ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ಕೆಂಡದ ಸೆರಗು
ನಿರ್ದೇಶನ: ರಾಕಿ ಸೋಮ್ಲಿ
ನಿರ್ಮಾಣ: ಕೆ.ಕೊಟ್ರೇಶ್ ಗೌಡ
ತಾರಾಗಣ: ಮಾಲಾಶ್ರೀ,  ಭೂಮಿ ಶೆಟ್ಟಿ,  ಸಿಂಧು ಲೋಕನಾಥ್,  ಯಶ್ ಶೆಟ್ಟಿ,  ವರ್ಧನ್, ಪ್ರತಿಮಾ,  ಶೋಭಿತಾ,  ಹರೀಶ್ ಅರಸು ಮುಂತಾದವರು
ರೇಟಿಂಗ್: 3/5

ರಾಕಿ ಸೋಮ್ಲಿ ನಿರ್ದೇಶಿಸಿರುವ ಕೆಂಡದ ಸೆರಗು ಚಿತ್ರವು ಈ ವಾರ (ಏಪ್ರಿಲ್ 17) ತೆರೆಗೆ ಬಂದಿದೆ. ಸಾಮಾಜಿಕ ಸಂದೇಶದೊಂದಿಗೆ ಕ್ರೈಂ ತನಿಖೆಯ ಅಂಶವನ್ನೂ ಒಳಗೊಂಡಿರುವ ವಿಭಿನ್ನ ಕಥೆ ಇದಾಗಿದೆ. ಶ್ರೀ ಮುತ್ತು ಟಾಕೀಸ್ ಬ್ಯಾನರ್‌ನಲ್ಲಿ ಕೋಟ್ರೆಶ್ ಗೌಡ ನಿರ್ಮಿಸಿರುವ ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್ ಆಕ್ಷನ್ ಕ್ವೀನ್ ಮಾಲಾಶ್ರೀ ಮತ್ತು ಭೂಮಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಸಾಹಿತಿ, ಪತ್ರಕರ್ತರಾದ ಅಗ್ನಿ ಶ್ರೀಧರ್ ಅವರ ಕಾದಂಬರಿ ಆಧಾರಿತ ಚಿತ್ರ ಇದಾಗಿದ್ದು, ಕುಸ್ತಿ ಕ್ರೀಡೆಯ ಹಿನ್ನೆಲೆಯಲ್ಲಿ ಮಹಿಳಾ ಸಬಲೀಕರಣದ ಕಥೆಯನ್ನು ಒಳಗೊಂಡಿದೆ. ಹಾಗಿದ್ದರೆ ಚಿತ್ರ ಹೇಗಿದೆ? ಪ್ಲಸ್, ಮೈನಸ್ ಅಂಶಗಳೇನು ಎಂಬುದನ್ನು ನೋಡಲು ಮುಂದೆ ಓದಿ..

ಗಂಡನನ್ನು ಕಳೆದುಕೊಂಡ ವಿಧವೆ ನೇತ್ರಾಳನ್ನು ಸಮಾಜ ಬೇರೆಯದೇ ದೃಷ್ಟಿಯಲ್ಲಿ ಕಾಣುತ್ತದೆ. ಅವಳಿಗೊಬ್ಬ ಹೆಣ್ಣು ಮಗುವಿದ್ದು, ಅವಳ ಬೆಳವಣಿಗೆಗಾಗಿ ನೇತ್ರಾ ಎಲ್ಲವನ್ನೂ ಸಹಿಸಿಕೊಳ್ಳುತ್ತಾಳೆ. ನೇತ್ರಾ ಊರವರ ಪಾಲಿಗೆ ವೇಷ್ಯೆಯಾಗಿದ್ದರೆ, ಅವಳ ಮಗಳು ಪವಿತ್ರಾ ವೇಶ್ಯಾ ಪುತ್ರಿಯಾಗಿರುತ್ತಾಳೆ. ಆದರೆ ಪವಿತ್ರಾ ತಾನು ಊರು ತೊರೆದು ಪಟ್ಟಣ ಸೇರುತ್ತಾಳೆ… ಇತ್ತ ಇನ್ನೊಬ್ಬ ಪುಟ್ಟ ಹುಡುಗಿ ಮಲೆನಾಡಿನಿಂದ ಬೆಂಗಳೂರಿಗೆ ಬಂದು ಇಲ್ಲಿನ ಓರ್ವ ವಂಚಕನ ಪ್ರೀತಿಯ ಬಲೆಯಲ್ಲಿ ಬಿದ್ದು ಮಾದಕ ವ್ಯಸನದ ಪ್ರಪಂಚಕ್ಕೆ ನೂಕಲ್ಪಡುತ್ತಾಳೆ. ಈ ಇಬ್ಬರೂ ಹೆಣ್ಣುಮಕ್ಕಳು ತಮ್ಮ ಬಾಳಿನಲ್ಲಿ ಎದುರಾದ ಕಷ್ಟವನ್ನು ಹೇಗೆ ಎದುರಿಸಿದರು? ಕಡೆಗೆ ಅಂತಿಮವಾಗಿ ಅವರು ತಾವು ಸಿಲುಕಿದ್ದ ಸುಳಿಯಿಂದ ತಪ್ಪಿಸಿಕೊಂಡು ಪಾರಾದರೆ? ಬದುಕು ಸುಂದರವಾಯಿತೆ? ಕುತೂಹಲವಿದ್ದರೆ ಸಿನಿಮಾ ನೋಡಿ.

