ರೈಸ್‌ ಢೋಕ್ಲಾ

ಸಾಮಗ್ರಿ : ಅಕ್ಕಿಹಿಟ್ಟು, ಮೊಳಕೆ ಕಟ್ಟಿದ ಹೆಸರುಕಾಳು, ಕಡಲೆಕಾಳು (ತಲಾ ಅರ್ಧ ಕಪ್‌), 2-2 ಈರುಳ್ಳಿ, ಟೊಮೇಟೊ, 2-3 ಎಸಳು ಬೆಳ್ಳುಳ್ಳಿ, 1 ತುಂಡು ಶುಂಠಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, 2 ಚಿಟಕಿ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಹೆಚ್ಚಿದ ಹಸಿ ಮೆಣಸು, ನಿಂಬೆರಸ, ಗರಂಮಸಾಲ, ಒಗ್ಗರಣೆಗೆ ಎಣ್ಣೆ, ಸಾಸುವೆ, ಜೀರಿಗೆ, ಅರ್ಧ ಸೌಟು ತುಪ್ಪ.

ವಿಧಾನ : ಮೊದಲು ಮೊಳಕೆ ಕಟ್ಟಿದ ಕಡಲೆ, ಹೆಸರುಕಾಳುಗಳನ್ನು ಕುಕ್ಕರ್‌ನಲ್ಲಿ ಬೇಯಿಸಿ. ಅಕ್ಕಿಹಿಟ್ಟಿಗೆ ತುಸು ಉಪ್ಪು, ಜೀರಿಗೆ ಹಾಕಿ ಬಿಸಿ ನೀರು ಬೆರೆಸಿ ಹಿಟ್ಟು ಕಲಸಿಡಿ. ಇದಕ್ಕೆ 2-3 ಚಮಚ ಎಣ್ಣೆ ಬೆರೆಸಿ ಮತ್ತೆ ಕಲಸಬೇಕು. ಮಿಕ್ಸಿಗೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಟೊಮೇಟೊ, ಹಸಿ ಮೆಣಸು ಸೇರಿಸಿ ನುಣ್ಣಗೆ ತಿರುವಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ನಂತರ ತಿರುವಿದ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ಆಮೇಲೆ ಇದಕ್ಕೆ ಉಪ್ಪು, ಖಾರ, ಮಸಾಲೆ ಹಾಕಿ ಕೈಯಾಡಿಸಿ. ಆಮೇಲೆ ಬೆಂದ ಕಾಳು (ನೀರಿನ ಸಮೇತ) ಹಾಕಿ ಕೆದಕುತ್ತಾ ಕುದಿಸಬೇಕು. ಆಮೇಲೆ ಕಲಸಿದ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆ ಕಲಸಿ, ಪುಟ್ಟ ವಡೆ ತರಹ ಲಟ್ಟಿಸಿ, ಕುದಿವ ಗ್ರೇವಿಗೆ ಹಾಕಿ ಬೇಯಿಸಿ. ಹೀಗೆ 10 ನಿಮಿಷ ಮಂದ ಉರಿಯಲ್ಲಿ ಎಲ್ಲ ಬೆರೆತು ಬೆಂದಾಗ, ಕೆಳಗಿಳಿಸಿ ನಿಂಬೆಹಣ್ಣು ಹಿಂಡಿಕೊಂಡು, ಕೊ.ಸೊಪ್ಪು, ಪುದೀನಾ ಉದುರಿಸಿ ಬಿಸಿಬಿಸಿಯಾಗಿ ರೊಟ್ಟಿ, ಚಪಾತಿಗೆ ಕೊಡಿ.

ಸೀಮೆಗೆಡ್ಡೆ ಪಲ್ಯ

ಸಾಮಗ್ರಿ : 250 ಗ್ರಾಂ ಸೀಮೆಗೆಡ್ಡೆ, ಅರ್ಧ ಕಪ್‌ ಕಡಲೆಹಿಟ್ಟು, ರುಚಿಗೆ  ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ದಾಳಿಂಬೆ ಬೀಜದ  ಪುಡಿ (ರೆಡಿಮೇಡ್‌ ಲಭ್ಯ), ಗರಂಮಸಾಲ, ಜೀರಿಗೆ ಪುಡಿ, ಒಣಶುಂಠಿಯ ಪುಡಿ, ಅರಿಶಿನ, 2-3 ಹಸಿ ಮೆಣಸು, 1 ಗಿಟುಕು ತೆಂಗಿನ ತುರಿ, ಕರಿಯಲು ಎಣ್ಣೆ.

