ಸ್ಪೈಸಿ ಕಾರ್ನ್ ಡಿಲೈಟ್
ಸಾಮಗ್ರಿ : 1 ಕಪ್ ಬೆಂದ ತಾಜಾ ಕಾರ್ನ್, 2 ಕಪ್ ಮಿಕ್ಸ್ಡ್ ಸಲಾಡ್, 1 ಕಪ್ ಚಿಪ್ಸ್, 2-3 ಚಮಚ ಟೊಮೇಟೊ ಸಾಸ್, ಟಾಪಿಂಗ್‌ಗಾಗಿ ಒಂದಿಷ್ಟು ತುರಿದ ಚೀಸ್, ರುಚಿಗೆ ತಕ್ಕಷ್ಟು ಉಪ್ಪು, ಚಾಟ್ ಮಸಾಲ, ನಿಂಬೆರಸ.
ವಿಧಾನ : ಒಂದು ಅಗಲ ಬಟ್ಟಲಲ್ಲಿ ಎಲ್ಲಾ ಸಾಮಗ್ರಿ (ಚಿಪ್ಸ್ ಬಿಟ್ಟು)ಗಳನ್ನೂ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಸರ್ವಿಂಗ್ ಬೌಲ್ ಗೆ ಈ ಮಿಶ್ರಣ ಹರಡಿ ಮೇಲೆ ನಿಂಬೆಹಣ್ಣು ಹಿಂಡಿಕೊಂಡು, ಚಿಪ್ಸ್ ಉದುರಿಸಿ, ತುರಿದ ಚೀಸ್ ಹರಡಿ ಚಿತ್ರದಲ್ಲಿರುವಂತೆ ಅಲಂಕರಿಸಿ ಸರ್ವ್ ಮಾಡಿ.
ಕಾರ್ನ್ ಕಟ್‌ಲೆಟ್
ಸಾಮಗ್ರಿ : 1 ಕಪ್ ಬೆಂದ ತಾಜಾ ಕಾರ್ನ್, ಅರ್ಧರ್ಧ ಕಪ್ ಬೇಯಿಸಿ ಮಸೆದ ಆಲೂ, ಅಕ್ಕಿಹಿಟ್ಟು, ಬ್ರೆಡ್ ಕ್ರಂಬ್ಸ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಅಮ್ಚೂರ್ ಪುಡಿ, ಕರಿಯಲು ಎಣ್ಣೆ.
ವಿಧಾನ : ಬೆಂದ ಕಾಳನ್ನು ಮಿಕ್ಸಿಯಲ್ಲಿ ತರಿತರಿಯಾಗಿ ತಿರುವಿಕೊಳ್ಳಿ. ಇದಕ್ಕೆ ಎಲ್ಲಾ ಸಾಮಗ್ರಿ ಬೆರೆಸಿಕೊಂಡು, ಸಣ್ಣ ಉಂಡೆಗಳಾಗಿಸಿ, ವಡೆ ತರಹ ತಟ್ಟಿಕೊಂಡು, ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿ ಕಾದ ಎಣ್ಣೆಯಲ್ಲಿ (ಮಂದ ಉರಿ ಇರಲಿ) ಹೊಂಬಣ್ಣ ಬರುವಂತೆ ಕರಿಯಿರಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.
ಇನ್‌ಸ್ಟೆಂಟ್ ಕಾರ್ನ್ ಕಾಯಿನ್
ಸಾಮಗ್ರಿ : ಅರ್ಧ ಕಪ್ ಬೆಂದ ತಾಜಾ ಕಾರ್ನ್, ಅರ್ಧರ್ಧ ಕಪ್ ಹಾಲು-ಬೆಣ್ಣೆ, ಹೆಚ್ಚಿದ ಈರುಳ್ಳಿ, ಮೈದಾ, 1 ಚಮಚ ಸಕ್ಕರೆ, 10-12 ಸಾಲ್ಟ್ ಬಿಸ್ಕೆಟ್ಸ್, 2 ಹಸಿ ಮೆಣಸು, ಅಲಂಕರಿಸಲು ಹೆಚ್ಚಿದ ಕ್ಯಾಪ್ಸಿಕಂ, ಟೊಮೇಟೊ ತುಸು, ಉಪ್ಪುಮೆಣಸು.
