- ರಾಘವೇಂದ್ರ ಅಡಿಗ ಎಚ್ಚೆನ್.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಚೊಚ್ಚಲ ಪ್ರಯತ್ನದಲ್ಲೇ ಗಮನಾರ್ಹ ಗೆಲುವು ಸಾಧಿಸಿರುವ ವಿಜಯ್ ಅವರಿಗೆ ಸ್ಯಾಂಡಲ್ವುಡ್ ನಟ ಶಿವರಾಜಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಶುಭಾಶಯ ಕೋರಿರುವ ಶಿವರಾಜಕುಮಾರ್, “ಈ ಚುನಾವಣೆಯಲ್ಲಿ ನೀವು ಅರ್ಹವಾದ ಗೆಲುವು ಸಾಧಿಸಿದ್ದೀರಿ. ಟೀಕೆಗಳ ನಡುವೆಯೂ ಮೌನವಾಗಿ ನಿಮ್ಮ ಕೆಲಸದ ಮೂಲಕ ಉತ್ತರಿಸಿದ್ದೀರಿ. ಇದೇ ನಿಜವಾದ ಜಯ. ನಾನು ಹಿಂದೆ ‘ಟಿವಿಕೆ’ ಎಂದರೆ ‘Try Vijay as King’ ಎಂದು ತಮಾಷೆ ಹೇಳಿದ್ದೆ. ಇಂದು ನೀವು ನಿಜವಾಗಿಯೂ ರಾಜನಂತೆ ಎದ್ದು ನಿಂತಿದ್ದೀರಿ. ಜನರಿಗೆ ನೀಡಿದ ಭರವಸೆಗಳನ್ನು ನೆರವೇರಿಸಿ ಅಭಿವೃದ್ಧಿಯ ದಾರಿಗೆ ಮುನ್ನಡೆಸಲಿ” ಎಂದು ಹಾರೈಸಿದ್ದಾರೆ.
234 ಸದಸ್ಯರಿರುವ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳ ಅವಶ್ಯಕತೆ ಇದೆ. ವಿಜಯ್ ನೇತೃತ್ವದ ಟಿವಿಕೆ ಪಕ್ಷ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬಹುಮತಕ್ಕೆ ಇನ್ನೂ 10 ಸ್ಥಾನಗಳ ಕೊರತೆಯಿದೆ.
ದಕ್ಷಿಣ ಭಾರತದ ಪ್ರಮುಖ ರಾಜ್ಯವಾದ ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ನಡೆದ ಮತದಾನದಲ್ಲಿ ಒಟ್ಟು 234 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಈ ಬಾರಿ 4,654 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಇವರಲ್ಲಿ 3,579 ಪುರುಷರು ಮತ್ತು 443 ಮಹಿಳೆಯರು ಸ್ಪರ್ಧಿಸಿದ್ದರು. ರಾಜ್ಯದಲ್ಲಿ 84.69% ಮತದಾನ ದಾಖಲಾಗಿತ್ತು.
ಈ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ಮೈತ್ರಿಕೂಟ, ಎಐಎಡಿಎಂಕೆ ಮೈತ್ರಿಕೂಟ, ವಿಜಯ್ ನೇತೃತ್ವದ ಟಿವಿಕೆ ಹಾಗೂ ಎನ್ಟಿಕೆ ಪಕ್ಷಗಳು ಪೈಪೋಟಿ ನಡೆಸಿದ್ದವು.





