ಹಬ್ಬ ಬಂತೆಂದರೆ ಸಿಹಿ ತಿಂಡಿಗಳು ಇರಲೇಬೇಕು. ಕೇವಲ ನಾವು ತಿನ್ನಲು ಅಷ್ಟೇ ಅಲ್ಲ, ಬೇರೆಯವರಿಗೂ ಕೂಡ ಹಂಚಿ ಖುಷಿ ಪಡುತ್ತೇವೆ. ಗೌರಿ ಗಣೇಶ, ದಸರಾ ಹಬ್ಬದಿಂದ ಹಿಡಿದು ದೀಪಾವಳಿ ತನಕ ಸಿಹಿ ತಿಂಡಿಗಳ ಖರೀದಿ ನಡೆಯುತ್ತಲೇ ಇರುತ್ತದೆ. ಹೀಗಾಗಿ ಅಂಗಡಿಗಳ ಮುಂದೆ ಭಾರಿ ದೊಡ್ಡ ಕ್ಯೂ ಇರುತ್ತದೆ. ಹಬ್ಬದ ದಿನಗಳ ಭಾರಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಅದನ್ನು ಪೂರೈಸಲು ಹಾಗೂ ಹೆಚ್ಚಿನ ಲಾಭದ ಆಸೆಯಿಂದ ಕಲಬೆರಕೆ ಮಿಠಾಯಿ ತಯಾರಿಸುವ ದಂಧೆ ಹೆಚ್ಚಾಗುತ್ತಿದೆ.

ಮಿಠಾಯಿಗಳಲ್ಲಿ ಬಳಸಲಾಗುವ ಖೋವಾ ಕಲಬೆರಕೆಯಾಗಿರುತ್ತದೆ. ಅದರ ಹೊರತಾಗಿ ಮಿಠಾಯಿಗಳಲ್ಲಿ ಬಳಸಲ್ಪಡುವ ಬಣ್ಣ ಕೂಡ ನಕಲಿ ಆಗಿರುತ್ತದೆ. ಕಡಲೆಹಿಟ್ಟು ಹಾಗೂ ಬೂಂದಿಯಿಂದ ಲಡ್ಡು ಮತ್ತು ಬಾದೂಷಾ ಕೂಡ ಕಲಬೆರಕೆ ಆಗಿರುತ್ತದೆ.

ಅದೇ ಕಾರಣದಿಂದ ಈಗ ಕೆಲವರು ಮಿಠಾಯಿ ಖರೀದಿಸುವ ಗೋಜಿಗೆ ಹೋಗದೆ ಡ್ರೈಫ್ರೂಟ್ಸ್, ಚಾಕ್ಲೇಟ್‌ ಹಾಗೂ ಡ್ರೈಫ್ರೂಟ್ಸ್ ನಿಂದ ತಯಾರಾದ ಸಿಹಿ ತಿಂಡಿಗಳನ್ನು ಉಡುಗೊರೆಯಾಗಿ ಕೊಡಲು ಇಷ್ಟಪಡುತ್ತಾರೆ. ಅವು ದುಬಾರಿ ಆಗಿರಬಹುದು. ಆದರೆ ಜನರ ಮೊದಲ ಆಯ್ಕೆಯಾಗುತ್ತಿವೆ.

ಕಲಬೆರಕೆಯ ಕಾರಣದಿಂದ ಹಬ್ಬದ ಸಂದರ್ಭದಲ್ಲಿ ಸಿಹಿ ತಿಂಡಿಯ ಮಜ ಕಿರಿಕಿರಿ ಎನಿಸದಿರಲು ಅದನ್ನು ಪರಿಶೀಲನೆಗೊಳಪಡಿಸಿ ತೆಗೆದುಕೊಳ್ಳುವುದು ಸೂಕ್ತ. ಅದರ ಪರೀಕ್ಷೆಯನ್ನು ನೀವೇ ಸ್ವತಃ ಮಾಡಬಹುದು. ಅದರಿಂದಾಗಿ ಆರೋಗ್ಯದ ಮೇಲಾಗುವ ದುಷ್ಪರಿಣಾಮ ತಡೆಯಬಹುದು.

