ಈ ಉಡುಪುಗಳ ಬಗೆಗೆ ಸಂಪೂರ್ಣ ಗಮನಕೊಡುವುದು ಅತ್ಯವಶ್ಯ. ಇಲ್ಲದಿದ್ದರೆ ನೀವು ಹಲವು ದುಷ್ಪರಿಣಾಮಗಳಿಗೆ ತುತ್ತಾಗಬೇಕಾಗುತ್ತದೆ. ನೀವು ಒಳ ಉಡುಪುಗಳನ್ನು ಖರೀದಿಸುವ ಸಂದರ್ಭದಲ್ಲಿ ಕೆಳಕಂಡ ಸಂಗತಿಗಳನ್ನೊಮ್ಮೆ ಗಮನಿಸಿ.

ಹತ್ತಿ ಬಟ್ಟೆಯ ಒಳ ಉಡುಪುಗಳನ್ನೇ ಖರೀದಿಸಿ : ಚರ್ಮಕ್ಕೆ ಹತ್ತಿ ಬಟ್ಟೆಯೇ ಉತ್ತಮ. ಹೀಗಾಗಿ ಪ್ಯಾಂಟಿಯಂತಹ ಒಳ ಉಡುಪುಗಳು ಹತ್ತಿ ಬಟ್ಟೆಯಿಂದಲೇ ಮಾಡಿದ್ದಾಗಿರಲಿ. ಸಿಲ್ಕ್ ಮತ್ತು ಸಿಂಥೆಟಿಕ್‌ ಬಟ್ಟೆಗಳು ಹೆಚ್ಚು ಸೆಕ್ಸಿ ಆಗಿ ಕಾಣುತ್ತವೆ. ಆದರೆ ಆ ತೆರನಾದ ಬಟ್ಟೆಗಳಲ್ಲಿ ಗಾಳಿ ಸಂಚಾರ ಆಗುವುದಿಲ್ಲ. ಅದರಿಂದಾಗಿ ತ್ವಚೆ ರೋಗಗಳು ಹಾಗೂ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ. ನೀವು ಸಿಂಥೆಟಿಕ್‌ ಬಟ್ಟೆಗಳನ್ನೇ ಖರೀದಿಸಬೇಕೆಂದಿದ್ದರೆ, ಅದರ ಲೈನಿಂಗ್‌ ಹತ್ತಿಯ ಬಟ್ಟೆಯದ್ದಾಗಿರಲಿ.

ಸೂಕ್ತ ಅಳತೆಯದ್ದಾಗಿರಲಿ : ಪ್ಯಾಂಟಿಯ ಅಳತೆ ದೊಡ್ಡದಿದ್ದರೆ ಆ ಕಡೆ ಈ ಕಡೆ ಎಳೆದಂತಾಗುತ್ತದೆ. ಬಹಳ ಫಿಟ್‌ ಆಗಿದ್ರೆ ಇನ್ನೂ ಕಷ್ಟ. ಸಡಿಲವಾದ ಪ್ಯಾಂಟಿಯಿಂದ ನಡೆದಾಡಲು ತೊಂದರೆ ಹಾಗೂ ಬಿಗಿಯಾದ ಪ್ಯಾಂಟಿಯಿಂದ ಗಾಳಿ ಸಂಚಾರಕ್ಕೆ ಅಡಚಣೆ. ಪ್ಯಾಂಟಿಯ ಸೈಜ್‌ ನಿಮ್ಮ ಬ್ರಾ ಸೈಜ್‌ಗಿಂತ ದೊಡ್ಡದಾಗಿರಲಿ.

ಬಣ್ಣದ ಪ್ಯಾಂಟಿಗಳ ಬಳಕೆ ಕಡಿಮೆ ಮಾಡಿ : ಬಣ್ಣ ಬಣ್ಣದ ಪ್ಯಾಂಟಿಗಳು ಆಕರ್ಷಕ ಎನಿಸುತ್ತವೆ. ಆದರೆ ಡಾ. ಮಾಂಟೆಗೊಮರಿರವರ ಪ್ರಕಾರ, ಬಟ್ಟೆಗಳ ಬಣ್ಣ ಮೃದು ತ್ವಚೆಗೆ ಅದರಲ್ಲೂ ಸಂವೇದನಾಶೀಲ ತ್ವಚೆಗೆ ಹಾನಿಯನ್ನುಂಟು ಮಾಡುತ್ತದೆ. ಹೀಗಾಗಿ ಬಿಳಿ ಪ್ಯಾಂಟಿಯನ್ನೇ ಖರೀದಿಸಿ.

ಶೇಪ್‌ವೇರ್‌ ಹೆಚ್ಚು ಹೊತ್ತು ಧರಿಸದಿರಿ : ತೆಳ್ಳನೆಯ ಸೊಂಟ ಮತ್ತು ಸ್ಲಿಮ್ ದೇಹದ ಆಕರ್ಷಣೆಯಲ್ಲಿ ಮಹಿಳೆಯರು ಶೇಪ್‌ವೇರ್‌ನ್ನು ಧರಿಸುತ್ತಾರೆ. ಆದರೆ ಅದನ್ನು ಎಷ್ಟು ಹೊತ್ತು ಧರಿಸುವುದು ಸೂಕ್ತ ಎಂದು ಎಂದಾದರೂ ಯೋಚಿಸಿದ್ದಾರೆಯೇ? ಡಾ. ಶ್ವೇತಾರವರ ಪ್ರಕಾರ, ಹೆಚ್ಚು ಹೊತ್ತು ಶೇಪ್‌ವೇರ್‌ ಧರಿಸುವುದರಿಂದ ದೇಹಕ್ಕೆ ಹಲವು ಸಮಸ್ಯೆಗಳು ಉಂಟಾಗಬಹುದು. ಯಾವಾಗಾದರೊಮ್ಮೆ ಧರಿಸುವುದು ಸರಿ, ನಿಯಮಿತವಾಗಿ ಧರಿಸಬೇಡಿ.

ವರ್ಕ್‌ಔಟ್‌ ಸಮಯದಲ್ಲಿ : ವ್ಯಾಯಾಮ ಮಾಡುವಾಗ ನಿಮ್ಮ ಪ್ಯಾಂಟಿ ಹೇಗಿರಬೇಕು ಎಂಬುದನ್ನು ಗಮನಿಸಿ. ಅತ್ಯಂತ ಬಿಗಿಯಾಗಿರುವ ಪ್ಯಾಂಟಿ ಬೆವರನ್ನು ಹೀರಿಕೊಳ್ಳುವುದಿಲ್ಲ. ಅದರಿಂದಾಗಿ ಅಲ್ಲಿ ಬ್ಯಾಕ್ಟೀರಿಯಾಗಳು ಉದ್ಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಪ್ಯಾಂಟಿಯ ಆಯ್ಕೆಯ ಬಗ್ಗೆ ಗಮನ ಕೊಡಿ. ಬೆವರನ್ನು ಹೀರಿಕೊಂಡ ಪ್ಯಾಂಟಿ ಬೇಗ ಶುಷ್ಕಗೊಳ್ಳುವುದಿಲ್ಲ. ಹಾಗಾಗಿ ಅದನ್ನು ಹೆಚ್ಚು ಹೊತ್ತು ಧರಿಸುವುದರಿಂದ ಚರ್ಮದ ಮೇಲೆ ದುಂಡನೆಯ ಕೆಲವು ಗುರುತುಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ವ್ಯಾಯಾಮ ಮುಗಿಸುತ್ತಿದ್ದಂತೆ ಪ್ಯಾಂಟಿ ಬದಲಿಸಿ.

