ಬ್ಲ್ಯಾಕ್‌ವೈಟ್‌ ಸೆಸ್ಮೆ ಆಲೂ

ಸಾಮಗ್ರಿ : 500 ಗ್ರಾಂ ಬೇಬಿ ಪೊಟೇಟೊ, 2-2 ಚಮಚ ಕರಿಬಿಳಿ ಎಳ್ಳು, ಅಗತ್ಯವಿದ್ದಷ್ಟು ತರಿತರಿಯಾಗಿ ಕುಟ್ಟಿದ ಜೀರಿಗೆ, ಧನಿಯಾ, ಸೋಂಪು, ರುಚಿಗೆ ತಕ್ಕಷ್ಟು ಉಪ್ಪು, ಅಮ್ಚೂರ್‌ಪುಡಿ, ಖಾರ, ಹೆಚ್ಚಿದ ಕೊ.ಸೊಪ್ಪು, 3-4 ಚಮಚ ರೀಫೈಂಡ್ ಎಣ್ಣೆ.

ವಿಧಾನ : ಸಣ್ಣ ಆಲೂಗಳನ್ನು ಬೇಯಿಸಿ, ಸಿಪ್ಪೆ ಸುಲಿದಿಡಿ. ಅಲ್ಲಲ್ಲಿ ಪೋರ್ಕಿನಿಂದ ಚುಚ್ಚಿ ರಂಧ್ರ ಮಾಡಿ. ಒಂದು ನಾನ್‌ಸ್ಟಿಕ್ ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ, ಸೋಂಪು, ಇಂಗಿನ ಒಗ್ಗರಣೆ ಕೊಡಿ. ಇದಕ್ಕೆ 2 ಬಗೆ ಎಳ್ಳು ಬೆರೆಸಿ ಹುರಿಯಿರಿ. ಆಮೇಲೆ ಬೆಂದ ಆಲೂ ಹಾಕಿ 10 ನಿಮಿಷ ಮಂದ ಉರಿಯಲ್ಲಿ ಬಾಡಿಸಿ. ನಂತರ ಉಳಿದ ಎಲ್ಲಾ ಮಸಾಲೆ, ಉಪ್ಪು ಹಾಕಿ ಕೆದಕಬೇಕು. ಕೆಳಗಿಳಿಸಿ ಕೊ.ಸೊಪ್ಪು ಉದುರಿಸಿ, ಬಿಸಿ ಬಿಸಿಯಾಗಿ ಚಪಾತಿ, ಅನ್ನ ರಸಂ ಜೊತೆ ಸವಿಯಲು ಕೊಡಿ.

 

ಡ್ರೈ ಫ್ರೂಟ್ಸ್  ಸೀಡ್ಸ್ ಬರ್ಫಿ

ಸಾಮಗ್ರಿ : 50 ಗ್ರಾಂ ಅಂಜೂರ, 100 ಗ್ರಾಂ ಬೀಜರಹಿತ ಖರ್ಜೂರ, 50 ಗ್ರಾಂ ವಾಲ್‌ ನಟ್ಸ್ 50 ಗ್ರಾಂ ಬಾದಾಮಿ, 2-2  ಚಮಚ ಸೂರ್ಯಕಾಂತಿ ಬೀಜ, ಕುಂಬಳ ಬೀಜ, ಸೌತೆ ಬೀಜ, ಕರ್ಬೂಜಾ ಬೀಜ, ಕಲ್ಲಂಗಡಿ ಬೀಜ, 2-3 ಚಮಚ  ತುಪ್ಪ, ರುಚಿಗೆ ತಕ್ಕಷ್ಟು ಸಕ್ಕರೆ, ಏಲಕ್ಕಿಪುಡಿ, ಜಾಯಿಕಾಯಿ ಪುಡಿ.

