– ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಳೆಯ ಸಂಪ್ರದಾಯದಲ್ಲಿ ಕೃಷಿಮಾಡಿ, ಆಧುನಿಕ ಸಾಹಿತ್ಯದ ಕೃತಿಗಳನ್ನು ಸಾಹಿತ್ಯ ಪ್ರಿಯರಿಗೆ ಕೊಟ್ಟ ಮಹತ್ವದ ಲೇಖಕರಲ್ಲೊಬ್ಬರಾದ ಭಾವಗಳ ಕವಿ ಎಚ್ಚೆಸ್ವಿ ಎಂದೇ ಕರೆಯಲ್ವಡುತ್ತಿದ್ದ ಎಚ್ ಎಸ್ ವೆಂಕಟೇಶಮೂರ್ತಿ (80 ವರ್ಷ )ನಿಧನರಾಗಿದ್ದಾರೆ. ಕಥೆ, ಕಾದಂಬರಿ, ವಿಮರ್ಶೆ, ಕವನ, ಮಕ್ಕಳ ಸಾಹಿತ್ಯ, ಸಿನಿಮಾ ಸಾಹಿತ್ಯ, ರಂಗಭೂಮಿ ಮುಂತಾಗಿ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಕೃಷಿ ಮಾಡಿದ್ದ ಕನ್ನಡದ ನಲ್ಮೆಯ ಕವಿ, ನಿವೃತ್ತ ಕನ್ನಡ ಪ್ರಾಧ್ಯಾಪಕರೂ ಆಗಿದ್ದ ಇವರು ಕೆಲದಿನಗಳಿಂದ ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಇಂದು ಬೆಳಗ್ಗೆ 7 ಗಂಟೆಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರು ನಾಲ್ವರು ಪುತ್ರರನ್ನು ಅಗಲಿದ್ದಾರೆ.
ಸುಮಾರು 30 ವರ್ಷಗಳ ಕಾಲ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ‘ಕನ್ನಡದಲ್ಲಿ ಕಥನ ಕವನಗಳು’ ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದುಕೊಂಡಿದ್ದರು. ಅಲ್ಲದೇ ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮಕ್ಕಳಿಗಾಗಿ ಕವಿತೆ, ನಾಟಕ, ಕಥೆಗಳನ್ನೂ ಬರೆದಿದ್ದಾರೆ. ಇವರು ಅನುವಾದಿಸಿದ ಕಾಳಿದಾಸನ ‘ಋತುಸಂಹಾರ‘ ಕಾವ್ಯಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪುರಸ್ಕಾರವನ್ನು ಪಡೆದಿದೆ. ಜೊತೆಗೆ ರಾಜ್ಯೋತ್ಸವ ಪ್ರಶಸ್ತಿ, ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿವೆ.
ಮೂಲತಃ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಗ್ರಾಮದ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಮ್.ಎ ಪದವಿ ಪಡೆದರು. ನಂತರ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. ಕನ್ನಡದಲ್ಲಿ `ಕಥನ ಕವನಗಳು’ ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದಿದ್ದಾರೆ. 2000ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದರು.
ಎಚ್ ಎಸ್ ವೆಂಕಟೇಶಮೂರ್ತಿ ಅವರ ಅಂತಿಮ ದರ್ಶನವನ್ನು ಇಂದು ಮಧ್ಯಾಹ್ನ 11-2 ಗಂಟೆಯ ತನಕ ರವೀಂದ್ರ ಕಲಾಕ್ಷೇತ್ರ ಹಿಂಭಾಗದ ಸಂಸ ಬಯಲು ರಂಗಮಂದಿರದಲ್ಲಿ ವ್ಯವಸ್ಥೆ ಮಾಡಲಾಗಿದೆ.