ಆಧುನಿಕ ತಾಯಂದಿರ ದೊಡ್ಡ ಕಷ್ಟವೆಂದರೆ ಮಕ್ಕಳಿಗಾಗಿ ಶಾಲೆಯ ಟಿಫನ್. ದಿನಕ್ಕೊಂದು ಬಗೆಯಲ್ಲಿ ಏನು ತುಂಬಿಸಿ ಕೊಡುವುದು ಅಂತ. ಬಾಯಿ ಚಪಲಕ್ಕಾಗಿ 1-2 ದಿನ ಏನೋ ಹಾಕಿಕೊಡಬಹುದು, ಆದರೆ ದಿನದಿನ ಅದೇ ಮಾಡಿದರೆ ಸರಿಹೋಗದು. ಮಕ್ಕಳಿಗಾಗಿ ಇಂಥ ಬೆಳಗಿನ ಉಪಾಹಾರ ಸ್ವಾದಿಷ್ಟ ಮತ್ತು ಪೌಷ್ಟಿಕ ಎರಡೂ ಆಗಿರಬೇಕಾದುದು ಅನಿವಾರ್ಯ.
ದಿನ ತೋಚಿದ್ದನ್ನು ಏನೋ ಒಂದು ಮಾಡಿಕೊಟ್ಟು ಕಳಿಸಿದ ಮೇಲೆ ಶಾಲೆಯಿಂದ ಮಕ್ಕಳು ಮನೆಗೆ ಮರಳಿದಾಗ ಅವರ ಸ್ಕೂಲ್‌ಬ್ಯಾಗ್ ತೆರೆದು ಅದನ್ನು ಪೂರ್ತಿ ತಿಂದರಾ ಇಲ್ಲವಾ ಎಂದು ನೋಡುವುದೇ ದೊಡ್ಡ ಕೆಲಸ ಆಗಿಬಿಡುತ್ತದೆ. ಎಷ್ಟೋ ಸಲ ಕೊಟ್ಟು ಕಳುಹಿಸಿದ ಟಿಫನ್‌ನಲ್ಲಿ ಅರ್ಧ ಭಾಗ ಹಾಗೇ ವಾಪಸ್ಸು ಬಂದಿರುತ್ತದೆ. ನಮ್ಮ ಪರಿಶ್ರಮ ಹಾಗೂ ಅರೆಬರೆ ತಿಂಡಿ ಪರಿಣಾಮವಾಗಿ ಹಾಳಾಗುತ್ತಿರುವ ಮಕ್ಕಳ ಆರೋಗ್ಯದ ಚಿಂತೆ, ತಾಯಂದಿರನ್ನು ಹೆಚ್ಚಿನ ಟೆನ್ಶನ್‌ಗೆ ಗುರಿ ಮಾಡುತ್ತದೆ.
ನೀವು ನಿಮ್ಮ ಮುದ್ದು ಮಕ್ಕಳ ಟಿಫನ್ ಬಾಕ್ಸಿಗೆ ಆರೋಗ್ಯಕರ, ಅಷ್ಟೇ ರುಚಿಕರವಾದ ಡಿಶೆಸ್ ಬೇಕೆಂದು ಬಯಸುತ್ತೀರಲ್ಲವೇ? ನಿಮ್ಮ ಮಕ್ಕಳ ಅಭಿರುಚಿ ಯಾವ ಕಡೆಗಿದೆ ಎಂಬುದನ್ನು ಮೊದಲು ಗಮನಿಸಿಕೊಳ್ಳಿ. ನೆನಪಿಡಿ, ಪ್ರತಿದಿನ ಒಂದೇ ಬಗೆಯ ಡಿಶ್ ಮಾಡಿ ಕಳುಹಿಸುವುದರಿಂದ ಮಕ್ಕಳಿಗೆ ಬೋರ್ ಎನಿಸಿ ಅವರು ಅದನ್ನು ತಿನ್ನದೆ, ಅರ್ಧ ಪಾಲು ಹಾಗೇ ಉಳಿಸಿಕೊಂಡು ಬರುತ್ತಾರೆ. ಹೈಸ್ಕೂಲ್ ಮಟ್ಟದ ವಿದ್ಯಾರ್ಥಿಗಳಾದರೆ, ನಿರ್ದಾಕ್ಷಿಣ್ಯವಾಗಿ ಇದನ್ನು ಒತ್ತರಿಸಿ, ಶಾಲೆಯ ಕ್ಯಾಂಟೀನಿನ ಪಿಜ್ಜಾ ಬರ್ಗರ್ ಮೆದ್ದು ಬರುತ್ತಾರೆ. ಆದ್ದರಿಂದ ಟಿಫನ್ ಬಾಕ್ಸಿನಲ್ಲಿ ದಿನೇ ದಿನೇ ಅದೇ ಉಪ್ಪಿಟ್ಟು, ಅವಲಕ್ಕಿ, ಇಡ್ಲಿ ಇತ್ಯಾದಿ ನೋಡಿ ಮಕ್ಕಳು ಮುಖ ಸಿಂಡರಿಸುವುದರಲ್ಲಿ ಆಶ್ಚರ್ಯವಿಲ್ಲ. ಚಪಾತಿ ಆಲೂ ಪಲ್ಯ ಇಷ್ಟ ನಿಜ, ಹಾಗೇಂತ ದಿನ ಅದನ್ನೇ ಕೊಡಲಾದೀತೇ? ಹೀಗೆ ವಾಪಸ್ಸು ಬರುವ ತಿಂಡಿಗಳನ್ನು ಗಮನಿಸಿ ನಿಮ್ಮ ಪರಿಶ್ರಮವೆಲ್ಲ ವ್ಯರ್ಥವಾಯಿತಲ್ಲ ಎಂದು ಒಂದೆಡೆ ಚಿಂತೆಯಾದರೆ, ಮಕ್ಕಳ ಆರೋಗ್ಯ ಹದಗೆಡುತ್ತದಲ್ಲ ಎಂಬುದು ಮತ್ತೊಂದು ದೊಡ್ಡ ಚಿಂತೆಯಾಗುತ್ತದೆ.
