ಮೊಬೈಲ್‌ನ ಡಿಜಿಟಲ್ ವೆಬ್ ಚಿತ್ರ ಧಾರಾವಾಹಿಗಳು ಎಲ್ಲೆಲ್ಲೂ ಹೆಸರು ಮಾಡುತ್ತಿರುವ ಈ ಆಧುನಿಕ ಕಾಲದಲ್ಲಿ ಯಾವುದೇ ಗಾಡ್ ಫಾದರ್ ನೆರವಿಲ್ಲದೆ, `ಅಮವಾಸ್' ಚಿತ್ರದಿಂದ ಬಾಲಿವುಡ್‌ಗೆ ಮಾನವಿ ದಿಢೀರ್ ಎಂದು ಪ್ರವೇಶಿಸಿದಳು. ಮುಂದೆ ಈಕೆಯ ಕೆರಿಯರ್ ಗ್ರಾಫ್ ಅದ್ಭುತವಾಗಿ ಬೆಳೆಯಿತು. `ನೋ ಒನ್ ಕಿಲ್ಡ್ ಜೆಸ್ಸಿಕಾ, ....' ಇತ್ಯಾದಿ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳೇ ಆದರೂ ಎಲ್ಲರ ಗಮನ ಸೆಳೆದಳು. ಆದರೆ ವೆಬ್ ಸೀರೀಸ್ `ಪಿಕ್ಚರ್ಸ್' ಅವಳ ಕೆರಿಯರ್‌ಗೆ ಹೊಸ ರೂಪ ನೀಡಿತೆಂದೇ ಹೇಳಬಹುದು. ಈಗಾಗಲೇ ಈಕೆ ಹಲವು ಯಶಸ್ವೀ ವೆಬ್ ಸೀರೀಸ್ ಧಾರಾವಾಹಿಗಳಲ್ಲಿ ಖ್ಯಾತಿ ಗಳಿಸಿದ್ದಳು. ಇದಾದ ಮೇಲೆ ಈಕೆ ನಟಿಸಿದ್ದ `ಉಜ್ಡಾ ಚಮನ್' ಚಿತ್ರ ಸಹ ಉತ್ತಮ ಹೆಸರು ಗಳಿಸಿಕೊಟ್ಟಿತು. ಅದೇ ತರಹ `ಶುಭ್ ಮಂಗಲ್ ಝ್ಯಾದಾ ಸಾವ್ ಧಾನ್' ಚಿತ್ರ ಉತ್ತಮ ಯಶಸ್ಸು ಗಳಿಸಿ, ಹೆಸರು ನೀಡಿತು. ಆ ಕುರಿತಾಗಿ ಗೃಹಶೋಭಾ ಜೊತೆ ನಡೆಸಿದ ಮಾತುಕಥೆ :
ಬಾಲಿವುಡ್ ಪರಂಪರೆಯ ಪ್ರಕಾರ ಹೊಸದಾಗಿ ಬಂದ ನಟ ನಟಿಯರು ಮೊದಲು ಎಂಥ ಪಾತ್ರಗಳಲ್ಲಿ ಹೆಸರು ಗಳಿಸುತ್ತಾರೋ ಖಾಯಂ ಅದೇ ಪಾತ್ರಗಳಲ್ಲಿ ಉಳಿದುಬಿಡುತ್ತಾರೆ. ಆದರೆ ನೀನು ಮೊದ ಮೊದಲು ಸಣ್ಣಪುಟ್ಟ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾಗ, ಇದರಲ್ಲಿ ಟೈಪ್ ಕಾಸ್ಟ್ ಆಗಿಹೋದರೆ ಎಂಬ ಚಿಂತೆ ಇರಲಿಲ್ಲವೇ?