ನಕಲಿ ಖೋವಾ ಹೇಗೆ ತಯಾರಾಗುತ್ತದೆ?

1 ಲೀ. ಗಟ್ಟಿ ಹಾಲಿನಿಂದ ಕೇವಲ 200 ಗ್ರಾಂ ಖೋವಾ ತಯಾರಾಗಲು ಸಾಧ್ಯ. ಇದರಿಂದ ಖೋವಾ ತಯಾರಕರಿಗೆ ಮತ್ತು ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗುವುದಿಲ್ಲ. ಹೀಗಾಗಿ ಅವರು ಕಲಬೆರಕೆ ದಂಧೆಗೆ ಇಳಿಯುತ್ತಾರೆ. ಅದನ್ನು ತಯಾರಿಸಲು ಸಿಹಿಗೆಣಸು, ಸಕ್ಕರೆ ಬಾದಾಮಿಯ ಪುಡಿ, ಆಲೂಗಡ್ಡೆ ಹಾಗೂ ಮೈದಾವನ್ನು ಉಪಯೋಗಿಸುತ್ತಾರೆ. ಇದರಲ್ಲಿ ಆಲೂಗಡ್ಡೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತದೆ.

ಕಲಬೆರಕೆಯ ಖೋವಾ ನಿಜವಾದ ಖೋವಾದಂತೆ ಕಂಡುಬರಬೇಕೆಂದು ಅದರಲ್ಲಿ ಕೆಮಿಕಲ್ ಕೂಡ ಮಿಶ್ರಣ ಮಾಡಲಾಗುತ್ತದೆ. ಕೆಲವು ಅಂಗಡಿಕಾರರು ಹಾಲಿನ ಪೌಡರ್‌ನಲ್ಲಿ ಡಾಲ್ಡಾ ಮಿಶ್ರಣ ಮಾಡಿ ಖೋವಾ ತಯಾರಿಸುತ್ತಾರೆ. ಅದಕ್ಕಾಗಿ ಸಿಂಥೆಟಿಕ್‌ ಹಾಲನ್ನು ಬಳಸಲಾಗುತ್ತದೆ. ಹಬ್ಬಕ್ಕೂ ಮುಂಚೆ ಮಾರುಕಟ್ಟೆಯಲ್ಲಿ ಸಿಂಥೆಟಿಕ್‌ ಹಾಲು ಕೂಡ ಹರಿದುಬರುತ್ತದೆ.

ಸಿಂಥೆಟಿಕ್‌ ಹಾಲು ತಯಾರಿಸಲು ಅದರಲ್ಲಿ ಯೂರಿಯಾ ಮಿಶ್ರಣ ಮಾಡಿ ಮಂದ ಉರಿಯಲ್ಲಿ ಕುದಿಸಲಾಗುತ್ತದೆ. ಆ ಬಳಿಕ ಅದರಲ್ಲಿ ಬಟ್ಟೆ ತೊಳೆಯಲು ಬಳಸುವ ಡಿಟರ್ಜೆಂಟ್‌, ಸೋಡಾ ಸ್ಟಾರ್ಚ್‌, ವಾಶಿಂಗ್‌ ಪೌಡರ್‌ ಬೆರೆಸಲಾಗುತ್ತದೆ. ಬಳಿಕ ಅದರಲ್ಲಿ ಅಸಲಿ ಹಾಲನ್ನು ಕೂಡ ಸೇರಿಸಲಾಗುತ್ತದೆ. ಆ ರೀತಿಯಲ್ಲಿ ತಯಾರಾದ ಹಾಲಿನಿಂದ ನಿರ್ಮಾಣಗೊಂಡ ಖೋವಾ ಅತ್ಯಂತ ಅಪಾಯಕಾರಿಯಾಗಿರುತ್ತದೆ.

