– ರಾಘವೇಂದ್ರ ಅಡಿಗ ಎಚ್ಚೆನ್.
ಒಂದು ಸಮಯದಲ್ಲಿ ಕನ್ನಡ ಚಿತ್ರರಂಗದ ಅತ್ಯಂತ ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಂಡಿದ್ದ ಸೌಂದರ್ಯ ಅವರೀಗ ಅಭಿಮಾನಿಗಳೆದೆಯಲ್ಲಿ ಜೀವಂತವಾಗಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡು ಅತ್ಯಂತ ಜನಪ್ರಿಯತೆ ಹೊಂದಿದ್ದ ನಟಿ 2004ರ ಏಪ್ರಿಲ್ 17ರಂದು ಕೊನೆಯುಸಿರೆಳೆದರು. ವಿಮಾನ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದು, ಇಂದು 21ನೇ ವರ್ಷದ ಪುಣ್ಯಸ್ಮರಣೆ ನಡೆಯುತ್ತಿದೆ. 12 ವರ್ಷಗಳ ಯಶಸ್ವಿ ವೃತ್ತಿಜೀವನವನ್ನು ಹೊಂದಿದ್ದ ಅವರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದ ಉನ್ನತ ನಿರ್ದೇಶಕರು ಮತ್ತು ಸೂಪರ್ ಸ್ಟಾರ್‌ಗಳೊಂದಿಗೆ ಕೆಲಸ ಮಾಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.
ಶಿಕ್ಷಣ: 1972ರ ಜುಲೈ 18ರಂದು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಸೌಂದರ್ಯ, ಬೆಂಗಳೂರಿನಲ್ಲಿ ಎಂಬಿಬಿಎಸ್ ಪದವಿ ಪಡೆಯಲು ವಿದ್ಯಾಭ್ಯಾಸ ಪ್ರಾರಂಭಿಸಿದರು. ಆದರೆ ದಕ್ಷಿಣ ಚಿತ್ರರಂಗದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು, ಮೊದಲ ವರ್ಷದ ನಂತರ 1992ರಲ್ಲಿ ತಮ್ಮ ವಿದ್ಯಾಭ್ಯಾಸವನ್ನು ನಿಲ್ಲಿಸಿದರು.
ನಟನಾ ವೃತ್ತಿಜೀವನ: ಹಿರಿಯ ಚಲನಚಿತ್ರ ಬರಹಗಾರ, ಕೈಗಾರಿಕೋದ್ಯಮಿ ಕೆ.ಎಸ್.ಸತ್ಯನಾರಾಯಣ್ ಅವರ ಪುತ್ರಿ ಸೌಂದರ್ಯ 1992ರಲ್ಲಿ ಬಾ ನನ್ನ ಪ್ರೀತಿಸು, ಗಂಧರ್ವ ಚಿತ್ರಗಳ ಮೂಲಕ ಗ್ಲ್ಯಾ ರ್ ಜಗತ್ತಿಗೆ ಎಂಟ್ರಿ ಕೊಟ್ಟರು. ಕಮಲ್ ಹಾಸನ್, ರಜನಿಕಾಂತ್, ಮೋಹನ್ ಲಾಲ್, ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್, ರವಿಚಂದ್ರನ್, ವಿಷ್ಣುವರ್ಧನ್ ಮತ್ತು ಅಮಿತಾಭ್ ಬಚ್ಚನ್ (ಸೂರ್ಯವಂಶ) ನಂತಹ ದಕ್ಷಿಣ ಭಾರತದ ಎಲ್ಲಾ ಸೂಪರ್ ಸ್ಟಾರ್‌ಗಳೊಂದಿಗೆ ನಟಿಸಿದ ಏಕೈಕ ನಾಯಕ ನಟಿಯಾಗಿ ಸೌಂದರ್ಯ ಹೆಸರು ಸಂಪಾದಿಸಿದರು.