ವಿಧಾನ : ಅಂಜೂರ, ಖರ್ಜೂರ, ವಾಲ್‌ ನಟ್ಸ್ ಸೇರಿಸಿ ಬಿಸಿ ನೀರಲ್ಲಿ ಸ್ವಲ್ಪ ಹೊತ್ತು ನೆನೆಸಿಡಿ. ನಂತರ ಇದನ್ನು ಜರಡಿಗೆ ಹಾಕಿ ನೀರು ಸೋರುವಂತೆ ಮಾಡಿ. ಬಾದಾಮಿಯನ್ನು ಸಣ್ಣದಾಗಿ ತುಂಡರಿಸಿ. ಎಲ್ಲಾ ಬೀಜಗಳನ್ನೂ 1 ನಿಮಿಷ ಹುರಿದು, ಆರಿಸಿ, ಮಿಕ್ಸಿಯಲ್ಲಿ ತರಿತರಿಯಾಗಿ ಪುಡಿ ಮಾಡಿ. ನೆನೆದ ಅಂಜೂರ, ಖರ್ಜೂರಗಳನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ. ಒಂದು ನಾನ್‌ಸ್ಟಿಕ್ ಪ್ಯಾನಿನಲ್ಲಿ ಮೊದಲು ತುಸು ತುಪ್ಪ  ಬಿಸಿ ಮಾಡಿಕೊಂಡು ಅಂಜೂರದ ಪೇಸ್ಟ್, ನಂತರ ತರಿಯಾದ ಬೀಜ, ಬಾದಾಮಿ, ಏಲಕ್ಕಿ, ಜಾಯಿಕಾಯಿ ಪುಡಿ ಬೆರೆಸಿ. ತುಸು ಸಕ್ಕರೆ ಹಾಕಿ ನಡುನಡುವೆ ತುಪ್ಪ ಬೆರೆಸುತ್ತಾ, ತಳ ಹಿಡಿಯದಂತೆ ಇದನ್ನು ಕೆದಕಬೇಕು. ನಂತರ ತುಪ್ಪ ಸವರಿದ ತಟ್ಟೆಗೆ ಇದನ್ನು ಹರಡಿ ಮೇಲೆ ಪಿಸ್ತಾ, ಬಾದಾಮಿ ಚೂರು ಉದುರಿಸಿ, ಬರ್ಫಿ ಆಕಾರದಲ್ಲಿ ಕತ್ತರಿಸಿ. ಗಾಳಿಯಾಡದ ಡಬ್ಬಕ್ಕೆ ತುಂಬಿರಿಸಿ, ಮಕ್ಕಳು ಬಯಸಿದಾಗ ಸವಿಯಲು ಕೊಡಿ.

 

ಸನ್‌ಫ್ಲವರ್‌ ಸೀಡ್ಸ್ ಸ್ಟಫ್ಡ್ ಕಬಾಬ್‌

ಮೂಲ ಸಾಮಗ್ರಿ : 1 ಕಪ್‌ ರಾಜ್ಮಾ (ರಾತ್ರಿಯಿಡೀ ನೆನೆಹಾಕಿದ್ದು), 2 ಹಸಿಮೆಣಸು, 1 ತುಂಡು ಹಸಿಶುಂಠಿ, 1 ಮಧ್ಯಮ ಗಾತ್ರದ ಆಲೂ, ಅರ್ಧ ಕಪ್‌ ಬ್ರೆಡ್‌ ಕ್ರಂಬ್ಸ್, 1-2 ಏಲಕ್ಕಿ, 4 ಲವಂಗ, 1-2 ಸಣ್ಣ ತುಂಡು ಚಕ್ಕೆ, ಅರ್ಧ ಚಮಚ ಜೀರಿಗೆ, 6-7 ಎಳೆ ಕೇಸರಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ.

ಸ್ಟಫಿಂಗ್‌ ಸಾಮಗ್ರಿ : 5-6 ಚಮಚ ಸನ್‌ಫ್ಲವರ್‌ ಸೀಡ್ಸ್, 10-12 ಗೋಡಂಬಿ, 1 ಚಮಚ ಗಸಗಸೆ, 4 ಚಮಚ ಖೋವಾ, ತುಸು ಕೇದಗೆ ಎಸೆನ್ಸ್, ಕರಿಯಲು ಎಣ್ಣೆ, ಅಲಂಕರಿಸಲು ಈರುಳ್ಳಿ ಬಿಲ್ಲೆ, ತುಸು ಉಪ್ಪು, ಮೆಣಸು.

