ಪಾರಿಜ್‌ ಬಾಲ್ ಕೇಕ್‌

ಸಾಮಗ್ರಿ : 1 ಕಪ್‌ ಬೆಂದ ದಲಿಯಾ (ಬ್ರೋಕನ್‌ ವೀಟ್‌), 1 ದೊಡ್ಡ ಈರುಳ್ಳಿ, 2-3 ಹಸಿಮೆಣಸು, 1-2 ಟೊಮೇಟೊ, ಅರ್ಧ (ದೊಡ್ಡ) ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಟೊಮೇಟೊ ಸಾಸ್‌, ಬೆಣ್ಣೆ, ತುರಿದ ಚೀಸ್‌, ತುಸು ಎಣ್ಣೆ.

ವಿಧಾನ : ಮೇಲಿನ ಪದಾರ್ಥ ಸಣ್ಣಗೆ ಹೆಚ್ಚಿಡಿ. ಬೆಂದ ಗೋಧಿ ಅನ್ನಕ್ಕೆ ಚಿಟಕಿ ಉಪ್ಪು, ಹಸಿ ಮೆಣಸು, ಚೀಸ್‌ ಬೆರೆಸಿ ಸಣ್ಣ ಉಂಡೆ ಮಾಡಿ. ಬಾಣಲೆಯಲ್ಲಿ ಎಣ್ಣೆ, ಬೆಣ್ಣೆ ಒಟ್ಟಿಗೆ ಬಿಸಿ ಮಾಡಿ. ಇದಕ್ಕೆ ಈರುಳ್ಳಿ, ಕ್ಯಾಪ್ಸಿಕಂ ನಂತರ ಟೊಮೇಟೊ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಸಾಸ್‌ ಬೆರೆಸಿ ಕೆದಕಬೇಕು. ಈ ಗ್ರೇವಿಗೆ ಉಂಡೆ ತೇಲಿಬಿಟ್ಟು ಮೇಲೆ ಚೀಸ್‌ ಹಾಕಿ ಕೆದಕಿ ನಂತರ ಬೇಕ್‌ ಮಾಡಿ, ಸರ್ವ್ ಮಾಡಿ.

ಬ್ರೆಡ್‌ ಸ್ಟರ್‌ ಫ್ರೈ

ಸಾಮಗ್ರಿ : 4-5 ಸ್ಲೈಸ್‌ ಬ್ರೆಡ್‌ನ್ನು ತುಂಡರಿಸಿ, 1-1 ಈರುಳ್ಳಿ, ಕ್ಯಾಪ್ಸಿಕಂ, ಟೊಮೇಟೊ, ಹಸಿಮೆಣಸು, ಅರ್ಧರ್ಧ ಕಪ್‌ ಬೆಂದ ಕಾಬೂಲ್ ಕಡಲೆಕಾಳು, ಪನೀರ್‌ ತುಂಡು, ಹೆಚ್ಚಿದ ಪಾಲಕ್‌ ಸೊಪ್ಪು, ಒಂದಿಷ್ಟು ಕಡಲೆ ಬೀಜ, ಸೂರ್ಯಕಾಂತಿ ಬೀಜ, 2-3 ಚಮಚ ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, ಗರಂಮಸಾಲ.

ವಿಧಾನ : ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ. ನೀಟಾಗಿ ಹೆಚ್ಚಿದ ಈರುಳ್ಳಿ, ಹಸಿ ಮೆಣಸು, ಕ್ಯಾಪ್ಸಿಕಂ, ನಂತರ ಪಾಲಕ್‌ ಸೊಪ್ಪು, ಟೊಮೇಟೊ ಹಾಕಿ ಬಾಡಿಸಿ. ಕಡಲೆಬೀಜ, ಸೂರ್ಯಕಾಂತಿ ಬೀಜ ಹಾಕಿ ಹುರಿಯಿರಿ. ಪನೀರ್‌ ತುಂಡು, ನಂತರ ಬೆಂದ ಕಡಲೆಕಾಳು ಹಾಕಿ ಕೆದಕಬೇಕು. ಆಮೇಲೆ ಬ್ರೆಡ್‌ ತುಂಡು, ಉಪ್ಪು, ಖಾರ, ಗರಂಮಸಾಲ ಹಾಕಿ ಕೈಯಾಡಿಸಿ. ಮೇಲೆ ನಿಂಬೆಹಣ್ಣು ಹಿಂಡಿಕೊಂಡು ಸವಿಯಲು ಕೊಡಿ.

