ಆಗಷ್ಟೇ `ಫಾರ್ಚುನರ್‌’ ಸಿನಿಮಾ ಬಿಡುಗಡೆಯಾಗಿತ್ತು. ರಿಲೀಸ್‌ ಆದ ಮೊದಲ ದಿನವೇ ನಾಯಕಿಯಾಗಿ ನಟಿಸಿರುವ ಸೋನು ಗೌಡ ಬಗ್ಗೆ ಪ್ರಶಂಸೆ ಮಾತುಗಳು ಕೇಳಿಬರುತ್ತಿದ್ದವು. ಸಿನಿಮಾ ಕೂಡ ಎಲ್ಲರ ಮೆಚ್ಚುಗೆ ಪಡೆದು ಮುಂದೆ ಸಾಗುತ್ತಿತ್ತು. ಸೋನು ವೃತ್ತಿಯಲ್ಲಿ  ಮತ್ತೊಮ್ಮೆ ಅದೃಷ್ಟದ ಬಾಗಿಲು ತೆರೆದಂತಾಗಿತ್ತು.`ಇಂತಿ ನಿಮ್ಮ ಪ್ರೀತಿಯ’ ಚಿತ್ರದಿಂದ ಶುರುವಾದ ಕೆರಿಯರ್‌ಸೋನುಳನ್ನು ಒಬ್ಬ ಉತ್ತಮ ಕಲಾವಿದೆಯಾಗಿಯೇ ಸ್ವೀಕರಿಸುತ್ತಾ ಬಂದಿತು ಸಿನಿಮಾರಂಗ. ಕನ್ನಡದ ಹುಡುಗಿ, ಅಪ್ಪ ಕೂಡ ನಟ ಹಾಗೂ ಮೇಕಪ್‌ ಕಲಾವಿದರು. ಅಂಬರೀಷ್‌ಗೆ ಮೂವತ್ತು ವರ್ಷಗಳಿಂದ ಮೇಕಪ್‌ ಮಾಡಿದ್ದಷ್ಟೇ ಅಲ್ಲ, ಅವರಿಗೆ ಒಬ್ಬ ಒಳ್ಳೆಯ ಸ್ನೇಹಿತ ಕೂಡ. ಸಿನಿಮಾ ಹಿನ್ನೆಲೆಯಿದ್ದರೂ, ಸೋನು ತನ್ನ ಸ್ವಂತ ಪ್ರತಿಭೆಯಿಂದ ನಟಿಯಾದಳು.

ಗೃಹಶೋಭಾ ಪತ್ರಿಕೆಗಾಗಿ ಮಾತನಾಡಿಸಿದಾಗ ಸೋನು ತುಂಬಾನೆ ಖುಷಿಪಟ್ಟಳು. ಕಾರಣ ಅವರ ಮನೆಯಲ್ಲಿ ಅಮ್ಮ, ಅಜ್ಜಿ ಎಲ್ಲರೂ ಗೃಹಶೋಭಾ ಪತ್ರಿಕೆಯ ಪ್ರಿಯ ಓದುಗರಂತೆ. ನಿನ್ನ ಬಗ್ಗೆ ಒಮ್ಮೆಯೂ ಬರೆದಿಲ್ಲ ಏಕೆ? ಅಂತ ಯಾವಾಗಲೂ ಕೇಳುತ್ತಿದ್ದರಂತೆ ಈಗ ಅವರಿಗೂ ಸಹ ತುಂಬಾನೆ ಸಂತೋಷಾಗುತ್ತೆ. ಥ್ಯಾಂಕ್ಸ್ ಎನ್ನುತ್ತಲೇ ಮಾತು ಮುಂದುವರಿಸಿದಳು.

ಸಿನಿಮಾರಂಗಕ್ಕೆ ಬಂದ ಹೊಸದರಲ್ಲಿ ನೆರವಾದ ಚಿತ್ರಗಳು?