ಆರೋಗ್ಯಕ್ಕೆ ಹಾನಿಕರ

ಕಲಬೆರಕೆ ಖೋವಾ ಹಾಗೂ ಸಿಂಥೆಟಿಕ್‌ ಹಾಲಿನಿಂದ ಫುಡ್‌ ಪಾಯಿಸನಿಂಗ್‌ ಆಗುತ್ತದೆ. ಇದರಿಂದ ವಾಂತಿ ಹಾಗೂ ಭೇದಿ ಉಂಟಾಗಬಹುದು. ಅದು ಕಿಡ್ನಿ ಮತ್ತು ಲಿವರ್‌ಗೂ ದುಷ್ಪರಿಣಾಮ ಬೀರಬಹುದು. ಇದರಿಂದ ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳು ಬಾಧಿಸಬಹುದು. ಅದರಿಂದ ಲಿವರ್‌ನ ಗಾತ್ರ ಹೆಚ್ಚಾಗುತ್ತದೆ. ಕ್ಯಾನ್ಸರ್‌ನ ಅಪಾಯ ಕೂಡ ಇರುತ್ತದೆ. ಹೀಗಾಗಿ ಸೇವನೆಗೂ ಮುಂಚೆ ಅಸಲಿ ಹಾಲು ಕಲಬೆರಕೆ ಹಾಲಿನ ವ್ಯತ್ಯಾಸ ಕಂಡುಹಿಡಿಯುವುದರ ಅಗತ್ಯ ಇರುತ್ತದೆ.

ಸಿಂಥೆಟಿಕ್‌ ಹಾಲಿನಿಂದ ಸೋಪ್‌ನ ಹಾಗೆ ವಾಸನೆ ಬರುತ್ತದೆ. ನಿಜವಾದ ಹಾಲಿನಿಂದ ಅಂತಹ ಯಾವುದೇ ವಾಸನೆ ಬರುವುದಿಲ್ಲ. ನಿಜವಾದ ಹಾಲಿನ ರುಚಿ ಸ್ವಲ್ಪ ಸಿಹಿಯಾಗಿದ್ದರೆ, ನಕಲಿ ಹಾಲು ಡಿಟರ್ಜೆಂಟ್‌ ಹಾಗೂ ಸೋಡಾ ಮಿಶ್ರಣವಾಗಿರುವ ಕಾರಣದಿಂದ ಅದು ಅಷ್ಟಿಷ್ಟು ಕಹಿ ಎನಿಸುತ್ತದೆ.

ನಿಜವಾದ ಹಾಲನ್ನು ಸಂಗ್ರಹಿಸಿಟ್ಟರೂ ಅದರ ಬಣ್ಣದಲ್ಲಿ ಯಾವುದೇ ವ್ಯತ್ಯಾಸ ಉಂಟಾಗುವುದಿಲ್ಲ. ಆದರೆ ಕಲಬೆರಕೆ ಹಾಲು ಸ್ವಲ್ಪ ಹೊತ್ತಿನ ಬಳಿಕ ಹಳದಿ ಬಣ್ಣಕ್ಕೆ ತಿರುಗುತ್ತದೆ. ನಿಜವಾದ ಹಾಲಿನಲ್ಲಿ ಯೂರಿಯಾ ಮಿಶ್ರಣ ಮಾಡಿದ್ದರೂ ಅದು ಸಾಧಾರಣ ಹಳದಿ ಬಣ್ಣಕ್ಕೆ ತಿರುಗಬಹುದು. ಅದೇ ಸಿಂಥೆಟಿಕ್‌ ಹಾಲಿನಲ್ಲಿ ಯೂರಿಯಾ ಮಿಶ್ರಣ ಮಾಡಿದ್ದರೆ ಅದು ಗಾಢ ಹಳದಿ ಬಣ್ಣದ್ದಾಗುತ್ತದೆ. ನಿಜವಾದ ಹಾಲನ್ನು ಸಾಕಷ್ಟು ಕುದಿಸಿದರೂ ಅದರ ಬಣ್ಣ ಬದಲಾಗುದಿಲ್ಲ. ಅದೇ ಕಲಬೆರಕೆ ಹಾಲು ಗಾಢ ಹಳದಿ ಬಣ್ಣದ್ದಾಗುತ್ತದೆ.

