`ಮಿಸ್ ಇಂಡಿಯಾ ಯೂನಿವರ್ಸ್' ಪಟ್ಟ ಗಿಟ್ಟಿಸಿಕೊಂಡ ಬಳಿಕ ಮಾಡೆಲಿಂಗ್ ಹಾಗೂ ಸಿನಿಮಾಗಳಲ್ಲಿ ನಟಿಸಿದ ತನುಶ್ರೀ ದತ್ತಾ ಮೂಲತಃ ಜಾರ್ಖಂಡ್‌ನ ಜಂಶೆಡ್‌ಪುರದವಳು. `ಆಶಿಕ್ ಬನಾಯಾ ಆಪ್ ನೇ' ಇದು ತನುಶ್ರೀಯ ಮೊದಲ ಸಿನಿಮಾ. ಆಕೆ ಬಹಳೇ ಸಾಹಸಿ, ತನಗನಿಸಿದ್ದನ್ನು ನಿರ್ಭಿಡೆಯಿಂದ ಹೇಳಿಬಿಡುತ್ತಾಳೆ.
2008ರಲ್ಲಿ `ಹಾರ್ನ್ ಓಕೆ ಪ್ಲೀಸ್' ಸಿನಿಮಾದ ಸಂದರ್ಭದಲ್ಲಿ ಆಕೆ ನಾನಾ ಪಾಟೇಕರ್ ವಿರುದ್ಧ ಧ್ವನಿ ಎತ್ತಿದ್ದಳು. ತನಗಿಷ್ಟವಾಗದ ರೀತಿಯಲ್ಲಿ ಸ್ಪರ್ಶಿಸಿದ್ದು ಹಾಗೂ ಸಿನಿಮಾದಲ್ಲಿ ಇಂಟಿಮೇಟ್ ಸೀನ್‌ಗೆ ಬೇಡಿಕೆ ಸಲ್ಲಿಸಿದ್ದು, ಆಕೆಗೆ ಬಹಳ ಕೆಡುಕೆನಿಸಿತ್ತು. ಅವಳು ಸಿನಿಮಾವನ್ನು ಅರ್ಧದಲ್ಲಿಯೇ ಬಿಟ್ಟು ಅಮೆರಿಕಕ್ಕೆ ಹೋಗಿದ್ದಳು. ತನ್ನ ಮಾತನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳದೇ ಇರುವುದು ಅವಳಿಗೆ ಖಿನ್ನತೆಯನ್ನುಂಟು ಮಾಡಿತ್ತು.
`ಮೀ ಟೂ' ಅಭಿಯಾನದ ಸಂದರ್ಭದಲ್ಲಿ ಆಕೆ ತನ್ನ ಮನಸ್ಸಿನ ಮಾತನ್ನು ಮತ್ತೊಮ್ಮೆ ಜನರ ಮುಂದಿಟ್ಟಿದ್ದಳು. ಆ ಕುರಿತಂತೆ ಸಾಕಷ್ಟು ಚರ್ಚೆಯಾಯಿತು. ಇತ್ತೀಚೆಗಷ್ಟೇ ಆಕೆ ಮಾತಿಗೆ ಸಿಕ್ಕಾಗ ಸಾಕಷ್ಟು ಚರ್ಚೆ ಮಾಡಲು ಸಾಧ್ಯವಾಯಿತು.
ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಸೆಟಲ್ ಆದ ಬಳಿಕ ನೀವು ವಿದೇಶಕ್ಕೆ ಹೋಗಿದ್ದು ಏಕೆ? ಅಲ್ಲೇನು ಮಾಡುತ್ತಿದ್ದೀರಿ?
`ಹಾರ್ನ್ ಓಕೆ ಪ್ಲೀಸ್'ನ ಆ ಘಟನೆ ನನ್ನನ್ನು ಅಲ್ಲಾಡಿಸಿಬಿಟ್ಟಿತ್ತು. ನಟ ನಾನಾ ಪಾಟೇಕರ್, ನಿರ್ಮಾಪಕ ಸಮೀರ್ ಸಿದ್ಧಿಖಿ, ನಿರ್ದೇಶಕ ರಾಕೇಶ್ ಸಾರಂಗ್ ಹಾಗೂ ಕೋರಿಯೊಗ್ರಾಫರ್ ಗಣೇಶ್ ಆಚಾರ್ಯ ಇವರೆಲ್ಲ ಸೇರಿ ನನಗೆ ತೊಂದರೆ ಕೊಟ್ಟಿದ್ದರು. ಆ ಬಳಿಕ ನನಗೆ ಬಾಲಿವುಡ್‌ನಲ್ಲಿ ಕೆಲಸ ಮಾಡುವ ಇಚ್ಛೆಯೇ ಹೊರಟುಹೋಯಿತು. ನಾನು ಆಗಲೇ ಸಹಿ ಹಾಕಿದ್ದ ಕೆಲವು ಸಿನಿಮಾಗಳನ್ನು ಪೂರ್ತಿಗೊಳಿಸಲು ಆಗಲಿಲ್ಲ.
