ಗಾಳಿಪಟ-2, ಮಾರ್ಟಿನ್ ಚಿತ್ರಗಳ ಮೂಲಕ ಕನ್ನಡಿಗರ ಮನಗೆದ್ದ ನಟಿಮಣಿ ವೈಭವಿ ಶಾಂಡಿಲ್ಯ. ಕೆಲ ವರ್ಷಗಳು ಪ್ರೀತಿಯ ಕಡಲಲ್ಲಿ ತೇಲಿದ ವೈಭವಿ ಶಾಂಡಿಲ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವೃತ್ತಿಯಲ್ಲಿ ಫಿಲ್ಮ್ಮೇಕರ್ ಆಗಿರುವ ಗೆಳೆಯ ಹರ್ಷವರ್ಧನ್ ಜೊತೆ ದಾಂಪತ್ಯ ಜೀವನ ಶುರುಮಾಡಿದ್ದಾರೆ.
ವೈಭವಿ ಶಾಂಡಿಲ್ಯ.. ಸ್ಯಾಂಡಲ್ವುಡ್ನಲ್ಲಿ ನಟನೆ, ಸೌಂದರ್ಯ, ಮುದ್ದಾದ ಮಾತಿಂದ ಕನ್ನಡಿಗರ ಮನಸ್ಸು ಗೆದ್ದ ಚೆಲುವೆ. 2015ರಲ್ಲಿ ಮರಾಠಿಯ ‘ಜನಿವಾ’ ಸಿನಿಮಾದ ಮೂಲಕ ಬೆಳ್ಳಿ ಪರದೆಗೆ ಪಾದರ್ಪಣೆ ಮಾಡಿದ್ದರು. ಮರಾಠಿ ಮಾತ್ರವಲ್ಲದೆ ತಮಿಳು, ತೆಲುಗು, ಕನ್ನಡ ಚಿತ್ರರಂಗದಲ್ಲೂ ಅಭಿನಯದ ಮೂಲಕ ಮೋಡಿ ಮಾಡಿದರು. ಕನ್ನಡ ದಲ್ಲಿ ‘ರಾಜ್ವಿಷ್ಣು’ ಚಿತ್ರದ ಮೂಲಕ ಸಿನಿಯಾನ ಆರಂಭಿಸಿದ ವೈಭವಿ ಶಾಂಡಿಲ್ಯ, ಬಿಗ್ಸ್ಟಾರ್ಗಳ ಜೊತೆ ನಟಿಸಿ ಸೈ ಎನ್ನಿಸಿಕೊಂಡರು.
ವಿಕಟ ಕವಿ ಯೋಗರಾಜ್ ಭಟ್ ನಿರ್ದೇಶನ, ಗೋಲ್ಡನ್ ಸ್ಟಾರ್ ಗಣೇಶ್ ಅಭಿಯನದ ಗಾಳಿಪಟ-2, ಎಪಿ ಅರ್ಜುನ್ ನಿರ್ದೇಶನ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಚಿತ್ರದಲ್ಲೂ ವೈಭವಿ ಶಾಂಡಿಲ್ಯ ಮಿಂಚಿದರು. ಸದ್ಯ ಈಗ ಫಿಲ್ಮ್ ಮೇಕರ್ ಆಗಿರುವ ಗೆಳಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಟಿ ವೈಭವಿ ಶಾಂಡಿಲ್ಯ ಕೈ ಹಿಡಿದ ಹುಡುಗನ ಹೆಸರು ಹರ್ಷವರ್ಧನ್. ವೃತ್ತಿಯಲ್ಲಿ ಫಿಲ್ಮ್ಮೇಕರ್. ಕೆಲ ವರ್ಷಗಳಿಂದ ವೈಭವಿ ಶಾಂಡಿಲ್ಯ ಹಾಗೂ ಹರ್ಷವರ್ಧನ್ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿಯ ವಿಚಾರವನ್ನ ಎರಡೂ ಕುಟುಂಬದವರಿಗೂ ತಿಳಿಸಿದ್ದಾರೆ. ಎರಡು ಕುಟುಂಬದವರ ಒಪ್ಪಿಗೆ ಪಡೆದು ಮುಂಬೈನಲ್ಲಿ ಸರಳವಾಗಿ ಹಸೆಮಣೆ ಏರಿದ್ದಾರೆ.
ಈ ಸಂತಸದ ವಿಚಾರವನ್ನ ನಟಿ ವೈಭವಿ ಶಾಂಡಿಲ್ಯ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದಾರೆ. ನಮ್ಮ ಕುಟುಂಬ, ಗುರು-ಹಿರಿಯರು, ಸ್ನೇಹಿತರ ಆಶೀರ್ವಾದದೊಂದಿಗೆ ಹರ್ಷವರ್ಧನ್ ಜೊತೆ ಸುಂದರ ಪಯಣ ಶುರುವಾಗಿದೆ. ಪ್ರೀತಿ ಹಾಗೂ ಬೆಂಬಲಕ್ಕಾಗಿ ಸದಾ ಕೃತಜ್ಞಳಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ.