- ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಚಿತ್ರರಂಗದ ಹಿರಿಯ ನಟಿ ಶೈಲಜಾ ಶ್ರೀಶೈಲನ್ ಅವರು ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ವೈಯ್ಯಾಲಿಕಾವಲ್ ನಿವಾಸದಲ್ಲಿ ಗುರುವಾರ ಮಧ್ಯಾಹ್ನ ನಿಧನರಾಗಿದ್ದಾರೆ. ‘ಎ’, ‘ಪುಟ್ಟ ಹೆಂಡ್ತಿ’, ‘ಉಪ್ಪಿ 2’ ಸೇರಿದಂತೆ ನೂರಾರು ಸಿನಿಮಾಗಳು ಹಾಗೂ ‘ಮುಕ್ತ’, ‘ಮಾಯಾಮೃಗ’ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ ಅವರ ಅಗಲಿಕೆ ಸ್ಯಾಂಡಲ್‌ವುಡ್‌ಗೆ ಭರಿಸಲಾಗದ ನಷ್ಟವಾಗಿದೆ.
ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ವೈಯ್ಯಾಲಿಕಾವಲ್‌ನ ತಮ್ಮ ನಿವಾಸದಲ್ಲಿ ಶೈಲಜಾ ಶ್ರೀಶೈಲನ್ ಕೊನೆಯುಸಿರೆಳೆದರು. ಹಿರಿಯ ನಟ ಶ್ರೀಶೈಲನ್ ಅವರ ಪತ್ನಿಯಾಗಿದ್ದ ಅವರು ಪುತ್ರ ಶ್ರೀಕಾಂತ್ ಹಾಗೂ ಪುತ್ರಿ ಶ್ರೀವಾಣಿ ಅವರನ್ನು ಅಗಲಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹಲವು ದಶಕಗಳ ಕಾಲ ಸಕ್ರಿಯರಾಗಿದ್ದ ಶೈಲಜಾ ಶ್ರೀಶೈಲನ್, ‘ಎ’, ‘ಪುಟ್ಟ ಹೆಂಡ್ತಿ’, ‘ಗೃಹಪ್ರವೇಶ’, ‘ಬಾರೆ ನನ್ನ ಮುದ್ದಿನ ರಾಣಿ’, ‘ಅನಂತನ ಅವಾಂತರ’, ‘ಉಪ್ಪಿ 2’ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರು. ವಿಶೇಷವಾಗಿ ನಟ ಉಪೇಂದ್ರ ಅಭಿನಯದ ಅನೇಕ ಸಿನಿಮಾಗಳಲ್ಲಿ ತಾಯಿ ಸೇರಿದಂತೆ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಮೂಲಕ ವಿಶಿಷ್ಟ ಗುರುತನ್ನು ನಿರ್ಮಿಸಿಕೊಂಡಿದ್ದರು.
ಬೆಳ್ಳಿತೆರೆಯ ಜೊತೆಗೆ ಕಿರುತೆರೆಯಲ್ಲೂ ತಮ್ಮದೇ ಛಾಪು ಮೂಡಿಸಿದ್ದ ಅವರು, ‘ಮುಕ್ತ’ ಮತ್ತು ‘ಮಾಯಾಮೃಗ’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು.
ಶೈಲಜಾ ಶ್ರೀಶೈಲನ್ ಅವರ ಅಂತ್ಯಸಂಸ್ಕಾರವನ್ನು ಬೆಂಗಳೂರಿನ ಶ್ರೀರಾಂಪುರ ವಿದ್ಯುತ್ ಚಿತಾಗಾರದಲ್ಲಿ ನೆರವೇರಿಸಲಾಗಿದ್ದು, ಚಿತ್ರರಂಗದ ಕಲಾವಿದರು, ಅಭಿಮಾನಿಗಳು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.