ವಿಧಾನ : ರಾಜ್ಮಾಗೆ 2 ಕಪ್‌ ನೀರು ಬೆರೆಸಿ ಪ್ರೆಶರ್‌ ಕುಕ್ಕರ್‌ನಲ್ಲಿ ಹದನಾಗಿ ಬೇಯಿಸಿ. ಕೆಳಗಿಳಿಸಿ ನೀರು ಬಸಿದು, ರಾಜ್ಮಾವನ್ನು ತುಸು ಮಸೆದಿಡಿ. ಚಕ್ಕೆ, ಲವಂಗ ಇತ್ಯಾದಿಗಳನ್ನು ಲಘು ಹುರಿದು, ನುಣ್ಣಗೆ ಪುಡಿ ಮಾಡಿ ಮಸೆದ ರಾಜ್ಮಾ, ಬೇಯಿಸಿ ಮಸೆದ ಆಲೂ, ಹೆಚ್ಚಿದ ಹಸಿಮೆಣಸು, ಶುಂಠಿ ಹಾಕಿ ಮಿಕ್ಸಿಯಲ್ಲಿ ತಿರುವಿಕೊಳ್ಳಿ.  ಈ ಪೇಸ್ಟ್ ಗೆ ಚಕ್ಕೆ ಲವಂಗ ಪುಡಿ, ಬ್ರೆಡ್‌ ಕ್ರಂಬ್ಸ್ ಬೆರೆಸಿ. ಸ್ಟಫಿಂಗ್‌ಗಾಗಿ ಸೀಡ್ಸ್, ಗಸಗಸೆ, ಗೋಡಂಬಿ ಬೆರೆಸಿ  ತುಪ್ಪದಲ್ಲಿ ಹುರಿಡಿದಿ. ತುಸು ಸೀಡ್ಸ್  ಬೇರೆ ಇಡಿ. ಈ ಮಿಶ್ರಣವನ್ನು ಪುಡಿ ಮಾಡಿಡಿ. ಬಾಣಲೆಯಲ್ಲಿ ಖೋವಾ ಕೆದಕಿ ಇಡಿ. ಇದಕ್ಕೆ ಸೀಡ್ಸ್ ಪುಡಿ, ಹುರಿದ ಸೀಡ್ಸ್, ಉಪ್ಪು, ಖಾರ, ಕೇದಗೆ ಎಸೆನ್ಸ್, ನಿಂಬೆರಸ ಬೆರೆಸಿಡಿ. ರಾಜ್ಮಾ ಮಿಶ್ರಣದಿಂದ ಸಣ್ಣ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ. ಅದರಲ್ಲಿ ಮಧ್ಯೆ ತುಸು ಟೊಳ್ಳು ಮಾಡಿ ಸ್ಟಫಿಂಗ್‌ ತುಂಬಿಸಿ. ಇದನ್ನು ಕಟ್‌ಲೆಟ್‌ ಆಕಾರದಲ್ಲಿ ತಟ್ಟಿಕೊಂಡು, ಎಲ್ಲವನ್ನೂ ನಾನ್‌ಸ್ಟಿಕ್‌ ತವಾದಲ್ಲಿ ಶ್ಯಾಲೋಫ್ರೈ ಮಾಡಿ. ಚಿತ್ರದಲ್ಲಿರುವಂತೆ ಈರುಳ್ಳಿ ಟೊಮೇಟೊ ಸಲಾಡ್‌, ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.