ನಿಜವಾದ ಹಾಲನ್ನು ಅಂಗೈಯಲ್ಲಿ ಹಾಕಿಕೊಂಡು ಉಜ್ಜಿದರೂ ಯಾವುದೇ ಜಿಗುಟುತನ ಅನಿಸುವುದಿಲ್ಲ. ಕಲಬೆರಕೆ ಹಾಲು ಉಳಿದ ದಿನಗಳಿಗಿಂತ ಹೆಚ್ಚಾಗಿ ಹಬ್ಬದ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ. ಅದರಿಂದ ಅವರಿಗೆ ಧಾರಾಳ ಹಣ ದೊರೆಯುತ್ತದೆ. ಈ ದಂಧೆಯಲ್ಲಿ ಹಾಲು, ತುಪ್ಪ, ಪನೀರ್‌, ಖೋವಾ, ಮಿಠಾಯಿಗಳ ಪೂರ್ತಿ ಹಣ ವಸೂಲು ಮಾಡಿದರೂ ಅದರ ಬದಲಿಗೆ ಜನರಿಗೆ ರೋಗಗಳು ಕಾಣಿಕೆಯಾಗಿ ಸಿಗುತ್ತವೆ.

ಅಸಲಿ-ನಕಲಿ ಪತ್ತೆ ಹಚ್ಚುವುದು ಸುಲಭ

ಹಾಲಿನ ಕಲಬೆರಕೆ ಕಂಡುಹಿಡಿಯುವುದು ಸುಲಭ. ಸ್ವಲ್ಪ ಹಾಲಿಗೆ ಅಷ್ಟೇ ಪ್ರಮಾಣದಲ್ಲಿ ನೀರು ಬೆರೆಸಿ. ಒಂದು ವೇಳೆ ಅದರಲ್ಲಿ ನೊರೆ ಬಂದರೆ ಆ ಹಾಲು ಡಿಟರ್ಜೆಂಟ್‌ ಮಿಶ್ರಣದ ಹಾಲು ಎಂದು ಭಾವಿಸಬೇಕು. ಸಿಂಥೆಟಿಕ್‌ ಹಾಲನ್ನು ಗುರುತಿಸಲು ಸ್ವಲ್ಪ ಹಾಲನ್ನು ಅಂಗೈಯಲ್ಲಿ ಹಾಕಿಕೊಂಡು ಉಜ್ಜಿ. ಅದು ನಿಮಗೆ ಸೋಪ್‌ನಂತೆ ಅನಿಸಿದರೆ ಆ ಹಾಲು ಸಿಂಥೆಟಿಕ್‌ ಆಗಿರಬಹುದು.

ಅದೇ ರೀತಿ ಕಲಬೆರಕೆ ಖೋವಾವನ್ನು ಕಂಡುಹಿಡಿಯಲು ಫಿಲ್ಟರ್‌ನಲ್ಲಿ ಅಯೋಡಿನ್‌ನ 2-3 ಹನಿ ಹಾಕಿ. ಒಂದು ವೇಳೆ ಅದು ಕಪ್ಪಗಾದರೆ ಕಲಬೆರಕೆ ಎಂದರ್ಥ. ಖೋವಾ ಕಾಳಿನಂತೆ ಇದ್ದರೆ ಅದು ಕಲಬೆರಕೆ. ಅದನ್ನು ಕಂಡುಹಿಡಿಯಲು ಕೈ ಬೆರಳುಗಳ ನಡುವೆ ಹಿಚುಕಿ. ಕಾಳಿನಂತೆ ಭಾಸವಾದರೆ ಅದು ಕಲಬೆರಕೆ ಎಂದು ತಿಳಿಯಬೇಕು.

