ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಬಟ್ಟೆಗಳ ಆಯ್ಕೆಯ ಪ್ರಕ್ರಿಯೆ ಶುರುವಾಗುತ್ತದೆ. ಸಡಿಲವಾದ ದೇಹಕ್ಕೆ ತಂಪು ನೀಡುವ ಪೋಷಾಕುಗಳು ಪ್ರತಿಯೊಬ್ಬರ ದೇಹದ ಮೇಲೆ ಗೋಚರಿಸುತ್ತವೆ. ಬಟ್ಟೆಗಳ ಫ್ಯಾಬ್ರಿಕ್ ಬಗ್ಗೆ ಹೇಳಬೇಕೆಂದರೆ, ಹತ್ತಿಯ ಹಾಗೂ ತೆಳ್ಳಗಿನ ಬಟ್ಟೆಗಳನ್ನು ಬೇಸಿಗೆ ಋತುವಿನಲ್ಲಿ ಆಯ್ಕೆ ಮಾಡಲಾಗುತ್ತದೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಬಿಳಿ ಹತ್ತಿಯ ಬಟ್ಟೆಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗುತ್ತದೆ. ಆದರೆ ನಾವು ಫ್ಯಾಷನ್ ಲೋಕದ ಮೇಲೆ ದೃಷ್ಟಿಹರಿಸಿದಾಗ ನಮಗೆ ಕೂಲ್ ಮತ್ತು ಸೂದಿಂಗ್ ಬಣ್ಣಗಳೇ ಕಂಡುಬರುತ್ತವೆ.
ಫ್ಯಾಷನ್ ಜಗತ್ತಿನಲ್ಲಿ ಬೇಸಿಗೆಯಲ್ಲಿ ಧರಿಸುವ ಬಟ್ಟೆಗಳನ್ನು ನಾಲ್ಕು ಭಾಗಗಳಲ್ಲಿ ವಿಂಗಡಿಸಲಾಗಿದೆ :
ಬಿಸಿ ಅಂದರೆ ವಾರ್ಮ್ ಟೋನ್
ತಂಪು ಅನುಭೂತಿ ಅಂದರೆ ಕೂಲ್ ಟೋನ್
ನ್ಯಾಚುರಲ್ ಟೋನ್
ಸೌಮ್ಯ ಟೋನ್
ವಾರ್ಮ್ ಟೋನ್
ನೀವು ಯಾವುದಾದರೂ ಸಮಾರಂಭದಲ್ಲಿ ಅಥವಾ ಪಾರ್ಟಿಗಳಲ್ಲಿ ಹಾಟ್ ಆಗಿ ಕಾಣಲು ಇಚ್ಛಿಸುತ್ತಿದ್ದರೆ, ಗೋಲ್ಡನ್, ಯೆಲ್ಲೋ, ವಾಟರ್ ಮೆಲನ್, ಚೆರ್ರಿ, ರೆಡ್, ಆರೆಂಜ್ ಅಥವಾ ಗಾಢ ಕಿತ್ತಳೆ ವರ್ಣದ ಪೋಷಾಕು ಧರಿಸಿ. ಆದರೆ ಇವು ಸಂಜೆ ಅಥವಾ ರಾತ್ರಿ ಹೊತ್ತಿನ ಪಾರ್ಟಿಗಷ್ಟೇ ಸೂಕ್ತ. ಒಂದು ವೇಳೆ ನೀವು ಏಸಿ ವಾತಾವರಣದಲ್ಲಿ ಅಥವಾ ಹೆಚ್ಚು ಮುಕ್ತ ವಾತಾವರಣದಲ್ಲಿರುವ ಪಾರ್ಟಿಗಳಿಗೆ ಹೋಗುತ್ತಿದ್ದರೆ ಹಗಲಿನಲ್ಲಿ ಇಂತಹ ಪೋಷಾಕುಗಳನ್ನು ಅಗತ್ಯವಾಗಿ ಧರಿಸಬಹುದು.
ಕೂಲ್ ಟೋನ್
ಉರಿ ಬಿಸಿಲಿನಲ್ಲಿ ಕೂಲ್ ಕೂಲ್ ಆಗಿ ಕಾಣುವುದು ಯಾರಿಗೆ ತಾನೆ ಇಷ್ಟ ಆಗುವುದಿಲ್ಲ. ಫ್ರೆಶ್ ಮತ್ತು ಕೂಲ್ ಆಗಿ ಕಾಣಲು ನೀವು ತಿಳಿನೀಲಿ, ಹಸಿರು, ಮೆಹಂದಿ, ಲೆಮನ್, ನೇವಿ ಬ್ಲ್ಯೂ ಮುಂತಾದ ಬಣ್ಣಗಳನ್ನು ಬಳಸಿಕೊಂಡು ನಿಮಗೆ ಹಾಗೂ ಬೇರೆಯವರಿಗೆ ಕೂಲ್ ಕೂಲ್ ಅನುಭೂತಿ ಕೊಡಬಹುದು.