ಸ್ತ್ರೀರೋಗ ತಜ್ಞರ ಸಲಹೆ

ಡಾ. ಮೀನಾಕ್ಷಿ ಹೀಗೆ ಸಲಹೆ ನೀಡುತ್ತಾರೆ, “ಪ್ಯಾಂಟಿ ಸ್ವಚ್ಛಗೊಳಿಸುವ ಸಮಯದಲ್ಲಿ ಮಹಿಳೆಯರು ಗಮನಿಸಬೇಕಾದ ಸಂಗತಿಯೇನೆಂದರೆ, ಪ್ಯಾಂಟಿಗೆ ಅಷ್ಟಿಷ್ಟು ಬಿಳಿಸ್ರಾವ ಅಂಟಿಕೊಂಡಿದ್ದರೆ ಚಿಂತಿಸಬೇಕಾದ ಅಗತ್ಯವಿಲ್ಲ. ಆದರೆ ಅದರಿಂದ ದುರ್ಗಂಧ ಬರುತ್ತಿದ್ದರೆ, ಅದು ಗಾಢವಾಗಿದ್ದರೆ, ರಕ್ತಸ್ರಾವ ಆಗಿದ್ದರೆ ತಕ್ಷಣವೇ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಬೇಕು.”

ಕ್ಲೀವ್ ಲ್ಯಾಂಡ್‌ ಕ್ಲಿನಿಕ್‌ನ ಡಾ. ಫಿಲಿಯಾಂಗ್‌ ಪ್ಯಾಂಟಿಯನ್ನು ಸ್ವಚ್ಛಗೊಳಿಸುವಾಗ ಅದಕ್ಕೆ ಬಳಸುವ ಡಿಟರ್ಜೆಂಟ್‌ ಬಗೆಗೂ ಎಚ್ಚರವಹಿಸಬೇಕು ಎನ್ನುತ್ತಾರೆ. ನೀವು ಬಳಸುವ ಡಿಟರ್ಜೆಂಟ್‌ ಬಣ್ಣ ರಹಿತ ಹಾಗೂ ಸುವಾಸನಾರಹಿತ ಆಗಿರಬೇಕು. ಅದರಲ್ಲಿ ಡೈ ಕೂಡ ಇರಬಾರದು. ಏಕೆಂದರೆ ಅದರಿಂದ ತ್ವಚೆಗೆ ಅಲರ್ಜಿ ಉಂಟಾಗಬಹುದು.

ಗಮನಿಸಬೇಕಾದ ಸಂಗತಿಗಳು

ಮಲಗುವಾಗ ಪ್ಯಾಂಟಿ ಧರಿಸಬೇಡಿ : ಯಾವ ಮಹಿಳೆಯರು ದಿನವಿಡೀ ಬಟ್ಟೆ ಕಟ್ಟಿಕೊಂಡಿರುವ ಸ್ಥಿತಿಯಲ್ಲಿ ಕಳೆಯುತ್ತಾರೊ, ಅವರು ರಾತ್ರಿ ಹೊತ್ತು ಪ್ಯಾಂಟಿ ಧರಿಸಬಾರದು. ಇದಕ್ಕೆ ಕಾರಣವೇನೆಂದರೆ, ಇಡೀ ದಿನ ತೇವಾಂಶದ ಕಾರಣದಿಂದ ಆ ಭಾಗದಲ್ಲಿ ಸೋಂಕು ಉಂಟಾಗುವ ಉರಿಯುಂಟಾಗುವ ಸಾಧ್ಯತೆ ಹೆಚ್ಚು.

ಮಿಚಿಗನ್‌ ಸ್ಟೇಟ್‌ ಯೂನಿವರ್ಸಿಟಿಯ ಡಾ. ನ್ಯಾನ್ಸಿ ಹೇಳುವುದೇನೆಂದರೆ, ಆ ಭಾಗಕ್ಕೂ ಅಷ್ಟಿಷ್ಟು ಗಾಳಿ ತಗುಲಿ ಅಲ್ಲಿ ಶುಷ್ಕತೆ ಉಂಟಾಗುತ್ತದೆ. ಕೆಲವು ದಿನ ಪ್ಯಾಂಟಿ ರಹಿತವಾಗಿ ಮಲಗಿ ನೋಡಿ ಆಗ ನಿಮಗೆ ವ್ಯತ್ಯಾಸ ಗೊತ್ತಾಗುತ್ತದೆ.

