ಸಿನಿಮಾರಂಗ ಯಾರ ಸ್ವತ್ತೂ ಅಲ್ಲ. ಪ್ರತಿಭೆ, ಆಸಕ್ತಿ, ಒಲವು ಇರೋರು ಯಾರು ಬೇಕಾದರೂ ಅರಸಿಕೊಂಡು ಬರಬಹುದು. ಬಂದವರೂ ಇದ್ದಾರೆ. ಯಶಸ್ವಿಯಾಗಿ ಬೆಳೆದಿದ್ದಾರೆ. ಅಂತಹ ಆಶಾವಾದಿಗಳಲ್ಲಿ ಯಶಸ್ವಿ ಶಂಕರ್ ಕೂಡ ಒಬ್ಬರು. ಮೈಸೂರಿನವರಾದ ಇವರು ಎಂಜಿನಿಯರಿಂಗ್ ಮುಗಿಸಿ ಅಮೆರಿಕಾದಲ್ಲಿ ನೆಲೆಸಿ ಸುಮಾರು ಇಪ್ಪತ್ತು ರ್ಷಗಳಿಂದ ಸ್ವಂತ ಐ.ಟಿ. ಕಂಪನಿ ಸಾನ್ವಿ ಟೆಕ್ನಾಲಜೀಸ್ ಸ್ಥಾಪಿಸಿ ಅಮೆರಿಕಾದ ಮಿಚಿಗನ್ ನಗರದಲ್ಲಿ ನಡೆಸುತ್ತಿದ್ದಾರೆ. ಆದರೆ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಮೊದಲಿನಿಂದಲೂ ಇತ್ತಂತೆ. ನಟ, ನಿರ್ಮಾಪಕ ಎಂ.ಪಿ. ಶಂಕರ್ ಮಗ ತಿಲಕ್ ಹಾಗೂ ಇವರು ಬಾಲ್ಯದಿಂದಲೇ ಸ್ನೇಹಿತರು. ನಟಿಸುವ ಅವಕಾಶವಿದ್ದರೂ ವಿದ್ಯಾಭ್ಯಾಸದ ಕಡೆಗೆ ಗಮನ ಕೊಡಬೇಕು ಎಂಬ ಅಪ್ಪ ಹಾಕಿದ ಗೆರೆ ದಾಟಲಿಲ್ಲವಂತೆ. ಲೈಫ್‌ನಲ್ಲಿ ಸೆಟಲ್ ಆಗಿರುವ ಶಂಕರ್‌ಗೆ ಒಂದು ಒಳ್ಳೆಯ ಸಿನಿಮಾ ಮಾಡಬೇಕೆಂಬ ಆಸೆ ಚಿಗುರಿದಾಗ ಬರೀ ಹೊಸಬರನ್ನು ಹಾಕಿಕೊಂಡು `ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' ಎನ್ನುವ ಕ್ಯಾಚಿ ಟೈಟಲ್ ನ ಸಿನಿಮಾ ಮಾಡಿದ್ದಾರೆ.
``ಯಶಸ್ವೀ ಡೈರೆಕ್ಟರ್‌ರಿಂದ ಜನಪ್ರಿಯ ನಟರನ್ನು ಹಾಕಿ ಸಿನಿಮಾ ಮಾಡಬಹುದಿತ್ತು. ಆದರೆ ನನಗೆ ಅವಕಾಶಕ್ಕಾಗಿ ಕಾಯುತ್ತಿರುವ ಹೊಸ ಪ್ರತಿಭೆಗಳಿಗೆ ಛಾನ್ಸ್ ಕೊಡಬೇಕು. ಮುಂದೊಂದು ದಿನ ಅವರು ಫೇಮಸ್ ಆಗಿ ಮಿಂಚಬೇಕು ಎಂಬ ಆಸೆ ನನ್ನದು. ನಾಲ್ಕು-ಐದು ಸಿನಿಮಾಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ಶ್ರೀಕಾಂತ್ ಎನ್ನುವ ಹುಡುಗನಿಗೆ ನಿರ್ದೇಶನದ ಜವಾಬ್ದಾರಿ ಹೊರಿಸಿದೆ. ಪ್ರತಿಯೊಂದು ಹಂತದಲ್ಲೂ ನಾನು ಜೊತೆಗೆ ನಿಂತು ಗೈಡ್ ಮಾಡಿದೆ, ಕಾರ್ಪೋರೇಟ್ ಸ್ಟೈಲ್ ನಲ್ಲಿ ಪ್ರೊಡಕ್ಷನ್ ಕೆಲಸ ಮಾಡಿದ್ದೇವೆ,'' ಎಂದು ಹೇಳುತ್ತಾರೆ ಶಂಕರ್.
