ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷ ತಿಳಿಯಾಗಿದೆ ಎನ್ನುವ ಸಂದರ್ಭದಲ್ಲಿಯೇ ಪಾಕಿಸ್ತಾನವು ತನ್ನ ನರಿ ಬುದ್ಧಿ ಪ್ರದರ್ಶಿಸಿದೆ. ಕದನ ವಿರಾಮವನ್ನು ಪಾಕಿಸ್ತಾನವು ಮತ್ತೆ ಶನಿವಾರ ರಾತ್ರಿ ಉಲ್ಲಂಘನೆ ಮಾಡಿತ್ತು. ಇದಕ್ಕೆ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಇದರ ನಡುವೆ ಕೆಲವು ಸೆಲೆಬ್ರಿಟಿಗಳು ಕೊಡುತ್ತಿರುವ ಹೇಳಿಕೆ ಹಾಗೂ ಟ್ವೀಟ್‌ಗಳು ಭಾರೀ ಚರ್ಚೆಗೆ ಕಾರಣವಾಗಿದೆ. ಅದರಲ್ಲಿ ನಟ ಪ್ರಕಾಶ್ ರಾಜ್ ಮಾಡಿರುವ ಟ್ವೀಟ್ ಸಹ ಪರ - ವಿರೋಧ ಚರ್ಚೆಗೆ ಕಾರಣವಾಗಿದೆ. ನಟ ಪ್ರಕಾಶ್ ರಾಜ್ ಅವರು ಭಾರತ ಹಾಗೂ ಪಾಕ್‌ನ ನಡುವೆ ಎದುರಾಗಿರುವ ಸಂಘರ್ಷಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಅವರು ಮಾಡಿರುವ ಪ್ರಶ್ನೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.ನಟ ಪ್ರಕಾಶ್‌ರಾಜ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಆಪರೇಷನ್ ಸಿಂಧೂರ ನಂತರ ಟ್ವೀಟ್‌ವೊಂದನ್ನು ಮಾಡಿದ್ದು. ಅದರಲ್ಲಿ ಅಮೆರಿಕದ ನಿಲುವನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ಭಾರತ ಹಾಗೂ ಪಾಕಿಸ್ತಾನದ ನಡುವಿನ ಕದನ ವಿರಾಮದ ವಿಚಾರದಲ್ಲಿ ಅಮೆರಿಕದ ನಿಲುವಿನ ಬಗ್ಗೆ ಭಾರೀ ವ್ಯಂಗ್ಯವಾಡಿದ್ದಾರೆ. ಕದನ ವಿರಾಮ ವಿಚಾರದಲ್ಲಿ ಅಮೆರಿಕ ದ್ವಂದ್ವ ನಿಲುವು ಹೊಂದಿದೆ ಎಂದು ಅವರು ಟೀಕಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನದ ನಡುವೆ ಏಪ್ರಿಲ್ 22ರಿಂದಲೂ ಸಂಘರ್ಷ ಹೆಚ್ಚಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮದಲ್ಲಿ ಉಗ್ರರ ದಾಳಿಗೆ 26 ಜನ ಮೃತಪಟ್ಟಿದ್ದರು. ಉಗ್ರರ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂಬ ಆರೋಪವನ್ನು ಭಾರತವು ಮಾಡಿತ್ತು. ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ಅಡಗುತಾಣಗಳ ಮೇಲೆ ಏರ್‌ಸ್ಟ್ರೈಕ್ ಮಾಡಿತ್ತು. ಇದರಲ್ಲಿ ಹಲವು ಉಗ್ರರು ಮೃತಪಟ್ಟಿದ್ದರು. ಈ ಕಾರ್ಯಾಚರಣೆಗೆ ಭಾರತೀಯ ಸೇನೆಯು ಆಪರೇಷನ್ ಸಿಂಧೂರ ಹೆಸರನ್ನು ಕೊಟ್ಟಿತ್ತು. ಆದರೆ, ಇಷ್ಟೆಲ್ಲಾ ಬೆಳವಣಿಗೆಗಳು ಆದರೂ ಕೆಲವು ಸೆಲೆಬ್ರಿಟಿಗಳು ರಿಯಾಕ್ಟ್ ಮಾಡಿರಲಿಲ್ಲ. ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಗ್ಗೆ ಮಾತನಾಡದೆ, ಇದೀಗ ಕದನ ವಿರಾಮದ ಬಗ್ಗೆ ಕೆಲವು ನಟ, ನಟಿಯರು ರಿಯಾಕ್ಟ್ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಈ ರೀತಿ ಚರ್ಚೆಯಾಗುತ್ತಿರುವಾಗಲೇ ನಟ ಪ್ರಕಾಶ್ ರಾಜ್ ಅವರು ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿದ್ದಾರೆ. ಅಮೆರಿಕ ಪಾಕಿಸ್ತಾನದ ಒಳಗೆ ನುಗ್ಗಿ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನನ್ನು ಕೊಂದಿತ್ತು. ಈ ಮೂಲಕ ಅಮೆರಿಕ ನ್ಯಾಯ ದೊರಕಿಸಿಕೊಂಡಿತ್ತು. ಆದರೆ, ಭಾರತ ಈ ರೀತಿ ಮಾಡಲು ಹೋದಾಗ ಕದನ ವಿರಾಮ ಘೋಷಿಸಲಾಯಿತು ಎಂದು ಹೇಳಿದೆ ಅಂತ ಟ್ವೀಟ್ ಮಾಡಿದ್ದಾರೆ.ಮಲಿಕ್ (ಮಾಲೀಕ) ಡೊನಾಲ್ಡ್ ಟ್ರಂಪ್ ನಮ್ಮ ಸುಪ್ರೀಂ ನಾಯಕ ಮತ್ತು ಪಾಕಿಸ್ತಾನದ ಭಯೋತ್ಪಾದಕ ನಾಯಕ ಇಬ್ಬರಿಗೂ 'ಕಾಮನ್ ಸೆನ್ಸ್' ಅಥವಾ 'ಗ್ರೇಟ್ ಇಂಟೆಲಿಜೆನ್ಸ್' ಇಲ್ಲ ಎಂದು ಹೇಳಬೇಕಾಯಿತು.. 😂😂😂 ಚಲೋ ಅಬ್ ಸಬ್ ಚಂಗಾ ಹೈ #justasking ಅಂತ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಮಾಡಿರುವ ಟ್ವೀಟ್ ಅನ್ನು ಸಹ ಅವರು ಶೇರ್ ಮಾಡಿಕೊಂಡಿದ್ದರು.