unnamed

ನಿರ್ದೇಶಕರು ಉತ್ತಮ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಮಕಾಲೀನ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯು ಮಹಿಳೆಯರ ಘನತೆ ಮತ್ತು ಇಂದಿನ ಸಮಾಜದಲ್ಲಿ ಯುವತಿಯರು ಎದುರಿಸುತ್ತಿರುವ ಅಸುರಕ್ಷಿತತೆಯನ್ನು ಎತ್ತಿ ತೋರಿಸುತ್ತದೆ. ಆದರೆ ಚಿತ್ರಕಥೆಯಲ್ಲಿ ಮತ್ತಷ್ಟು ಬಿಗಿ ಇರಬೇಕಿತ್ತು. ಚಿತ್ರದ ಮೊದಲಾರ್ಧ ನಿಧಾನಗತಿಯಲ್ಲಿ ಸಾಗಿದರೆ, ದ್ವಿತೀಯಾರ್ಧ ವೇಗ ಪಡೆದುಕೊಂಡಿದೆ. ಕಥೆಯಲ್ಲಿ ಅಲ್ಲಲ್ಲಿ ಟ್ವಿಸ್ಟ್ ಇದ್ದರೂ ಕೆಲವೊಮ್ಮೆ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ. ದೇಸೀ ಕ್ರೀಡೆಯಾದ ಕುಸ್ತಿಯನ್ನು ಅದರಲ್ಲಿಯೂ ಮಹಿಳಾ ಕುಸ್ತಿಯನ್ನು ಮತ್ತಷ್ಟು ಉತ್ತಮ ಗುಣಮಟ್ಟದಲ್ಲಿ ತೋರಿಸುವ ಅವಕಾಶವಿತ್ತು. ತಪ್ಪು ವ್ಯಕ್ತಿಯನ್ನು ನಂಬುವ ಯುವತಿಯೊಬ್ಬಳ ನಿರ್ಧಾರವು ಆಕೆಯ ಜೀವನವನ್ನು ಹೇಗೆ ಬದಲಾಯಿಸುತ್ತದೆ ಮತ್ತು ಆಕೆಯನ್ನು ಹೇಗೆ ಶೋಷಣೆಯ ಜಾಲಕ್ಕೆ ಸಿಲುಕಿಸುತ್ತದೆ ಎಂಬುದನ್ನು ನಿರ್ದೇಶಕರು ಹೇಳಿದ್ದಾರೆ. ಲವ್ ಜಿಹಾದ್ ಸಹ ಇಲ್ಲಿ ಇಣುಕಿದೆ. ಇಷ್ಟರ ಮಟ್ಟಿಗೆ ಇಂದಿನ ಸಮಾಜದ ವಾಸ್ತವವನ್ನು ಈ ಸಿನಿಮಾ ಸಹಜವಾಗಿ ತೋರಿಸಿದೆ.

ಪಾತ್ರಗಳ ವಿಷಯಕ್ಕೆ ಬಂದರೆ, ಇಲ್ಲಿ ಮಾಲಾಶ್ರೀಯವರಿಗೆ ಅವರ ಪಾತ್ರ ಪೋಷಣೆಗಾಗಿ ಮಾತ್ರ ಒಂದು ಫೈಟ್ ಇಡಲಾಗಿದ್ದು, ಅವರು ಪೊಲೀಸ್ ಅಧಿಕಾರಿಯಾಗಿದ್ದರೂ ಈ ಹಿಂದಿನ ಚಿತ್ರಗಳಂತೆ ಖಡಕ್ ಅಧಿಕಾರಿಯ ಪಾತ್ರ ಅವರದಲ್ಲ. ಇನ್ನು ಭೂಮಿ ಶೆಟ್ಟಿಯವರ ಪಾತ್ರಕ್ಕೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಸಿಕ್ಕಿದ್ದು, ಅವರು ಕುಸ್ತಿಪಟುವಾಗಿ, ವೇಶ್ಯೆಯ ಮಗಳಾಗಿ ನಟನೆಯಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ಶೋಭಿತಾ ಸಿನಿಮಾದ ಹೈಲೈಟ್, ಯಶ್ ಶೆಟ್ಟಿ, ವರ್ಧನ್, ಬಲರಾಜ್ ವಾಡಿ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಪ್ರತಿಮಾ ಕೊಟ್ಟ ಪಾತ್ರವನ್ನು ನಿರ್ವಹಿಸಿದ್ದಾರೆ. ಸಿಂಧು ಲೋಕನಾಥ್ ಒಂದು ಸೀನ್ಗೆ ಸೀಮಿತವಾಗಿದ್ದರೆ, ಹರೀಶ್ ಅರಸು ಯುವತಿಯರನ್ನು ವಂಚಿಸುವ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರಕ್ಕೂ ಚಿತ್ರದಲ್ಲಿ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಸಿಕ್ಕಿದ್ದು, ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ.

ವೀರೇಶ್ ಕಂಬಳಿ ಸಂಗೀತ ಸಾಮಾನ್ಯವಾಗಿದ್ದು, ಹಿನ್ನೆಲೆ ಸಂಗೀತವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳುವ ಅವಕಾಶವಿತ್ತು. ಛಾಯಾಗ್ರಹಣ ಸಹ ಸೊಗಸಾಗಿ ಬಂದಿದೆ. ಇನ್ನು ಮಹಿಳಾ ಪ್ರಧಾನ, ಕಾದಂಬರಿ ಆಧಾರಿತ ಸಿನಿಮಾ ನೋಡಬಯಸುವವರಿಗೆ ಈ ವಾರ ತೆರೆಗೆ ಬಂದ “ಕೆಂಡದ ಸೆರಗು” ಒಂದು ಒಳ್ಳೆಯ ಆಯ್ಕೆ ಆಗಬಹುದು.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