ವಿಧಾನ : ಮೊದಲು ಸೀಮೆಗೆಡ್ಡೆ ಶುಚಿಗೊಳಿಸಿ ಕುಕ್ಕರ್‌ನಲ್ಲಿ ಬೇಯಿಸಿ, ಸಿಪ್ಪೆ ಸುಲಿದು ಲಘುವಾಗಿ ಮಸೆಯಿರಿ. ನಂತರ ಇದನ್ನು ಎಣ್ಣೆಯಲ್ಲಿ ಕರಿದು ಬೇರೆ ಇಡಿ. ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿ ಬಿಸಿ ಮಾಡಿ ಒಗ್ಗರಣೆ ಕೊಡಿ. ನಂತರ ಇದಕ್ಕೆ  ಎಲ್ಲಾ ಮಸಾಲೆ ಹಾಕಿ,  ತೆಂಗಿನ ತುರಿ ಸಮೇತ ಬಾಡಿಸಿ. ಆಮೇಲೆ ಇದಕ್ಕೆ ಕರಿದ ಗೆಡ್ಡೆ ಸೇರಿಸಿ, ಚೆನ್ನಾಗಿ ಬಾಡಿಸಿ ಕೆಳಗಿಳಿಸಿ. ಇದರ ಮೇಲೆ ಕೊ.ಸೊಪ್ಪು ಉದುರಿಸಿ ಬಿಸಿಯಾಗಿ ಅನ್ನ, ಚಪಾತಿ ಜೊತೆ ಸವಿಯಲು ಕೊಡಿ.

ಮಶ್ರೂಮ್ ಪಲಾವ್

‌ಸಾಮಗ್ರಿ : 2 ಕಪ್‌ ತೆಳ್ಳಗೆ ಹೆಚ್ಚಿದ ತಾಜಾ ಅಣಬೆ, ಅರ್ಧ ಸೌಟು ರೀಫೈಂಡ್‌ ಎಣ್ಣೆ, ಅರ್ಧ ಗಂಟೆ ನೀರಲ್ಲಿ ನೆನೆಸಿದ 1 ಕಪ್ ಬಾಸುಮತಿ ಅಕ್ಕಿ, 1 ಸಣ್ಣ ತುಂಡು ಶುಂಠಿ (ತುರಿದಿಡಿ), 1-2 ಹಸಿ ಮೆಣಸು, 1 ತುಂಡು ಚಕ್ಕೆ, 1-2 ಲವಂಗ, 1-2 ಏಲಕ್ಕಿ, 4-5 ಕಾಳುಮೆಣಸು, 1-2 ಪಲಾವ್ ಎಲೆ, ತುಸು ಜೀರಿಗೆ ಸೋಂಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, ತುಸು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಕುಕ್ಕರ್‌ನಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ ಸೋಂಪಿನ ಒಗ್ಗರಣೆ ಕೊಡಿ. ನಂತರ ಎಲ್ಲಾ ಮಸಾಲೆ ಹಾಕಿ ಚಟಪಟಾಯಿಸಿ. ನಂತರ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಶುಂಠಿ ಹಾಕಿ ಬಾಡಿಸಿ. ನಂತರ ಹೆಚ್ಚಿದ ಅಣಬೆ ಹಾಕಿ ಬಾಡಿಸಿ. ಆಮೇಲೆ ನೆನೆಸಿದ ಅಕ್ಕಿ ಹಾಕಿ, ಉಪ್ಪು, ಅಗತ್ಯವಿದ್ದಷ್ಟು ನೀರು ಬೆರೆಸಿ, 1 ಸೀಟಿ ಬರುವಂತೆ ಬೇಯಿಸಿ ಕೆಳಗಿಳಿಸಿ. ಮುಚ್ಚಳ ತೆರೆದ ನಂತರ ಕೊ.ಸೊಪ್ಪು ಹಾಕಿ, ನಿಂಬೆಹಣ್ಣು ಹಿಂಡಿಕೊಂಡು ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ, ಬಿಸಿಯಾಗಿ ಸವಿಯಲು ಕೊಡಿ.

