- ರಾಘವೇಂದ್ರ ಅಡಿಗ ಎಚ್ಚೆನ್.
ದಳಪತಿ ವಿಜಯ್ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಅವರ ಬಹುನಿರೀಕ್ಷಿತ ಸಿನಿಮಾ ‘ಜನ ನಾಯಗನ್’ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಚಿತ್ರದ ರಿಲೀಸ್ ತಡವಾಗುತ್ತಿರುವ ಬಗ್ಗೆ ಆತಂಕದಲ್ಲಿದ್ದ ಅಭಿಮಾನಿಗಳಿಗೆ ಇದೀಗ ನಿರ್ಮಾಪಕ ಕೆ. ವೆಂಕಟ್ ಪ್ರಭು ಗುಡ್ ನ್ಯೂಸ್ ನೀಡಿದ್ದಾರೆ.
ಚಿತ್ರವು ಸದ್ಯ ಸೆನ್ಸಾರ್ ಮಂಡಳಿಯ ಅಂತಿಮ ಹಂತದ ಪ್ರಕ್ರಿಯೆಯಲ್ಲಿದ್ದು, ನಿರಂತರ ಮಾತುಕತೆ ನಡೆಯುತ್ತಿದೆ ಎಂದು ವೆಂಕಟ್ ಪ್ರಭು ತಿಳಿಸಿದ್ದಾರೆ. “ಎಲ್ಲವೂ ಪ್ಲಾನ್ ಪ್ರಕಾರ ನಡೆದರೆ ಇನ್ನೆರಡು ವಾರಗಳಲ್ಲಿ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ” ಎಂದು ಖಚಿತಪಡಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಸಿನಿಮಾ ಮುಂದೂಡಲ್ಪಡುತ್ತದೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಆದರೆ ನಿರ್ಮಾಪಕರ ಸ್ಪಷ್ಟನೆ ಬಳಿಕ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ. ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ‘ಸಿಎಂ ದಳಪತಿ ವಿಜಯ್’ ಎಂಬ ವಿಶೇಷ ಉಲ್ಲೇಖ ಇರಲಿದೆ ಎನ್ನುವ ಸುದ್ದಿ ಅಭಿಮಾನಿಗಳ ಹೈಪ್ ಮತ್ತಷ್ಟು ಹೆಚ್ಚಿಸಿದೆ.
ಇದೇ ವೇಳೆ ವಿಜಯ್ ಅವರ ರಾಜಕೀಯ ಏರಿಗೆಯ ಬಗ್ಗೆ ಮಾತನಾಡಿದ ವೆಂಕಟ್ ಪ್ರಭು, “ತಮಿಳುನಾಡಿನಲ್ಲಿ ಹೊಸ ನಾಯಕತ್ವದೊಂದಿಗೆ ಹೊಸ ಯುಗ ಆರಂಭವಾಗಿದೆ. ವಿಜಯ್ ಕೇವಲ ಸಿನಿಮಾ ಹೀರೋ ಅಲ್ಲ, ಈಗ ಜನರ ನಿಜವಾದ ಜನ ನಾಯಕ” ಎಂದು ಹೊಗಳಿದ್ದಾರೆ.
ಮುಖ್ಯಮಂತ್ರಿ ಆದ ಬಳಿಕ ತೆರೆಗೆ ಬರುತ್ತಿರುವ ವಿಜಯ್ ಅವರ ಮೊದಲ ಸಿನಿಮಾ ಇದಾಗಿರುವುದರಿಂದ ‘ಜನ ನಾಯಗನ್’ ಮೇಲೆ ಭಾರೀ ನಿರೀಕ್ಷೆ ಮೂಡಿದೆ. ರಾಜಕೀಯ ಡೈಲಾಗ್‌ಗಳು, ವಿಜಯ್ ಅವರ ಮಾಸ್ ಅವತಾರ ಮತ್ತು ಹೊಸ ಇಮೇಜ್ ಚಿತ್ರಕ್ಕೆ ದೊಡ್ಡ ಬಲವಾಗಲಿದೆ ಎನ್ನಲಾಗುತ್ತಿದೆ.