ಓಟ್ಸ್  ಚಿಯಾ ಸೀಡ್ಸ್ ಪುಡ್ಡಿಂಗ್‌

ಸಾಮಗ್ರಿ : ಅರ್ಧ ಕಪ್‌ ಕ್ವಿಕ್‌ ಓಟ್ಸ್, 2 ಚಮಚ ಚಿಯಾ ಸೀಡ್ಸ್, 4-5 ಚಮಚ ಪುಡಿಸಕ್ಕರೆ, 1 ಕಪ್‌ ಗಟ್ಟಿ ಹಾಲು, ಅರ್ಧ ಕಪ್  ಹೆಚ್ಚಿದ ಹಣ್ಣಿನ ಹೋಳು, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ, ಅಖರೋಟಿನ ಚೂರು (ಒಟ್ಟಾಗಿ ಅರ್ಧ ಕಪ್‌).

ವಿಧಾನ : ಕಾದಾರಿದ ಹಾಲಿಗೆ ಪುಡಿ ಸಕ್ಕರೆ ಹಾಕಿ ಚೆನ್ನಾಗಿ ಕದಡಿಕೊಳ್ಳಿ. ಇದಕ್ಕೆ ಓಟ್ಸ್, ಸೀಡ್ಸ್ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು 2 ಗಂಟೆ ಹಾಗೇ ನೆನೆಯಲು ಬಿಡಿ. ಈ ಮಿಶ್ರಣ ಸಹಜವಾಗಿ ಹಿಗ್ಗುತ್ತದೆ. ಅದನ್ನು ಮತ್ತೆ ಕೆದಕಬೇಕು. ಅಗತ್ಯವೆನಿಸಿದರೆ 2 ಚಮಚ ಮಿಶ್ರ ಹಣ್ಣಿನ ಹೋಳು, ಅದರ ಮೇಲೆ ಗೋಡಂಬಿ ದ್ರಾಕ್ಷಿ ಹಾಕಿ ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಫ್ಲೇಕ್ಸ್ ಸೀಡ್ಸ್ ಮಫಿನ್ಸ್

ಮೂಲ ಸಾಮಗ್ರಿ : 1 ಕಪ್‌ ಮೈದಾ, 2-2 ಚಮಚ (ತರಿತರಿಯಾದ) ಫ್ಲೇಕ್ಸ್, ಫ್ಲೇಕ್ಸ್ ಪೌಡರ್‌, ಅರ್ಧ ಸಣ್ಣ ಚಮಚ ಬೇಕಿಂಗ್‌ಸೋಡ, ಮುಕ್ಕಾಲು ಸಣ್ಣ ಚಮಚ ಬೇಕಿಂಗ್‌ ಪೌಡರ್‌, ಅರ್ಧ ಕಪ್‌ ಬಿಸಿ ನೀರು, 2 ಚಮಚ ಕೋಕೋ ಪೌಡರ್‌, ಅರ್ಧ ಕಪ್‌ ವೆಜಿಟೆಬಲ್ ಆಯಿಲ್, 1 ಕಪ್‌ ಪುಡಿ ಸಕ್ಕರೆ, ಅರ್ಧರ್ಧ ಸಣ್ಣ ಚಮಚ ವೆನಿಲಾ ಎಸೆನ್ಸ್, ವೈಟ್‌ ವಿನಿಗರ್‌.

ಐಸಿಂಗ್‌ ಸಾಮಗ್ರಿ : 2 ಚಮಚ ವೈಟ್‌ ಬ್ರೌನ್‌ ಚಾಕೋ ಚಿಪ್ಸ್, 1 ದೊಡ್ಡ ಕ್ಯಾಡ್‌ಬರೀಸ್‌ ಮಿಲ್ಕ್ ಚಾಕಲೇಟ್‌, 2 ಚಮಚ ರೋಸ್ಟೆಡ್‌ ಫ್ಲೇಕ್ಸ್ ಸೀಡ್ಸ್.

