
ಕೋಲಾರದ ಇತಿಹಾಸವನ್ನು ಇಣುಕಿ ನೋಡಿದಲ್ಲಿ ಕ್ರಿಶ.ಎರಡನೇ ಶತಮಾನದಲ್ಲಿ ಗಂಗಾ ರಾಜವಂಶದರಿಂದ ಕೋಲಾರ ಸ್ಥಾಪಿಸಲ್ಪಟ್ಟ ಕಾರಣ ಅವರು ತಮ್ಮನ್ನು ಕುವಲಲ-ಪುರವರೇಶ್ವರ (ಕೋಲಾರದ ಅಧಿಪತಿ) ಎಂದೇ ಸಂಭೋಧಿಸಿಕೊಳ್ಳುತ್ತಿದ್ದರು. ಸುಮಾರು 1,000 ವರ್ಷಗಳ ನಂತರ ತಮ್ಮ ರಾಜಧಾನಿಯನ್ನು ತಲಕಾಡಿಗೆ ಸ್ಥಳಾಂತರಿಸಿದ ನಂತರವೂ ಅಲ್ಲಿಂದಲೇ, ಪಶ್ಚಿಮ ಗಂಗರು ಗಂಗವಾಡಿಯನ್ನು ಆಳಿದರು. ನಂತರ ಕೋಲಾರವು ಚೋಳರ ಆಳ್ವಿಕೆಗೆ ಒಳಪಟ್ಟು ಆ ಪ್ರದೇಶವನ್ನು ನಿಕರಿಲಿಚೋಳ-ಮಂಡಲ ಎಂದು ಕರೆದರು. ಚೋಳರ ರಾಜ ಉತ್ತಮ ಚೋಳನು ಅಲ್ಲಿ ರೇಣುಕಾ ದೇವಾಲಯವನ್ನು ನಿರ್ಮಿಸಿದರೆ, ವೀರ ಚೋಳ, ವಿಕ್ರಮ ಚೋಳ ಮತ್ತು ರಾಜಾ ನಾಗೇಂದ್ರ ಚೋಳರು ಅವನಿ, ಮುಳಬಾಗಲು ಮತ್ತು ಸೀತಾ ಬೆಟ್ಟಗಳಲ್ಲಿ ದೇವಾಲಯಗಳನ್ನು ನಿರ್ಮಿಸಿದರು. ರಾಜೇಂದ್ರ ಚೋಳನ ಕಾಲದಲ್ಲಿ ಕೋಲಾರಮ್ಮ ದೇವಾಲಯ ನಿರ್ಮಾಣದ ಜೊತೆ ಕೋಲಾರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ಶಿವ ದೇವಾಲಯಗಳನ್ನು ನಿರ್ಮಾಣಗೊಂಡವು. ಅದಕ್ಕೆ ಉದಾಹರಣೆಯಂತೆ ಇಂದಿನ ಕೆ.ಜಿ.ಎಫ್ ನ ಮಾರಿಕುಪ್ಪಂ ಗ್ರಾಮ (ನನ್ನ ಜನ್ಮಸ್ಥಳ)ದಲ್ಲಿ ಸೋಮೇಶ್ವರ ಮತ್ತು ಇಂದಿನ ಛಾಂಪಿಯನ್ ರೈಲ್ವೇ ನಿಲ್ದಾಣದ ಬಳಿ ಇರುವ ಶ್ರೀ ಉದ್ಧಂಡೇಶ್ವರಿ ದೇವಾಲಯಗಳು, ಊರುಗಾಂಪೇಟೆಯ ಈಶ್ವರನ್ ದೇವಾಲಯ ಮತ್ತು ಮಡಿವಾಳ ಗ್ರಾಮದ ಶಿವನ ದೇವಾಲಯಗಳು ಇಂದಿಗೂ ಇದ್ದು ಉಳಿದ ಬಹಳಷ್ಟು ದೇವಾಲಯಗಳು ನಾಶವಾಗಿವೆ.
1336 ರಿಂದ 1664 ರವರೆಗಿನ ವಿಜಯನಗರದ ಆಳ್ವಿಕೆಗೆ ಕೋಲಾರ ಒಳಪಟ್ಟರೆ, ನಂತರ 17 ನೇ ಶತಮಾನದಲ್ಲಿ ಸುಮಾರು ಐವತ್ತು ವರ್ಷಗಳ ಕಾಲ ಮರಾಠರ ಅಧೀನದಲ್ಲಿದ್ದು, ಶಿವಾಜಿಯ ತಂದೆ ಶಹಾಜಿ ಭೋಂಸ್ಲೆಯ ಅಳ್ವಿಕೆಯಲ್ಲಿತ್ತು. ಆದಾದ ನಂತರ ಸುಮಾರು ಎಪ್ಪತ್ತು ವರ್ಷಗಳ ಕಾಲ ಮುಸ್ಲಿಮರ ಕೈವಶವಾಗಿ, 1720 ರಲ್ಲಿ, ಕೋಲಾರವು ಸಿರಾ ಪ್ರಾಂತ್ಯದ ಭಾಗವಾಗಿ, ಕಡಪಾ ನವಾಬ್, ಹೈದರಾಬಾದ್ ನಿಜಾಮ್ ಮತ್ತು ಹೈದರ್ ಅಲಿ ಆಳಿದರು. 1768 ರಿಂದ 1770 ರವರೆಗೆ ಬ್ರಿಟಿಷರ ಆಳ್ವಿಕೆ ಬಂದು ಮತ್ತೆ ಮರಾಠರಿಗೆ ಮತ್ತು ನಂತರ ಹೈದರ್ ಅಲಿಗೆ ಹಸ್ತಾಂತರಿಸಿತು. 1791 ರಲ್ಲಿ, ಲಾರ್ಡ್ ಕಾರ್ನ್‌ವಾಲಿಸ್ 1791 ರಲ್ಲಿ ಕೋಲಾರವನ್ನು ವಶಪಡಿಸಿಕೊಂಡನಾದರೂ, ಮರುವರ್ಷ ಶ್ರೀರಂಗಪಟ್ಟಣ ಒಪ್ಪಂದದಲ್ಲಿ ಅದನ್ನು ಮೈಸೂರಿಗೆ ಹಿಂದಿರುಗಿಸಿದರು. ಈ ಪ್ರದೇಶದಲ್ಲಿ ದೊರೆತ ವಿವಿಧ ಶಾಸನಗಳ ಪ್ರಕಾರ, ಈ ಕೋಲಾರ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಮಹಾವಾಲಿಗಳು (ಬಾಣರು), ಕದಂಬರು, ಚಾಲುಕ್ಯರು, ಪಲ್ಲವ, ವೈದುಂಬರು, ರಾಷ್ಟ್ರಕೂಟರು, ಚೋಳರು, ಹೊಯ್ಸಳರು ಮತ್ತು ಮೈಸೂರು ರಾಜರ ಆಳ್ವಿಕೆಯಲ್ಲಿತ್ತು ಎಂಬುದನ್ನು ತಿಳಿಸುತ್ತವೆ.