ಆ್ಯಪಲ್ ಹನೀ ಶ್ರೀಖಂಡ

ಸಾಮಗ್ರಿ : 2 ಕಪ್‌ ಗಟ್ಟಿ ಹಂಗ್‌ ಕರ್ಡ್‌, 1 ಸೇಬು, 2-3 ಚಮಚ ಜೇನುತುಪ್ಪ, 2-3 ಚಮಚ ಪುಡಿಸಕ್ಕರೆ, ಅರ್ಧ ಕಪ್‌ ತುರಿದ ಪನೀರ್‌, ಚಿಟಕಿ ದಾಲ್ಚಿನ್ನಿ ಪುಡಿ.

ವಿಧಾನ : ಸೇಬಿನ ಸಿಪ್ಪೆ ಹೆರೆದು ಸಣ್ಣ ಹೋಳುಗಳಾಗಿಸಿ. ಹಂಗ್‌ ಕರ್ಡ್‌ಗೆ ಪುಡಿಸಕ್ಕರೆ, ತುರಿದ ಪನೀರ್‌ ಹಾಕಿ ಚೆನ್ನಾಗಿ ಗೊಟಾಯಿಸಿ. ಇದಕ್ಕೆ ಜೇನುತುಪ್ಪ, ದಾಲ್ಚಿನ್ನಿ, ಸೇಬು ಹಾಕಿ ಕದಡಿ 1 ತಾಸು ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ.

ಫ್ಯೂಷನ್‌ ಕ್ರೊಕೇಟ್ಸ್

ಸಾಮಗ್ರಿ : 1-1 ಕಪ್‌ ಹೆಚ್ಚಿ ಬೇಯಿಸಿದ ಪಾಲಕ್‌ ಸೊಪ್ಪು, ಸ್ಪೆಗೆಟಿ, 2  ಬೆಂದ ಆಲೂ, ಅರ್ಧರ್ಧ ಕಪ್‌ ಪನೀರ್‌, ತುರಿದ ಚೀಸ್‌, ತಾಜಾ ಹಸಿ ಜೋಳದ ಪೇಸ್ಟ್, ಹೆಚ್ಚಿದ ಕ್ಯಾಪ್ಸಿಕಂ, 1-2 ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಬ್ರೆಡ್‌ ಕ್ರಂಬ್ಸ್, ಕಾರ್ನ್‌ ಪುಡಿ, ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಕರಿಯಲು ಎಣ್ಣೆ.

ವಿಧಾನ : ಪಾಲಕ್‌ ಜೊತೆಗೆ ಉಳಿದ ಸಾಮಗ್ರಿಗಳನ್ನೂ ಹೆಚ್ಚಿಕೊಂಡು, ಬೆಂದ ಆಲೂ, ಮಸೆದು ಅದರ ಜೊತೆ ಎಲ್ಲವನ್ನೂ ಬೆರೆಸಿಕೊಳ್ಳಿ. ಮಿಶ್ರಣ ರೋಲ್ ಆಗುವಷ್ಟು ಕಾರ್ನ್‌ ಪುಡಿ, ಬ್ರೆಡ್‌ ಕ್ರಂಬ್ಸ್ ಹೆಚ್ಚಿಸಿ. ಇದರಿಂದ ಉಂಡೆ ಮಾಡಿ ಸುರುಳಿ ಸುತ್ತಿಕೊಳ್ಳಿ. ಇದನ್ನು ಕಾದ ಎಣ್ಣೆಯಲ್ಲಿ ಕರಿದು ಬಿಸಿಯಾಗಿ ಸಾಸ್‌ ಜೊತೆ ಸವಿಯಲು ಕೊಡಿ.