ನ್ಯಾಚುರಲ್ ಟೋನ್
ನ್ಯಾಚುರಲ್ ಟೋನ್ ಅಂದರೆ ನೈಸರ್ಗಿಕ ಬಣ್ಣಗಳು ನಿಮಗೆ ಬೇಸಿಗೆಯಲ್ಲಿ ತಂಪುತನದ ಮತ್ತು ತಾಜಾತನದ ಅನುಭೂತಿ ನೀಡುತ್ತವೆ. ಬಿಳಿ, ಖಾಕಿ, ಹನಿ, ರಸ್ಟ್ ಇವು ನ್ಯಾಚುರಲ್ ಕಲರ್‌ಗಳಾಗಿದ್ದು, ಅವು ಬಿಸಿಲಿನಲ್ಲೂ ತಾಜಾತನವನ್ನು ಬಿಂಬಿಸುತ್ತವೆ.
ಸೌಮ್ಯ ಟೋನ್
ಬೇಸಿಗೆಯಲ್ಲಿ ಸೌಮ್ಯ ವರ್ಣದ ಸಡಿಲ ಬಟ್ಟೆಗಳನ್ನು ಧರಿಸುವುದು ಹಿತಕರ ಎನಿಸುತ್ತದೆ. ಸೌಮ್ಯ ವರ್ಣದ ಬಟ್ಟೆಗಳು ತಂಪುತನದ ಅನುಭೂತಿ ನೀಡುತ್ತವೆ. ಬಿಳಿ, ಬಟರ್ ಕ್ರೀಮ್, ಪೀಚ್, ಆಕಾಶ ನೀಲಿ, ಗುಲಾಬಿ ಮುಂತಾದ ನಿಮಗೆ ಕೂಲ್ ಕೂಲ್ ಅನುಭೂತಿ ನೀಡುತ್ತವೆ.
ಫ್ಯಾಷನ್ ಡಿಸೈನರ್ ಪ್ರಿಯದರ್ಶಿನಿ ಹೀಗೆ ಹೇಳುತ್ತಾರೆ, ``ಬೇಸಿಗೆಯಲ್ಲಿ ಸಾಮಾನ್ಯವಾಗಿ ಸೌಮ್ಯ ವರ್ಣದ ಪೋಷಾಕುಗಳನ್ನು ಧರಿಸುವ ಮುಖ್ಯ ಉದ್ದೇಶವೆಂದರೆ, ದೇಹಕ್ಕೆ ತಂಪು ಅನುಭೂತಿ ಉಂಟಾಗಲೆಂದು. ಕಪ್ಪು ಅಥವಾ ಯಾವುದೇ ಪ್ರಖರ ಬಣ್ಣಗಳು ಬಿಸಿಲನ್ನು ಹೀರಿಕೊಳ್ಳುತ್ತವೆ. ಅದರಿಂದಾಗಿ ನಮಗೆ ಇನ್ನೂ ಹೆಚ್ಚಿನ ಉಷ್ಣತೆಯ ಅನುಭವವಾಗುತ್ತದೆ. ಹೀಗಾಗಿ ಬೇಸಿಗೆಯ ದಿನಗಳಲ್ಲಿ ಗಾಢ ವರ್ಣದ ಪೋಷಾಕು ಧರಿಸಬೇಡಿ.
ಮದುವೆ ಅಥವಾ ಬೇರೆ ಯಾವುದೇ ಪಾರ್ಟಿಗಳಿಗೆ ಹೋಗುವಾಗ ಸಮ್ಮರ್ ಕೂಲ್ ಫ್ಯಾಬ್ರಿಕ್ ಬಳಸಿ. ಕಾಟನ್, ಲಿನಿನ್, ಬಟರ್ ಕ್ರೇಪ್ ಹಾಗೂ ಜಾರ್ಜೆಟ್‌ನಂತಹ ಬಟ್ಟೆಗಳು ತಿಳಿ ಬಣ್ಣದಿಂದ ಕೂಡಿದ್ದಾಗಿರಲಿ ಹಾಗೂ ಆ ಬಟ್ಟೆಗಳು ಮೃದುವಾಗಿರುವಂತೆ ನೋಡಿಕೊಳ್ಳಿ.