ಅಮೆರಿಕಾದಲ್ಲಿ ಇದ್ದುಕೊಂಡೇ ಆಡಿಶನ್ ಕೂಡಾ ಮಾಡಿದ್ದಾರಂತೆ. ಹೊಸಬರಿಗೆ ಮೊದಲ ಆದ್ಯತೆ ಎಂದು ಮೊದಲೇ ಹೇಳಿದ್ದರಿಂದ ನಾಯಕನ ಪಾತ್ರಕ್ಕೆ ರಾಜೀವ್ ಎನ್ನುವ ಹವ್ಯಾಸಿ ಫೋಟೋಗ್ರಾಫರನ್ನು ಆರಿಸಿದರೆ, ಈಗಾಗಲೇ `ವೀಕೆಂಡ್' ಚಿತ್ರದಲ್ಲಿ ನಟಿಸಿರುವ ಸಂಜನಾಳನ್ನು ನಾಯಕಿ ಪಾತ್ರಕ್ಕೆ ಆಯ್ಕೆ ಮಾಡಿದರಂತೆ. ಅರ್ಜುನ್ ರೆಡ್ಡಿ ಸಿನಿಮಾ ಖ್ಯಾತಿಯ ಗೋಪಿನಾಥ್ ಹೆಗ್ಡೆ, ಯಮುನಾ ಶ್ರೀನಿಧಿ, ಗುರುದತ್ ಬಿಟ್ಟರೆ ಉಳಿದವರೆಲ್ಲರೂ ಹೊಸಬರು.
ನಿಮಗೆ ಆ್ಯಕ್ಟರ್ ಆಗೋ ಆಸೆ ಇತ್ತಲ್ಲ ನೀವು ನಟಿಸಿದ್ದೀರಾ? ಎಂದು ಕೇಳಿದಾಗ, ಈ ಸಿನಿಮಾದಲ್ಲಿ ಮೇನ್ ರೋಲ್ ಐಪಿಎಸ್ ಆಫೀಸರ್ ಪಾತ್ರಕ್ಕಾಗಿ ನಾವು ಪ್ರಖ್ಯಾತ ಹಿಂದಿ ನಟನನ್ನು ಅಪ್ರೋಚ್ ಮಾಡಿದಾಗ ಆತ ಕೇಳಿದ ಸಂಭಾವನೆ ತುಂಬಾ ದುಬಾರಿ ಅನಿಸಿತ್ತು. ಆದ್ದರಿಂದ ನಾನೇ ಆ ಪಾತ್ರ ಮಾಡಿದೆ. ಡೈರೆಕ್ಟರ್ ಆಸೆಯೂ ಅದೇ ಆಗಿತ್ತು. ನನ್ನ ಪತ್ನಿ ಸವಿತಾ, ಮಗಳು ಸಾನ್ವಿ ಕೂಡ ನಟಿಸಿದ್ದಾರೆ. ಇದೊಂಥರಾ ಫ್ಯಾಮಿಲಿ ಪ್ಯಾಕ್, ಎಂದು ಹೇಳಿ ನಗುತ್ತಾರೆ ಶಂಕರ್.
ವಿಲನ್ ಪಾತ್ರಕ್ಕೂ ಮಲಯಾಳಂ ನಟರೊಬ್ಬರನ್ನು ಆಯ್ಕೆ ಮಾಡಲಾಗಿತ್ತು. ಅವರ ಡಿಮ್ಯಾಂಡ್ ಕೇಳಿ ವಾಪಸ್ ಕಳುಹಿಸಿಕೊಟ್ಟೆ. ಆತನ ಜಾಗಕ್ಕೆ ಚಿರಾಗ್ ಎನ್ನುವ ಹೊಸ ಟ್ಯಾಲೆಂಟ್‌ನ್ನು ಕರೆಸಿದೆ. ತುಂಬಾನೇ ಚೆನ್ನಾಗಿ ವಿಲನ್ ಪಾತ್ರ ನಿರ್ಹಿಸಿದ್ದಾನೆ.