*ಸಿನಿಮಾ ರಂಗದಲ್ಲಿ ಇದೊಂದು ಐತಿಹಾಸಿಕ ಮೈಲಿಗಲ್ಲು: ‘ಲವ್ ಯು’ಗೆ ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ (AI) ಆಧಾರಿತ ಚಲನಚಿತ್ರ ಎಂಬ ಹೆಗ್ಗಳಿಕೆ - ಚಿತ್ರತಂಡ*
ಜಗತ್ತಿನಲ್ಲಿ ಈಗ ಎಲ್ಲಿ ನೋಡಿದರೂ ಕೃತಕ ಬುದ್ಧಿಮತ್ತೆ (ಎ. ಐ)ಯದ್ದೇ ಮಾತು. ನಿಧಾನವಾಗಿ ಒಂದೊಂದೇ ಕ್ಷೇತ್ರವನ್ನು ಆವರಿಸಿಕೊಂಡು ಬರುತ್ತಿರುವ ಕೃತಕ ಬುದ್ಧಿಮತ್ತೆ (ಎ. ಐ) ಕೆಲ ಸಮಯದ ಹಿಂದೆಯೇ ಚಿತ್ರರಂಗವನ್ನೂ ಸ್ಪರ್ಶಿಸಿದೆ. ಈಗಾಗಲೇ ಸಿನಿಮಾಗಳ ಹಲವು ವಿಭಾಗಗಳಲ್ಲಿ, ಪ್ರೀ-ಪ್ರೊಡಕ್ಷನ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಎ. ಐ ಬಳಕೆ ನಿಧಾನವಾಗಿ ಹೆಚ್ಚಾಗುತ್ತಿದೆ. ಈಗ ಈ ವಿಷಯದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಒಂದು ಚಿತ್ರತಂಡ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (ಎ. ಐ) ಮೂಲಕವೇ ತಯಾರಾದ ‘ಲವ್ ಯು’ ಎಂಬ ಹೆಸರಿನ ಮೊದಲ ಸಿನಿಮಾವನ್ನು ತೆರೆಗೆ ತರುವ ತಯಾರಿಯಲ್ಲಿದೆ.
‘ಲವ್ ಯು’ ಎಂಬ ಹೆಸರಿನ ಈ ಸಿನಿಮಾವನ್ನು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (ಎ. ಐ) ಬಳಸಿ ನಿರ್ಮಿಸಲಾಗಿದೆ. ಈಗಾಗಲೇ ಜಗತ್ತಿನ ಅನೇಕ ಚಿತ್ರರಂಗಗಳಲ್ಲಿ, ಸಿನಿಮಾಗಳ ವಿವಿಧ ವಿಭಾಗಗಳಲ್ಲಿ ಎ. ಐ (AI) ತಂತ್ರಜ್ಞಾನವನ್ನು ಬಳಸಲಾಗುತ್ತಿದೆಯಾದರೂ, ಸಂಪೂರ್ಣವಾಗಿ ಎ. ಐ ಮೂಲಕವೇ ಇಡೀ ಸಿನಿಮಾವನ್ನು ನಿರ್ಮಿಸುವ ಸಾಹಸ ಎಲ್ಲಿಯೂ ನಡೆದಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಸಂಪೂರ್ಣ ಎ. ಐ (AI) ತಂತ್ರಜ್ಞಾನವನ್ನೇ ಬಳಸಿಕೊಂಡು ‘ಲವ್ ಯು’ ಸಿನಿಮಾವನ್ನು ತಯಾರಿಸಲಾಗಿದೆ.
‘ಈ ಸಿನಿಮಾದ ನಿರ್ದೇಶಕರು, ನಿರ್ಮಾಪಕರನ್ನು ಹೊರತುಪಡಿಸಿದರೆ, ಮತ್ತೆಲ್ಲ ಕೆಲಸಗಳನ್ನೂ ಎ. ಐ (AI) ತಂತ್ರಜ್ಞಾನವೇ ಮಾಡಿರುವುದು ಇದರ ಮೊದಲ ವಿಶೇಷತೆ. ಇದು ವಿಶ್ವದಲ್ಲಿಯೇ ಸಂಪೂರ್ಣ ಎ. ಐ (AI) ನಿರ್ಮಿತ ಮೊದಲ ಸಿನಿಮಾ’ ಎನ್ನುತ್ತಾರೆ ಈ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸಿರುವ ಎಸ್. ನರಸಿಂಹ ಮೂರ್ತಿ.
‘ನಮ್ಮ ‘ಲವ್ ಯು’ ಸಿನಿಮಾದಲ್ಲಿ ಬರುವ ಪ್ರತಿ ಪಾತ್ರಗಳು, ಅವುಗಳ ಸಂಭಾಷಣೆ, ಸಂಗೀತ ಸಂಯೋಜನೆ, ಛಾಯಾಗ್ರಹಣ, ಸೌಂಡ್ ಡಿಸೈನ್, ಹಿನ್ನೆಲೆಯಲ್ಲಿ ಬರುವ ಸ್ಥಳಗಳು, ಕಲರಿಂಗ್ ಹೀಗೆ ಎಲ್ಲಾ ಕೆಲಸಗಳಿಗೂ ಎ. ಐ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ನೂತನ್ ಎಂಬ ಎ. ಐ (AI) ಇಂಜಿನಿಯರ್ ತಮ್ಮ ತಾಂತ್ರಿಕ ನಾಯಕತ್ವ ಮತ್ತು ಸುಂದರ್ ರಾಜ್ ಗುಂಡೂರಾವ್ ಯೋಜನೆಯ ನೇತೃತ್ವದಲ್ಲಿ ಈ ಸಿನಿಮಾ ಸೃಜನಶೀಲವಾಗಿ ಮೂಡಿಬಂದಿದೆ’ ಎಂಬುದು ‘ಲವ್ ಯು’ ಎ. ಐ (AI) ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕ ಎಸ್. ನರಸಿಂಹ ಮೂರ್ತಿ ಮಾತು.
ಅಂದಹಾಗೆ, 95 ನಿಮಿಷಗಳ ‘ಲವ್ ಯು’ ಎ. ಐ (AI) ಸಿನಿಮಾದಲ್ಲಿ ಬರೋಬ್ಬರಿ 12 ಹಾಡುಗಳಿವೆ. ಅವೆಲ್ಲವೂ (AI) ಮೂಲಕ ಸಂಯೋಜಿಸಲ್ಪಟ್ಟು, ಮುದ್ರಣಗೊಂಡಿವೆ. ಈಗಾಗಲೇ ‘ಲವ್ ಯು’ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಈ ಸಿನಿಮಾವನ್ನು ಇತ್ತೀಚೆಗೆ ವೀಕ್ಷಿಸಿದ ಸೆನ್ಸಾರ್ ಮಂಡಳಿ ‘ಲವ್ ಯು’ ಎ. ಐ (AI) ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರವನ್ನು ನೀಡಿದೆ. ಈ ಮೂಲಕ ಸಂಪೂರ್ಣ ಕೃತಕ ಬುದ್ಧಿಮತ್ತೆ (ಎ. ಐ) ಮೂಲಕ ತಯಾರಾದ ‘ಲವ್ ಯು’ ಸಿನಿಮಾ ಥಿಯೇಟರಿನಲ್ಲಿ ಬಿಡುಗಡೆಯಾಗಲು ಸೆನ್ಸಾರ್ ಮಂಡಳಿಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ.