
ಹೆಸರು ಸಂಪತ್ ಕುಮಾರ್ ಎಂದಿದ್ದರೂ ಶಾಲಾ ಕಾಲೇಜಿನಲ್ಲಿ ಕುಮಾರ್ ಎಂದೇ ಖ್ಯಾತಿ ಪಡೆದಿದ್ದವರು ಓದಿಗಿಂತ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೇ ಹೆಚ್ಚಿನ ಆಸಕ್ತಿ. ಶಾಲಾ ಕಾಲೇಜು ದಿನಗಳಿಂದಲೇ ನಾಟಕ ಮತ್ತು ಹಾಡಿನಲ್ಲಿ ಎತ್ತಿದ ಕೈ. ಯಾವುದೇ ಸ್ಪರ್ಧೆಯಲ್ಲಿ ಕುಮಾರ್ ಭಾಗವಹಿಸುತ್ತಿದ್ದಾರೆಂದರೆ ಅಲ್ಲೊಂದು ಬಹುಮಾನ ಕಟ್ಟಿಟ್ಟ ಬುತ್ತಿ ಎಂಬುದು ಅವರ ಗೆಳೆಯರ ಬಳಗದಲ್ಲಿ ಮಾತಾಗಿತ್ತು.
ತಂದೆಯವರು ಚಿತ್ರರಂಗದಲ್ಲಿಯೇ ಇದ್ದ ಕಾರಣ, 1955ರಲ್ಲಿಯೇ ಬಾಲ ನಟನಾಗಿ ಶಂಕರ್ ಸಿಂಗ್ ನಿರ್ಮಾಣದ ಶಿವಶರಣ ನಂಬಿಯಕ್ಕ ಎಂಬ ಸಿನೆಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ನಂತರ 1956ರಲ್ಲಿ ಕೋಕಿಲವಾಣಿ ಎಂಬ ಮತ್ತೊಂದು ಸಿನೆಮಾದಲ್ಲಿಯೂ ಕೂಡ ಬಾಲ ನಟನಾಗಿ ಕುಮಾರ್ ಅಭಿನಯಿಸಿದ್ದರು. ಮುಂದೆ ತಮ್ಮ 21ನೆಯ ವಯಸ್ಸಿನಲ್ಲಿ ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ, ಖ್ಯಾತ ನಿರ್ದೇಶಕ ಗಿರೀಶ್ ಕಾರ್ನಾಡ್ ಅವರ ವಂಶವೃಕ್ಷ ಚಿತ್ರದಲ್ಲಿ ಸಣ್ಣದೊಂದು ಪಾತ್ರದಲ್ಲಿಯೂ ನಟಿಸಿದ್ದರು.

ಇದೇ ಸಮಯದಲ್ಲಿ ಪುಟ್ಟಣ್ಣ ಕಣಗಾಲರು ತರಾಸು ಅವರ ನಾಗರಹಾವು ಕಾದಂಬರಿಯನ್ನು ತೆರೆಗೆ ತರಲು ನಿರ್ಧರಿಸಿ ಆ ಚಿತ್ರದ ರಾಮಾಚಾರೀ ಪಾತ್ರಕ್ಕೆ ನವ ಯುವಕನನ್ನು ಹುಡುಕುತ್ತಿದ್ದಾಗ ಅವರ ಕಣ್ಣಿಗೆ ಕುಮಾರ್ ಬೀಳುತ್ತಾರೆ. ಮೊದಲ ನೋಟದಲ್ಲಿಯೇ ಅತನ ಹಾವ, ಭಾವ, ನೋಟ ಎಲ್ಲವೂ ಮೆಚ್ಚುಗೆಯಾಗಿ ಸಂಪತ್ ಕುಮಾರ್ ಎಂಬ ತರುಣನಿಗೆ ವಿಷ್ಣುವರ್ಧನ್ ಎಂದು ಮರುನಾಮಕರಣ ಮಾಡಿ ಕನ್ನಡ ಚಿತ್ರರಂಗಕ್ಕೆ ಅತ್ಯಂತ ಸುರದ್ರೂಪಿ ಮತ್ತು ಪ್ರತಿಭಾವಂತ ನಟನನ್ನು ಕೊಡುಗೆಯಾಗಿ ನೀಡಿದರು. ಅದೇ ಸಿನಿಮಾದ ಮೂಲಕ ಖ್ಯಾತ ನಟ ಅಮರನಾಥ್ (ಅಂಬರೀಷ್) ಮತ್ತು ಧೀರೇಂದ್ರ ಗೋಪಾಲ್ ಕೂಡಾ ನಟರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. 1972ರಲ್ಲಿ ಬಿಡುಗಡೆಯಾದ ನಾಗರಹಾವು ಚಿತ್ರ ವಿಷ್ಣುವರ್ಧನ್, ಅಶ್ವಥ್, ಆರತಿ, ಅಂಬರೀಷ್, ಧೀರೇಂದ್ರ ಗೋಪಾಲ್ ಮತ್ತು ಜಯಂತಿ ಅವರ ಚಿತ್ರರಂಗದ ಬದುಕನ್ನೇ ಬದಲಾಯಿಸಿತು ಎಂದರೂ ತಪ್ಪಾಗಲಾರದು. ನಾಯಕಿ ಅಲಮೇಲು(ಅರತಿ)ಅನ್ನು ಚುಡಾಯಿಸುವ ಜಲೀಲನ ಪಾತ್ರದಲ್ಲಿ ಬರುವ ಅಂಬರೀಷ್ ಮತ್ತು ಚಿತ್ರದುರ್ಗದ ಒನಕೆ ಓಬ್ಬವ್ವನ ಪಾತ್ರದ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುವ ಜಯಂತಿಯವರ ಅಭಿನಯ ಇಂದಿಗೂ ಯಾವುದೇ ಶಾಲಾಕಾಲೇಜುಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿರುವುದನ್ನು ಕಾಣ ಬಹುದಾಗಿದೆ. ಗುರು ಶಿಷ್ಯರ ಸಂಬಂಧ ದ್ವಾಪರ ಯುಗದಲ್ಲಿ ದ್ರೋಣಾಚಾರ್ಯ ಮತ್ತು ಏಕಲವ್ಯನಂತಿದ್ದರೆ, ಕಲಿಯುಗದಲ್ಲಿ ಚಾಮಯ್ಯ ಮೇಷ್ಟ್ರು ಮತ್ತು ರಾಮಚಾರಿಯಂತಿರಬೇಕು ಎನ್ನುವಷ್ಟರ ಮಟ್ಟಿಗೆ ಪ್ರಖ್ಯಾತಿ ಹೊಂದಿದೆ. ರಾಜ್ಯಾದ್ಯಂತ ಬಿಡುಗಡೆಯಾದ ಚಿತ್ರ ನಾನಾ ಕಡೆ ಶತದಿನೋತ್ಸವ ಆಚರಿಸಿದರೆ ಬೆಂಗಳೂರಿನ ಸಾಗರ್ ಚಿತ್ರಮಂದಿರ ಒಂದರಲ್ಲೇ ಸತತ 25 ವಾರಗಳ ಕಾಲ ಪ್ರದರ್ಶನಗೊಳ್ಳುವ ಮೂಲಕ ರಾತ್ರೋರಾತ್ರಿ ವಿಷ್ಣುವರ್ಧನ್ ಕನ್ನಡ ಚಿತ್ರರಸಿಕರ ಹೃದಯಕ್ಕೆ ಲಗ್ಗೆ ಹಾಕುವುದರಲ್ಲಿ ಯಶಸ್ವಿಯಾಗಿದ್ದಲ್ಲದೇ, ಆ ಚಿತ್ರ ರಾಷ್ಟ್ರಪ್ರಶಸ್ತಿಯನ್ನು ತನ್ನ ಮಡಿಲಿಗೆ ಹಾಕಿಕೊಳ್ಳುತ್ತದೆ.