`ಇಂತಿ ನಿನ್ನ ಪ್ರೀತಿಯ’ ಚಿತ್ರದಲ್ಲಿ ತುಂಬಾನೆ ಒಳ್ಳೆ ಹೆಸರು ಬಂತು. ಅದಾದ ಮೇಲೆ `ಪೊಲೀಸ್‌ ಕ್ವಾರ್ಟರ್ಸ್‌, ಗುಲಾಮ’ ಹೀಗೆ ಸುಮಾರು ಚಿತ್ರಗಳಲ್ಲಿ ನಟಿಸಿದೆ. `ಕಿರಗೂರಿನ ಗಯ್ಯಾಳಿಗಳು’ ಚಿತ್ರದ ನಂತರ ತುಂಬಾನೇ ಆಫರ್ಸ್‌ ಬಂದವು. ಇತ್ತೀಚೆಗೆ `ಗುಲ್ಟು’ ಚಿತ್ರ ಯಶಸ್ವಿಯಾಯ್ತು. ನನ್ನ ತಾರಾ ವೃತ್ತಿಯಲ್ಲಿ ಬಂದಂಥ ಎಲ್ಲ ಚಿತ್ರಗಳೂ ಒಂದಲ್ಲ ಒಂದು ರೀತಿ ನನಗೆ ತುಂಬಾನೇ ನೆರವಾಗಿವೆ. ಕಲಾತ್ಮಕ, ವ್ಯಾಪಾರಿ ಎರಡೂ ಬಗೆಯ ಚಿತ್ರಗಳ ನಿರ್ಮಾಪಕರು ತಮ್ಮ ಚಿತ್ರಗಳಲ್ಲಿ ಅವಕಾಶ ಕೊಡುತ್ತಲೇ ಬಂದಿದ್ದಾರೆ.

ಆರ್ಟ್‌ ಮತ್ತು ಕಮರ್ಷಿಯಲ್ ಇವೆರಡರಲ್ಲಿ ಯಾವುದು ಇಷ್ಟ?

ಸಿನಿಮಾ ಅಂದರೆ ಎಂಟರ್‌ ಟೈನ್‌ಮೆಂಟ್‌ ಇರಲೇಬೇಕು. ಕೆಲವು ಸಲ ನಮ್ಮ ಇಷ್ಟಕ್ಕಾಗಿ ಸಿನಿಮಾದಲ್ಲಿನ ಪಾತ್ರಗಳನ್ನು ಒಪ್ಪಿಕೊಳ್ತೀವಿ. ಕೆಲವು ಸಲ ಜನರಿಗಾಗಿ ನಟಿಸುತ್ತೇವೆ. ಆದರೆ ನಾನು ಯಾವುದೇ ಪಾತ್ರ ಮಾಡಿದರೂ ಅದು ಜನಕ್ಕೆ ತಲುಪಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಕೆಲಸ ಮಾಡ್ತೀನಿ.

`ಫಾರ್ಚುನರ್‌’ ಬಿಡುಗಡೆಯಾಗಿದೆ. ಜನರ ಒಪಿನೀಯನ್‌ ಹೇಗಿದೆ?
ತುಂಬಾ ಚೆನ್ನಾಗಿ ಆ್ಯಕ್ಟ್  ಮಾಡಿದ್ದೀರಾ… ಚೆನ್ನಾಗಿ ಕಾಣಿಸ್ತೀರಾ ಅಂತ ಜನ ಹೇಳುವಾಗ ಸಹಜವಾಗಿ ಖುಷಿಯಾಗುತ್ತೆ. ಇದೇ ರೀತಿ ವಿಭಿನ್ನವಾದ ಪಾತ್ರ ಮಾಡಬೇಕು ಅನ್ನೋ ಆಸೆ ಇದೆ. ನೋಡಬೇಕು, ಮುಂದೆ ಎಂತೆಂಥ ಆಫರ್ಸ್‌ ಬರುತ್ತೆ ಅಂತ.

ಯಾವ ತರಹದ ಪಾತ್ರ ಮಾಡುವಾಸೆ?