ನನ್ನ ಜೊತೆ ಹೀಗೇ ಆಯಿತು. `ನೋ ಒನ್ ಕಿಲ್ಡ್ ಜೆಸ್ಸಿಕಾ' ಚಿತ್ರದಲ್ಲಿ ನನಗೆ ನಾಯಕಿಯ ಗೆಳತಿ, ನಾಯಕನ ತಂಗಿ ಇಂಥ ಪಾತ್ರಗಳೇ ಸಿಗತೊಡಗಿದವು. ಅಷ್ಟು ಮಾತ್ರವಲ್ಲದೆ ನನ್ನನ್ನು ಪ್ರತಿ ಬಾರಿಯೂ ಅದೇ ತರಹದ ಪಾತ್ರ ನಿಭಾಯಿಸಬೇಕೆಂದು ಒತ್ತಾಯಿಸುತ್ತಿದ್ದರು. ಹೊಸ ಪಾತ್ರಗಳು ಅಂತ ಒಂದೂ ಸಿಗಲೇ ಇಲ್ಲ. ಆಗ ಕೆಲವು ದಿನ ನಾನು ಆಡಿಶನ್ ಕೊಡುವುದನ್ನೇ ನಿಲ್ಲಿಸಿಬಿಟ್ಟೆ. ಅದಾದ ಮೇಲೆ ನನಗೆ ವೆಬ್ ಸೀರೀಸ್ `ಪಿಕ್ಚರ್ಸ್'ನಲ್ಲಿ ಶ್ರೇಯಾಳ ಪಾತ್ರ ದೊರಕಿತು. ಆಗ ನನ್ನ ಸಿನಿ ಸಮೀಕರಣವೇ ಬದಲಾಯಿತು. ಇದಕ್ಕೆ ಮುಖ್ಯ ಕಾರಣವೆಂದರೆ ವೆಬ್ ಕಾರಣದಿಂದಲೇ ಬಾಲಿವುಡ್ ಚಿತ್ರಗಳು ಬದಲಾಗುವಂತಾಗಿದ್ದು, `ಉಜ್ಡಾ ಚಮನ್' ಚಿತ್ರದಲ್ಲಿ ನನಗೆ ಅಪ್ಸರಾ ಪಾತ್ರ ದೊರಕಿತು. ಇದೀಗ `ಶುಭ್ ಮಂಗಲ್ ಝ್ಯಾದಾ ಸಾವ್ ಧಾನ್' ಚಿತ್ರದಲ್ಲಿ ಗೋಗ್ ತ್ರಿಪಾಠಿಯ ಪಾತ್ರ ದೊರಕಿತು, ಅದಂತೂ ಎಂಥ ಪರಿಣಾಮಕಾರಿ ಪಾತ್ರ ನಿಮಗೆಲ್ಲ ಗೊತ್ತೇ ಇದೆ, ಚಿತ್ರದ ಯಶಸ್ಸು ಅದನ್ನು ಸಾಬೀತುಪಡಿಸಿದೆ.
ಸಿನಿಮಾದ ಬದಲಾವಣೆ ಹಾಗೂ ಡಿಜಿಟಲ್ ಮೀಡಿಯಾದಲ್ಲಿ ನಿನಗೆ ಏನಾದರೂ ಲಾಭ ಆಯ್ತೇ?
ಹ್ಞೂಂ, ಲಾಭ ಆಗಿದೆ. ಜನ ನನ್ನನ್ನು ಈಗ ವೆಬ್ ಸೆನ್ಸೇಶನ್ ಎಂದೇ ಭಾವಿಸುತ್ತಾರೆ. ಡಿಜಿಟಲ್ ಮೀಡಿಯಾದ ದೆಸೆಯಿಂದಾಗಿ ಪ್ರತಿ ಕಲಾವಿದರು, ಲೇಖಕರು, ನಿರ್ದೇಶಕರು, ಟೆಕ್ನಿಶಿಯನ್ಸ್ ಎಲ್ಲರಿಗೂ ಧಾರಾಳ ಕೆಲಸ ಸಿಗುತ್ತಿದೆ. ಈ ಹೊಸ ಮಾಧ್ಯಮದಿಂದ ಪ್ರತಿಯೊಬ್ಬರೂ ಹೊಸ ಹೊಸ ಪ್ರಯೋಗ ಮಾಡುತ್ತಿದ್ದಾರೆ. ಇದೀಗ ಪ್ರತಿ ಪ್ರೊಡಕ್ಷನ್ ಹೌಸ್ ಹಾಗೂ ಪ್ರತಿ ಚ್ಯಾನೆಲ್‌ಗೂ ತನ್ನದೇ ಆದ ಡಿಜಿಟಲ್ ವಿಂಗ್ ಇದೆ. ಪ್ರತಿಯೊಬ್ಬರೂ ತಾವು ಗುಂಪಿನ ಕುರಿ ಮಂದೆಯಲ್ಲ ವಿಭಿನ್ನರು ಎಂದು ತೋರಿಸಲು ಪ್ರಯತ್ನಿಸುತ್ತಿದ್ದಾರೆ. ವೆಬ್‌ನಲ್ಲಂತೂ ಬೋಲ್ಡ್ ಸೀನ್ಸ್ ಧಾರಾಳ ತೋರಿಸಲಾಗುತ್ತಿದೆ. ಇತ್ತೀಚೆಗಂತೂ ಎಲ್ಲರೂ ಹೇಗೆ ತಮಾಷೆ ಮಾಡುತ್ತಾರೆಂದರೆ, ಕೆಲಸವಿಲ್ಲದೆ ನೀವು ಕುಳಿತಿದ್ದರೆ ನಿಮಗಿಂತ ಕೆಟ್ಟ ಕಲಾವಿದರಿಲ್ಲ ಅಂತ!