ಯುದ್ಧ ಇಂದು ಮುಗಿಯದೇ ಇರಬಹುದು. ಆದರೆ ನಮ್ಮ ದೇಶದ ಶಕ್ತಿ ಪ್ರಪಂಚಕ್ಕೆ ಗೊತ್ತಾಗಿದೆ. ಶಾಂತಿ ನೆಲೆಸುವವರೆಗೂ ಇದು ನಿಲ್ಲಬಾರದು ಎಂದು ಬಾಲಿವುಡ್ ನಟ ಸಂಜಯ್ ದತ್ ಭಾರತೀಯ ಸೇನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಪಾಕ್ ಮಧ್ಯೆ ನಡೆಯುತ್ತಿರುವ ಸಂಘರ್ಷದ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮುನ್ನಾ ಬಾಯ್, ಆಪರೇಷನ್ ಸಿಂಧೂರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಮ್ಮ ಜನರ ಮೇಲಿನ ನಿರಂತರ ದಾಳಿಗಳನ್ನು ಇನ್ನು ಮುಂದೆ ಸಹಿಸುವುದಿಲ್ಲ. ನಾವು ಹಿಂಜರಿಯದೇ ಪೂರ್ಣ ಬಲದಿಂದ ಮತ್ತು ಅಚಲ ದೃಢಸಂಕಲ್ಪದಿಂದ ಪ್ರತಿಕ್ರಿಯಿಸುತ್ತೇವೆ. ನಮ್ಮ ಯುದ್ಧ ಜನರು ಅಥವಾ ರಾಷ್ಟ್ರದ ವಿರುದ್ಧವಲ್ಲ. ಭಯ, ಅವ್ಯವಸ್ಥೆ ಮತ್ತು ವಿನಾಶದ ವಿರುದ್ಧ ಎಂಬುದನ್ನು ಜಗತ್ತು ಅರ್ಥಮಾಡಿಕೊಳ್ಳಬೇಕು. ಈ ಬಾರಿ ಯಾವುದೇ ಕಾರಣಕ್ಕೂ ನಾವು ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.
ಭಯೋತ್ಪಾದಕರು ಹಿಂಸಾಚಾರದ ಪರದೆಯ ಹಿಂದೆ ಅಡಗಿರುವ ಹೇಡಿಗಳು. ಅವರು ನೆರಳಿನ ಹಿಂದೆ ನಿಂತು ದಾಳಿ ಮಾಡುತ್ತಾರೆ. ಆದರೆ ನಾವು ತಲೆಬಾಗದ ರಾಷ್ಟ್ರ ಎಂದು ಅವರಿಗೆ ಗೊತ್ತಾಗಬೇಕು. ಅವರು ನಮ್ಮನ್ನು ಬೀಳಿಸಲು ಪ್ರಯತ್ನಿಸಿದಾಗಲೆಲ್ಲಾ ನಾವು ಮತ್ತಷ್ಟು ಬಲಿಷ್ಠರಾಗುತ್ತೇವೆ. ನಮ್ಮ ಏಕತೆ, ನಮ್ಮ ಚೈತನ್ಯ ಮತ್ತು ಹೋರಾಡುವ ಇಚ್ಛಾಶಕ್ತಿ ಅವರ ದ್ವೇಷಕ್ಕಿಂತ ಬಹಳ ದೊಡ್ಡದು ಎಂದು ತಿಳಿಸಿದ್ದಾರೆ.
ನಮ್ಮ ಯೋಧರು ಮುಂಚೂಣಿಯಲ್ಲಿ ನಿಂತು, ನಿರ್ಭೀತರಾಗಿ ಪ್ರತಿಯೊಂದು ಭಯೋತ್ಪಾದಕ ಕೃತ್ಯಕ್ಕೂ ಧೈರ್ಯದಿಂದ ಉತ್ತರ ನೀಡುತ್ತಿದ್ದಾರೆ. ಅವರು ಕೇವಲ ಗಡಿಗಳನ್ನು ಮಾತ್ರ ರಕ್ಷಿಸುತ್ತಿಲ್ಲ. ಅವರು ಪ್ರತಿ ಮಗುವಿನ ಕನಸು, ಪ್ರತಿ ಕುಟುಂಬದ ಶಾಂತಿ ಮತ್ತು ನಮ್ಮ ರಾಷ್ಟ್ರವನ್ನು ರಕ್ಷಿಸುತ್ತಿದ್ದಾರೆ. ಅವರು ನಿಜವಾದ ವೀರರು. ನಮ್ಮ ವೀರರಿಗೆ ನನ್ನ ಸಲ್ಯೂಟ್ ಎಂದಿದ್ದಾರೆ.
ಇದು ಕೇವಲ ಸೈನಿಕರ ಹೋರಾಟವಲ್ಲ, ಇದು ನಮ್ಮ ಹೋರಾಟ. ನಾಗರಿಕರಾಗಿ ನಾವು ಒಟ್ಟಾಗಿ ನಿಲ್ಲಬೇಕು. ಈ ಯುದ್ಧ ಇಂದು ಕೊನೆಗೊಳ್ಳದಿರಬಹುದು. ಆದರೆ ನಮ್ಮ ಶಕ್ತಿ, ನಮ್ಮ ದೃಢಸಂಕಲ್ಪ ಮತ್ತು ನಮ್ಮ ಏಕತೆ ಶಾಶ್ವತ. ಅಗತ್ಯವಿದ್ದಲ್ಲಿ ನಾವು ಸಾಧ್ಯವಿರುವ ಎಲ್ಲಾ ರೀತಿಯ ಸೇವೆ ಸಲ್ಲಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.