್ನು ನೀಡಿದ ಕನ್ನಡ ಸಾಹಿತ್ಯ ಪರಿಷತ್ತು, 110 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿ ಕೊಂಡು ಬಂದಿರುವುದೇ ಬಹು ದೊಡ್ಡ ಹೆಗ್ಗಳಿಕೆ ಎಂದು ಹೇಳಿದ ನಾಡೋಜ ಡಾ.ಮಹೇಶ ಜೋಶಿಯವರು ಮಾಸ್ತಿಯಂತಹ ಹಿರಿಯರು ಇದನ್ನು ಸರಸ್ವತಿ ಮಂದಿರವೆಂದು ಭಾವಿಸಿ ಬರಿಗಾಲಿನಲ್ಲಿ ಬರುತ್ತಿದ್ದರು. ಈ ನೆಲಕ್ಕೆ ಇಂತಹ ಮಹನೀಯರು ನಡೆದಾಡಿದ ಸ್ಪರ್ಶವಿದೆ. ಅವರ ಮಾರ್ಗದಲ್ಲಿಯೇ ಪರಿಷತ್ತು ಕನ್ನಡದ ಏಳಿಗೆಗೆ ಶ್ರಮಿಸಲಿದೆ ಎಂದು ನಾಡೋಜ ಡಾ.ಮಹೇಶ ಜೋಶಿ ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ಸರಸ್ವತಿ ಸಮ್ಮಾನ್ ಪುರಸ್ಕೃತರು ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳೂ ಆದ ಡಾ.ಎಂ.ವೀರಪ್ಪ ಮೊಯ್ಲಿಯವರು ಮಾತನಾಡಿ ಗೊವಿಂದ ಪೈಯವರು ಕನ್ನಡ ಬೆಳೆಯಲು ಹೊಸ ಶಬ್ದಗಳು ನಿರಂತರವಾಗಿ ಸೇರ ಬೇಕು ಎಂದಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ನಿಘಂಟಿನ ಮೂಲಕ ಆ ಕೆಲಸವನ್ನು ಮಾಡುತ್ತಾ ಬಂದಿದೆ. ಅದು ಮುಂದುವರೆಯ ಬೇಕು, ಕನ್ನಡ ಸಾಹಿತ್ಯ ಪರಿಷತ್ತು ಪ್ರವಾಸಿ ತಾಣವಾಗ ಬೇಕು, ಇಂದು ಸೃಜನಶೀಲತೆ ವಿಪುಲವಾಗಿದ್ದರೂ ಕನ್ನಡದಲ್ಲಿ ಸಂಶೋಧನೆ ಹಿಂದೆ ಬಿದ್ದಿದೆ. ತಾಂತ್ರಿಕ ಪರೀಕ್ಷೆಗಳೂ ಕನ್ನಡದಲ್ಲಿ ನಡೆಯುವ ಅಗತ್ಯವಿದೆ ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಗಮನ ಹರಿಸ ಬೇಕು ಎಂದರು.
ಉದಯವಾಣಿ ಸಂಪಾದಕರಾದ ರವಿಶಂಕರ್.ಕೆ.ಭಟ್ ಅವರು ಮಾತನಾಡಿ ಕನ್ನಡ ಮನೆ-ಶಾಲೆಗಳ ಬುನಾದಿಯಲ್ಲಿ ಬೆಳೆಯ ಬೇಕು, ಕನ್ನಡ ಮೊದಲ ಆದ್ಯತೆಯಾಗುವ ಕಡೆಗೆ ಪ್ರಯತ್ನಗಳು ಸಾಗಬೇಕು, ನಾವು ಗೋಪುರದ ಕಡೆ ಗಮನ ಹರಿಸಿ ಬುನಾದಿಯನ್ನು ನಿರ್ಲಿಕ್ಷಿಸಬಾರದು. ಇಂತಹ ಪ್ರಯತ್ನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮಾತ್ರ ಸಾಧ್ಯ ಎಂದರು. ‘ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸ ಮತ್ತು ಮಹತ್ವ’ದ ಕುರಿತು ವಿಶೇಷ ಉಪನ್ಯಾಸ ನೀಡಿದ ಹಿರಿಯ ಬರಹಗಾರರಾದ ಬೇಲೂರು ರಾಮಮೂರ್ತಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸವನ್ನು ಸ್ಮರಿಸಿ ಕೊಂಡು ಹಿರಿಯರು ತಮ್ಮ ತನುಮನಗಳನ್ನು ನೀಡಿ ಈ ಸಂಸ್ಥೆಯನ್ನು ಕಟ್ಟಿದರು. ಸಂಪನ್ಮೂಲವನ್ನು ತಾವೇ ಭರಿಸಿದರು. ನಾಡನ್ನು ಒಗ್ಗೂಡಿಸುವಲ್ಲಿ, ಭಾಷೆಯನ್ನು ಬೆಳೆಸುವಲ್ಲಿ ಈ ಸಂಸ್ಥೆಯ ಪಾತ್ರ ಹಿರಿದಾಗಿದ್ದು ಎಂದು ಪ್ರಶಂಸಿಸಿದರು.