ವಿಧಾನ : ಒಂದು ನಾನ್‌ಸ್ಟಿಕ್ ಪ್ಯಾನಿನಲ್ಲಿ ಬೆಣ್ಣೆ ಬಿಸಿ ಮಾಡಿ ಈರುಳ್ಳಿ ಹಾಕಿ ಬಾಡಿಸಿ. ಹಸಿ ಮೆಣಸು, ಮೈದಾ ಹಾಕಿ ಕೆದಕಬೇಕು. ನಿಧಾನವಾಗಿ ಎಡಗೈಯಿಂದ ಹಾಲು ಬೆರೆಸುತ್ತಾ, ಗಂಟಾಗದಂತೆ ಬಾಡಿಸಿ. ಇದಕ್ಕೆ ಉಪ್ಪು, ಮೆಣಸು, ಕಾರ್ನ್ ಬೆರೆಸಿ ಗಟ್ಟಿ ಮಿಶ್ರಣವಾಗಿಸಿ ಕೆಳಗಿಳಿಸಿ. ಚಿತ್ರದಲ್ಲಿರುವಂತೆ ನೀಟಾದ ತಟ್ಟೆಯಲ್ಲಿ ಬಿಸ್ಕೆಟ್ಸ್ ಜೋಡಿಸಿ, ಅದರ ಮೇಲೆ ಕಾರ್ನ್ ಮಿಶ್ರಣ, ಟೊಮೇಟೊ, ಕ್ಯಾಪ್ಸಿಕಂ ತುಂಡುಗಳಿಂದ ಅಲಂಕರಿಸಿ, ಕಾಫಿ-ಟೀ ಜೊತೆ ಸರ್ವ್ ಮಾಡಿ.
ಚೀಝೀ ಕಾರ್ನ್ ಪಾಸ್ತಾ
ಸಾಮಗ್ರಿ : 1-1 ಕಪ್ ಬೆಂದ ಕಾರ್ನ್, ಪಾಸ್ತಾ, 2-3 ಚೀಸ್ ಕ್ಯೂಬ್ಸ್, ಅರ್ಧ ಕಪ್ ಮೈದಾ, 1 ಕಪ್ ಹಾಲು, 3-4 ಚಮಚ ಬೆಂದ ಬಟಾಣಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಓರಿಗೆನೊ.
ವಿಧಾನ : ಒಂದು ಸಣ್ಣ ಬಾಣಲೆಯಲ್ಲಿ ಬೆಣ್ಣೆ ಕರಗಿಸಿ ಮೈದಾ ಹಾಕಿ ಕೆದಕಬೇಕು. ಇದಕ್ಕೆ ನಿಧಾನವಾಗಿ ಹಾಲು ಬೆರೆಸುತ್ತಾ ಕೈಯಾಡಿಸಿ, ಗಂಟು ಆಗಬಾರದು. ಈ ಮಿಶ್ರಣ ಗಾಢಗೊಳ್ಳುತ್ತಿದ್ದಂತೆ, ಪಾಸ್ತಾ, ಕಾರ್ನ್ ಸೇರಿಸಿ. ಆಮೇಲೆ ತುರಿದ ಚೀಸ್ ಸೇರಿಸಿ ಕೆದಕಬೇಕು. ಮಂದ ಉರಿ ಇರಲಿ. ಎಲ್ಲ ಬೆರೆತು ಗ್ರೇವಿಯಂತೆ ಗಟ್ಟಿಯಾದಾಗ, ಸರ್ವಿಂಗ್ ಡಿಶ್ಶಿಗೆ ಬಗ್ಗಿಸಿ. ಇದರ ಮೇಲೆ ಉಪ್ಪು, ಮೆಣಸು, ಓರಿಗೆನೋ ಉದುರಿಸಿ ಸವಿಯಲು ಕೊಡಿ.