ಪನೀರ್‌ ಕೊಲ್ಹಾಪುರಿ

ಸಾಮಗ್ರಿ : 200 ಗ್ರಾಂ ತುಂಡರಿಸಿದ ಪನೀರ್‌, 2-3 ಮಾಗಿದ ಹುಳಿ ಟೊಮೇಟೊ, 2-3 ಹಸಿ ಮೆಣಸು, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, 8-10 ಗೋಡಂಬಿ, 7-8 ದ್ರಾಕ್ಷಿ, ಅರ್ಧ ಕಪ್‌ ಕೊಬ್ಬರಿ ತುರಿ, 1 ಸಣ್ಣ ಚಮಚ ಎಳ್ಳು, 1 ತುಂಡು ಶುಂಠಿ, 1 ತುಂಡು ಚಕ್ಕೆ, 1-2 ಏಲಕ್ಕಿ, 4-5 ಕಾಳುಮೆಣಸು, 1-2 ಲವಂಗ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಅರಿಶಿನ, ಇಂಗು, ಒಗ್ಗರಣೆಗೆ ಜೀರಿಗೆ, ಸೋಂಪು, 4-5 ಚಮಚ ತುಪ್ಪ.

ವಿಧಾನ : ಬಾಣಲೆಗೆ ತುಸು ತುಪ್ಪ ಹಾಕಿ ಜೀರಿಗೆ, ಸೋಂಪು, ಎಳ್ಳು, ಚಕ್ಕೆ, ಲವಂಗ , ಕಾಳುಮೆಣಸು, ಕೊಬ್ಬರಿ ತುರಿ, ಏಲಕ್ಕಿ ಎಲ್ಲಾ ಸೇರಿಸಿ ಹುರಿದು, ಆರಿದ ನಂತರ ಪುಡಿ ಮಾಡಿಕೊಳ್ಳಿ. ವೆಟ್‌ ಮಿಕ್ಸಿಗೆ ಟೊಮೇಟೊ, ಶುಂಠಿ, ಹಸಿ ಮೆಣಸು, ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿಗಳನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಇಂಗಿನ ಸಮೇತ ಒಗ್ಗರಣೆ ಕೊಡಿ. ನಂತರ ಅರಿಶಿನ, ಉಪ್ಪು, ಖಾರ, ಧನಿಯಾಪುಡಿ, ಇತರ ಮಸಾಲೆ ಸೇರಿಸಿ ಕೆದಕಬೇಕು. ನಂತರ ರುಬ್ಬಿದ ಮಿಶ್ರಣ ಹಾಕಿ ಬಾಡಿಸಿ. 2 ನಿಮಿಷ ಬಿಟ್ಟು ಅರ್ಧ ಕಪ್‌ ನೀರು  ಬೆರೆಸಿ ಮಂದ ಉರಿಯಲ್ಲಿ ಕುದಿಸಿರಿ. ಇದಕ್ಕೆ ಎಣ್ಣೆಯಲ್ಲಿ ಕರಿದ ಪನೀರ್‌ ತುಂಡು ಸೇರಿಸಿ ಮತ್ತಷ್ಟು ಹೊತ್ತು ಕುದಿಸಿ, ಕೆಳಗಿಳಿಸಿ ಕೊ.ಸೊಪ್ಪು ಉದುರಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಬಿಸಿ ಬಿಸಿಯಾಗಿ ಚಪಾತಿ, ಪೂರಿ ಜೊತೆ ಸವಿಯಲು ಕೊಡಿ.

