- ರಾಘವೇಂದ್ರ ಅಡಿಗ ಎಚ್ಚೆನ್
ನಿರಂಜನ್ ಸುಧೀಂದ್ರ ನಟನೆಯ 'ಸ್ಪಾರ್ಕ್' ಚಿತ್ರದ 'ಮಧುರ ಮುಗುಳುನಗೆ..' ಹಾಡು ಬಿಡುಗಡೆಯಾಗಿದೆ. ಈ ಗೀತೆಯ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡ ತಾರೆಯರು ಮುಗುಳು ನಗೆ ಬೀರಿದ್ದಾರೆ. ಯಾಕೆಂದರೆ ಈ ರೊಮ್ಯಾಂಟಿಕ್ ಹಾಡಿನಲ್ಲಿ ನಿರಂಜನ್ ಅಷ್ಟೇ ಮುದ್ದಾಗಿ ಕಾಣಿಸಿದ್ದಾರೆ.
ಸ್ಟಾರ್ ಕುಟುಂಬದಿಂದ ಬಂದವರು ನಿರಂಜನ್ ಸುಧೀಂದ್ರ. ಹೀಗಾಗಿಯೇ ಚಿಕ್ಕಮ್ಮ ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಕುಟುಂಬದ ಪ್ರಮುಖರೆಲ್ಲ ಹಾಜರಿದ್ದರು. ಖುದ್ದು ನಿರಂಜನ್ ಅವರ ಅಜ್ಜಿ (ಉಪೇಂದ್ರ ಅವರ ತಾಯಿ) ಅನಸೂಯಮ್ಮ ಈ ಹಾಡನ್ನು ಬಿಡುಗಡೆಗೊಳಿಸಿದರು.
ಹಾಡಿನ ಪ್ರದರ್ಶನದ ಬಳಿಕ ಮಾತನಾಡಿದ ಪ್ರಿಯಾಂಕಾ ಅವರು, "ನಾನು ವಿವಾಹವಾಗಿ ಮೊದಲ ಬಾರಿಗೆ ಉಪೇಂದ್ರ ಅವರ ಮನೆಗೆ ಬಂದಾಗ ನನ್ನನ್ನು ಸ್ವಾಗತಿಸಿದ್ದಂಥ ಮಗು ಈತ. ಈ ಹಾಡು ತುಂಬಾನೇ ಚೆನ್ನಾಗಿದೆ. ಈ ಹಿಂದೆ ಇದೇ ಚಿತ್ರದ "ಶಕಲಕ" ಹಾಡು ತೆರೆಕಂಡಾಗ ರೀಲ್ಸ್ ಮಾಡುವ ಬಗ್ಗೆ ನಾನು ಮತ್ತು ಉಪ್ಪಿ ಮಾತನಾಡಿಕೊಂಡಿದ್ದೆವು. ಆದರೆ ನಮಗೆ ಸ್ಟೆಪ್ಸ್ ಹಾಕಲು ಅದಕ್ಕಿಂತ ಈ ಹಾಡು ಸುಲಭವಾದೀತು ಅಂತ ಅನಿಸಿದೆ. ಖಂಡಿತವಾಗಿ ರೀಲ್ಸ್ ಮಾಡುತ್ತೇವೆ. ನಿರಂಜನ್ ಜೊತೆ ನಾನು ಸಿನಿಮಾದಲ್ಲಿಯೂ ಕೆಲಸ ಮಾಡಿದ್ದೇನೆ. ನನ್ನ ಮಗನಿಗೂ ಅವನನ್ನು ನೋಡಿ ಕಲಿಯಲು ಹೇಳುತ್ತಿರುತ್ತೇನೆ. ಹೀಗೆ ಸದಾ ಮಾದರಿಯಾಗಿರು" ಎಂದರು.