ಸಲಾಡ್‌ ಪರೋಟ

ಸಾಮಗ್ರಿ : ಅರ್ಧರ್ಧ ಕಪ್‌ ಗೋಧಿಹಿಟ್ಟು, ಜೋಳದ ಹಿಟ್ಟು, ಕಡಲೆ ಹಿಟ್ಟು, ಓಟ್ಸ್ ಹಿಟ್ಟು, ಹೆಚ್ಚಿದ ಪಾಲಕ್‌ ಸೊಪ್ಪು, ತುರಿದ ಸೌತೇಕಾಯಿ, ಮೂಲಂಗಿ, 3 ಬಗೆಯ ಕ್ಯಾಪ್ಸಿಕಂ, ಒಂದಿಷ್ಟು ಹೆಚ್ಚಿದ ಬ್ರೋಕ್ಲಿ, ಈರುಳ್ಳಿ ತೆನೆ, ಪುದೀನಾ, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನ ಪೇಸ್ಟ್, ಓಮ, 1 ಕಪ್‌ ಹುಳಿ ಮೊಸರು, ಒಂದಿಷ್ಟು ಧನಿಯಾ, ಜೀರಿಗೆ, ಸೋಂಪಿನ ಪುಡಿ, ಅರ್ಧ ಸೌಟು ರೀಫೈಂಡ್‌ ಎಣ್ಣೆ, ತುಸು ತುಪ್ಪ.

ವಿಧಾನ : ಎಲ್ಲಾ ಹಸಿ ಸಾಮಗ್ರಿಗಳನ್ನೂ ಸಣ್ಣದಾಗಿ ಹೆಚ್ಚಿಡಿ. ಅದಕ್ಕೆ ಉಳಿದೆಲ್ಲ ಸಾಮಗ್ರಿ ಸೇರಿಸಿ ಚಪಾತಿ ಹಿಟ್ಟಿನಂತೆ ಕಲಸಿ, ತುಪ್ಪ ಹಾಕಿ ನಾದಿಕೊಂಡು ನೆನೆಯಲು ಬಿಡಿ. ನಂತರ ಸಣ್ಣ ಉಂಡೆಗಳಾಗಿಸಿ ಲಟ್ಟಿಸಿ, ತವಾ ಮೇಲೆ ಎಣ್ಣೆ ಬಿಡುತ್ತಾ ಎರಡೂ ಬದಿ ಬೇಯಿಸಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಬೇಕ್ಡ್ ಸ್ಪೈಸಿ ಆಲೂ

ಸಾಮಗ್ರಿ : 2-3 ದೊಡ್ಡ ಆಲೂ, 1-2 ಹಸಿ ಮೆಣಸು, 2-2 ಚಮಚ ಕ್ರೀಂ, ಚೀಸ್‌, ಶುಂಠಿ, ಬೆಳ್ಳುಳ್ಳಿ ಪೇಸ್ಟ್, 1 ಚಮಚ ಬೆಣ್ಣೆ, ಅರ್ಧರ್ಧ ಕಪ್‌ ಮೊಸರು, ಕಡಲೆ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು.

ವಿಧಾನ : ಒಂದು ಬಟ್ಟಲಿಗೆ ಮೊಸರು, ಕ್ರೀಂ, ಚೀಸ್‌, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕಡಲೆಹಿಟ್ಟು, ಹೆಚ್ಚಿದ ಹಸಿ ಮೆಣಸು, ಉಪ್ಪು, ಮೆಣಸು ಸೇರಿಸಿ ಚೆನ್ನಾಗಿ ಗೊಟಾಯಿಸಿ. ಆಲೂ ತೊಳೆದು, ಸಿಪ್ಪೆ ಹೆರೆದು, ಗುಂಡಗೆ ಸ್ಲೈಸ್‌ ಮಾಡಿ. ಕುದಿ ನೀರಿಗೆ ಉಪ್ಪು ಹಾಕಿ ಅದರಲ್ಲಿ 1-2 ನಿಮಿಷ ನೆನೆಯಲು ಬಿಡಿ. ಬೇಕಿಂಗ್‌ ಟ್ರೇಗೆ ಬೆಣ್ಣೆ ಸವರಿ ಗ್ರೀಸ್‌ ಮಾಡಿ. ಅದರಲ್ಲಿ ಈ ಆಲೂ ಬಿಲ್ಲೆಗಳನ್ನು ಜೋಡಿಸಿ. ಇದರ ಮೇಲೆ ಚೀಸ್‌ ಮಸಾಲೆ ಮಿಶ್ರಣ ಉದುರಿಸಿ. ಇದನ್ನು ಬಿಸಿಯಾದ ಓವನ್ನಿನಲ್ಲಿ 180 ಡಿಗ್ರಿ ಶಾಖದಲ್ಲಿ 8-10 ನಿಮಿಷ ಬೇಕ್‌ ಮಾಡಿ, ಬಿಸಿಯಾಗಿ ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

ಬ್ರೆಡ್‌ ವೆಜ್‌ ಟಾರ್ಟ್‌

ಸಾಮಗ್ರಿ : 7-8 ಬ್ರೆಡ್‌ ಸ್ಲೈಸ್‌, 1-1 ಚಮಚ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ಬೀನ್ಸ್, ಕ್ಯಾರೆಟ್‌ ತುರಿ, ತುರಿದ ಚೀಸ್‌, 2 ಚಮಚ ಬೆಣ್ಣೆ, 1 ಕಪ್‌  ಹಾಲು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು.