ವಿಧಾನ : ಮೈದಾಗೆ ಬೇಕಿಂಗ್‌ ಸೋಡಾ ಪೌಡರ್‌ ಬೆರೆಸಿ ಜರಡಿಯಾಡಿ, ಇದಕ್ಕೆ ಪುಡಿ ಸಕ್ಕರೆ ಸಹ ಬೆರೆಸಿಡಿ.  ಫ್ಲೇಕ್ಸ್ ಸೀಡ್ಸ್ ಪೌಡರ್‌ಗೆ 3-4 ಚಮಚ ಬಿಸಿ ನೀರು ಬೆರೆಸಿಕೊಂಡು 20 ನಿಮಿಷ ಹಾಗೇ ಬಿಡಿ. ಈಗ ಒಂದು ಬಟ್ಟಲಲ್ಲಿ ನೀರು ಬಿಸಿ ಮಾಡಿ, ಅದಕ್ಕೆ ರೀಫೈಂಡ್‌ ಆಯಿಲ್ ‌ಮತ್ತು ಕೋಕೋ ಪೌಡರ್‌ ಹಾಕಿ ಕಲಸಿಡಿ. ಇವೆಲ್ಲ ನೀರಿನಲ್ಲಿ ಚೆನ್ನಾಗಿ ಬೆರೆತುಕೊಂಡಾಗ, ನಿಧಾನವಾಗಿ ಮೈದಾ ಮಿಶ್ರಣಕ್ಕೆ ಇದನ್ನು ಬೆರೆಸಬೇಕು. ಫ್ಲೇಕ್ಸ್ ಸೀಡ್ಸ್ ಪೇಸ್ಟ್ ರೋಸ್ಟೆಡ್‌ ಸೀಡ್ಸ್ ನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿ 200 ಡಿಗ್ರಿ ಫ್ಯಾರನ್‌ ಹೀಟ್‌ ಶಾಖದಲ್ಲಿ 30 ನಿಮಿಷ ಬೇಕ್‌ ಮಾಡಿ. ನಂತರ ಹೊರತೆಗೆದು ಆರಲು ಬಿಡಿ. ಈಗ ಐಸಿಂಗ್‌ಗಾಗಿ ಚಾಕಲೇಟ್‌ನ್ನು ಸಣ್ಣ ತುಂಡುಗಳಾಗಿಸಿ ಇದಕ್ಕೆ ಬೆಣ್ಣೆ ಬೆರೆಸಿ, 20 ಕ್ಷಣ ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿ. ಆಮೇಲೆ ಇದಕ್ಕೆ ಕೋಕೋಪುಡಿ ಬೆರೆಸಿ, ಚಮಚದಿಂದ ಮಫಿನ್ಸ್ ಮೇಲೆ ಹರಡಿರಿ. ಇದರ ಮೇಲೆ ಚಾಕೋ ಚಿಪ್ಸ್  ರೋಸ್ಟೆಡ್‌ ಫ್ಲೇಕ್ಸ್ ಸೀಡ್‌, ಉದುರಿಸಿ, ಸವಿಯಲು ಕೊಡಿ.

 

ಸನ್‌ಶೈನ್‌ ಚಿಯಾ ನ್ಯೂಟ್ರಿಶಿಯಸ್‌ ಡ್ರಿಂಕ್‌

ಸಾಮಗ್ರಿ : 2-3 ಚಮಚ ಚಿಯಾ ಸೀಡ್ಸ್, 1 ಕಪ್‌ ಗಟ್ಟಿ ಹಾಲು, 1 ಸಣ್ಣ ಚಮಚ ತುರಿದ ಹಸಿ ಅರಿಶಿನದ ತುಂಡು, ಅರ್ಧ ಸಣ್ಣ ಚಮಚ ಒಣಶುಂಠಿ ಪುಡಿ, ತುಸು ಏಲಕ್ಕಿ ಪುಡಿ, ಬ್ಲಾಂಚ್‌ಗೊಳಿಸಿ ಸಣ್ಣಗೆ ಹೆಚ್ಚಿದ 7-8 ಬಾದಾಮಿ, 8-10 ಪಿಸ್ತಾ, ರುಚಿಗೆ ತಕ್ಕಷ್ಟು ಸಕ್ಕರೆ.

