- ರಾಘವೇಂದ್ರ ಅಡಿಗ ಎಚ್ಚೆನ್.
ಬಹು ದಿನಗಳಿಂದ ಕುತೂಹಲ ಮೂಡಿಸಿದ್ದ ಬಿಗ್ ಬಾಸ್ ತೆಲುಗು ಸೀಸನ್ 9ರ ಗ್ರ್ಯಾಂಡ್ ಫಿನಾಲೆ ಯಶಸ್ವಿಯಾಗಿ ಮುಕ್ತಾಯವಾಗಿದೆ. ಫಿನಾಲೆಯಲ್ಲಿ ಕಲ್ಯಾಣ್ ಪದಾಲ ಟ್ರೋಫಿ ಗೆದ್ದು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಸಂಜನಾ ಗಲ್ರಾನಿ, ಇಮಾನ್ಯುಯೆಲ್, ತನುಜಾ ಪುಟ್ಟಸ್ವಾಮಿ ಸೇರಿದಂತೆ ಹಲವು ಪ್ರಬಲ ಸ್ಪರ್ಧಿಗಳನ್ನು ಹಿಂದಿಕ್ಕಿ ಕಲ್ಯಾಣ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.
ಈ ಬಾರಿ ಬಿಗ್ ಬಾಸ್ 106 ದಿನಗಳ ಕಾಲ ನಡೆಯಿತು. ವಿಶೇಷವೆಂದರೆ ಫಿನಾಲೆಗೆ ಕರ್ನಾಟಕದ ಇಬ್ಬರು ಸ್ಪರ್ಧಿಗಳು ಪ್ರವೇಶ ಪಡೆದಿದ್ದರು. ಈ ಕಾರಣದಿಂದಲೇ ಈ ಬಾರಿ ತೆಲುಗು ಬಿಗ್ ಬಾಸ್ ಕನ್ನಡಿಗರ ಗಮನವನ್ನೂ ಸೆಳೆದಿತ್ತು. ಸಂಜನಾ ಗಲ್ರಾನಿ ಮತ್ತು ತನುಜಾ ಪುಟ್ಟಸ್ವಾಮಿ ಇಬ್ಬರೂ ಫಿನಾಲೆ ತಲುಪಿದ್ದು, ಅಂತಿಮವಾಗಿ ತನುಜಾ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.
ಕಲ್ಯಾಣ್ ಪದಾಲ ವಿನ್ನರ್
ಫಿನಾಲೆಯಲ್ಲಿ ಸಂಜನಾ ಗಲ್ರಾನಿ, ಕಲ್ಯಾಣ್ ಪದಾಲ, ಇಮಾನ್ಯುಯೆಲ್, ತನುಜಾ ಪುಟ್ಟಸ್ವಾಮಿ ಮತ್ತು ಪವನ್ ಐವರು ಸ್ಪರ್ಧಿಸಿದ್ದರು. ಸಂಜನಾ ನಾಲ್ಕನೇ ರನ್ನರ್ ಅಪ್ ಆಗಿ ಹೊರಬಂದರು. ನಂತರ ಕಲ್ಯಾಣ್ ಮತ್ತು ತನುಜಾ ನಡುವೆ ತೀವ್ರ ಪೈಪೋಟಿ ನಡೆದಿದ್ದು, ಅಂತಿಮವಾಗಿ ಕಲ್ಯಾಣ್ ಬಿಗ್ ಬಾಸ್ ತೆಲುಗು ಸೀಸನ್ 09ರ ವಿಜೇತರಾಗಿ ಘೋಷಿತರಾದರು.
ಕಾಮನ್ ಮ್ಯಾನ್ ಆಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದ ಕಲ್ಯಾಣ್ ಪದಾಲ ಟ್ರೋಫಿಯ ಜೊತೆಗೆ 35 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಒಂದು ಎಸ್‌ಯುವಿ ಕಾರನ್ನೂ ಪಡೆದುಕೊಂಡಿದ್ದಾರೆ. ಆಂಧ್ರಪ್ರದೇಶದ ವಿಜಯನಗರ ಮೂಲದ ಕಲ್ಯಾಣ್, ಈ ಹಿಂದೆ ಭಾರತೀಯ ಸೇನೆಯಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಬಾಲ್ಯದಿಂದಲೂ ನಟನೆಯ ಮೇಲೆ ಆಸಕ್ತಿ ಹೊಂದಿದ್ದ ಅವರು, ತಮ್ಮ ಸರಳತೆ ಮತ್ತು ಶಿಸ್ತುಬದ್ಧ ಆಟದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ಮನಸ್ಸು ಗೆದ್ದ ಸಂಜನಾ
ಸಂಜನಾ ಗಲ್ರಾನಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ದಿನದಿಂದಲೇ ತಮ್ಮ ಆಟದಿಂದ ಗಮನ ಸೆಳೆದಿದ್ದರು. ಅಗತ್ಯವಿದ್ದಾಗ ಮಾತ್ರ ಧ್ವನಿ ಎತ್ತಿ, ಟಾಸ್ಕ್‌ಗಳಲ್ಲಿ ತಮ್ಮ ಸಾಮರ್ಥ್ಯ ತೋರಿಸಿದರು. ಕೆಲ ಸಂದರ್ಭಗಳಲ್ಲಿ ಭಾವುಕರಾಗಿ ಪ್ರೇಕ್ಷಕರ ಮನ ಮುಟ್ಟಿದ ಸಂಜನಾ, ನೆಗೆಟಿವ್ ಅಂಶಗಳ ನಡುವೆಯೂ ಸಾಕಷ್ಟು ಪಾಸಿಟಿವ್ ಅಂಶಗಳ ಮೂಲಕ ಮೆಚ್ಚುಗೆ ಪಡೆದರು.
ತನುಜಾ ರನ್ನರ್ ಅಪ್
ತನುಜಾ ಪುಟ್ಟಸ್ವಾಮಿ ಆರಂಭದಿಂದಲೇ ಸ್ಥಿರ ಆಟವಾಡುತ್ತಾ ಫಿನಾಲೆವರೆಗೂ ತಲುಪಿದರು. ಮನರಂಜನೆ ಹಾಗೂ ಆಟ ಎರಡನ್ನೂ ಸಮತೋಲನದಿಂದ ನಡೆಸಿದ ಅವರು ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ. ಕನ್ನಡದಲ್ಲಿ ‘6-5=3’ ಚಿತ್ರದ ಮೂಲಕ ನಟನೆಗೆ ಎಂಟ್ರಿ ಕೊಟ್ಟ ತನುಜಾ, ಬಳಿಕ ತೆಲುಗು ಮತ್ತು ತಮಿಳು ಟಿವಿ ಲೋಕದಲ್ಲಿ ಜನಪ್ರಿಯತೆಯನ್ನು ಗಳಿಸಿದ್ದಾರೆ. ತೆಲುಗು ಟಿವಿ ಕ್ಷೇತ್ರದಲ್ಲಿ ಅವರು ತನುಜಾ ಪುಟ್ಟಸ್ವಾಮಿ ಎಂದೇ ಖ್ಯಾತಿ ಪಡೆದಿದ್ದು, ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.