ಕಲಬೆರಕೆ ತುಪ್ಪವನ್ನು ಕಂಡುಹಿಡಿಯಲು ಅದರಲ್ಲಿ ಕೆಲವು ಹನಿ ಅಯೋಡಿನ್‌ ಟಿಂಚರ್‌ ಮಿಶ್ರಣ ಮಾಡಿ. ಒಂದು ವೇಳೆ ತುಪ್ಪದ ಬಣ್ಣ ನೀಲಿಯಂತೆ ಗೋಚರಿಸಿದರೆ ಅದು ಕಲಬೆರಕೆ ಎಂದು ತಿಳಿಯಬೇಕು.

ಪನೀರ್‌ನ್ನು ನೀರಿನಲ್ಲಿ ಕುದಿಸಿ ಬಳಿಕ ಅದನ್ನು ಆರಿಸಿ. ಅದರಲ್ಲಿ ಒಂದರೆಡು ಹನಿ ಅಯೋಡಿನ್‌ ಟಿಂಚರ್‌ ಹಾಕಿ. ಆಗ ಪನೀರ್‌ನ ಬಣ್ಣ ನೀಲಿಯಾದರೆ ಅದು ಕಲಬೆರಕೆ ಎಂದರ್ಥ. ಮಿಠಾಯಿಯ ಮೇಲೆ ಹಾಕುವ ಬೆಳ್ಳಿಯ ಫಾಯಿಲ್‌ನಲ್ಲಿ ಅಲ್ಯುಮಿನಿಯಂ ಲೋಹವನ್ನು ಬೆರೆಸಲಾಗುತ್ತದೆ. ಅದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಚಾಕ್ಲೇಟ್‌, ಕಾಫಿ ಅಥವಾ ಚಾಕ್ಲೇಟ್‌ ಪೌಡರ್‌ನಲ್ಲಿ ಚಿಕೋರಿ ಮತ್ತು ಬೆಲ್ಲವನ್ನು ಮಿಶ್ರಣ ಮಾಡಲಾಗುತ್ತದೆ. ಚಾಕ್ಲೇಟ್‌ನ್ನು ಪೌಡರ್‌ ಮಾಡಿಕೊಳ್ಳಿ. ಆ ಪೌಡರ್‌ನಲ್ಲಿ 1 ಗ್ಲಾಸ್‌ ನೀರು ಬೆರೆಸಿ. ಕಾಫಿ ಮತ್ತು ಚಾಕ್ಲೇಟ್‌ ಪೌಡರ್‌ ನೀರಲ್ಲಿ ತೇಲುತ್ತದೆ. ಚಿಕೋರಿ ತಳ ಸೇರಿಕೊಳ್ಳುತ್ತದೆ. ಅದೇ ಪರಿಸ್ಥಿತಿ ಬೆಲ್ಲದ ಮಿಶ್ರಣಕ್ಕೂ ಅನ್ವಯಿಸುತ್ತದೆ. ನೀರಿನಲ್ಲಿ ಚಾಕ್ಲೇಟ್‌ ಹಾಕಿ ಒಂದು ವೇಳೆ ಬೆಲ್ಲದ ಮಿಶ್ರಣ ಇದ್ದರೆ ಜಿಗುಟಾದ, ಸಿಹಿಯಾದ ಸಿದ್ಧ ಪದಾರ್ಥ ನೀರಿನಲ್ಲಿ ಮಿಶ್ರಣಗೊಳ್ಳುತ್ತದೆ.

– ಶೈಲಜಾ ಮೂರ್ತಿ

Tags:
COMMENT