ವಿಧಾನ : ಹಾಲಿನಲ್ಲಿ 3-4 ಚಮಚ ಉಳಿಸಿಕೊಂಡು ಉಳಿದದ್ದಕ್ಕೆ.ತುರಿದ ಹಸಿ ಅರಿಶಿನ ಬೆರೆಸಿ ಕುದಿಸಿರಿ. ಚಿಯಾ ಸೀಡ್ಸ್ ನ್ನು ಉಳಿಸಿದ ಹಾಲಲ್ಲಿ ನೆನೆಸಿ, ಹಿಗ್ಗುವಂತೆ ಮಾಡಿ. ಆಮೇಲೆ ಕುದಿಸಿದ ಹಾಲಿಗೆ ಶುಂಠಿಪುಡಿ, ಏಲಕ್ಕಿಪುಡಿ ಹಾಕಿ ಮುಚ್ಚಿಡಿ. ಅರ್ಧ ಗಂಟೆ ನಂತರ  ಸೋಸಿಕೊಂಡು ಬೇರ್ಪಡಿಸಿ. ಇದಕ್ಕೆ ಚಿಯಾ ಸೀಡ್ಸ್, ಬಾದಾಮಿ, ಪಿಸ್ತಾ ಚೂರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸನ್‌ಶೈನ್‌ ಡ್ರಿಂಕ್‌ ಇದೀಗ ರೆಡಿ.

ಸನ್‌ಫ್ಲವರ್‌ ಸೀಡ್ಸ್ ವಿತ್‌ ಸ್ಟ್ರಾಬೆರಿ ಬಾಸುಂದಿ

ಸಾಮಗ್ರಿ : 1 ಲೀ. ಹಾಲು, 4 ಚಮಚ ಸನ್‌ ಫ್ಲವರ್‌ ಸೀಡ್ಸ್, 4 ಚಮಚ ಬಾದಾಮಿ ಚೂರು, 2 ಚಮಚ ಬಾದಾಮಿ ಪುಡಿ, 2 ಚಮಚ ಕಾರ್ನ್‌ಫ್ಲೋರ್‌, ಅರ್ಧ ಕಪ್‌ ಹೆಚ್ಚಿದ ಸ್ಟ್ರಾಬೆರಿ, ಅರ್ಧ ಕಪ್‌ ಸ್ಟ್ರಾಬೆರಿ ಜೂಸ್‌, ಅರ್ಧ ಕಪ್‌ ಸಕ್ಕರೆ, ಒಂದಿಷ್ಟು ಸೀಡ್‌ಲೆಸ್‌ ದಾಳಿಂಬೆ ಹರಳು.

ವಿಧಾನ : ಹಾಲನ್ನು ಬಿಸಿ ಮಾಡಿ ಕಾಯಿಸಿ. ಇದು ಚೆನ್ನಾಗಿ ಕುದ್ದು ಅರ್ಧದಷ್ಟು ಹಿಂಗಿದಾಗ ಅದಕ್ಕೆ ಬಾದಾಮಿ ಪುಡಿ, ಸನ್‌ ಫ್ಲವರ್‌ಸೀಡ್ಸ್ ಸಕ್ಕರೆ ಬೆರೆಸಿರಿ. ಸಕ್ಕರೆ ಚೆನ್ನಾಗಿ ಬೆರೆತಾಗ ಅದಕ್ಕೆ ಸ್ಟ್ರಾಬೆರಿ ಜೂಸ್‌, ಕಾರ್ನ್‌ಫ್ಲೋರ್‌ ಬೆರೆಸಿ ಕೈಯಾಡಿಸಿ. 1-2  ಕುದಿ ಬಂದ ಮೇಲೆ ಒಲೆಯಿಂದ ಇಳಿಸಿಬಿಡಿ. ಇದು ಚೆನ್ನಾಗಿ ಆರಿದ ನಂತರ ಹೆಚ್ಚಿದ ಸ್ಟ್ರಾಬೆರಿ ಮಿಕ್ಸ್ ಮಾಡಿ. ಕೊನೆಯಲ್ಲಿ ದಾಳಿಂಬೆ ಹರಳು, ಬಾದಾಮಿ ಚೂರು ತೇಲಿಬಿಟ್ಟು, ಫ್ರಿಜ್‌ನಲ್ಲಿರಿಸಿ ಚಿಲ್ ‌ಮಾಡಿ, ನಂತರ ಸವಿಯಲು ಕೊಡಿ.