ಹಗಲು ಹೊತ್ತು ಪ್ಯಾಂಟಿ ಧರಿಸದೆ ಇದ್ದರೆ : ಕೆಲವು ಮಹಿಳೆಯರು ಪ್ಯಾಂಟಿ ಧರಿಸುವುದೇ ಇಲ್ಲ. ಹೀಗೆ ಮಾಡುವುದರಿಂದ ಪೃಷ್ಠದ ಭಾಗದ ಮಾಂಸಖಂಡಗಳು ಜೋತಾಡುವಂತಾಗುತ್ತದೆ. ಅವು ತಮ್ಮ ವಾಸ್ತವ ರೂಪ ಕಳೆದುಕೊಳ್ಳುತ್ತವೆ. ಪ್ಯಾಂಟಿಯಿಂದ ಪೃಷ್ಠ ಭಾಗದ ಮಾಂಸಖಂಡಗಳನ್ನು ಬಂಧಿಸಿಡುವುದರಿಂದ ಅವುಗಳ ಶೇಪ್‌ ಹಾಗೆಯೇ ಕಾಯ್ದುಕೊಂಡು ಹೋಗುತ್ತದೆ. ಪ್ಯಾಂಟಿ ಧರಿಸದೇ ಇದ್ದರೆ ಬಟ್ಟೆಗಳ ಜೊತೆ ಘರ್ಷಣೆ ಉಂಟಾಗಿ ಬೊಕ್ಕೆಗುಳ್ಳೆಗಳಂಥವು ಕಾಣಿಸಿಕೊಳ್ಳಬಹುದು.

ಪ್ಯಾಂಟಿ ಯಾವಾಗ ಬದಲಿಸಬೇಕು? : ಪ್ರತಿಯೊಂದು ಹವಾಮಾನಕ್ಕೆ ತಕ್ಕಂತೆ ಫ್ಯಾಷನ್‌ ಬದಲಾಗುತ್ತಿರುತ್ತದೆ. ಅದಕ್ಕೆ ತಕ್ಕಂತೆ ಮಹಿಳೆಯರು ಬಟ್ಟೆಚಪ್ಪಲಿ, ಬ್ಯಾಗ್‌ ಮುಂತಾದವನ್ನು ಬದಲಿಸುತ್ತಾರೆ. ಆದರೆ ಪ್ಯಾಂಟಿಯ ಬಗ್ಗೆ ಅವರು ಗಮನಿಸುವುದಿಲ್ಲ. ಪ್ಯಾಂಟಿ ಏಕೆ ಬದಲಿಸಬೇಕು ಎಂದು ಇರುವುದನ್ನೇ ಮುಂದುವರಿಸುತ್ತಾರೆ. ಹಳೆಯ ಸಡಿಲವಾದ ಪ್ಯಾಂಟಿ ಧರಿಸುವುದರಿಂದ ಸಾಕಷ್ಟು ಕಿರಿಕಿರಿ ಉಂಟಾಗುತ್ತದೆ. ಅದು ಕೆಲವೊಮ್ಮೆ ಕೆಳಕ್ಕೆ ಜಾರುತ್ತಿರುತ್ತದೆ. ಅದನ್ನು ಪುನಃ ಪುನಃ ಮೇಲೆ ತರುವುದು ಮುಜುಗರದ ಸಂಗತಿ. ಹೀಗಾಗಿ ಎಲಾಸ್ಟಿಕ್‌ ಹಾಳುಗುತ್ತಿದ್ದಂತೆ ಅದನ್ನು ಬದಲಿಸಿಬಿಡುವುದೇ ಸೂಕ್ತ.

– ಪವಿತ್ರಾ ಪ್ರಸಾದ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