- ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಚಿತ್ರರಂಗದ ನಾದಬ್ರಹ್ಮ ಹಂಸಲೇಖ ಅವರಿಗೆ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕು ಎಂಬ ಒತ್ತಾಯ ಇದೀಗ ಮತ್ತೊಮ್ಮೆ ಜೋರಾಗಿದೆ. ಈ ಬಾರಿ ಈ ಅಭಿಯಾನಕ್ಕೆ ಚಾಲನೆ ನೀಡಿರುವುದು ನಟ ನೆನಪಿರಲಿ ಪ್ರೇಮ್. ಸಾಮಾಜಿಕ ಜಾಲತಾಣದ ಮೂಲಕ ಅಭಿಯಾನ ಆರಂಭಿಸಿರುವ ಅವರು, ಕನ್ನಡ ಚಿತ್ರರಂಗ, ಸಾಹಿತ್ಯ ವಲಯ, ಮಾಧ್ಯಮಗಳು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರೇಮ್, 300ಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಿತ್ಯ ಮತ್ತು ಸಂಗೀತ ನೀಡಿರುವ ಹಂಸಲೇಖ ಅವರ ಸಾಧನೆಗೆ ರಾಷ್ಟ್ರ ಮಟ್ಟದ ಗೌರವ ಸಲ್ಲಬೇಕಾಗಿದೆ. ಕನ್ನಡದ ಹೆಮ್ಮೆಯ ಈ ಕಲಾವಿದರಿಗೆ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ದೊರಕುವಂತೆ ಎಲ್ಲರೂ ಬೆಂಬಲ ನೀಡಬೇಕು ಎಂದು ಕೋರಿದ್ದಾರೆ.

ಸುಮಾರು ಐದು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಹಂಸಲೇಖ, 300ಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ನೀಡಿದ್ದು, ಅದಕ್ಕಿಂತಲೂ ಹೆಚ್ಚು ಸಿನಿಮಾಗಳಿಗೆ ಸಾಹಿತ್ಯ ರಚಿಸಿದ್ದಾರೆ. ಸಾವಿರಾರು ಜನಪ್ರಿಯ ಗೀತೆಗಳ ಮೂಲಕ ಕನ್ನಡ ಸಂಗೀತ ಮತ್ತು ಸಾಹಿತ್ಯಕ್ಕೆ ಹೊಸ ಆಯಾಮ ನೀಡಿರುವ ಅವರು, 1980ರ ದಶಕದಲ್ಲಿ ಕನ್ನಡ ಚಿತ್ರಸಂಗೀತಕ್ಕೆ ಹೊಸ ದಿಕ್ಕು ತೋರಿದ ಪ್ರಮುಖ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ.

ಹಂಸಲೇಖ ಅವರಿಗೆ ‘ಪಂಚಾಕ್ಷರಿ ಗವಾಯಿ’ ಚಿತ್ರದ ಸಂಗೀತಕ್ಕಾಗಿ ರಾಷ್ಟ್ರ ಪ್ರಶಸ್ತಿ, ‘ಹಾಲುಂಡ ತವರು’, ‘ನೆನಪಿರಲಿ’ ಹಾಗೂ ‘ಪಂಚಾಕ್ಷರಿ ಗವಾಯಿ’ ಚಿತ್ರಗಳಿಗೆ ರಾಜ್ಯ ಪ್ರಶಸ್ತಿಗಳು ಸೇರಿದಂತೆ ಹಲವು ಫಿಲ್ಮ್‌ಫೇರ್ ಪ್ರಶಸ್ತಿಗಳು ಲಭಿಸಿವೆ. ಅಲ್ಲದೆ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಡಾ. ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ಎಸ್. ಜಾನಕಿ ಪ್ರಶಸ್ತಿಗಳಂತಹ ಅನೇಕ ಗೌರವಗಳು ದೊರೆತಿವೆ. ಆದರೆ ಕೇಂದ್ರ ಸರ್ಕಾರದಿಂದ ನೀಡಲಾಗುವ ಪದ್ಮ ಪ್ರಶಸ್ತಿಯಂತಹ ನಾಗರಿಕ ಗೌರವ ಇದುವರೆಗೆ ಅವರಿಗೆ ದೊರೆತಿಲ್ಲ.

ಈ ಹಿಂದೆ ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂಬ ಅಭಿಯಾನ ಯಶಸ್ವಿಯಾಗಿತ್ತು. ಇದೀಗ ಹಂಸಲೇಖ ಅವರಿಗೂ ರಾಷ್ಟ್ರದ ಉನ್ನತ ನಾಗರಿಕ ಗೌರವ ಅಥವಾ ಜ್ಞಾನಪೀಠ ಪ್ರಶಸ್ತಿ ದೊರಕಬೇಕೆಂಬ ಅಭಿಯಾನಕ್ಕೆ ಚಿತ್ರರಂಗ ಹಾಗೂ ಅಭಿಮಾನಿಗಳಿಂದ ಯಾವ ರೀತಿಯ ಸ್ಪಂದನೆ ದೊರೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