ನನಗೆ ಪಾತ್ರಕ್ಕಿಂತ ಮುಖ್ಯವಾಗಿ ಒಬ್ಬ ನಟಿಯಾಗಿ ಎಲ್ಲಾ ಪಾತ್ರಗಳಿಗೂ ಹೊಂದಿಕೊಳ್ಳುವಂತಿರಬೇಕು. ಈಗ ನೋಡಿ ಲಕ್ಷ್ಮಿ, ಉಮಾಶ್ರೀ, ಶಬಾನಾ ಆಜ್ಮಿ ಇನ್ನೂ ಅನೇಕ ಕಲಾವಿದೆಯರು ಉತ್ತಮ ನಟಿಯರಾಗಿ ಛಾಪು ಒತ್ತಿ ಬಿಟ್ಟಿದ್ದಾರೆ. ಉಮಾಶ್ರೀ ಸ್ಥಾನದಲ್ಲಿ ನೀವು ಬೇರೆ ಯಾರನ್ನು ಊಹಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ. ತಮಿಳಿನಲ್ಲಿ ಮನೋರಮಾ, ಕೋವೈ ಸರಳಾ ಇವರಿಬ್ಬರನ್ನು ಇಂದಿಗೂ ಜನ ಮರೆತಿಲ್ಲ. ನಯನತಾರಾ ಕೂಡ ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸಿ ಒಳ್ಳೆ ಹೆಸರು ಮಾಡಿದ್ದಾರೆ. ಕನ್ನಡದಲ್ಲಿ `ಯೂ ಟರ್ನ್‌’ ಹೇಗೆ ಮಹಿಳೆಯನ್ನೇ ಕೇಂದ್ರವಾಗಿಟ್ಟುಕೊಂಡು ಸಿನಿಮಾ ಮಾಡಿದ್ದರೋ ಅಂಥ ಚಿತ್ರಗಳಲ್ಲಿ ನಟಿಸಿ ನಾನೂ ಕೂಡಾ ಈ ಎಲ್ಲ ನಟಿಯರಂತೆ ಹೆಸರು ಮಾಡಬೇಕು, ಅದೇ ನನ್ನ ಆಸೆ. ಹಾಗಂತ ನಮಗೊಬ್ಬರಿಗೇ ತೃಪ್ತಿಯಾದರೆ ಸಾಲದು. ಹಣ ಹಾಕಿರುವ ನಿರ್ಮಾಪಕರಿಗೂ ಲಾಭವಾಗಬೇಕು. ಬರೀ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ತೆರೆಕಂಡು ನಾಲ್ಕು ಜನ ಹೊಗಳಿದರೆ ಏನೂ ಪ್ರಯೋಜನವಿಲ್ಲ. ಜನ ಸಿನಿಮಾ ನೋಡಬೇಕು. ನಿರ್ಮಾಪಕರೂ ಲಾಭ ಮಾಡಿ ಖುಷಿಪಡಬೇಕು.

ಕನ್ನಡ ಸಿನಿಮಾರಂಗ ಬದಲಾಗಿದೆ ಅನಿಸುತ್ತಾ?

ಮೊದಲು ನ್ಯಾರೋ ಇತ್ತು ಈಗ ಹೈವೇ ಆಗಿದೆ. ಎಲ್ಲರೂ ಸಿನಿಮಾ ಮಾಡುತ್ತಾರೆ. ನಟನೆಯೂ ಮಾಡುತ್ತಾರೆ. ಹೊಸ ಕಲಾವಿದರು ಪ್ರತಿನಿತ್ಯ ಬರ್ತಿದ್ದಾರೆ. ಅದರಲ್ಲಿ ಕೆಲವರು ವೇಗವಾಗಿ ಓಡಿ ಗುರಿ ಮುಟ್ಟುತ್ತಾರೆ. ಇನ್ನು ಕೆಲವರು ಹಿಂತಿರುಗಿ ಹೋಗುತ್ತಾರೆ ಅಷ್ಟೆ. ಪ್ರತಿಭೆ ಇರುವವರಿಗೆ ಒಂದೊಳ್ಳೆ ಅವಕಾಶ ಸಿಕ್ಕರೆ ಖಂಡಿತ ಗುರಿ ಮುಟ್ಟುತ್ತಾರೆ.

ಸಿನಿಮಾರಂಗ ಅಂದ ಕೂಡಲೇ ಇಲ್ಲಿ ಸುಲಭವಾಗಿ ಹಣ, ಹೆಸರು ಮಾಡಬಹುದು ಎನ್ನುವ ಭ್ರಮೆಯಲ್ಲಿರಬಾರದು.