ವಿಧಾನ : ಬ್ರೆಡ್‌ ಸ್ಲೈಸ್‌ ಲಟ್ಟಿಸಿಕೊಂಡು ಗುಂಡಗೆ ಕತ್ತರಿಸಿ. ಮೌಲ್ಡ್‌ಗೆ ತುಸು ಬೆಣ್ಣೆ ಸವರಿ, ಬ್ರೆಡ್‌ನ್ನು ಅದರಲ್ಲಿ ಒತ್ತಿ ಮೌಲ್ಡ್‌ ಆಕಾರ ಕೊಡಿ. ಇದರ ಒಳಗೂ ಬೆಣ್ಣೆ ಸವರಿ, ಓವನ್‌ನಲ್ಲಿರಿಸಿ ಕೆಂಪಗಾಗುವಂತೆ ಬೇಕ್‌ ಮಾಡಿದರೆ ಬ್ರೆಡ್‌ ಟಾರ್ಟ್‌ ರೆಡಿ. ಚಿಕ್ಕ ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ. ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ ಹಾಕಿ ಬಾಡಿಸಿ. ನಂತರ ಬೀನ್ಸ್, ಕ್ಯಾರೆಟ್‌ ಹಾಕಿ ಬೇಯಿಸಿ. ಇದಕ್ಕೆ ಮೈದಾ ಬೆರೆಸಿ ಕೆದಕಬೇಕು. ನಂತರ ಹಾಲು ಬೆರೆಸಿ ಬೇಯಿಸಿ. ಆಮೇಲೆ ಉಪ್ಪು, ಮೆಣಸು, ತುರಿದ ಚೀಸ್‌ ಹಾಕಿ ಬೆರೆಸಿ. ಈ ಸಾಸ್‌ನ್ನು ಕೆಳಗಿಳಿಸಿ, ಬ್ರೆಡ್‌ ಟಾರ್ಟ್‌ಗಳಿಗೆ ತುಂಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಕಾರ್ನ್‌ ಮ್ಯಾಶ್ಡ್ ಪೊಟೇಟೊ

ಸಾಮಗ್ರಿ : 1-2  ಕಪ್‌ ಹಸಿ ಜೋಳದ ಕಾಳು, 2-3 ಬೆಂದ ಆಲೂ, 2-3 ಚಮಚ ಬೆಣ್ಣೆ, ಅರ್ಧ ಕಪ್‌ ಚೀಸ್‌, ಒಂದಿಷ್ಟು ಹೆಚ್ಚಿದ ಶುಂಠಿ, ಹಸಿಮೆಣಸು, ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ನಿಂಬೆರಸ.

ವಿಧಾನ : ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು ಸೇರಿಸಿ ಪೇಸ್ಟ್ ಮಾಡಿಡಿ. ಜೋಳದ ಕಾಳನ್ನು ಬೇರೆಯಾಗಿ ಪೇಸ್ಟ್ ಮಾಡಿ. ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ಆಮೇಲೆ ಜೋಳದ ಪೇಸ್ಟ್ ಹಾಕಿ ಬಾಡಿಸಿ. ಸ್ವಲ್ಪ ನೀರು ಬೆರೆಸಿ ಮಂದಉರಿಯಲ್ಲಿ ಕುದಿಸಿ. ಇದಕ್ಕೆ ಬೆಂದ ಆಲೂ ಮ್ಯಾಶ್‌ ಮಾಡಿ ಹಾಕಿ. ಉಪ್ಪು, ಮೆಣಸು, ಚೀಸ್‌ ಹಾಕಿ ಕೈಯಾಡಿಸಿ. ನಿಂಬೆರಸ ಹಿಂಡಿ ಕೊಂಡು ಮತ್ತೆ 2 ನಿಮಿಷ ಕೆದಕಿ ಕೆಳಗಿಳಿಸಿ. ಇದನ್ನು ರೋಸ್ಟೆಡ್‌ ಬ್ರೆಡ್‌ ಜೊತೆ ಸವಿಯಲು ಕೊಡಿ.