ಗೋಭಿ ಆಲೂ ಮಸಾಲೆ

ಸಾಮಗ್ರಿ : 500 ಗ್ರಾಂ ಸಣ್ಣಗೆ ಹೆಚ್ಚಿದ ಹೂಕೋಸು, 400 ಗ್ರಾಂ ಹೆಚ್ಚಿದ ಆಲೂ, ಅರ್ಧ ಸೌಟು ಎಣ್ಣೆ, ಒಗ್ಗರಣೆಗೆ ಸಾಸುವೆ, ಜೀರಿಗೆ, ಸೋಂಪು, ರುಚಿಗೆ ತಕ್ಕಷ್ಟು ಉಪ್ಪು ಖಾರ, ಅರಿಶಿನ, ಧನಿಯಾಪುಡಿ, ಗರಂಮಸಾಲ, ಅಮ್ಚೂರ್‌ ಪುಡಿ, ಇಂಗು, ಹೆಚ್ಚಿದ 1-2 ಹಸಿಮೆಣಸು, 1 ಗಿಟುಕು ತೆಂಗಿನ ತುರಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಕುದಿವ ನೀರಿಗೆ 2 ಚಿಟಕಿ ಉಪ್ಪು ಹಾಕಿ, ಅದರಲ್ಲಿ ಹೆಚ್ಚಿದ ಹೂಕೋಸು ಹಾಕಿ ಬ್ಲಾಂಚ್‌ ಮಾಡಿ. ಆಲೂ ಹೋಳು ಬೇರೆಯಾಗಿ ಬೇಯಿಸಿ ಅದರ ಸಿಪ್ಪೆ ಸುಲಿದಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಇಂಗಿನ ಸಮೇತ ಒಗ್ಗರಣೆ ಕೊಡಿ. ಆಮೇಲೆ ಇದಕ್ಕೆ ಬ್ಲಾಂಚ್‌ ಮಾಡಿದ ಹೂಕೋಸು ಹಾಕಿ ಬಾಡಿಸಿ. ಆಮೇಲೆ ಅರಿಶಿನ, ಉಪ್ಪು, ಇತರ ಎಲ್ಲಾ ಮಸಾಲೆ ಹಾಕಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಕೊನೆಯಲ್ಲಿ ತೆಂಗಿನ ತುರಿ, ಆಲೂ ಹೋಳು ಸೇರಿಸಿ ಮಿಕ್ಸ್ ಮಾಡಿ. ಕೆಳಗಿಳಿಸಿ ನಿಂಬೆಹಣ್ಣು ಹಿಂಡಿ, ಕೊ.ಸೊಪ್ಪು ಉದುರಿಸಿ ಬಿಸಿಯಾಗಿ ಅನ್ನ, ತಿಳಿಸಾರಿನ ಜೊತೆ ಸವಿಯಿರಿ.

ಪನೀರ್‌ ತವಾ ಮಸಾಲ

ಸಾಮಗ್ರಿ : 250 ಗ್ರಾಂ ಪನೀರ್‌ ಕ್ಯೂಬ್ಸ್, ಹೆಚ್ಚಿದ 2 ಕ್ಯಾಪ್ಸಿಕಂ, 3 ಟೊಮೇಟೊ, 8-10 ಎಸಳು ಬೆಳ್ಳುಳ್ಳಿ, 1 ತುಂಡು ಶುಂಠಿ, ಒಗ್ಗರಣೆಗ ಅರ್ಧ ಸೌಟು ಎಣ್ಣೆ, ಸಾಸುವೆ, ಜೀರಿಗೆ, ಸೋಂಪು, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಗರಂಮಸಾಲ, ಅಮ್ಚೂರ್‌ ಪುಡಿ, ಕಸೂರಿಮೇಥಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಮಿಕ್ಸಿಗೆ ಹಸಿಮೆಣಸು, ಟೊಮೇಟೊ, 1 ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಹಾಕಿ ಪೇಸ್ಟ್ ಮಾಡಿಡಿ. ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ ಒಗ್ಗರಣೆ ಕೊಡಿ. ಹೆಚ್ಚಿದ ಈರುಳ್ಳಿ, ಆಮೇಲೆ ಕ್ಯಾಪ್ಸಿಕಂ ಹಾಕಿ ಬಾಡಿಸಿ. ನಂತರ ಉಪ್ಪು, ಖಾರ, ಅರಿಶಿನ, ಉಳಿದ ಮಸಾಲೆ ಹಾಕಿ ಕೆದಕಬೇಕು. ಕೊನೆಯಲ್ಲಿ ರುಬ್ಬಿದ ಪೇಸ್ಟ್ ಹಾಕಿ ಎಲ್ಲವನ್ನೂ ಮಂದ ಉರಿಯಲ್ಲಿ ಕೆದಕಬೇಕು. ಪಕ್ಕದ ಒಲೆಯಲ್ಲಿ ತುಪ್ಪದಲ್ಲಿ ಪನೀರ್‌ ಕ್ಯೂಬ್ಸ್ ಫ್ರೈ ಮಾಡಿ, ಇದಕ್ಕೆ ಹಾಕಿ ಬಾಡಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ ಕೆಳಗಿಳಿಸಿ, ಕೊ.ಸೊಪ್ಪು ಉದುರಿಸಿ  ಬಿಸಿಬಿಸಿಯಾಗಿ ಚಪಾತಿ ಜೊತೆ ಸವಿಯಲು ಕೊಡಿ.