ತಾರೆಯರಾಗಿ ಮಿನುಗುತ್ತಿರುವವರು ಕೂಡಾ ಕಲ್ಲು ಮುಳ್ಳು ತುಳಿದೇ ಬಂದಿರುತ್ತಾರೆ ಎನ್ನುವುದನ್ನು ಮರೆಯಬಾರದು. ಹಣ, ಹೆಸರು ಮಾಡುವ ಶಾರ್ಟ್‌ಕಟ್‌ ಇದು ಎಂಬುದು ತಪ್ಪು ಕಲ್ಪನೆ. ಸಿನಿಮಾ ರಂಗದಲ್ಲಿರುವ ಎಲ್ಲರೂ ವೈಭವದಿಂದ ಮೆರೆಯುತ್ತಿಲ್ಲ. ಕೆಲವು ಕಲಾವಿದರು ಸಣ್ಣ ಪುಟ್ಟ ಮನೆಗಳಲ್ಲೇ ವಾಸ ಮಾಡಿಕೊಂಡಿದ್ದಾರೆ. ಬಸ್ಸು, ಟ್ರೈನಿನಲ್ಲೇ ಓಡಾಡುತ್ತಾರೆ. ಇವರೆಲ್ಲರೂ ಪ್ರತಿಭಾವಂತರು. ಅಭಿನಯಿಸುವುದರಲ್ಲೇ ತೃಪ್ತಿ ಕಂಡುಕೊಳ್ಳುತ್ತಾರೆ. ಹಾಗಾಗಿ ಹಣ, ಹೆಸರಿಗಾಗಿ ಆಸೆಪಟ್ಟು ಮಾತ್ರ ಬರಕೂಡದು. ನಿಮ್ಮಲ್ಲಿ ಪ್ರತಿಭೆ ಇದೆಯಾ? ಬನ್ನಿ, ಟ್ರೈ ಮಾಡಿ… ಅಷ್ಟೇ ನಾನು ಹೇಳೋದು.

ಸಿನಿಮಾರಂಗ ಹೇಗನಿಸುತ್ತದೆ?

ಈ ಹತ್ತು ವರ್ಷಗಳಲ್ಲಿ ಈಗ ಸ್ವಲ್ಪ ಬಿಜಿಯಾಗ್ತಿದ್ದೀನಿ ಅಂತ ಹೇಳಬಹುದು, ತುಂಬಾನೇ ಚಿತ್ರಗಳು ಸಿಕ್ತಿವೆ. ಒಳ್ಳೆ ಪಾತ್ರಗಳು ಹುಡುಕಿಕೊಂಡು ಬರ್ತಿವೆ. ಸದ್ಯಕ್ಕೆ ನಟನೆ ಬಿಟ್ಟು ಬೇರೆ ಯಾವುದರ ಬಗ್ಗೆಯೂ ಆಸಕ್ತಿ ಇಲ್ಲ. `ಚಂಬಲ್’ ಚಿತ್ರ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ಸತೀಶ್‌ ನೀನಾಸಂ ಜೋಡಿಯಾಗಿ ನಟಿಸಿದ್ದೀನಿ. ಜೇಕಬ್‌ ವರ್ಗೀಸ್‌ರವರ ಈ ಚಿತ್ರ, ನನಗಂತೂ ತುಂಬಾನೆ ತೃಪ್ತಿ ಕೊಟ್ಟಿದೆ. ಉಪೇಂದ್ರರ ಜೊತೆಯಲ್ಲಿ  `ಐ ಲವ್ ಯೂ’ ಚಿತ್ರದಲ್ಲೂ ಸಹ ಚಂದ್ರು ವಿಶೇಷವಾದ ಪಾತ್ರ ಕೊಟ್ಟಿದ್ದಾರೆ. ಅದನ್ನು ಏನಿದ್ದರೂ ತೆರೆಯ ಮೇಲೆಯೇ ನೋಡಬೇಕು. ತುಂಬಾನೆ ಢಿಪರೆಂಟಾಗಿದೆ.

`ಗುಲ್ಟು’ ಚಿತ್ರದ ನಂತರ ಹೊಸ ತರಹದ ಪಾತ್ರಗಳು ಸಿಗುತ್ತಿರೋದು ನಿಜಕ್ಕೂ ಖುಷಿ ಕೊಟ್ಟಿದೆ ಎಂದು ಸೋನುಗೌಡ ಹೇಳುತ್ತಾ  `ಫಾರ್ಚುನರ್‌’ ಚಿತ್ರದ ಪ್ರಮೋಷನ್‌ಗಾಗಿ ಹೊರಟು ನಿಂತಳು. ಈಕೆಗೆ ಅದೃಷ್ಟದ ಬಾಗಿಲು ಹೀಗೆಯೇ ಸದಾ ತೆರದಿರಲಿ!         – ಸರಸ್ವತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