ಸಾಲ್ಟೆಡ್‌ ಸೀಡ್ಸ್ ವಿತ್‌ ಪೀನಟ್ಸ್

ಸಾಮಗ್ರಿ : ಸನ್‌ ಫ್ಲವರ್‌ ಸೀಡ್ಸ್, ಕರ್ಬೂಜದ ಬೀಜ, ಕಲ್ಲಂಗಡಿ ಬೀಜ, ಕುಂಬಳ ಬೀಜ, ಕಡಲೆಕಾಯಿ ಬೀಜ (ತಲಾ ಅರ್ಧರ್ಧ ಕಪ್‌), ರುಚಿಗೆ ತಕ್ಕಷ್ಟು ಉಪ್ಪು, ಬ್ಲ್ಯಾಕ್‌ ಸಾಲ್ಟ್, ಮೆಣಸು, ಚಾಟ್‌ ಮಸಾಲ, ತುಸು ರೀಫೈಂಡ್‌ ಎಣ್ಣೆ.

ವಿಧಾನ : ಎಲ್ಲಾ ಬೀಜಗಳನ್ನು ಮಂದ ಉರಿಯಲ್ಲಿ ತುಸು ತುಸು ಎಣ್ಣೆ ಬೆರೆಸುತ್ತಾ ಬೇರೆ ಬೇರೆಯಾಗಿ ಹುರಿಯಿರಿ. ನಂತರ ಉಳಿದೆಲ್ಲ ಸಾಮಗ್ರಿ ಬೆರೆಸಿ, ಹುರಿಗಾಳಿನ ತರಹ ಗಾಳಿಯಾಡದ ಡಬ್ಬಕ್ಕೆ ತುಂಬಿರಿಸಿ ಬೇಕಾದಾಗ ಸವಿಯಿರಿ.

ಫ್ಲೇಕ್ಸ್ ಸೀಡ್ಸ್ ಲಡ್ಡು

ಸಾಮಗ್ರಿ : 150 ಗ್ರಾಂ ಕಡಲೆಹಿಟ್ಟು (ಲಘು ಹುರಿದಿಡಿ), 100 ಗ್ರಾಂ ಪುಡಿ ಮಾಡಿದ ಬೆಲ್ಲ, 75 ಗ್ರಾಂ ಫ್ಲೇಕ್ಸ್ ಸೀಡ್ಸ್, 2 ಚಮಚ ಅಡುಗೆ ಗೋಂದು, ಗೋಡಂಬಿ, ಬಾದಾಮಿ, ಪಿಸ್ತಾ, ದಾಕ್ಷಿ (ಒಟ್ಟಾಗಿ ಒಂದು ಕಪ್‌), ಅಗತ್ಯವಿದ್ದಷ್ಟು ಏಲಕ್ಕಿಪುಡಿ, ತುಪ್ಪ.

