ಜೀ಼ ಕನ್ನಡ ವಾಹಿನಿ ಮತ್ತೊಮ್ಮೆ ತನ್ನ ಪ್ರೇಕ್ಷಕರಿಗೆ ಅದ್ಬುತ ಅನುಭವ ನೀಡಲು ಸಜ್ಜಾಗಿದ್ದು, ಇದೇ ಶನಿವಾರ ಸಂಜೆ 4 ಗಂಟೆಗೆ ದುನಿಯಾ ವಿಜಯ್, ರಚಿತಾ ರಾಮ್ ಅಭಿನಯದ ‘ಲ್ಯಾಂಡ್ ಲಾರ್ಡ್’ ಸಿನಿಮಾ ಪ್ರದರ್ಶಿಸಲಿದೆ.
1980 ರ ದಶಕದ ಹಳ್ಳಿಯೊಂದರಲ್ಲಿ ನಡೆಯುವ ಸಾಮಾಜಿಕ ಕಥಾಹಂದರದ ಸಿನಿಮಾವೇ 'ಲ್ಯಾಂಡ್ ಲಾರ್ಡ್'. ಆತ್ಮಗೌರವ, ದಬ್ಬಾಳಿಕೆ, ನ್ಯಾಯ ಮತ್ತಿತರ ಅಂಶಗಳಿಗೆ ಮಹತ್ತರವಾದ ಒತ್ತು ನೀಡಿದೆ. ಜಾತಿ ತಾರತಮ್ಯ, ಅಸಮಾನತೆ ಮತ್ತು ಬಡವರ ಮೇಲಿನ ಸಿರಿವಂತರ ದಬ್ಬಾಳಿಕೆಯನ್ನು ಈ ಚಿತ್ರ ಕಣ್ಣಿಗೆ ಕಟ್ಟುವಂತೆ ತೋರಿಸುತ್ತದೆ. ಸಾಮಾನ್ಯ ಜನರು ಅನ್ಯಾಯದ ವಿರುದ್ಧ ಒಟ್ಟಾಗಿ ಹೋರಾಟ ಮಾಡಿದಾಗ ಏನಾಗುತ್ತದೆ ಎಂಬುದೇ ಈ ಚಿತ್ರದ ಜೀವಾಳ.
ಶಾಂತ ಜೀವನ ಬಯಸುವ ರಾಚಯ್ಯ (ದುನಿಯಾ ವಿಜಯ್) ತನ್ನ ಮಡದಿ ನಿಂಗವ್ವ (ರಚಿತಾರಾಮ್ ) ಮತ್ತು ಮಗಳು ಭಾಗ್ಯಾಳೊಂದಿಗೆ, ತಾನು ಹೆಮ್ಮೆಯಿಂದ ತನ್ನದೇ ಎಂದು ಕರೆಯಬಹುದಾದ ಒಂದು ಸಣ್ಣ ಜಮೀನನ್ನು ಹೊಂದುವ ಕನಸಿನೊಂದಿಗೆ ಬದುಕುತ್ತಿರುವವನಾಗಿದ್ದಾನೆ. ಆದರೆ, ಗ್ರಾಮವನ್ನು ಪ್ರಭಾವಶಾಲಿ ಸಣ್ಣ ಧಣಿ (ರಾಜ್ ಬಿ. ಶೆಟ್ಟಿ) ಆಳುತ್ತಿದ್ದು, ಅವನ ಪ್ರಭಾವ ಜಮೀನು ಮಾಲೀಕತ್ವ, ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯವರೆಗೂ ವ್ಯಾಪಿಸಿರುತ್ತದೆ. ರಾಚಯ್ಯ ಕಾನೂನಿನ ಮೇಲೆ ಬಹಳ ನಂಬಿಕೆ ಇಟ್ಟು, ನ್ಯಾಯವು ಸಾಮಾನ್ಯ ಜನರನ್ನು ಕಾಪಾಡುತ್ತದೆ ಎಂದು ನಂಬಿದ್ದರೂ, ಧಣಿಯ ಆಡಳಿತದಡಿಯಲ್ಲಿ ಗ್ರಾಮಸ್ಥರು ಅನುಭವಿಸುವ ಶೋಷಣೆ, ಭಯ ಮತ್ತು ಹಿಂಸೆ ಆತನ ಗಮನಕ್ಕೆ ಬರುತ್ತದೆ. ಶಾಂತ ಸ್ವಭಾವದ ರಾಚಯ್ಯ ಧಣಿಯ ಶೋಷಣೆ ನೋಡಲಾರದೆ ನಿಧಾನವಾಗಿ ಬದಲಾಗಿ ಇವೆಲ್ಲದರ ವಿರುದ್ಧ ಧ್ವನಿ ಎತ್ತುವ ನಾಯಕನಾಗಿ ಬದಲಾಗುತ್ತಾನೆ. ಚಿತ್ರದಲ್ಲಿ ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಅವರ ನಟನೆ ಅದ್ಭುತವಾಗಿದೆ. ಇನ್ನು ಜಮೀನ್ದಾರ್ ಸಣ್ಣ ಧಣಿಯ ಪಾತ್ರದಲ್ಲಿ ಮಿಂಚಿದ ರಾಜ್ ಬಿ. ಶೆಟ್ಟಿ ತನ್ನ ನಟನೆಯ ಮೂಲಕ ಪ್ರೇಕ್ಷಕರನ್ನು ಬೆರಗುಗೊಳಿಸುತ್ತಾರೆ.
ರಾಚಯ್ಯ ಮತ್ತು ಗ್ರಾಮಸ್ಥರು ಸಣ್ಣಧಣಿಯ ದಬ್ಬಾಳಿಕೆಯ ವಿರುದ್ಧ ಹೋರಾಡುವಲ್ಲಿ ಯಶಸ್ವಿಯಾಗುತ್ತಾರೆಯೇ? ವೀಕ್ಷಿಸಿ 'ಲ್ಯಾಂಡ್‌ಲಾರ್ಡ್' ಇದೇ ಶನಿವಾರ ಸಂಜೆ 4 ಗಂಟೆಗೆ ಕೇವಲ ಜೀ ಕನ್ನಡದಲ್ಲಿ.