ಹಾಗೇಂತ ಮಕ್ಕಳು ಅಲ್ಲಿ ಇಲ್ಲಿ ಎಲ್ಲೋ ಒಂದಿಷ್ಟು ತಿಂದಿದ್ದು ನೋಡಿಕೊಂಡು ಬಂದದ್ದನ್ನೆಲ್ಲ ಮನೆಯಲ್ಲಿ ಮಾಡಿಕೊಡಲು ಸಾಧ್ಯ ಆಗುವುದಿಲ್ಲ. ಹಾಗಾಗಿಯೇ ಇಲ್ಲಿನ ಕೆಲವು ಸಲಹೆ ಅನುಸರಿಸಿ, ಮಕ್ಕಳಿಗೆ ಪೌಷ್ಟಿಕ ಸ್ವಾದಿಷ್ಟ ಡಿಶೆಸ್ ತಯಾರಿಸಿ ಕೊಡಿ.
ಪೌಷ್ಟಿಕ ದೋಸೆ : ಇನ್‌ಸ್ಟೆಂಟ್ ದೋಸೆ ತಯಾರಿಸಬೇಕು ಅಂತ ಕಡಲೆಹಿಟ್ಟಿಗೆ ಮೊಸರು ಬೆರೆಸಿ ನೆನೆಸುತ್ತೀರಿ ಅಲ್ಲವೇ? ಈ ಬಾರಿ ಅದರ ಬದಲು ಮಲ್ಟಿಗ್ರೇನ್ ಅಂದ್ರೆ ಮಿಶ್ರ ಹಿಟ್ಟುಗಳ ದೋಸೆ ತಯಾರಿಸಿ. ಇದಕ್ಕಾಗಿ ತಲಾ ಅರ್ಧರ್ಧ ಕಪ್ ಅಕ್ಕಿಹಿಟ್ಟು, ರಾಗಿಹಿಟ್ಟು, ಗೋಧಿಹಿಟ್ಟು, ಮೈದಾ, ಕಡಲೆಹಿಟ್ಟು, ಹುರಿದ ರವೆ, ಓಟ್ಸ್, ನೆನೆಸಿ ರುಬ್ಬಿದ ಹೆಸರುಕಾಳು, ಹಸಿ ಬಟಾಣಿ ಇತ್ಯಾದಿ ಎಲ್ಲಾ ಬೆರೆಸಿಕೊಳ್ಳಿ. ಇದಕ್ಕೆ 1 ಕಪ್ ಮೊಸರು, 1 ಚಮಚ ಉಪ್ಪು, ತುಸು ಇಂಗು, ಜೀರಿಗೆ ಎಲ್ಲಾ ಸೇರಿಸಿ. ಜೊತೆಗೆ ಸಣ್ಣಗೆ ಹೆಚ್ಚಿದ 1 ಅಥವಾ 2 ಹಸಿಮೆಣಸು, ಕೊ.ಸೊಪ್ಪು, ಕರಿಬೇವು ಇತ್ಯಾದಿ ಹಾಕಿಡಿ. ಇದು 1 ತಾಸು ನೆನೆಯಲು ಬಿಡಿ. ನಂತರ ಮಕ್ಕಳಿಗೆ ತುಪ್ಪ ಹಾಕಿ, ಹಿರಿಯರಿಗೆ ಎಣ್ಣೆ ಹಾಕಿ ದೋಸೆ ತಯಾರಿಸಿ. ಗರಿಗರಿಯಾಗಿ, ಪೌಷ್ಟಿಕವಾದ ಈ ದೋಸೆ ಮಕ್ಕಳಿಗೂ ಇಷ್ಟವಾಗುತ್ತದೆ. ಅವರು ಬಯಸುವಂಥ ಸ್ವೀಟ್ ಸಾರ್ ಸಾಸ್ ಜೊತೆಗಿರಲಿ.