ಅಷ್ಟೊತ್ತಿಗೆ ನನಗೆ ಅಭಿನಯ ಚೆನ್ನಾಗಿ ಕರಗತವಾಗಿತ್ತು. ಒಳ್ಳೆಯ ಸಿನಿಮಾಗಳನ್ನು ಆಯ್ಕೆ ಮಾಡಲು ಕಲಿತುಕೊಂಡಿದ್ದೆ. ನನ್ನೊಂದಿಗೆ ಹೀಗಾಗಬಹುದೆಂದು ನಾನು ಊಹಿಸಿಯೂ ಇರಲಿಲ್ಲ. ಇದರ ಹೊರತಾಗಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಕೆಲವು ಗೂಂಡಾಗಳು ನನ್ನ ಗಾಡಿಯನ್ನು ನಜ್ಜುಗುಜ್ಜು ಮಾಡಿದರು. ಈ ಘಟನೆಯಿಂದ ನನಗೆ ಬಹಳ ಆಘಾತವಾಯಿತು. ಆಗ ನನ್ನ ತಂದೆ ತಾಯಿ ನನ್ನ ಜೊತೆಗಿದ್ದರು. ಅವರು ಈ ವಾತಾವರಣದಿಂದ ನನ್ನನ್ನು ಪಾರು ಮಾಡಲೆಂದು ಬಂದಿದ್ದರು. ಇಂತಹದೊಂದು ವಾತಾವರಣದಲ್ಲಿ ಇರಲೇಬಾರದೆಂದು ನಾನು ನಿರ್ಧರಿಸಿದೆ.
10 ವರ್ಷಗಳ ಹಿಂದೆ ನೀವು ಇವೆಲ್ಲ ಮಾತುಗಳನ್ನು ಹೇಳಿದ್ದೀರಿ. ಆಗ ಯಾರೊಬ್ಬರೂ ಆ ಮಾತುಗಳನ್ನು ಕೇಳಿಸಿಕೊಳ್ಳದೇ ಇರುವ ಉದ್ದೇಶವೇನು?
ನಾನು ಆಗ ಬಹಳ ದಿಟ್ಟತನದಿಂದ ಆ ವಿಷಯ ಹೇಳಿದ್ದೆ. ಟಿವಿಯಲ್ಲಿ ಹಲವು ದಿನಗಳ ಕಾಲ ನನ್ನ ಸಂದರ್ಶನ ಬರುತ್ತಲೇ ಇತ್ತು. ಆಗ ನನ್ನ ವಯಸ್ಸು ಕಡಿಮೆ ಇತ್ತು. ಆದರೆ ಉತ್ಸಾಹ ಜಾಸ್ತಿ ಇತ್ತು. ಆದರೆ ಮೀಡಿಯಾದವವರು ವಿಭಿನ್ನವಾಗಿದ್ದರು. ಸೋಶಿಯಲ್ ಮೀಡಿಯಾಗಳ ಪ್ರಭಾವ ಇಷ್ಟೊಂದು ಜೋರಾಗಿರಲಿಲ್ಲ. ಜನರಲ್ಲಿ ಅಷ್ಟೊಂದು ಜಾಗರೂಕತೆಯೂ ಇರಲಿಲ್ಲ. ದೌರ್ಜನ್ಯವನ್ನು ಜನರು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಸ್ವಲ್ಪ ತೊಂದರೆ ಕೊಟ್ಟರೆ ಏನಾಯ್ತು, ರೇಪ್ ಅಂತೂ ಮಾಡಿಲ್ಲ ತಾನೇ? ಮರೆತುಬಿಡು ಎಂದು ಹೇಳುತ್ತಿದ್ದರು.