ಡಿ. ಮಹಾಂತೇಶ್ ಹಂದ್ರಾಳ್ ನಿರ್ದೇಶನದಲ್ಲಿರುವ 'ಸ್ಪಾರ್ಕ್ ಚಿತ್ರ ಇದೇ ಸಪ್ಟಂಬರ್ ತಿಂಗಳ 25ರಂದು ತೆರೆಗೆ ಬರಲಿದೆ. ಮಹಾಂತೇಶ್ ಅವರಿಗೆ ಆರಂಭಕಾಲದಲ್ಲಿ ತಮ್ಮ ತಂಡದಲ್ಲಿ ಅವಕಾಶ ನೀಡಿದ ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತು ಡಾರ್ಲಿಂಗ್ ಕೃಷ್ಣ ಅತಿಥಿಗಳಾಗಿ ಆಗಮಿಸಿ ಚಿತ್ರಕ್ಕೆ ಶುಭ ಕೋರಿದರು. ದಯಾಳ್ ಅವರು ಮಾತನಾಡಿ ನಾನು 'ಯೋಗರಾಜ್ ಬಟ್' ಎನ್ನುವ ಸಿನಿಮಾ ಮಾಡುವಾಗ ಅದರ ಡಿಜಿಟಲ್ ಪೋರ್ಶನ್ ಚಿತ್ರೀಕರಣಕ್ಕಾಗಿ ಪರದಾಡುತ್ತಿದ್ದೆ. ಆಗ ನನಗೆ ಸಹಾಯಕರಾಗಿ ಬಂದವರು ಮಹಾಂತೇಶ್. ಹಾಡಿನಲ್ಲಿ ನಂದಿ ಹಿಲ್ಸ್ ಅನ್ನು ಇದುವರೆಗೆ ಕಂಡಿರದಷ್ಟು ವಿಭಿನ್ನವಾಗಿ ತೋರಿಸಿದ್ದಾರೆ. ಒಟ್ಟಿನಲ್ಲಿ ಈಗ ನಾನೇ ಹೆಮ್ಮೆ ಪಡುವಂಥ ಚಿತ್ರ ಮಾಡಿದ್ದಾರೆ. ಕನ್ನಡದ ಎರಡನೇ ಜನರೇಶನ್ ನಲ್ಲಿ ನಾಯಕರಿಲ್ಲ ಎಂದು ಅಂದುಕೊಂಡಿದ್ದ ಸಂದರ್ಭದಲ್ಲಿ ಈ ಚಿತ್ರದ ನಾಯಕರಾಗಿರುವ ನಿರಂಜನ್ ಭರವಸೆಯ ಹೀರೋ ಅನಿಸಿದ್ದಾರೆ. ಅದೇ ರೀತಿ ಉಪೇಂದ್ರ ಅವರಿಗೆ ತಮ್ಮ ಅಣ್ಣ ಸುಧೀಂದ್ರ ಅವರೊಡನೆ ಇರುವ ಅನುಬಂಧ ನನಗೆ ಗೊತ್ತು. ಅದೇ ರೀತಿ ಈ ಚಿತ್ರದಲ್ಲಿ ಪ್ರೇಮ್ ಅವರ ಹೊಸ ಲುಕ್ ಇಷ್ಟವಾಯಿತು. ನಾನು ಚೆನ್ನೈನಲ್ಲಿ ಇದ್ದರೂ ಕನ್ನಡ ಚಿತ್ರಗಳನ್ನು ಥಿಯೇಟರ್ ನಲ್ಲೇ ನೋಡುತ್ತಿರುತ್ತೇನೆ. ಕೆಲವೊಮ್ಮೆ ಸಿನಿಮಾದ ಪ್ರಚಾರ ಅತಿಯಾಗಿದೆ ಎಂದು ಅನಿಸುವುದಿದೆ. ಆದರೆ ಈ ಚಿತ್ರದ ಪ್ರಚಾರ ಹಂತಹಂತವಾಗಿ ಕರಾರುವಕ್ಕಾಗಿ ನಡೆದಿದೆ.
ವ್ಯಾಪಾರದ ವಿಚಾರದಲ್ಲಿ ಕನ್ನಡ ಸಿನಿಮಾ ಇಂದಿಗೂ ಕೆಳಹಂತದಲ್ಲಿದೆ. ಇಂಥ ಸಂದರ್ಭದಲ್ಲಿ ಇಷ್ಟು ಗುಣಮಟ್ಟದಲ್ಲಿ ಚಿತ್ರ ಮಾಡಿರುವ ನಿರ್ಮಾಪಕರಿಗೆ ಅಭಿನಂದನೆಗಳು.
ಡಾರ್ಲಿಂಗ್ ಕೃಷ್ಣ ಅವರು ಮಾತನಾಡಿ ನಿರಂಜನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸ್ಟಂಟ್ ಮಾಡುವುದನ್ನು ಹಂಚಿಕೊಳ್ತಿರುತ್ತಾರೆ. ಡಾನ್ಸ್, ಫೈಟ್ ಎಂದು ಸಂಪೂರ್ಣವಾಗಿ ತಯಾರಿ ಪಡೆದಿರುವ ನಟ ಇವರು. ಕನ್ನಡದ ಹೃತಿಕ್ ರೋಶನ್ ಅಂತಾನೇ ಹೇಳಬಹುದು. ಹಾಡಿನಲ್ಲಿ ರಚನಾ ಜೊತೆಗೆ ಮುದ್ದಾದ ಕೆಮಿಸ್ಟ್ರಿ ಇದೆ ಎಂದು ಮೆಚ್ಚುಗೆ ಸೂಚಿಸಿದರು.