ವಿಧಾನ : ಫ್ಲೇಕ್ಸ್ ಸೀಡ್ಸ್ ನ್ನು ಜಿಡ್ಡಿಲ್ಲದೆ ಹುರಿಯಿರಿ. ಅದೇ ಬಾಣಲೆಗೆ ತುಸು ತುಪ್ಪ ಹಾಕಿ, ಅದರಲ್ಲಿ ಗೋಂದನ್ನು ಹಾಕಿ ಹುರಿಯಬೇಕು. ನಂತರ ಇನ್ನಷ್ಟು ತುಪ್ಪ ಸೇರಿಸಿ ಗೋಡಂಬಿ, ದ್ರಾಕ್ಷಿ ಹುರಿಯಿರಿ. ಗೋಂದನ್ನು ತರಿತರಿಯಾಗಿ ಕುಟ್ಟಿಡಿ. 2 ದೊಡ್ಡ ಚಮಚ ಫ್ಲೇಕ್ಸ್ ಸೀಡ್ಸ್ ಬಿಟ್ಟು ಉಳಿದ ಸೀಡ್ಸ್ ನ್ನು ಮಿಕ್ಸಿಯಲ್ಲಿ ಪುಡಿ ಮಾಡಿ. ಈಗ ಕಡಲೆಹಿಟ್ಟಿಗೆ ಗೋಡಂಬಿ ದ್ರಾಕ್ಷಿ, ಫ್ಲೇಕ್ಸ್ ಪುಡಿ, ರೋಸ್ಟೆಡ್‌ ಫ್ಲೇಕ್ಸ್, ಏಲಕ್ಕಿಪುಡಿ, ತರಿ ಗೋಂದು, ಬೆಲ್ಲ ಹಾಕಿ ಕಲಸಿಡಿ. ಇದಕ್ಕೆ ಕರಗಿದ ತುಪ್ಪ ಬೆರೆಸುತ್ತಾ ನಿಧಾನವಾಗಿ ಲಡ್ಡು ಉಂಡೆ ಕಟ್ಟಬೇಕು. ಮೇಲೆ 1-1 ಇಡೀ ಬಾದಾಮಿ (ಚಿತ್ರದಲ್ಲಿರುವಂತೆ) ಸಿಗಿಸಿ, ಸವಿಯಲು ಕೊಡಿ.

ಸೀಡ್ಸ್ ಪನೀರ್‌ ಟಿಕ್ಕಾ

ಸಾಮಗ್ರಿ : 300 ಗ್ರಾಂ ಪನೀರ್‌, 2-2  ಚಮಚ ಸನ್‌ ಫ್ಲವರ್‌, ಕರ್ಬೂಜ, ಕಲ್ಲಂಗಡಿ, ಕುಂಬಳ ಬೀಜಗಳು, 2-3 ಚಮಚ ಹುರಿದ ಕಡಲೆ ಹಿಟ್ಟು, 2 ಚಮಚ ಕಾರ್ನ್‌ಫ್ಲೋರ್‌, ಅರ್ಧ ಕಪ್‌ ಹಂಗ್‌ ಕರ್ಡ್‌, ಅಗತ್ಯವಿದ್ದಷ್ಟು ರೀಫೈಂಡ್‌ ಎಣ್ಣೆ, ಉಪ್ಪು, ಮೆಣಸು.

ವಿಧಾನ : ಪನೀರ್‌ನ್ನು ಸಣ್ಣ ಚೌಕಗಳಾಗಿ ಕತ್ತರಿಸಿ. ಎಲ್ಲಾ ಬೀಜಗಳನ್ನೂ ಜಿಡ್ಡಿಲ್ಲದೆ ಹುರಿದು, ಮಿಕ್ಸಿಯಲ್ಲಿ ತರಿಯಾಗಿ ಪುಡಿ ಮಾಡಿ. ಇದಕ್ಕೆ ಹಂಗ್‌ ಕರ್ಡ್‌, ಹುರಿದ ಕಡಲೆ ಹಿಟ್ಟು, ಕಾರ್ನ್‌ಫ್ಲೋರ್‌, ಉಪ್ಪು, ಮೆಣಸು ಎಲ್ಲಾ ಬೆರೆಸಿಕೊಳ್ಳಿ. ಇದರಲ್ಲಿ ಪನೀರ್‌ ಚೌಕಗಳನ್ನು 1 ತಾಸು ನೆನೆಹಾಕಿಡಿ. ನಾನ್‌ಸ್ಟಿಕ್‌ ಪ್ಯಾನಿನಲ್ಲಿ ತುಸು ಎಣ್ಣೆ ಬಿಸಿ ಮಾಡಿ ಪನೀರ್‌ನ್ನು ಶ್ಯಾಲೋ ಫ್ರೈ ಮಾಡಿ. ಪುದೀನಾ ಚಟ್ನಿ ಜೊತೆ ಸವಿಯಿರಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