- ರಾಘವೇಂದ್ರ ಅಡಿಗ ಎಚ್ಚೆನ್.
ನಟ ದರ್ಶನ್ ಅವರ ಜೀವನವನ್ನು ಆಧರಿಸಿ ಸಿನಿಮಾ ನಿರ್ಮಿಸಲಾಗಿದೆ ಎಂದು ಆರೋಪಿಸಿ ‘ಬಾಸ್’ ಸಿನಿಮಾ ಬಿಡುಗಡೆಗೆ ತಡೆ ಕೋರಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಇದರೊಂದಿಗೆ ಚಿತ್ರ ಬಿಡುಗಡೆಗೆ ಇದ್ದ ಪ್ರಮುಖ ಕಾನೂನು ಅಡ್ಡಿ ನಿವಾರಣೆಯಾಗಿದ್ದು, ‘ಬಾಸ್’ ಸಿನಿಮಾ ಪ್ರದರ್ಶನಕ್ಕೆ ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿದೆ.
ನ್ಯಾಯಾಲಯವು ಸೆನ್ಸಾರ್ ಮಂಡಳಿಯ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಚಿತ್ರತಂಡಕ್ಕೆ ನಿರ್ದೇಶನ ನೀಡಿದೆ. ಚಿತ್ರದ ಆರಂಭದಲ್ಲೇ ‘ಇದು ಕಾಲ್ಪನಿಕ ಚಲನಚಿತ್ರ; ಯಾವುದೇ ವ್ಯಕ್ತಿಯ ಜೀವನವನ್ನು ಆಧರಿಸಿಲ್ಲ’ ಎಂಬ ಸ್ಪಷ್ಟ ಪ್ರಕಟಣೆಯನ್ನು ಪ್ರದರ್ಶಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಈ ಹಿಂದೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಚಿತ್ರಕ್ಕೆ ಪ್ರಮಾಣಪತ್ರ ನೀಡಿದ್ದರೂ, ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆಯು ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಇದೀಗ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್, ಸೆನ್ಸಾರ್ ಮಂಡಳಿಯ ನಿರ್ದೇಶನಗಳನ್ನು ಪಾಲಿಸಿ ಸಿನಿಮಾ ಬಿಡುಗಡೆ ಮಾಡಬಹುದು ಎಂದು ಸ್ಪಷ್ಟಪಡಿಸಿದೆ.
ಹೀಗಾಗಿ ಕಾನೂನು ಹೋರಾಟದ ಬಳಿಕ ‘ಬಾಸ್’ ಸಿನಿಮಾ ಬಿಡುಗಡೆಯಾಗಲು ದಾರಿ ಸುಗಮವಾಗಿದ್ದು, ಚಿತ್ರತಂಡವೂ ಬಿಡುಗಡೆಗೆ ಸಿದ್ಧತೆಗಳನ್ನು ವೇಗಗೊಳಿಸಿದೆ.