ಆಲೂ ಚನಾ ಮಸಾಲೆ

ಸಾಮಗ್ರಿ : ಹೆಚ್ಚಿದ 3-4 ಆಲೂ, ನೆನೆಸಿದ ಅರ್ಧ ಕಪ್‌ ಕಡಲೇಬೇಳೆ, 1 ಕಪ್‌ ತೆಂಗಿನ ತುರಿ, ಹೆಚ್ಚಿದ 2-3 ಹಸಿ ಮೆಣಸು, 5-6 ಎಸಳು ಬೆಳ್ಳುಳ್ಳಿ, 1-2 ಈರುಳ್ಳಿ, 1 ತುಂಡು ಶುಂಠಿ, 1 ಕಪ್‌ ಮೊಸರು, ಒಗ್ಗರಣೆ ಸಾಮಗ್ರಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಅರಿಶಿನ, ಗರಂಮಸಾಲ, ಚಾಟ್‌ ಮಸಾಲ, ಕೊ.ಸೊಪ್ಪು.

ವಿಧಾನ : ಮಿಕ್ಸಿಗೆ ತೆಂಗಿನತುರಿ, ಹಸಿ ಮೆಣಸು, ಶುಂಠಿ, ಅರ್ಧ ಈರುಳ್ಳಿ, ಬೆಳ್ಳುಳ್ಳಿ, ಮೊಸರು ಬೆರೆಸಿ ನುಣ್ಣಗೆ ತಿರುವಿಕೊಳ್ಳಿ. ಕುಕ್ಕರ್‌ನಲ್ಲಿ ಬೇಳೆ, ಆಲೂ ಹಾಕಿ ಬೇಯಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಒಗ್ಗರಣೆ ಕೊಡಿ. ಇದಕ್ಕೆ ಉಳಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಉಳಿದ ಮಸಾಲೆ, ರುಬ್ಬಿದ ಮಿಶ್ರಣ ಹಾಕಿ ಮಂದ ಉರಿಯಲ್ಲಿ ಕೈಯಾಡಿಸಿ. ಆಮೇಲೆ ಉಪ್ಪು, ಅರಿಶಿನ, ಬೆಂದ ಆಲೂ ಬೇಳೆ ಎಲ್ಲಾ ಹಾಕಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ ಕೆಳಗಿಳಿಸಿ. ಕೊ.ಸೊಪ್ಪು ಉದುರಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಚಪಾತಿ, ರೊಟ್ಟಿ ಜೊತೆ ಸವಿಯಲು ಕೊಡಿ.

ಬಟಾಣಿ ಸೋಯಾ ಮಸಾಲೆ

ಸಾಮಗ್ರಿ : ಬಿಸಿ ನೀರಲ್ಲಿ ನೆನೆಹಾಕಿದ 1 ಕಪ್‌ ಸೋಯಾ ಗ್ರ್ಯಾನ್ಯುಯೆಲ್ಸ್, ಅದೇ ಪ್ರಮಾಣದ ಬೆಂದ ಹಸಿ ಬಟಾಣಿಕಾಳು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಗರಂಮಸಾಲ, ಧನಿಯಾಪುಡಿ, ಚಾಟ್‌ ಮಸಾಲ, ಹೆಚ್ಚಿದ ಹಸಿಮೆಣಸು, 1-2 ಈರುಳ್ಳಿ, 3-4 ಹುಳಿ ಟೊಮೇಟೊ, ಒಗ್ಗರಣೆಗೆ ಸಾಸುವೆ, ಜೀರಿಗೆ, 4 ಚಮಚ ತುಪ್ಪ, ಅರಿಶಿನ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಒಲೆ ಮೇಲೆ ಬಾಣಲೆ ಇರಿಸಿ ತುಸು ಎಣ್ಣೆ, ತುಪ್ಪ ಬಿಸಿ ಮಾಡಿ ಒಗ್ಗರಣೆ ಕೊಡಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಟೊಮೇಟೊ, ಉಪ್ಪು, ಖಾರ, ಮಸಾಲೆ, ನೆನೆದ ಸೋಯಾ ಹಾಕಿ ಮಂದ ಉರಿಯಲ್ಲಿ ಕೆದಕುತ್ತಾ ಬೇಯಿಸಿ. ಆಮೇಲೆ ಬೆಂದ ಬಟಾಣಿ ಹಾಕಿ ಕೈಯಾಡಿಸಿ. ಕೆಳಗಿಳಿಸಿ, ಹೆಚ್ಚಿದ ಕೊ.ಸೊಪ್ಪು ಉದುರಿಸಿ, ಬಿಸಿ ಬಿಸಿಯಾಗಿ ಉಪ್ಪಿಟ್ಟಿನಂತೆ ಸವಿಯಿರಿ.

ಬೆಂಡೆ ಮಸಾಲೆ

ಸಾಮಗ್ರಿ : ಉದ್ದಕ್ಕೆ ಹೆಚ್ಚಿದ ತಾಜಾ ಬೆಂಡೆಕಾಯಿ, 2-3 ಹಸಿ ಮೆಣಸು, 1-2 ಈರುಳ್ಳಿ, 1-2 ಟೊಮೇಟೊ, 2 ಚಮಚ ತುಪ್ಪದಲ್ಲಿ ಹುರಿದು ಪುಡಿ ಮಾಡಿದ ಗೋಡಂಬಿ, 2-3 ಚಮಚ ಕ್ರೀಂ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಓಮ, ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಧನಿಯಾಪುಡಿ, ಗರಂಮಸಾಲ, ಶುಂಠಿ ಪೇಸ್ಟ್, ಹೆಚ್ಚಿದ  ಕೊ.ಸೊಪ್ಪು, ಕರಿಯಲು ಎಣ್ಣೆ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಮೊದಲು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಬೆಂಡೆಕಾಯಿ ಹಾಕಿ ಫ್ರೈ ಮಾಡಿ ತೆಗೆಯಿರಿ. ಅದರಲ್ಲಿ ತುಸು ಎಣ್ಣೆ ಉಳಿಸಿಕೊಂಡು ಹೆಚ್ಚಿದ ಈರುಳ್ಳಿ ಶುಂಠಿ ಪೇಸ್ಟ್ ಹಾಕಿ ಹುರಿಯಿರಿ. ನಂತರ ಟೊಮೇಟೊ ಬಾಡಿಸಿಕೊಂಡು ಉಪ್ಪು, ಖಾರ, ಬೆಳ್ಳುಳ್ಳಿ ಪೇಸ್ಟ್ ಮಸಾಲೆ ಹಾಕಿ ಬಾಡಿಸಿ. ಇದನ್ನು ಕೆಳಗಿಳಿಸಿ ಆರಲು ಬಿಡಿ. ನಂತರ ಪೇಸ್ಟ್ ಮಾಡಿ. ಆಮೇಲೆ ಬಾಣಲೆಯಲ್ಲಿ 4-5 ಚಮಚ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಓಮ, ಉಳಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಉಪ್ಪು, ಖಾರ, ಉಳಿದ ಮಸಾಲೆ, ಗೋಡಂಬಿ ಪುಡಿ ಹಾಕಿ ಕೈಯಾಡಿಸಿ. ಬೆಂಡೆ ಫ್ರೈ ಹಾಕಿ ಮತ್ತೊಮ್ಮೆ ಕೆದಕಬೇಕು. ಕೆಳಗಿಳಿಸಿ, ಕೊ.ಸೊಪ್ಪು ಉದುರಿಸಿ ರೊಟ್ಟಿ, ಚಪಾತಿಗೆ ಸವಿಯಲು ಕೊಡಿ.