ಬನಾನಾ ಪ್ಯಾನ್‌ ಕೇಕ್‌

ಸಾಮಗ್ರಿ : 2-3 ಮಾಗಿದ ಬಾಳೆಹಣ್ಣು, ಅರ್ಧ ಕಪ್‌ ಮೈದಾ, 2-3 ಚಮಚ ಸಕ್ಕರೆ, ತುರಿದ ಪನೀರ್‌, ಬೆಣ್ಣೆ, 1-2 ಚಮಚ ಬಾದಾಮಿ ಪುಡಿ, ಅಲಂಕರಿಸಲು ಒಂದಿಷ್ಟು ಬಾಳೆ ಬಿಲ್ಲೆ, ಬಾದಾಮಿ, ತುಸು ಹಾಲು.

ವಿಧಾನ : ಬಾಳೆಹಣ್ಣು ಬಿಲ್ಲೆ ಮಾಡಿ ಕಿವುಚಿರಿ. ಇದಕ್ಕೆ ತುರಿದ ಪನೀರ್‌, ಸಕ್ಕರೆ ಹಾಕಿ ಮಸೆಯಿರಿ. ನಂತರ ಇದಕ್ಕೆ ಮೈದಾ, ಬಾದಾಮಿ ಪುಡಿ ಸೇರಿಸಿ. ಸ್ವಲ್ಪ ಸ್ವಲ್ಪವಾಗಿ ಹಾಲು ಬೆರೆಸುತ್ತಾ ದೋಸೆಹಿಟ್ಟಿನಂತೆ ಕಲಸಿಡಿ. ಸ್ವಲ್ಪ ಹೊತ್ತು ಬಿಟ್ಟು ಇದರಿಂದ ಸಣ್ಣ ಸಣ್ಣ ದೋಸೆ ತಯಾರಿಸಿ. ಚಿತ್ರದಲ್ಲಿರುವಂತೆ ಜೇನುತುಪ್ಪ, ಬಾದಾಮಿ, ಬಾಳೆಬಿಲ್ಲೆಗಳಿಂದ ಅಲಂಕರಿಸಿ ಸವಿಯಲು ಕೊಡಿ.

ದಲಿಯಾ ಪನೀರ್‌ ಕಪ್ಸ್

ಸಾಮಗ್ರಿ : 1 ಕಪ್‌ ಬೆಂದ ದಲಿಯಾ, 100 ಗ್ರಾಂ ಪನೀರ್‌, 1 ಈರುಳ್ಳಿ, 1-2 ಟೊಮೇಟೊ, 1-2 ಹಸಿಮೆಣಸು, ಅರ್ಧ ಕ್ಯಾಪ್ಸಿಕಂ, ತುಸು ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ನಿಂಬೆರಸ.

ವಿಧಾನ : ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ. ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ಹಸಿ ಮೆಣಸು, ಟೊಮೇಟೊ ಹಾಕಿ ಬಾಡಿಸಿ. ನಂತರ ಪನೀರ್‌ ತುಂಡು ಹಾಕಿ ಫ್ರೈ ಮಾಡಿ. ಉಪ್ಪು, ಮೆಣಸು ಹಾಕಿ ಕೆದಕಿ ಕೆಳಗಿಳಿಸಿ, ನಿಂಬೆರಸ ಹಿಂಡಿಕೊಳ್ಳಿ. ಪೇಪರ್‌ ಕಪ್ಸ್ ಗೆ ಬೆಂದ ಬ್ರೋಕನ್‌ ವೀಟ್‌ನಿಂದ ಒಳಭಾಗದಲ್ಲಿ ತಟ್ಟಿಕೊಂಡು ಆಕಾರ ಕೊಡಿ. ಅದಕ್ಕೆ ಪನೀರ್‌ ಮಿಶ್ರಣ ತುಂಬಿಸಿ. ನಿಧಾನವಾಗಿ ಪೇಪರ್‌ ಕಪ್‌ ಬಿಡಿಸಿ, ದಲಿಯಾ ಕಪ್ಸ್ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