12 ವರ್ಷಗಳ ಅಲ್ಪಾವಧಿಯಲ್ಲೇ ಅನೇಕ ಸಾಧನೆ: ಬೆಂಗಳೂರಿನವರಾಗಿದ್ದರೂ, ತೆಲುಗು ಚಿತ್ರಗಳ ಮೂಲಕ ಅವರು ಅನೇಕರ ಹೃದಯಗಳನ್ನು ತಲುಪಿದರು. ಬಹುಭಾಷಾ ಸಿನಿಮಾಗಳಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡರು. ತಮ್ಮ ಅತ್ಯುತ್ತಮ ಅಭಿನಯಕ್ಕಾಗಿ ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡರು. 12 ವರ್ಷಗಳ ಅಲ್ಪಾವಧಿಯ 6 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದರು. ಆ ಚಿತ್ರಗಳೆಂದರೆ ಅಮ್ಮೋರು (1994), ಅಂತಃಪುರಂ (1998), ರಾಜ (1999), ದ್ವೀಪ (ಅತ್ಯುತ್ತಮ ನಟಿ ಮತ್ತು ಅತ್ಯುತ್ತಮ ನಿರ್ಮಾಪಕಿ ಪ್ರಶಸ್ತಿಗಳು) ಮತ್ತು ಆಪ್ತಮಿತ್ರ (2004). 1998-99ರಲ್ಲಿ ದೋಣಿ ಸಾಗಲಿ ಮತ್ತು 2002ರ ದ್ವೀಪ ಸಿನಿಮಾಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಬಂದಿತ್ತು. ಆಂಧ್ರ ಪ್ರದೇಶ ಸರ್ಕಾರ ನೀಡುವ ನಂದಿ ಪ್ರಶಸ್ತಿ (ಅಮ್ಮೋರು, ಪವಿತ್ರ ಬಂಧನಂ ಮತ್ತು ಅಂತಃಪುರಂ)ಯನ್ನೂ ಗೆದ್ದುಕೊಂಡಿದ್ದಾರೆ.
ವಿಮಾನ ಅಪಘಾತದಲ್ಲಿ ಕೊನೆಯುಸಿರೆಳೆದ ಒಡಹುಟ್ಟಿದವರು: ನಟಿಯಾಗಿ ಮಾತ್ರವಲ್ಲದೇ ಗಿರೀಶ್ ಕಾಸರವಳ್ಳಿ ನಿರ್ದೇಶನದ ದ್ವೀಪ ಚಿತ್ರದ ನಿರ್ಮಾಪಕಿಯೂ ಆಗಿದ್ದರು. ತಂದೆಯ ಮರಣದ ನಂತರ, ಅವರ ಸಹೋದರ ಅಮರನಾಥ್ ಅವರು ನಟಿಯ ಎಲ್ಲಾ ಕೆಲಸಗಳನ್ನು ನೋಡಿಕೊಂಡರು. ದುರಾದೃಷ್ಟವಶಾತ್ ಒಡಹುಟ್ಟಿದವರು ಈ ಅಪಘಾತದಲ್ಲಿ ಒಟ್ಟಿಗೆ ಕೊನೆಯುಸಿರೆಳೆದರು.
ಹೀಗೆ 1990-2000ರ ಅವಧಿಯಲ್ಲಿ ದಕ್ಷಿಣ ಚಿತ್ರರಂಗದಲ್ಲಿ ಅತ್ಯಂತ ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಂಡಿದ್ದ ರೂಪವತಿ ಸೌಂದರ್ಯ ತಮ್ಮ 31ನೇ ಹರೆಯದಲ್ಲೇ ಕೊನೆಯುಸಿರೆಳೆದಿದ್ದು ಮಾತ್ರ ದುರಂತ. ಬಾಳಿ ಬದುಕಬೇಕಿದ್ದ, ಚಿತ್ರರಂಗದಲ್ಲಿ ಹೆಚ್ಚು ಕಾಲ ಪ್ರಜ್ವಲಿಸಬೇಕಿದ್ದ ಸೌಂದರ್ಯ ಅವರೀಗ ನೆನಪು ಮಾತ್ರ.