ಮಿಕ್ಸ್ ವೆಜ್‌ ಕುರ್ಮಾ

ಮೂಲ ಸಾಮಗ್ರಿ : 2 ಕಪ್‌ ಶುಚಿಗೊಳಿಸಿ ಹೆಚ್ಚಿದ ಹೂಕೋಸು, ಹೆಚ್ಚಿದ 2 ಆಲೂ, ಅರ್ಧ ಕಪ್‌ ಹಸಿ ಬಟಾಣಿ ಕಾಳು, 8-10 ಫ್ರೆಂಚ್‌ಬೀನ್ಸ್, 1 ಕ್ಯಾರೆಟ್‌, 2 ಟೊಮೇಟೊ, 2 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂ ಮಸಾಲ, ಅರಿಶಿನ, ತುಸು ಕೊ.ಸೊಪ್ಪು.

ಪೇಸ್ಟ್ ಸಾಮಗ್ರಿ : ಅರ್ಧ ಗಿಟುಕು ತೆಂಗಿನ ತುರಿ, 8-10 ಗೋಡಂಬಿ, 2-2 ಸಣ್ಣ ಚಮಚ ಹುರಿದ ಕ/ಉ ಬೇಳೆ, ರುಚಿಗೆ ತಕ್ಕಷ್ಟು ಧನಿಯಾಪುಡಿ, 1-2 ಲವಂಗ, ಏಲಕ್ಕಿ, 4-5 ಕಾಳು ಮೆಣಸು, 1-2 ಹಸಿ ಮೆಣಸು, 10-12 ಬೆಳ್ಳುಳ್ಳಿ, 1 ತುಂಡು ಶುಂಠಿ, 1 ತುಂಡು ಚಕ್ಕೆ.

ವಿಧಾನ : ಮೊದಲು ಮಿಕ್ಸಿಗೆ ಪೇಸ್ಟ್ ಸಾಮಗ್ರಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ತುಂಡರಿಸಿದ ಹೂಕೋಸನ್ನು ಬಿಸಿ ನೀರಲ್ಲಿ ನೆನೆಹಾಕಿ. ಇದನ್ನು ಬೇರೆಯಾಗಿ ರುಬ್ಬಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಹೆಚ್ಚಿದ ಈರುಳ್ಳಿ, ಟೊಮೇಟೊ ಹಾಕಿ ಬಾಡಿಸಿ. ಇದಕ್ಕೆ ಉಳಿದ ತರಕಾರಿ ಹಾಕಿ ಬಾಡಿಸಿ, ನೀರು ಚಿಮುಕಿಸಿ ಬೇಯಲು ಬಿಡಿ. ನಂತರ ಉಪ್ಪು, ಮಸಾಲೆ, ಅರಿಶಿನ, ಗೋಡಂಬಿ ಪೇಸ್ಟ್, ರುಬ್ಬಿಕೊಂಡ ಪೇಸ್ಟ್ ಎಲ್ಲಾ ಹಾಕಿ ಮಂದ ಉರಿಯಲ್ಲಿ ಬಾಡಿಸಿ. ತುಸು ನೀರು ಬೆರೆಸಿ ಗ್ರೇವಿ ಗಟ್ಟಿಯಾಗುವಂತೆ ಕುದಿಸಿ ಕೆಳಗಿಳಿಸಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಬಿಸಿಯಾಗಿ ಅನ್ನ, ಚಪಾತಿ, ಪೂರಿ ಜೊತೆ ಸವಿಯಲು ಕೊಡಿ.

Tags:
COMMENT